• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಚ್ಚ-ಹುಚ್ಚಿ ಪ್ರಣಯಗೀತ ಹುಟ್ಟಿದ ಪ್ರಸಂಗ

By * ಡಾ. 'ಜೀವಿ' ಕುಲಕರ್ಣಿ, ಮುಂಬಯಿ
|
Google Oneindia Kannada News
ಖಾಲ್ಸಾ ಕಾಲೇಜಿನ ಕಟ್ಟಡ ಭವ್ಯವಾಗಿದೆ. ಅಂಡಾಕೃತಿ ಪಡೆದ ಕಟ್ಟಡ. ನಡುವೆ ಬಯಲು. ಹಿಂಭಾಗದ ಒಂದನೆಯ ಮತ್ತು ಎರಡನೆಯ ಅಂತಸ್ತಿನಲ್ಲಿ ಹಾಸ್ಟೆಲ್ ಇತ್ತು, ಅಲ್ಲಿ ವಿದ್ಯಾರ್ಥಿಗಳಿಗಾಗಿ ರೂಮುಗಳಿದ್ದವು. ಒಂದು ಕೋಣೆಯಲ್ಲಿ ಮೂರು ವಿದ್ಯಾರ್ಥಿಗಳು ಇರುತ್ತಿದ್ದರು. ನಾಲ್ಕು ವಿಶೇಷ ಕೋಣೆಗಳು ಪ್ರಾಧ್ಯಾಪಕರಿಗಾಗಿ ಇದ್ದವು. ಹಾಸ್ಟೆಲ್‌ನಲ್ಲಿದ್ದ ಎಲ್ಲ ಪ್ರಾಧ್ಯಾಪಕರು ಸರದಾರಜಿಗಳಾಗಿದ್ದರು. ಒಂದು ರೂಮು ಸರದಾರಜಿ ಅಲ್ಲದ ನನಗೆ ದೊರೆತಿತ್ತು. ಇದಕ್ಕಾಗಿ ನಾನು ಸಿ.ಎಂ.ಕುಲಕರ್ಣಿಯವರಿಗೆ ಕೃತಜ್ಞನಾಗಿದ್ದೆ. ಅವರು ಕಾಲೇಜಿನ ಅತ್ಯಂತ ಜನಪ್ರಿಯ ಪ್ರಾಧ್ಯಾಪಕರಾಗಿದ್ದರು. ಕಾಲೇಜಿನ ಆಡಳಿತಗಾರರು ಅವರ ಸಲಹೆಗಳನ್ನು ಗೌರವದಿಂದ ಪಾಲಿಸುತ್ತಿದ್ದರು. ಹಾಸ್ಟೆಲ್‌ನಲ್ಲಿ ಪ್ರಾಧ್ಯಾಪಕರಿಗಾಗಿ ಮೀಸಲಾದ ಒಂದು ಕೋಣೆ ತೆರವಾದಾಗ ಅವರು ನನ್ನ ಹೆಸರನ್ನು ಶಿಫಾರಸು ಮಾಡಿದ್ದರು. ಹಾಸ್ಟೆಲ್ ಜೀವನ ನನ್ನ ಜೀವನದಲ್ಲಿ ಒಂದು ಹೊಸ ಅಧ್ಯಾಯವನ್ನು ತೆರೆದಿತ್ತು.

