Get Updates
Get notified of breaking news, exclusive insights, and must-see stories!

ಕರ್ನಾಟಕ ವಿದ್ಯುತ್ ನಿಗಮ ಬೆಳಕಿನ ಸಂಸ್ಥೆಗೆ ಕತ್ತಲೆಯ ಛಾಯೆ: ಸರ್ಕಾರಿ ನಿರ್ಲಕ್ಷದ ಒಳನೋಟ

ಓದುಗರ ಬರಹ: ಕರ್ನಾಟಕ ವಿದ್ಯುತ್ ನಿಗಮ ಸಂಸ್ಥೆ ಮುಳುಗುತ್ತಿದೆಯೇ ಎಂಬ ಪ್ರಶ್ನೆ ಈಗ ಎಲ್ಲ ಕಡೆ ಕೇಳಿ ಬರುತ್ತಿದೆ. ದೇಶದಲ್ಲೇ ಮೊದಲ ಜಲ ವಿದ್ಯುತ್ ಕೇಂದ್ರ ಸ್ಥಾಪಿಸಿದ ಈ ಸಂಸ್ಥೆ ನಷ್ಟದಲ್ಲೇನೂ ಇಲ್ಲ. ಈಗಲೂ ಈ ಸಂಸ್ಥೆ ಉತ್ಪಾದಿಸುವ ವಿದ್ಯುತ್ತಿಗೆ ಬೇಡಿಕೆ ಇದ್ದೇ ಇದೆ. ಆದರೂ ಮುಳುಗುತ್ತಿರುವುದು ಏಕೆ ಎಂಬ ಪ್ರಶ್ನೆ ಕಾಡುವುದು ಸಹಜ. ಸ್ವಾತಂತ್ರ್ಯ ಪೂರ್ವದಲ್ಲೇ ಮೈಸೂರು ಅರಸರು ಮತ್ತು ಎಂಜಿನಿಯರ್‌ಗಳು ವಿದ್ಯುತ್ ಉತ್ಪಾದನೆ ಮತ್ತು ಬಳಕೆಯ ಬಗ್ಗೆ ಹಲವು ಪ್ರಯೋಗಗಳನ್ನು ಕೈಗೊಂಡಿದ್ದರು. ಹೀಗಾಗಿ ವಿದ್ಯುತ್ ರಂಗದಲ್ಲಿ ಬದಲಾವಣೆ ಬಂದಂತೆ ಕೆಪಿಸಿ ಕಾರ್ಯವಿಧಾನವೂ ಬದಲಾಗುತ್ತ ಬಂದಿತು.

ಮೊದಲು ಜಲ ವಿದ್ಯುತ್ ಸಾಕಾಗಿತ್ತು ಆಮೇಲೆ ಥರ್ಮಲ್ ಘಟಕಗಳು ತಲೆಎತ್ತಿದವು. ನಂತರದ ದಿನಗಳಲ್ಲಿ ಸೋಲಾರ್, ಪವನ ವಿದ್ಯುತ್ ಯೋಜನೆಗಳನ್ನು ತಲೆ ಎತ್ತಿದವು. ಅಲ್ಲಿಯವರೆಗೆ ಖಾಸಗಿ ವಲಯದಲ್ಲಿ ವಿದ್ಯುತ್ ಉತ್ಪಾದನೆ ಇರಲಿಲ್ಲ. ಕೇಂದ್ರ ಸರ್ಕಾರ 2003 ರಲ್ಲಿ ವಿದ್ಯುತ್ ಕಾಯ್ದೆಗೆ ತಿದ್ದುಪಡಿ ತಂದು ಖಾಸಗಿಯವರು ಕಾಲಿಡಲು ಅವಕಾಶವಾಯಿತು. ಈಗ ಸೋಲಾರ್ ಮತ್ತಿತರ ವಿದ್ಯುತ್ ಯೋಜನೆಗಳಲ್ಲಿ ಖಾಸಗಿಯವರ ಪ್ರಾಬಲ್ಯ ಅಧಿಕಗೊಂಡಿದೆ. ಮುಂದಿನ ದಿನಗಳಲ್ಲಿ ಅಣುವಿದ್ಯುತ್‌ನಲ್ಲೂ ಖಾಸಗಿ ಕಂಪನಿಗಳು ತಲೆ ಎತ್ತಲಿವೆ.

