ತಲೆ ಸವರಿ ಮುದ್ದು ಮಾಡುತ್ತಲೇ ಬೀದಿನಾಯಿಗಳಿಗೆ ಯುವತಿ ಬಲೆ; ʼಮೋಸ ಮಾಡಲೆಂದೆ ನೀನು ಬಂದೆಯಾʼ ಎಂದ ನಾಯಿ ಗ್ಯಾಂಗ್‌

ಬೆಂಗಳೂರು ಸೇರಿದಂತೆ ದೇಶದ ಹಲವು ಮಹಾನಗರಗಳಲ್ಲಿ ಇಂದು ಬೀದಿನಾಯಿಗಳ ಹಾವಳಿ ಯಾವ ಮಟ್ಟಕ್ಕೆ ತಲುಪಿದೆ ಎಂದರೆ, ಸಾರ್ವಜನಿಕರು ರಸ್ತೆಯಲ್ಲಿ ನೆಮ್ಮದಿಯಾಗಿ ಓಡಾಡದ ಪರಿಸ್ಥಿತಿ ನಿರ್ಮಾಣವಾಗಿದೆ. ಮುಗ್ಧ ಮಕ್ಕಳು, ವೃದ್ಧರು ಹಾಗೂ ಮಹಿಳೆಯರ ಮೇಲೆ ಬೀದಿನಾಯಿಗಳು ಹಿಂಡುಹಿಂಡಾಗಿ ಮುಗಿಬಿದ್ದು, ಪ್ರಾಣಕ್ಕೆ ಸಂಚಕಾರ ತಂದಿರುವ ಎದೆನಡುಗಿಸುವಂತಹ ಹತ್ತಾರು ವಿಡಿಯೋಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆತಂಕ ಮೂಡಿಸಿದ್ದವು.

ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂಕೋರ್ಟ್‌ ಸಹ ನಾಯಿಗಳ ನಿಯಂತ್ರಣ ಮತ್ತು ಸ್ಥಳಾಂತರಕ್ಕೆ ಕಟ್ಟುನಿಟ್ಟಿನ ಆದೇಶ ನೀಡಿದೆ. ಸರ್ಕಾರಗಳೂ ಕೋಟ್ಯಂತರ ರೂಪಾಯಿ ಹಣವನ್ನು ಇದಕ್ಕಾಗಿ ವ್ಯಯಿಸುತ್ತಿವೆ. ಆದರೆ, ಒಂದು ಕಡೆ ಶ್ವಾನಪ್ರಿಯರು ಸರ್ಕಾರದ ಕ್ರಮಗಳನ್ನು ಖಂಡಿಸಿ ಬೀದಿಗಿಳಿದು ಹೋರಾಡುತ್ತಿದ್ದರೆ, ಮತ್ತೊಂದು ಕಡೆ ರೌಡಿಗಳಂತೆ ವರ್ತಿಸುವ ನಾಯಿಗಳನ್ನು ಹಿಡಿಯುವುದು ಮಹಾನಗರ ಪಾಲಿಕೆ ಸಿಬ್ಬಂದಿಗೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹಿಡಿಯಲು ಹೋದರೆ ಸಾಕು, ಕ್ಷಣಾರ್ಧದಲ್ಲಿ ಓಡಿ ತಪ್ಪಿಸಿಕೊಳ್ಳುವ ಬೀದಿನಾಯಿಗಳನ್ನು ಸೆರೆಹಿಡಿಯುವುದು ಸಾಹಸದ ಕೆಲಸವೇ ಸರಿ. ಆದರೆ, ಇವೆಲ್ಲದರ ನಡುವೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಯುವತಿಯೊಬ್ಬಳ ವಿಡಿಯೋ ಇಡೀ ಇಂಟರ್ನೆಟ್ ಲೋಕವನ್ನೇ ಸೈಲೆಂಟ್ ಮಾಡಿದೆ.

Viral Video

ಅಷ್ಟಕ್ಕೂ ಆ ವಿಡಿಯೋದಲ್ಲೇನಿದೆ?

ಸಾಮಾನ್ಯವಾಗಿ ಮಹಾನಗರ ಪಾಲಿಕೆಯ ನುರಿತ ಸಿಬ್ಬಂದಿಯೇ ನಾಯಿಗಳನ್ನು ಹಿಡಿಯಲು ಹರಸಾಹಸ ಪಡುತ್ತಾರೆ. ಆದರೆ ಈ ಯುವತಿ ಯಾವುದೇ ಆರ್ಭಟವಿಲ್ಲದೆ, ಅತ್ಯಂತ ಸಲೀಸಾಗಿ ಬೀದಿನಾಯಿಗಳನ್ನು ಸೆರೆಹಿಡಿದಿದ್ದಾಳೆ. ರಸ್ತೆಯ ಬದಿಯಲ್ಲಿ ನಿಂತಿದ್ದ ನಾಯಿಯ ಬಳಿ ಪ್ರೀತಿಯಿಂದ ನಡೆದುಕೊಂಡು ಹೋಗುವ ಯುವತಿ, ಅದಕ್ಕೆ ಬಿಸ್ಕೆಟ್ ಹಾಕುತ್ತಾ, ಮುದ್ದು ಮಾಡಲು ಶುರು ಮಾಡುತ್ತಾಳೆ. ನಾಯಿ ಕೂಡ 'ಅಬ್ಬಾ.. ಈ ಜಗತ್ತಿನಲ್ಲಿ ನನ್ನನ್ನೂ ಪ್ರೀತಿಸುವವರು ಇದ್ದಾರಲ್ಲಾ' ಎಂದು ಖುಷಿಯಿಂದ ಕಣ್ಣು ಮುಚ್ಚಿ ಯುವತಿಯ ಕೈಯಿಂದ ತಲೆ ಸವರಿಸಿಕೊಳ್ಳುತ್ತಾ ನಿಲ್ಲುತ್ತದೆ. ನಾಯಿ ಆಕೆಯ ಪ್ರೀತಿಯ ಮಾಯಾಜಾಲದಲ್ಲಿ ಸಂಪೂರ್ಣವಾಗಿ ಮೈಮರೆತ ತಕ್ಷಣ, ಯುವತಿ ತನ್ನ ಬೆನ್ನ ಹಿಂದೆ ಅಡಗಿಸಿಟ್ಟುಕೊಂಡಿದ್ದ ದೊಡ್ಡ ಬಲೆಯನ್ನು ಕಣ್ಣುಮುಚ್ಚಿ ತೆರೆಯುವಷ್ಟರಲ್ಲಿ ಅದರ ತಲೆಗೆ ಹಾಕಿ ಸೆರೆಹಿಡಿಯಲು ಸಹಾಯ ಮಾಡುತ್ತಾಳೆ. ನಾಯಿ ತಬ್ಬಿಬ್ಬಾಗಿ ತಪ್ಪಿಸಿಕೊಳ್ಳಲು ಯತ್ನಿಸುವಷ್ಟರಲ್ಲೇ ಅದನ್ನು ಯಶಸ್ವಿಯಾಗಿ ಲಾಕ್ ಮಾಡಲಾಗುತ್ತದೆ.