ರಾಮನಾಯಕರ ಹೊಟೇಲಿನ ಊಟ, ಸಮೀಪದ ಫೈವ್ ಗಾರ್ಡನ್ ಸುತ್ತಲೂ ವಾಯುವಿಹಾರ, ವಾಣಿವಿಹಾರ ವಿದ್ಯಾಲಯದಲ್ಲಿ ನಡೆಯುವ ಪ್ರವಚನಗಳು, ಕನ್ನಡ ಕಾರ್ಯಕ್ರಮಗಳು ನಡೆಯುತ್ತಿದ್ದ ಮೈಸೂರ್ ಅಸೋಸಿಯೇಶನ್, ಮಾತುಂಗಾದ ಸುತ್ತಲಿನ ಕನ್ನಡ ವಾತಾವರಣ ನನಗೆ ಸ್ವರ್ಗ ಸುಖವನ್ನೇ ನೀಡಿತ್ತು ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ. ಕನ್ನಡ ವಿದ್ಯಾರ್ಥಿಗಳು ನನ್ನ ರೂಮಿಗೆ ಬಂದು ಕುಶಲ ವಿಚಾರಿಸುತ್ತಿದ್ದರು. ಹೆಚ್ಚಿನ ವಿದ್ಯಾರ್ಥಿಗಳು ನೌಕರಿ ಮಾಡುತ್ತಿದ್ದರು. ಕಾಲೇಜಿನ ಒಳಗಿರುವ ಓವಲ್ ನನ್ನ ರೂಮಿನಿಂದ ವೀಕ್ಷಿಸಬಹುದಾಗಿತ್ತು. ಅಲ್ಲಿ ವಿದ್ಯಾರ್ಥಿಗಳು ವಾಲಿಬಾಲ್ ಆಡುವ ದೃಶ್ಯ ಸಾಮಾನ್ಯವಾಗಿತ್ತು. ಕಾಲೇಜಿನ ಹಿಂಭಾಗದಲ್ಲಿ ವಿಶಾಲ ಪ್ಲೇಗ್ರೌಂಡ್ ಇತ್ತು. ಅಲ್ಲಿ ವಿದ್ಯಾರ್ಥಿಗಳು ಫುಟ್‌ಬಾಲ್ ಆಡುತ್ತಿದ್ದರು. ಆಟಗಳಲ್ಲಿ ಕನ್ನಡ ವಿದ್ಯಾರ್ಥಿಗಳ ಮೇಲುಗೈ ಇತ್ತು. ನನ್ನ ಮಿತ್ರರು ಕೆಲವರು ರೂಮಿಗೆ ಬಂದು ಸಾಹಿತ್ಯ ವಿಚಾರ ಚರ್ಚಿಸುತ್ತಿದ್ದರು.

ಧಾರವಾಡದ ಮಿತ್ರ ರಾಯಡು ಎಂಬವರು ಟೆಲಿಫೋನ್ ಖಾತೆಯಲ್ಲಿ ಕೆಲಸಮಾಡುತ್ತಿದ್ದರು. ಅವರು ನಾನು ಕೆಲಸಲ ಕೂಡಿದಾಗ ಸಮಯಸ್ಫೂರ್ತಿ ಪಡೆದು ಕವನ ರಚಿಸುತ್ತಿದ್ದೆವು. ಒಮ್ಮೆ ಅವರು ನನ್ನ ಭೆಟ್ಟಿಗೆ ಬಂದಿದ್ದರು. ಅವರೂ ತರುಣರಾಗಿದ್ದರು. ಅವರ ಆಫೀಸಿನಲ್ಲಿಯ ಒಬ್ಬ ತರುಣಿ ಇವರಿಗೆ ಹುಚ್ಚ ಎಂದು ಕರೆದಳಂತೆ. ಇದರ ಅರ್ಥವೇನು? ಎಂದು ನನ್ನನ್ನು ಕೇಳಿದರು. ಅವಳು ನಿಮ್ಮನ್ನು ಪ್ರೀತಿಸುತ್ತಾಳೆ ಎಂದು ಇದರರ್ಥ ಎಂದೆ. ಇಬ್ಬರೂ ನಕ್ಕೆವು. ನಾನೆಂದೆ, ನೋಡಿ ರಾಯಡು, ಮುಂಬೈಯಲ್ಲಿ ಕವಿತೆ ಬರೆಯಲು ವಸ್ತು ಸಿಗುವದಿಲ್ಲ ಎಂದು ಗೋಗರೆಯುತ್ತೀರಿ. ಹಲವಾರು ಸುಂದರ ಸನ್ನಿವೇಶಗಳು ಬಂದು ನಿಮಗೆ ಕವಿತೆ ಬರೆಯಲು ಪ್ರೇರೇಪಿಸುತ್ತಿವೆ. ಆ ಅಮೃತ ಕ್ಷಣಗಳನ್ನು ನೀವು ಕಳೆದುಕೊಳ್ಳುವುದಿಲ್ಲವೇ?

