IPL 2026 Final: ಈ ಮೂವರು ಬೇಗ ಔಟ್ ಆದ್ರೆ RCBಗೆ ಗೆಲುವು ಬಾಳೆಹಣ್ಣು ಸಿಪ್ಪೆ ಸುಲಿದಷ್ಟು ಸುಲಭ
IPL 2026 Final: ಅಹಮದಾಬಾದ್‌ನಲ್ಲಿ ಭಾನುವಾರ (ಮೇ 31) ನಡೆಯಲಿರುವ ಐಪಿಎಲ್ 2026ರ ರೋಚಕ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗುತ್ತಿವೆ. ಇತಿಹಾಸ ನಿರ್ಮಿಸಲು ಸಜ್ಜಾಗಿರುವ ಆರ್‌ಸಿಬಿಗೆ ಈ ಬಾರಿ ಮತ್ತೊಮ್ಮೆ ಟ್ರೋಫಿ ಎತ್ತಿಹಿಡಿಯಲು ಸುವರ್ಣಾವಕಾಶವಿದೆ. ಆದರೆ ಗುಜರಾತ್ ನೆಲದಲ್ಲಿ ಜಿಟಿ ಪಡೆಯನ್ನು ಮಣಿಸಬೇಕಾದರೆ ಆರ್‌ಸಿಬಿ ಬೌಲರ್‌ಗಳು ಒಂದು ಮಾಸ್ಟರ್ ಪ್ಲಾನ್ ಮಾಡಬೇಕಿದೆ.
ಈ ಸೀಸನ್ ಆರಂಭದಿಂದಲೂ ಉತ್ತಮ ಪ್ರದರ್ಶನದ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಫೈನಲ್ ಪ್ರವೇಶ ಮಾಡಿವೆ. ಎರಡೂ ತಂಡಗಳು ಸಹ ಇಂದಿನ ಪಂದ್ಯದಲ್ಲಿ ಟ್ರೋಫಿ ಗೆಲ್ಲುವ ವಿಶ್ವಾಸದೊಂದಿಗೆ ಕಣಕ್ಕಿಳಿಯುತ್ತಿವೆ. ಜಿಟಿಗೆ ಮಣ್ಣು ಮುಕ್ಕಿಸುವ ಬಹುತೇಕ ಜವಾಬ್ದಾರಿ ಬೆಂಗಳೂರು ತಂಡದ ಬೌಲರ್‌ಗಳ ಕೈಯಲ್ಲಿದೆ.

ಗುಜರಾತ್‌ಗೆ ಆಧಾರವಾಗಿರುವ ತ್ರಿಮೂರ್ತಿಗಳು
ಗುಜರಾತ್ ಟೈಟಾನ್ಸ್ ತಂಡದ ಬ್ಯಾಟಿಂಗ್ ಬೆನ್ನೆಲುಬಾಗಿರುವ ಮೂವರು ಬ್ಯಾಟರ್‌ಗಳನ್ನು ಬೇಗವೇ ಔಟ್ ಮಾಡಿ ಪವಿಲಿಯನ್‌ಗೆ ಕಳುಹಿಸಿದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಗೆಲುವು ಬಾಳೆಹಣ್ಣಿನ ಸಿಪ್ಪೆ ಸುಲಿದಷ್ಟು ಸುಲಭವಾಗಲಿದೆ. ಹಾಗಾದ್ರೆ ಆ ತ್ರಿಮೂರ್ತಿಗಳು ಯಾರು ಎನ್ನುವ ಕುತೂಹಲ ಬಹುತೇಕರಲ್ಲಿ ಇರುತ್ತದೆ.
