Return to Office ನಿಯಮಕ್ಕೆ ಟೆಕ್ಕಿಯ ವಿರೋಧ: ಸಾಮಾಜಿಕ ಜಾಲತಾಣದಲ್ಲಿ ಚರ್ಚೆ
ಬೆಂಗಳೂರು: ಕೋವಿಡ್ ನಂತರ ಮನೆ ಮೂಲಕ ಕೆಲಸ (WFH) ಮಾಡುವ ಪದ್ಧತಿಗೆ ಹೊಂದಿಕೊಂಡಿದ್ದ ಐಟಿ ಉದ್ಯೋಗಿಗಳಿಗೆ ಇದೀಗ ಮತ್ತೆ ಕಚೇರಿಗೆ ಮರಳುವ ಒತ್ತಡ ಹೆಚ್ಚುತ್ತಿದೆ. ಈ ನಡುವೆ ಬೆಂಗಳೂರಿನ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ಕಡ್ಡಾಯ ಐದು ದಿನಗಳ ಆಫೀಸ್ ಹಾಜರಾತಿ (WFO) ನೀತಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು ಅದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ರೆಡ್ಡಿಟ್‌ನಲ್ಲಿ ತಮ್ಮ ಅನುಭವ ಹಂಚಿಕೊಂಡಿರುವ ಈ ಎಂಜಿನಿಯರ್, "ಕೋವಿಡ್‌ಗೂ ಮೊದಲು ಬೆಂಗಳೂರಿನಲ್ಲಿ ವಾಸಿಸಿದ್ದೇನೆ. ಇಲ್ಲಿನ ಟ್ರಾಫಿಕ್ ಸಮಸ್ಯೆ, ದುಬಾರಿ ಮನೆ ಬಾಡಿಗೆ, ದೀರ್ಘ ಪ್ರಯಾಣದ ಸಮಯ ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚದ ವಾಸ್ತವತೆ ನನಗೆ ಚೆನ್ನಾಗಿ ಗೊತ್ತಿದೆ. ಕುಟುಂಬದೊಂದಿಗೆ ಮತ್ತೆ ಬೆಂಗಳೂರಿಗೆ ಸ್ಥಳಾಂತರವಾದರೆ ನನ್ನ ಉಳಿತಾಯದ ಹಣ ಬಹುಪಾಲು ಖರ್ಚಾಗುತ್ತದೆ" ಎಂದು ಹೇಳಿಕೊಂಡಿದ್ದಾರೆ.

ಐಟಿ ಕ್ಷೇತ್ರದಲ್ಲಿ 10 ವರ್ಷಕ್ಕೂ ಹೆಚ್ಚು ಅನುಭವ ಹೊಂದಿರುವ ಅವರು, ತಮ್ಮ ಕಂಪನಿಯು ಈ ವರ್ಷದ ಅಂತ್ಯದೊಳಗೆ ಎಲ್ಲಾ ಉದ್ಯೋಗಿಗಳು ಪೂರ್ಣಾವಧಿ ಕಚೇರಿಯಿಂದಲೇ ಕೆಲಸ ಮಾಡಬೇಕು ಎಂದು ಸೂಚಿಸಿದೆ ಎಂದು ತಿಳಿಸಿದ್ದಾರೆ. ಹಲವು ವರ್ಷಗಳಿಂದ ದೂರ ಇದ್ದರು ನಾವು ಮಾಡುವ ಕೆಲಸ ಯಶಸ್ವಿಯಾಗಿ ನಡೆಯುತ್ತಿದ್ದರೂ, ಏಕಾಏಕಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
"ವರ್ಷಗಳ ಕಾಲ ವರ್ಕ್ ಫ್ರಮ್ ಹೋಮ್ ಇದ್ದ ಕಾರಣ ನಾನು ಅದಕ್ಕೆ ತಕ್ಕಂತೆ ವ್ಯವಸ್ಥೆ ಮಾಡಿಕೊಂಡಿದ್ದೇನೆ. ಟ್ರಾಫಿಕ್‌ನಲ್ಲಿ ಗಂಟೆಗಟ್ಟಲೆ ಸಮಯ ವ್ಯರ್ಥವಾಗುವುದಿಲ್ಲ, ಅನಗತ್ಯ ಸಭೆಗಳು ಅಥವಾ ಕಚೇರಿಯ ಸಾಮಾಜಿಕ ಒತ್ತಡವೂ ಇಲ್ಲ. ನನ್ನ ಕೆಲಸವನ್ನು ಸರಿಯಾಗಿ ಮಾಡಲು ಸಹೋದ್ಯೋಗಿಗಳ ಪಕ್ಕದಲ್ಲೇ ಕುಳಿತುಕೊಳ್ಳಬೇಕೆಂಬ ಅಗತ್ಯವಿಲ್ಲ" ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಈ ಪೋಸ್ಟ್ ವೈರಲ್ ಆದ ಬಳಿಕ ನೂರಾರು ಮಂದಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. "ಡಿಸೆಂಬರ್‌ವರೆಗೆ ಹೊಸ ಉದ್ಯೋಗ ಹುಡುಕಲು ಸಮಯವಿದೆ. ಕಂಪನಿಯೂ ಅದನ್ನೇ ಬಯಸುತ್ತಿರಬಹುದು. ಅದಕ್ಕಾಗಿಯೇ ಐದು ದಿನಗಳ ಕಚೇರಿ ಹಾಜರಾತಿ ನಿಯಮ ತಂದಿರಬಹುದು" ಎಂದು ಒಬ್ಬ ಸಾಮಾಜಿಕ ಜಾಲತಾಣದ ಬಳಕೆದಾರ ಪ್ರತಿಕ್ರಿಯಿಸಿದ್ದಾರೆ.