ನನಗೆ ನಿಮ್ಮ ಮಾತು ಅರ್ಥವಾಗುತ್ತಿಲ್ಲ. ಧಾರವಾಡದಲ್ಲಿದ್ದಾಗ ಕವಿತೆ ಸಹಜವಾಗಿ ಬರುತ್ತಿತ್ತು. ಇಲ್ಲಿ ಬರುತ್ತಿಲ್ಲ. ಈ ಮಾತು ನೀವು ಒಪ್ಪುವುದಿಲ್ಲವೇ? ಎಂದರು ರಾಯಡು. ನಾನು ಅವರಿಗೆ ನನ್ನ ಕೋಗಿಲೆ ಪದ್ಯವನ್ನು ಓದಿ ತೋರಿಸಿದೆ. ಮುಂಬೈಯಲ್ಲೂ ಕವನ ರಚಿಸಬಹುದು. ಈಗ ನಿಮ್ಮ ಸಹೋದ್ಯೋಗಿ ಹುಡುಗಿ ನಿಮಗೆ ಹುಚ್ಚ ಎಂದಳಲ್ಲ. ಇದೇ ಥೀಮಿನ ಮೇಲೆ ನೀವು ಒಂದು ಪ್ರಣಯಗೀತೆ ರಚಿಸಬಹುದು. ನಾನೂ ಒಂದು ಪದ್ಯ ಬರೆಯುವೆ. ನೀವೂ ಒಂದು ಕವನ ಬರೆಯಿರಿ. ನಾಳೆ ಸಂಜೆ ಭೇಟಿಯಾಗೋಣ ಎಂದೆ.

ಮರುದಿನ ನನಗೆ ಕಾಲೇಜಿನಲ್ಲಿ ಅರ್ಧ-ವಾರ್ಷಿಕ ಪರೀಕ್ಷೆಯಲ್ಲಿ ಸುಪರ್‌ವಿಜನ್ ಇತ್ತು. ಅದೊಂದು ಬೋರಿಂಗ ಕೆಲಸ. ವಿದ್ಯಾರ್ಥಿಗಳು ಕಾಪೀ ಮಾಡುತ್ತಾರೇನೆಂದು ಗಮನಿಸಬೇಕು. ಅವರು ಕೈ ಎತ್ತಿದಾಗೊಮ್ಮೆ ಪುರವಣಿ(ಸಪ್ಲಿಮೆಂಟ್) ಹಂಚಬೇಕು. ವಿದ್ಯಾರ್ಥಿಗಳು ಮತ್ತೆಮತ್ತೆ ಕರೆಯಬಾರದೆಂದು ನಾನು ಅವರಿಗೆ ಹೇಳಿದೆ. ಸಪ್ಲಿಮೆಂಟ್ ಬೇಕಾದವರು ನನ್ನ ಬಳಿ ಬರಬೇಕು, ನಾನು ಅಂಕಿತಮಾಡಿಟ್ಟ ಪುರವಣಿಗಳನ್ನು ಒಯ್ಯಬೇಕು ಎಂದು ಹೇಳಿದೆ. ನನಗೆ ಒಂದು ರಿಪೋರ್ಟ್ ಕೂಡ ಸಿದ್ಧಪಡಿಸಬೇಕಿತ್ತು. ಆಗ ನನಗೆ ಮಿತ್ರ ರಾಯಡು ಹೇಳಿದ ಘಟನೆ ನೆನಪಾಯಿತು. ಎದುರಿಗೆ ಬಿಳಿಯ ಕಾಗದದ ರಾಶಿಯೇ ಇತ್ತು. ಬರೆಯಲು ಪ್ರಾರಂಭಿಸಿದೆ.

ನನಗೆ ಆಗ ಆರು ವರುಷ
ಕಮಲೆಗಿನ್ನು ಮೂರು ವರುಷ
ಅವಳ ಜೊತೆಗೆ ಆಡುತಿರಲು
ಹೆಳಲು ಹಿಡಿದು ಎಳೆಯೆ, ನನಗೆ
ಹುಚ್ಚ ಎಂದಳು.