Karnataka Power Corporation

ಖಾಸಗಿ ಕಂಪನಿಗಳಿಗೆ ಮಹತ್ವ

ಈಗ ಸರ್ಕಾರಕ್ಕಿಂತ ಖಾಸಗಿ ಕಂಪನಿಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಹತ್ವ ನೀಡಲು ಆರಂಭಿಸಿದೆ. ಹೀಗಾಗಿ ಕೆಪಿಸಿ ಸರ್ಕಾರಿ ಸಂಸ್ಥೆಯಾಗಿ ಸಮರ್ಪಕವಾಗಿ ನಿರ್ವಹಿಸುತ್ತಿದ್ದರೂ ಸರ್ಕಾರದ ಅವಕೃಪೆಗೆ ಒಳಗಾಗಿದೆ. ಹೊಸ ಯೋಜನೆಗಳು ಯಾವುದೂ ಇಲ್ಲ. ಒಂದೇ ಒಂದು ಯೋಜನೆ ಎಂದರೆ ಶರಾವತಿ ಪಂಪ್ಡ್ ಸ್ಟೋರೇಜ್ ಸಿಸ್ಟಂ. ಇದಕ್ಕೆ ಪರಿಸರವಾದಿಗಳ ವಿರೋಧವಿದೆ. ಆದರೂ ಸರ್ಕಾರ ಮೊಂಡುವಾದ ಮಂಡಿಸುತ್ತಿದೆ.

ಪಂಪ್ಡ್ ಸ್ಟೋರೇಜ್ ಸಿಸ್ಟಂ ರಾತ್ರಿ ವೇಳೆ ವಿದ್ಯುತ್ ಪೂರೈಕೆಯಲ್ಲಿ ಸಮತೋಲನ ಕಾಯ್ದುಕೊಳ್ಳಬಹುದು ಎಂಬ ಅಂಶ ಹೊರತುಪಡಿಸಿದರೆ ಶರಾವತಿಯಲ್ಲೇ ಮಾಡಬೇಕೆಂಬ ತುರ್ತು ಏನೂ ಇಲ್ಲ. ಬೇರೆ ಜಲ ವಿದ್ಯುತ್ ಯೋಜನೆಗಳಲ್ಲೂ ಕೈಗೊಳ್ಳಬಹುದು. ಅಲ್ಲದೆ ಪಂಪ್ಡ್ ಸ್ಟೋರೇಜ್ ಉದ್ದೇಶವನ್ನೇ ಬ್ಯಾಟರಿ ಸ್ಟೋರೇಜ್ ಸಿಸ್ಟಂ ಈಡೇರಿಸುವುದರಿಂದ ಕೆಪಿಸಿ ಅದನ್ನೇ ಕೈಗೊಳ್ಳಬಹುದು. ಅಲ್ಲದೆ ರಾತ್ರಿ ಅಗತ್ಯಕ್ಕೆ ತಕ್ಕಂತೆ ಎಲ್ಲಿ ಬೇಕಾದರೂ ಸ್ಥಾಪಿಸಬಹುದು.

ಹಗಲು ಹೆಚ್ಚುವರಿ ದೊರೆಯುವ ಸೋಲಾರ್ ವಿದ್ಯುತ್ತನ್ನು ಇದರಲ್ಲಿ ದಾಸ್ತಾನು ಮಾಡಿ ರಾತ್ರಿ ಎಷ್ಟು ಬೇಕೋ ಅಷ್ಟು ಬಳಸಬಹುದು. ಬ್ಯಾಟರಿ ಸ್ಟೋರೇಜ್ ಸ್ವಲ್ಪ ದುಬಾರಿ ಎಂದರೂ ಹಲವು ಅನುಕೂಲತೆಗಳನ್ನು ಕಲ್ಪಿಸಿಕೊಡುತ್ತದೆ. ಮುಖ್ಯವಾಗಿ ವಿದ್ಯುತ್ ನಷ್ಟವನ್ನು ಕಡಿಮೆ ಮಾಡಬಹುದು. ಇತ್ತೀಚಿನ ದಿನಗಳಲ್ಲಿ ಕೆಪಿಸಿ ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ವಿದ್ಯುತ್ ಉತ್ಪಾದನೆ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣ ನಮ್ಮಲ್ಲಿ ಅಧಿಕಾರ ಹೊಂದಿರುವ ರಾಜಕಾರಣಿಗಳು. ಅವರು ಎಲ್ಲ ಪಕ್ಷದಲ್ಲೂ ಇದ್ದಾರೆ. ಅವರಿಗೆ ಕೆಪಿಸಿಗಿಂತ ಖಾಸಗಿ ಕಂಪನಿಗಳು ಪ್ರಮುಖವಾಗಿ ಕಂಡಿವೆ. ಏಕೆಂದರೆ ಅದರಲ್ಲಿ ಕಿಕ್‌ಬ್ಯಾಕ್ ಇದೆ. ಕೆಪಿಸಿ ಲಂಚ ಕೊಡಲು ಬರುವುದಿಲ್ಲ.