ಶುಭ್‌ಮನ್ ಗಿಲ್: ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್‌ಮನ್ ಗಿಲ್ ತಮ್ಮ ತವರು ಮೈದಾನ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ರನ್ ಮಳೆ ಹರಿಸಲು ಸಜ್ಜಾಗಿದ್ದಾರೆ. ಅವರು ಕ್ರೀಸ್‌ನಲ್ಲಿ ಹೆಚ್ಚು ಸಮಯ ಇದ್ದರೆ ಪಂದ್ಯ ಆರ್‌ಸಿಬಿ ಕೈಯಿಂದ ಜಾರಿಹೋಗುವುದು ಖಚಿತ. ಆದ್ದರಿಂದ ಅವರನ್ನು ಆರಂಭದಲ್ಲೇ ಕಟ್ಟಿಹಾಕುವ ಕೆಲಸ ಆರ್‌ಸಿಬಿಯ ಗುರಿಯಾಗಿದೆ.
ಸಾಯಿ ಸುದರ್ಶನ್: ಗಿಲ್ ಜೊತೆ ಆರಂಭಿಕರಾಗಿ ಇನ್ನಿಂಗ್ಸ್ ಆರಂಭಿಸುವ ಸಾಯಿ ಸುದರ್ಶನ್ ಅವರನ್ನ ಕಟ್ಟಿಹಾಕದಿದ್ದರೆ ತುಂಬಾ ಕಷ್ಟ ಆಗಲಿದೆ. ಇವರು ಏನಾದರೂ ಕೊನೆವರೆಗೂ ಕ್ರೀಸ್‌ನಲಿದ್ದರೆ ಆರ್‌ಸಿಬಿಗೆ ಹೊಡೆತ ಬೀಳುವುದಂತೂ ಗ್ಯಾರಂಟಿ. ಕಳೆದ ಎರಡೂ ಪಂದ್ಯಗಳಲ್ಲಿ ಇವರು ಆಕಸ್ಮಿಕವಾಗಿ ತಮ್ಮ ಬ್ಯಾಟ್ ಅನ್ನು ವಿಕೆಟ್‌ಗೆ ಎಸೆದು ಔಟ್ ಆಗಿದ್ದರು. ಆದರೆ ಇಂದಿನ ಪಂದ್ಯದಲ್ಲಿ ಆ ತಪ್ಪು ಮಾಡುವ ಸಾಧ್ಯತೆ ತುಂಬಾ ಕಡಿಮೆ ಇರುತ್ತದೆ.
ತಂಡಕ್ಕೆ ಆಧಾರ ಸ್ತಂಭವಾಗಿರುವ ಸ್ಫೋಟಕ ಬ್ಯಾಟರ್ ಸಾಯಿ ಸುದರ್ಶನ್ ಇನಿಂಗ್ಸ್ ಮುನ್ನಡೆಸುವಲ್ಲಿ ಎತ್ತಿದ ಕೈ. ದೊಡ್ಡ ಪಂದ್ಯಗಳಲ್ಲಿ ಒತ್ತಡವನ್ನು ನಿಭಾಯಿಸುವ ಕಲೆ ಇವರಿಗೆ ಚೆನ್ನಾಗಿ ಗೊತ್ತಿದೆ. ಇವರನ್ನು ಬೇಗನೆ ಔಟ್ ಮಾಡುವುದರಿಂದ ಜಿಟಿ ತಂಡದ ರನ್ ವೇಗಕ್ಕೆ ಕಡಿವಾಣ ಹಾಕಬಹುದು. ಇಲ್ಲದಿದ್ದರೆ ರನ್ ಮಳೆ ಸುರುವುದಂತೂ ಗ್ಯಾರಂಟಿ.
