ಎರಡನೇ ಮಗು ಜನಿಸಿದ್ರೆ ಪೋಷಕರಿಗೆ 25,000 ರೂಪಾಯಿ ಪ್ರೋತ್ಸಾಹಧನ: ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಘೋಷಣೆ
ಆಂಧ್ರಪ್ರದೇಶ ಸರ್ಕಾರವು ರಾಜ್ಯದ ಜನಸಂಖ್ಯಾ ಸಮತೋಲನವನ್ನು ಕಾಯ್ದುಕೊಳ್ಳಲು ಒಂದು ಕ್ರಾಂತಿಕಾರಿ ಹೆಜ್ಜೆಯನ್ನು ಇಟ್ಟಿದೆ. ಆಂಧ್ರ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಹೊಸ 'ಜನಸಂಖ್ಯಾ ನಿರ್ವಹಣಾ ನೀತಿ' (Population Management Policy) ಘೋಷಿಸಿದ್ದಾರೆ. ಇದರಲ್ಲಿ ಪ್ರಮುಖವಾಗಿ ರಾಜ್ಯದಲ್ಲಿ ಜನನ ದರ ಕುಸಿಯುತ್ತಿರುವುದನ್ನು ತಡೆಯಲು, ಎರಡನೇ ಮಗು ಅಥವಾ ಅದಕ್ಕಿಂತ ಹೆಚ್ಚಿನ ಮಕ್ಕಳನ್ನು ಹೊಂದುವ ಪೋಷಕರಿಗೆ ಹೆರಿಗೆಯ ಸಮಯದಲ್ಲಿ ₹25,000 ಪ್ರೋತ್ಸಾಹಧನ ನೀಡಲು ಸರ್ಕಾರ ನಿರ್ಧರಿಸಿದೆ.
ಮಕ್ಕಳ ಪೋಷಣೆ, ಶಿಕ್ಷಣ ಮತ್ತು ರಕ್ಷಣೆಗಾಗಿ 'ಪೋಷಣ್-ಶಿಕ್ಷಣ-ಸುರಕ್ಷಾ' ಪ್ಯಾಕೇಜ್ ಅನ್ನು ಘೋಷಿಸಲಾಗಿದೆ. ತಾಯಿ ಮತ್ತು ತಂದೆ ಇಬ್ಬರಿಗೂ ಪೋಷಕರ ರಜೆ ಸೌಲಭ್ಯ ನೀಡಲು ಉದ್ದೇಶಿಸಲಾಗಿದೆ. ದುಡಿಯುವ ಮಹಿಳೆಯರಿಗಾಗಿ ಹಾಸ್ಟೆಲ್‌ಗಳು, ಶಿಶುಪಾಲನಾ ಕೇಂದ್ರಗಳು ಮತ್ತು ಸುಧಾರಿತ ಮಾತೃತ್ವ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಮಾತೃತ್ವ, ಶಕ್ತಿ, ನೈಪುಣ್ಯಂ, ಕ್ಷೇಮ ಮತ್ತು ಸಂಜೀವಿನಿ ಎಂಬ ಐದು ಸ್ತಂಭಗಳ ಮೂಲಕ ಸುರಕ್ಷಿತ ತಾಯ್ತನದಿಂದ ಹಿಡಿದು ಕೌಶಲ್ಯಾಭಿವೃದ್ಧಿಯವರೆಗೆ ಬೆಂಬಲ ನೀಡಲಾಗುತ್ತದೆ ಎಂದಿದ್ದಾರೆ.