Karnataka Power Corporation

ಸೋಲಾರ್- ಕೆಪಿಸಿ

ಈಗ ಕೆಪಿಸಿಗೆ ಸೋಲಾರ್ ಉತ್ಪಾದನೆಯೇ ಮುಳುವಾಗಿದೆ. ಖಾಸಗಿ ಕಂಪನಿಗಳು ಸೋಲಾರ್ ಮತ್ತು ಪವನ ವಿದ್ಯುತ್‌ನಲ್ಲಿ ಹೆಚ್ಚು ತೊಡಗಿಸಿಕೊಂಡು ಲಕ್ಷಾಂತರ ರೂ. ಬಂಡವಾಳ ಹೂಡುತ್ತಿವೆ. ರಾಜಕಾರಣಿಗಳು ಮತ್ತು ಸಿನಿಮಾ ನಟನಟಿಯರು ಇದರಲ್ಲಿ ಬಂಡವಾಳ ಹೂಡುತ್ತಿದ್ದಾರೆ. ಕಪ್ಪು ಹಣ ಪರಿವರ್ತಿಸಿಕೊಳ್ಳಲು ಇದು ಸುಲಭ ಮಾರ್ಗ. ಈಗ ಬ್ಯಾಟರಿ ಸ್ಟೋರೇಜ್ ಸಿಸ್ಟಂ ಮತ್ತು ಸೋಲಾರ್ ಫಲಕ ಅಳವಡಿಕೆಯಲ್ಲಿ ಕೆಪಿಸಿ ಸಣ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದೆ. ಕ್ರೆಡಿಲ್ ಸಂಸ್ಥೆ ಖಾಸಗಿಯವರಿಗೆ ಸೋಲಾರ್ ಟೆಂಡರ್ ಕೊಡುವುದರಲ್ಲಿ ನಿರತವಾಗಿದೆ.

ನಮ್ಮ ರಾಜ್ಯಕ್ಕೆ ಎಷ್ಟು ಸೋಲಾರ್ ಬೇಕು ಎಂಬ ಅಂದಾಜೇ ಇಲ್ಲ. ಈಗ ನಮ್ಮಲ್ಲಿ ಬೇಡಿಕೆ 10734 ಮೆಗಾವ್ಯಾಟ್‌ನಿಂದ 17924 ಮೆಗಾವ್ಯಾಟ್ ವರೆಗೆ ಕಂಡು ಬರುತ್ತಿದೆ. ಇದು 19 ಸಾವಿರ ಮೆಗಾವ್ಯಾಟ್ ತಲುಪುವ ನಿರೀಕ್ಷೆ ಇದೆ. ಆದರೆ ಸರ್ಕಾರಕ್ಕೆ ಇದಕ್ಕಿಂತ 3 ಪಟ್ಟು ಹೆಚ್ಚು ಬೇಡಿಕೆ ಇದೆ ಎಂದು ತೋರಿಸುವ ಹುನ್ನಾರ ನಡೆಯುತ್ತಿದೆ. ಬೇಡಿಕೆ ಹೆಚ್ಚಿಸಿದರೆ ಅದಕ್ಕೆ ತಕ್ಕಂತೆ ವಿದ್ಯುತ್ ಖರೀದಿ ಪ್ರಮಾಣವನ್ನು ಹೆಚ್ಚಿಸಬಹುದು. ಕೆಇಆರ್‌ಸಿಗೆ ಹೆಚ್ಚಿನ ದರ ನೀಡುವಂತೆ ಕೇಳಬಹುದು. ಆದರೆ ಕೇಂದ್ರೀಯ ವಿದ್ಯುತ್ ಪ್ರಾಧಿಕಾರದ ನಿರೀಕ್ಷೆಗಳೇ ಬೇರೆ ಇದೆ. ಅದರ ವರದಿಯಲ್ಲಿ ವಿದ್ಯುತ್ ವಾರ್ಷಿಕ ಬೆಳವಣಿಗೆ ಶೇ.3.93. ಮುಂದಿನ 2041 ವರೆಗೆ ಬರುವ ಬೇಡಿಕೆಯನ್ನು ಸಿಇಎ ವರದಿ ಹೇಳಿದೆ. ಆದರೂ ಉತ್ಪೆಕ್ಷಿತ ಅಂಕಿಅಂಶಗಳನ್ನು ಬಳಸಿದರೆ ವಿದ್ಯುತ್ ರಂಗದ ಬೆಳವಣಿಗೆ ದೃಷ್ಟಿಯಿಂದ ಒಳಿತಲ್ಲ.