ಮತ್ತೊಬ್ಬ ಬಳಕೆದಾರರು, "ಐದು ದಿನ ಕಚೇರಿಗೆ ಕಡ್ಡಾಯ ಹಾಜರಾತಿ ನಿಯಮ ಜಾರಿಗೊಳಿಸುವುದರ ಹಿಂದೆ ಉದ್ಯೋಗಿಗಳ ಸಂಖ್ಯೆಯನ್ನು ಪರೋಕ್ಷವಾಗಿ ಕಡಿಮೆ ಮಾಡುವ ಉದ್ದೇಶ ಇರಬಹುದು. ಕೆಲವರು ಈ ಒತ್ತಡವನ್ನು ಸಹಿಸಲಾಗದೆ ಸ್ವಯಂಪ್ರೇರಿತವಾಗಿ ಉದ್ಯೋಗ ತೊರೆಯುವ ಸಾಧ್ಯತೆಯೂ ಇದೆ" ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನೊಬ್ಬ ಬಳಕೆದಾರರು, "ಒಂದು ದಿನ ನನಗೂ ಕಡ್ಡಾಯವಾಗಿ ಕಚೇರಿಗೆ ಹಾಜರಾಗುವ ಪರಿಸ್ಥಿತಿ ಎದುರಾಗಬಹುದೆಂಬ ಆತಂಕ ಯಾವಾಗಲೂ ಇರುತ್ತದೆ. ಬೆಂಗಳೂರಿನಲ್ಲಿ ವಾಸಿಸಿದ್ದ ಅನುಭವದ ಕಾರಣ ಮತ್ತೆ ಅಲ್ಲಿಗೆ ಸ್ಥಳಾಂತರಗೊಳ್ಳುವ ಯೋಚನೆಯೇ ನನಗೆ ಇಷ್ಟವಾಗುವುದಿಲ್ಲ" ಎಂದು ಪ್ರತಿಕ್ರಿಯಿಸಿದ್ದಾರೆ.
ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಕಡ್ಡಾಯ ಕಚೇರಿ ಹಾಜರಾತಿ ನೀತಿಗಳ ಪರಿಣಾಮಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಎಬ್ಬಿಸಿದೆ. ವಿಶೇಷವಾಗಿ ಉದ್ಯೋಗಿಗಳ ವೈಯಕ್ತಿಕ ಜೀವನ, ಆರ್ಥಿಕ ಸ್ಥಿತಿ, ಪ್ರಯಾಣದ ಒತ್ತಡ ಮತ್ತು ಕೆಲಸ-ಜೀವನ ಸಮತೋಲನದ ಮೇಲೆ ಇಂತಹ ನಿರ್ಧಾರಗಳು ಹೇಗೆ ಪರಿಣಾಮ ಬೀರುತ್ತವೆ ಎಂಬುದರ ಕುರಿತು ಐಟಿ ವಲಯದಲ್ಲಿ ಮತ್ತೆ ಚರ್ಚೆ ಆರಂಭವಾಗಿದೆ.
ಬೆಂಗಳೂರಿನ ಜೀವನ ವೆಚ್ಚದ ಬಗ್ಗೆ ಹೆಚ್ಚುತ್ತಿರುವ ಆತಂಕ
ಭಾರತದ ಐಟಿ ರಾಜಧಾನಿ ಎಂದು ಗುರುತಿಸಿಕೊಂಡಿರುವ ಬೆಂಗಳೂರಿನಲ್ಲಿ ಮನೆ ಬಾಡಿಗೆ, ಸಂಚಾರ ವೆಚ್ಚ ಮತ್ತು ದೈನಂದಿನ ಖರ್ಚುಗಳು ಕಳೆದ ಕೆಲವು ವರ್ಷಗಳಲ್ಲಿ ಗಮನಾರ್ಹವಾಗಿ ಏರಿಕೆಯಾಗಿದೆ. ಇದೇ ಕಾರಣದಿಂದ ಬೇರೆ ನಗರಗಳು ಅಥವಾ ತಮ್ಮ ಸ್ವಂತ ಊರುಗಳಿಂದ ಕೆಲಸ ಮಾಡುತ್ತಿರುವ ಅನೇಕ ಉದ್ಯೋಗಿಗಳು ಮತ್ತೆ ಬೆಂಗಳೂರಿಗೆ ಸ್ಥಳಾಂತರಗೊಳ್ಳುವ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಹೆಚ್ಚಿನ ಸಂಬಳ ಸಿಕ್ಕರೂ ಜೀವನ ವೆಚ್ಚ ಹೆಚ್ಚಿರುವುದರಿಂದ ಉಳಿತಾಯ ಕಡಿಮೆಯಾಗುತ್ತದೆ ಎನ್ನುವುದು ಹಲವರ ಅಭಿಪ್ರಾಯವಾಗಿದೆ.














Click it and Unblock the Notifications