ಜೋಸ್ ಬಟ್ಲರ್: ಮತ್ತೊಂದೆಡೆ ಲೀಗ್ ಹಂತ ಹಾಗೂ ಪ್ಲೇ-ಆಫ್‌ನಲ್ಲಿ ಬಿರುಸಿನ ಬ್ಯಾಟಿಂಗ್ ಮಾಡಿರುವ ಜೋಸ್ ಬಟ್ಲರ್ ಇಂದಿನ ಫೈನಲ್ ಪಂದ್ಯದಲ್ಲೂ ಕೂಡ ಆರ್‌ಸಿಬಿ ಬೌಲರ್‌ಗಳ ಮೇಲೆ ದಂಡಯಾತ್ರೆ ನಡೆಸಲು ಸಜ್ಜಾಗಿದ್ದಾರೆ. ಇವರ ಅಬ್ಬರಕ್ಕೆ ಬ್ರೇಕ್ ಹಾಕದಿದ್ದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೌಲರ್‌ಗಳು ಭಾರಿ ಬೆಲೆ ತೆರಬೇಕಾಗುತ್ತದೆ.
ಬೌಲರ್‌ಗಳ ಹೆಗಲ ಮೇಲೆ ದೊಡ್ಡ ಜವಾಬ್ದಾರಿ
ಆರ್‌ಸಿಬಿ ಬೌಲಿಂಗ್ ವಿಭಾಗವು ಈ ಮೂವರು ಬ್ಯಾಟರ್‌ಗಳನ್ನು ಅಲ್ಪ ಮೊತ್ತಕ್ಕೆ ಔಟ್ ಮಾಡಿದರೆ ಗುಜರಾತ್ ಟೈಟಾನ್ಸ್ ತಂಡದ ಮಧ್ಯಮ ಕ್ರಮಾಂಕ ತೀವ್ರ ಒತ್ತಡಕ್ಕೆ ಸಿಲುಕಲಿದೆ. ನರೇಂದ್ರ ಮೋದಿ ಕ್ರೀಡಾಂಗಣದ ಪಿಚ್ ಆರಂಭದಲ್ಲಿ ವೇಗದ ಬೌಲರ್‌ಗಳಿಗೆ ಸ್ವಲ್ಪ ನೆರವು ನೀಡುವುದರಿಂದ ಆರ್‌ಸಿಬಿಯ ಆರಂಭಿಕ ಬೌಲರ್‌ಗಳು ಮಾರಕ ಬೌಲಿಂಗ್ ದಾಳಿ ನಡೆಸುವುದು ಅತ್ಯಗತ್ಯವಾಗಿದೆ.
ಒಟ್ಟಿನಲ್ಲಿ ಹೇಳುವುದಾದರೆ ಭಾನುವಾರದ ಈ ಹೈವೋಲ್ಟೇಜ್ ಕದನದಲ್ಲಿ ಟಾಸ್ ಗೆಲ್ಲುವ ತಂಡ ಮೊದಲು ಬೌಲಿಂಗ್ ಆಯ್ದುಕೊಂಡು ಎದುರಾಳಿಯನ್ನು ಕಟ್ಟಿಹಾಕಲು ಯತ್ನಿಸಬಹುದು. ಆರ್‌ಸಿಬಿ ಅಭಿಮಾನಿಗಳು ತಮ್ಮ ನೆಚ್ಚಿನ ತಂಡ ಸತತ ಎರಡನೇ ಬಾರಿ ಐಪಿಎಲ್ ಟ್ರೋಫಿ ಗೆಲ್ಲುವುದನ್ನು ನೋಡಲು ಕಾತರರಾಗಿದ್ದಾರೆ. ಜಿಟಿ ತಂಡದ ಈ ತ್ರಿಮೂರ್ತಿಗಳನ್ನು ಆರ್‌ಸಿಬಿ ಪಡೆ ಎಷ್ಟು ಬೇಗ ಪೆವಿಲಿಯನ್‌ಗೆ ಅಟ್ಟುತ್ತದೆಯೋ ಅಷ್ಟು ಬೇಗ ಬೆಂಗಳೂರು ತಂಡದ ಚಾಂಪಿಯನ್ ಕನಸು ನನಸಾಗುವ ಹಾದಿ ಸುಲಭವಾಗಲಿದೆ.












Click it and Unblock the Notifications