ಕ್ರೆಡಿಲ್ ಸಂಸ್ಥೆ ಖಾಸಗಿ ಸಂಸ್ಥೆಗಳಿಗೆ ಸೋಲಾರ್ ಉತ್ಪಾದನೆ ಮಾಡಲು ಯಾವ ಮಿತಿಯೂ ಇಲ್ಲದೆ ಪಿಪಿಎಗಳನ್ನು ಸಹಿ ಮಾಡಿ ಕೊಡುತ್ತಿದೆ. ಇವುಗಳೆಲ್ಲ 3-4 ತಿಂಗಳಲ್ಲಿ ವಿದ್ಯುತ್ ಕೊಡಲು ಅರಂಭಿಸಿದರೆ ಅವುಗಳಿಗೆ ಹಣ ಕೊಡಲು ಸರ್ಕಾರ ಪರದಾಡಬೇಕು. ಈಗಲೇ ಒಟ್ಟು ವಿದ್ಯುತ್ ಬಳಕೆ 18014 ಮೆಗಾವ್ಯಾಟ್ ತಲುಪಿದೆ. ಇದರಲ್ಲಿ ಸೋಲಾರ್ ಮತ್ತು ಪವನ ವಿದ್ಯುತ್ 6714 ಮೆಗಾವ್ಯಾಟ್. ಇದಕ್ಕೆ ಪ್ರತಿಯಾಗಿ ಕೆಪಿಸಿ ನೀಡುತ್ತಿರುವುದು 4225 ಮೆಗಾವ್ಯಾಟ್ ಮಾತ್ರ. ಅಂದರೆ ವಿದ್ಯುತ್ ಖರೀದಿ ಹಣದಲ್ಲಿ ಹೆಚ್ಚಿನ ಪ್ರಮಾಣ ಖಾಸಗಿ ಪಾಲಾಗುತ್ತಿದೆ.

ಈಗ ಕೆಪಿಸಿ ಕೈಯಲ್ಲಿ ಯಾವುದೇ ಹೊಸ ಯೋಜನೆಗಳಿಲ್ಲ ಎಂಜಿನಿಯರ್‌ಗಳ ನೇಮಕ ನಿಂತು ಹೋಗಿದೆ. ಈಗ ಇರುವ ಜಲ ವಿದ್ಯುತ್ ಯೋಜನೆಗಳನ್ನು ನೋಡಿಕೊಳ್ಳುವುದಷ್ಟೇ ಕೆಪಿಸಿ ಕೆಲಸವಾಗಿದೆ. ಮುಂದಿನ ದಿನಗಳಲ್ಲಿ ಅವುಗಳ ನಿರ್ವಹಣೆಯನ್ನು ಹೊರಗುತ್ತಿಗೆ ನೀಡಿ ಕೆಪಿಸಿ ಮುಚ್ಚುವ ಪರಿಸ್ಥಿತಿ ಬರಲಿದೆ. ಕೆಪಿಸಿ ಒಂದಾನೊಂದು ಕಾಲದಲ್ಲಿ ರಾಜ್ಯದ ಯುವ ಎಂಜಿನಿಯರ್‌ಗಳಿಗೆ ಆಶಾಭಾವನೆ ಮೂಡಿಸುವ ಕೇಂದ್ರವಾಗಿತ್ತು.