ಅರವತ್ತಾರು ಸಾಲುಗಳ ನನ್ನ ಮಹತ್ವದ, ನಂತರ ಅತ್ಯಂತ ಪ್ರಸಿದ್ಧಿ ಪಡೆದ, ಪ್ರಣಯಗೀತ ಹುಚ್ಚ ಜನಿಸಿತು. ಕವಿತೆ ಬರೆಯುವಾಗ ನಮ್ಮ ಮೈಯಲ್ಲಿ ಒಂದು ರೀತಿಯ ಆವೇಶ ಬಂದುಬಿಡುತ್ತದೆ. ಆಗ ನಾವು ನಾವಾಗಿರುವುದಿಲ್ಲ. ಬೇಂದ್ರೆಯವರು ಭಾವಗೀತ ಎಂಬ ಪದ್ಯದಲ್ಲಿ ಬರೆದಿದ್ದಾರೆ. ಜೇಡರಹುಳ ಹೊಕ್ಕಳ ರಸದಿಂದ ಜಾಲವನ್ನು ನಿರ್ಮಿಸುವುದಂತೆ, ಹಣೆ ತನ್ನ ದೈವರೇಷೆಯನ್ನು ತಾನೆ ಬರೆದುಕೊಳ್ಳುವಂತೆ, ಮಾತು ಮಾತು ಮಥಿಸಿ ನಾದದ ನವನೀತ ಬರುತ್ತದೆ, ಅದುವೆ ಭಾವಗೀತ. ಪ್ರಸ್ತುತ ಕವಿತೆಯಲ್ಲಿ ಎರಡನೆಯ ಭಾಗ ನಾಯಕ ಎಂಟು ವರುಷದವನಾಗಿದ್ದಾಗಿನ ತುಂಟತನವನ್ನು ಚಿತ್ರಿಸುತ್ತದೆ. ನಂತರ ಮೂರನೆಯ ಭಾಗದಲ್ಲಿ ಪ್ರಿಯಕರನಿಗೆ ಪ್ರಾಯ ಬಂದಾಗ ಪ್ರೇಯಸಿಗೆ ಲಜ್ಜೆ ತಂದಿರುತ್ತದೆ. ನಾಲ್ಕನೆಯ ಭಾಗದಲ್ಲಿ, ಅವಳ ಪ್ರೇಮ ಪಾಶದಿಂದ ಬಂಧಿತನಾದ ಪ್ರಿಯಕರ ಒಮ್ಮೆ ನಿನ್ನ ಮದುವೆ ಎಂದು? ಎಂದ ಅವಳ ಕೈಹಿಡಿದು ಕೇಳಿಯೇಬಿಡುತ್ತಾನೆ. ಅವಳು ಈ ಪ್ರಶ್ನೆಯನ್ನು ತನ್ನ ಅಪ್ಪನಿಗೆ ಕೇಳಲು ಸೂಚಿಸುತ್ತಾಳೆ. ಪ್ರತಿಯೊಂದು ಘಟನೆಯ ತರುವಾಯ ಪೇಯಸಿ ಪ್ರಿಯಕರನನ್ನು ಹುಚ್ಚ ಎಂದೇ ಕರೆಯುತ್ತಾಳೆ. ಕವಿತೆಯ ಕೊನೆಯ ಭಾಗ ಹೀಗಿದೆ:

ನಮ್ಮಿಬ್ಬರ ಮದುವೆಯಾಗಿ
ಆರು ವರುಷ ಕಳೆದವೀಗ
ರಂಗ, ಪುಟ್ಟು ಎಂಬ ಎರಡು
ಮುದ್ದು ಮಕ್ಕಳಾದವೆಮಗೆ
ಬೆಳಗಿನಿಂದ ಸಂಜೆ ವರೆಗೆ
ಅವಳ ಧ್ಯಾನ ಮಕ್ಕಳಲ್ಲಿ,
ಒಮ್ಮೆ ನಾನು ರೋಸಿಹೋಗಿ
ಅವಳ ಕೇಳಿದೆ-
ಸವಿ ಮಾವಿನ ಹಣ್ಣಿನಂತೆ
ನಿನ್ನ ಪೂರ್ಣ ಪ್ರೀತಿ ಇತ್ತು
ಅದನು ಎರಡು ಭಾಗ ಮಾಡಿ
ಅವರಿಬ್ಬರ ಪಾಲಿಗಿತ್ತೆ
ಮತ್ತೆ ನನಗೆ ಶೂಲದಂತೆ
ಕೊರೆಯುತಿರುವೆ ಎಂದು ಬೈಯೆ,
ಹುಚ್ಚ ಎಂದಳು.