ಭವಿಷ್ಯಕ್ಕಾಗಿ ಹೆಚ್ಚು ಮಕ್ಕಳನ್ನು ಹೆರುವಂತೆ ಕರೆ
ಚಂದ್ರಬಾಬು ನಾಯ್ಡು ಅವರು ಈ ಹಿಂದೆ ಜನಸಂಖ್ಯಾ ನಿಯಂತ್ರಣಕ್ಕೆ ಒತ್ತು ನೀಡಿದ್ದರು. ಆದರೆ ಈಗಿನ ಬದಲಾದ ಪರಿಸ್ಥಿತಿಯಲ್ಲಿ, ಯುವ ಜನಸಂಖ್ಯೆಯ ಕೊರತೆಯು ಭವಿಷ್ಯದ ಆರ್ಥಿಕತೆಗೆ ಹೊರೆಯಾಗಲಿದೆ ಎಂಬ ಆತಂಕದಿಂದ "ಜನಸಂಖ್ಯಾ ಆರೈಕೆ" ಎಂಬ ಹೊಸ ಪರಿಕಲ್ಪನೆಯನ್ನು ಮುಂದಿಟ್ಟಿದ್ದಾರೆ. ಬಲಿಷ್ಠ ಮತ್ತು ಯುವ ಜನಸಂಖ್ಯೆಯೇ ದೀರ್ಘಕಾಲೀನ ಸಮೃದ್ಧಿಯ ಅಡಿಪಾಯ. ಕುಸಿಯುತ್ತಿರುವ ಫಲವತ್ತತೆ ದರವನ್ನು ಗಮನದಲ್ಲಿಟ್ಟುಕೊಂಡು ನಮ್ಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ನಾವು ಈಗಲೇ ಕಾರ್ಯಪ್ರವೃತ್ತರಾಗಬೇಕು ಎಂದು ಸಿಎಂ ನಾಯ್ಡು ತಿಳಿಸಿದ್ದಾರೆ.
ಏಪ್ರಿಲ್‌ನಿಂದ ಜಾರಿ
ಈ ಸಮಗ್ರ ನೀತಿಯು ಮಾರ್ಚ್ ಅಂತ್ಯದ ವೇಳೆಗೆ ಅಂತಿಮಗೊಳ್ಳಲಿದ್ದು, ಏಪ್ರಿಲ್ 2026ರಿಂದ ಜಾರಿಗೆ ಬರುವ ನಿರೀಕ್ಷೆಯಿದೆ. ರಾಜ್ಯದ ಸುಮಾರು ಶೇ. 58ರಷ್ಟು (3 ಲಕ್ಷ) ಕುಟುಂಬಗಳು ಕೇವಲ ಒಂದು ಮಗುವನ್ನು ಹೊಂದಿವೆ. ಕೇವಲ 2.17 ಲಕ್ಷ ಕುಟುಂಬಗಳು ಮಾತ್ರ ಇಬ್ಬರು ಅಥವಾ ಹೆಚ್ಚಿನ ಮಕ್ಕಳನ್ನು ಹೊಂದಿವೆ.
ಈ ಹಿಂದೆ ನಾವು ಜನಸಂಖ್ಯಾ ನಿಯಂತ್ರಣಕ್ಕೆ ಒತ್ತು ನೀಡಿದ್ದೆವು, ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಯುವಕರ ಸಂಖ್ಯೆ ಕಡಿಮೆಯಾದರೆ ಭವಿಷ್ಯದಲ್ಲಿ ಕೆಲಸ ಮಾಡುವ ಕೈಗಳ ಕೊರತೆಯಾಗಿ ಆರ್ಥಿಕ ಪ್ರಗತಿ ಕುಂಠಿತವಾಗಲಿದೆ ಎಂದು ನಾಯ್ಡು ಎಚ್ಚರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರವು 'ಪೋಷಣ್-ಶಿಕ್ಷಣ-ಸುರಕ್ಷಾ' ಎಂಬ ಪಂಚಸೂತ್ರಗಳ ಅಡಿಯಲ್ಲಿ ಹೊಸ ಸೌಲಭ್ಯಗಳನ್ನು ಘೋಷಿಸಿದೆ. ಭವಿಷ್ಯದಲ್ಲಿ ವಯಸ್ಸಾದವರ ಸಂಖ್ಯೆ ಹೆಚ್ಚಾಗಿ, ಯುವಕರ ಕೊರತೆ ಎದುರಿಸುತ್ತಿರುವ ಜಪಾನ್ ಮತ್ತು ಚೀನಾದಂತಹ ದೇಶಗಳ ಸ್ಥಿತಿ ನಮಗೂ ಬರಬಾರದು ಎಂಬುದು ಈ ಯೋಜನೆಯ ಹಿಂದಿನ ದೂರದೃಷ್ಟಿಯಾಗಿದೆ.












Click it and Unblock the Notifications