ನೂರಕ್ಕೆ ನೂರರಷ್ಟು ಕನ್ನಡಿಗರು

ನೂರಕ್ಕೆ ನೂರರಷ್ಟು ಕನ್ನಡಿಗರೇ ಕೆಲಸ ಮಾಡುತ್ತಿದ್ದರು. 120 ವರ್ಷಗಳ ಹಿಂದೆ ಆರಂಭಿಸಿದ ಶಿವನಸಮುದ್ರ ಈಗಲೂ ಕೆಲಸ ಮಾಡುತ್ತಿದೆ ಎಂದರೆ ಅದಕ್ಕೆ ನಮ್ಮ ಎಂಜಿನಿಯರ್‌ಗಳೇ ಕಾರಣ. ನಮ್ಮಲ್ಲಿ ಸಾಕಷ್ಟು ಬೌದ್ಧಿಕ ಸಂಪನ್ಮೂಲ ಇದ್ದರೂ ರಾಜ್ಯ ಸರ್ಕಾರಕ್ಕೆ ಇದು ಬೇಕಿಲ್ಲ. ಹೊರಗಿನವರಿಗೆ ಗುತ್ತಿಗೆ ಕೊಡುವುದರಲ್ಲಿ ಇರುವ ಆಸಕ್ತಿ ಕೆಪಿಸಿ ಬೆಳೆಸುವ ಕಡೆ ಇಲ್ಲ. ಹಿಂದೆ ಮನೆ ಮುಂದೆ ಗಿಡ ಮರ ಇರಬೇಕೆಂದು ಜನ ಬಯಸುತ್ತಿದ್ದರು. ಈಗ ವಾಸ್ತು ಪ್ರಕಾರ ಮನೆ ಮುಂದೆ ಮರ ಇರಬಾರದು. ಅದಕ್ಕಾಗಿ ಆ ಮರದ ಬುಡಕ್ಕೆ ಆಸಿಡ್ ಹಾಕಿ ಅದು ಸಾಯುವಂತೆ ಮಾಡುವುದು. ಅಲಂಕಾರಕ್ಕೆ ಮನೆ ಮುಂದೆ ಕುಂಡದಲ್ಲಿ ಗಿಡಗಳನ್ನು ತಂದಿಟ್ಟುಕೊಳ್ಳುವುದು. ಇದು ಈಗಿನ ಪದ್ಧತಿ. ಕೆಪಿಸಿಯನ್ನು ರಾಜ್ಯ ಸರ್ಕಾರ ಈ ರೀತಿ ನಿಧಾನವಾಗಿ ಸಾಯಿಸುವ ಕೆಲಸ ಕೈಗೊಳ್ಳುತ್ತಿದೆ.

ಈಗ ಎಐ ತಂತ್ರಜ್ಞಾನ ಬಂದಿರುವುದು ನಮ್ಮ ವಿದ್ಯುತ್ ಇಲಾಖೆಗೆ ನುಂಗಲಾರದ ತುಪ್ಪವಾಗಿದೆ. ಇದರಿಂದ ವಿದ್ಯುತ್ ಬೇಡಿಕೆ, ವಿದ್ಯುತ್ ನಷ್ಟ ಎಲ್ಲವೂ ಸ್ಪಷ್ಟವಾಗಿ ತಿಳಿದುಹೋಗುತ್ತದೆ. ಇದುವರೆಗೆ ಸರ್ಕಾರ ಕೊಡುವ ಸಬ್ಸಿಡಿಯಲ್ಲಿ ಕಂಪನಿಗಳ ನಷ್ಟ ಸರಿತೂಗಿಸಲು ಸಾಧ್ಯವಾಗಿತ್ತು. ಮುಂದೆ ಇದು ಸಾಧ್ಯವಾಗುವುದಿಲ್ಲ. ಎಐ ತಂತ್ರಜ್ಞಾನ ಅಳವಡಿಸಿಕೊಂಡಲ್ಲಿ ಈ ನಷ್ಟ ಸರಿತೂಗಿಸುವ ಕೆಲಸ ಬಹಿರಂಗೊಳ್ಳುವುದು ಖಚಿತ. ಅದರಿಂದ ಎಐ ಬೇಕಿಲ್ಲ ಎಂಬ ವಾದವೂ ಕೇಳಿ ಬರುತ್ತಿದೆ. ಎಐ ಅಳವಡಿಕೆಯನ್ನು ಮುಂದೂಡುವ ಪ್ರಯತ್ನಗಳೂ ನಡೆಯುತ್ತಿವೆ. ಆದರೆ ಯುವ ಪೀಳಿಗೆಗೆ ಇದು ಬೇಕು. ವಿದ್ಯುತ್ ರಂಗದ ಎಲ್ಲ ಹುಳುಕುಗಳನ್ನು ಎಐ ತಂತ್ರಜ್ಞಾನ ಬಹಿರಂಗಪಡಿಸುವುದಂತೂ ಖಚಿತ. ಕೆಪಿಸಿ ಭವಿಷ್ಯದ ಮೇಲೆ ಬೆಳಕು ಚೆಲ್ಲುವ ಕೆಲಸ ನಡೆಯಬೇಕಿದೆ.

- ಬರಹ: ರಾಧಾ ಕೆ.

(ಮೌಲಿಕ ಬರಹಗಳನ್ನು ನೀವೂ ಕಳಿಸಬಹುದು. ಇಮೇಲ್: [email protected])

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+