ಈ ಕವಿತೆಯನ್ನು ಬರೆದು ದಿನ 4-10-1960. ಮರುದಿನ ರಾಯಡು ನನ್ನನ್ನು ಕಾಣಲು ಹಾಸ್ಟೇಲಿಗೆ ಬಂದ. ಅವನೂ ಒಂದು ಪದ್ಯ ಬರೆದು ತಂದಿದ್ದ. ಮೊದಲು ನನಗೆ ಕಾವ್ಯವಾಚನ ಮಾಡಲು ಒತ್ತಾಯಿಸಿದ. ತನ್ನ ಸರತಿ ಬಂದಾಗ ತನ್ನ ಕವಿತೆಯನ್ನು ಹರಿದುಹಾಕಿದ. ವರಕವಿಗಳ ಮುಂದೆ ನರಕವಿಗಳು ವಿದ್ಯೆ ತೋರಬಾರದು ಎಂದ. ಇಂಥ ದೊಡ್ಡ ಮಾತು ಬೇಡ ಎಂದೆ. ಬೇಂದ್ರೆಯವರ ಆಶೀರ್ವಾದ ನಿಮ್ಮ ಮೇಲಿದೆ ಎಂಬುದು ಈಗ ಖಾತ್ರಿಯಾಯಿತು ಎಂಬ ಉದ್ಗಾರ ತೆಗೆದ.

ಒಮ್ಮೆ ಪಾಟೀಲ ಪುಟ್ಟಪ್ಪನವರು ನನ್ನ ರೂಮಿಗೆ ಬಂದಿದ್ದರು ಅವರಿಗೆ ನನ್ನ ಕವಿತೆ ಓದಿ ತೋರಿಸಿದೆ. ಅದನ್ನು ಅವರು ಒಯ್ದೇಬಿಟ್ಟರು. ತಮ್ಮ ಪತ್ರಿಕೆಯ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟಿಸಿದರು. ಈ ಕವಿತೆ ನನಗೆ ಬಹಳ ಪ್ರಸಿದ್ಧಿ ನೀಡಿತು. ಮುಂದೆ ನಾನು ವಧುಪರೀಕ್ಷೆಗೆ ಹೋದಾಗ ನನ್ನ ಕೈಹಿಡಿಯುವಾಕೆ ನನಗೊಂದು ಪ್ರಶ್ನೆ ಕೇಳಿದ್ದಳು, ಹುಚ್ಚ ಪದ್ಯ ಬರೆದವರು ನೀವೇನಾ? ಎಂದು. ಕವಳ ಕಣ್ಣುಗಳಲ್ಲಿ ಮೆಚ್ಚುಗೆ ಇತ್ತು. ಮಿತ್ರ ಸುಮತೀಂದ್ರ ನಾಡಿಗ ಈ ಕವಿತೆಯನ್ನು ಬಹಳ ಮೆಚ್ಚಿದ್ದರು. ಆಗ ಅವರು ಮುಂಬೈ ಕಾಲೇಜೊಂದರಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರು. ಧಾರವಾಡದ ಮಿತ್ರ ಗಿರೀಶ ಕಾರ್ನಾಡ ಆಕ್ಸ್‌ಫರ್ಡ್‌ನಲ್ಲಿ ಆಗ ಕಲಿಯುತ್ತಿದ್ದರು. ಅವರಿಗೆ ಈ ಕವಿತೆ ಕಳಿಸಿದ್ದೆ. ನಿನ್ನ ಪದ್ಯ ಹುಚ್ಚುಹಿಡಿಸುತ್ತಿದೆ ಎಂದು ಮಾರ್ಮಿಕವಾಗಿ ಬರೆದಿದ್ದರು. ಮುಂದೆ 1968ರಲ್ಲಿ ಪ್ರಕಟವಾದ ನನ್ನ ಪ್ರಣಯಕಾವ್ಯ ಸಂಗ್ರಹದಲ್ಲಿ(ಹುಚ್ಚ-ಹುಚ್ಚಿ) ಈ ಕವಿತೆ ಅಚ್ಚಾಗಿತ್ತು. ಎಂ.ವಿ. ಕಾಮತರು ಟೈಮ್ಸ್ ಆಫ್ ಇಂಡಿಯಾದಲ್ಲಿ, ಹುಚ್ಚ-ಹುಚ್ಚಿ ಕವನ ಸಂಗ್ರಹದ ಬಗ್ಗೆ ಸುದೀರ್ಘ ವಿಮರ್ಶೆಯನ್ನು ಬರೆದರು. ಅವರು ಈ ಪದ್ಯದದ ಬಗ್ಗೆ ಹೀಗೆ ಬರೆದಿದ್ದರು: But the title poem (Huchcha) stands out like a white cloud in a clear sky in its purity of thought and liveliness of sentiment. It will probably be remembered and quoted wherever lovers meet or love is born.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X