ಟ್ರೋಲ್‌ ಆದ ಯುವತಿ

ಯುವತಿಯ ಈ 'ಸ್ಮಾರ್ಟ್ ವರ್ಕ್' ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರಿಂದ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. "ಅಬ್ಬಾ.. ನಾಯಿಗಳನ್ನು ಹಿಡಿಯಲು ಇಲಾಖೆಯ ಸಿಬ್ಬಂದಿಗೆ ಇದಕ್ಕಿಂತ ಅದ್ಭುತವಾದ ಐಡಿಯಾ ಇನ್ನೊಂದಿಲ್ಲ. ಕಚ್ಚಿಸಿಕೊಳ್ಳುವ ಭಯವೂ ಇಲ್ಲ, ನಾಯಿಗೂ ಏಟಾಗಲ್ಲ. ಇದನ್ನೇ ಎಲ್ಲ ಕಡೆ ಅಳವಡಿಸಿಕೊಳ್ಳಿ" ಎಂದು ಕೆಲವರು ಯುವತಿಯ ಐಡಿಯಾಗೆ ಫಿದಾ ಆಗಿದ್ದಾರೆ.

ಆದರೆ, ಈ ವಿಡಿಯೋಗೆ ಮತ್ತೊಂದು ಕಡೆಯಿಂದ ಭಾರಿ ಟ್ರೋಲ್ ವ್ಯಕ್ತವಾಗುತ್ತಿದೆ. "ನಾಯಿಗಳ ನಿಯತ್ತಿಗೆ ಇಂತಹ ದ್ರೋಹ ಬಗೆಯಬಾರದಿತ್ತು. ಪ್ರೀತಿ ತೋರಿಸಿ ಹಿಂಬದಿಯಿಂದ ಬೆನ್ನು ಇರಿಯುವ ಮನುಷ್ಯರ ಜಾತಿಗೆ ಇದೊಂದು ಅತ್ಯುತ್ತಮ ಉದಾಹರಣೆ" ಎಂದು ಕೆಲವರು ಬೇಸರ ಹೊರಹಾಕಿದ್ದಾರೆ. ಇನ್ನು ಕೆಲವು ಖತರ್ನಾಕ್ ನೆಟ್ಟಿಗರು, "ಇನ್ಮುಂದೆ ಬೀದಿನಾಯಿಗಳೂ ಕೂಡ ರಸ್ತೆಯಲ್ಲಿ ಹೆಣ್ಣುಮಕ್ಕಳನ್ನು ನಂಬಲ್ಲ ಬಿಡಿ. ಪ್ರೀತಿಯಿಂದ ಹತ್ತಿರ ಕರೆದರೂ ಓಡಿ ಹೋಗ್ತಾವೆ" ಎಂದು ತಮಾಷೆಯಾಗಿ ಟ್ರೋಲ್ ಮಾಡುತ್ತಿದ್ದಾರೆ. ಇಡೀ ದೇಶದಲ್ಲಿ ಬೀದಿನಾಯಿಗಳ ಹಾವಳಿ ಹಾಗೂ ಶ್ವಾನಪ್ರಿಯರ ಹೋರಾಟದ ನಡುವೆ, ಯುವತಿಯ ಈ ವಿಶಿಷ್ಟ 'ಬಲೆ' ಕಾರ್ಯಾಚರಣೆ ಮಾತ್ರ ಇಂಟರ್ನೆಟ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಜೊಮ್ಯಾಟೊ ಡೆಲಿವರಿ ಬಾಯ್ ದೇಶದ ಟಾಪ್ ಬ್ಯುಸಿನೆಸ್ ಸ್ಕೂಲ್ ವಿದ್ಯಾರ್ಥಿ: ಇಲ್ಲಿದೆ ಗಿರೀಶ್ ಶರ್ಮಾ ಯಶೋಗಾಥೆ
ಜೊಮ್ಯಾಟೊ ಡೆಲಿವರಿ ಬಾಯ್ ದೇಶದ ಟಾಪ್ ಬ್ಯುಸಿನೆಸ್ ಸ್ಕೂಲ್ ವಿದ್ಯಾರ್ಥಿ: ಇಲ್ಲಿದೆ ಗಿರೀಶ್ ಶರ್ಮಾ ಯಶೋಗಾಥೆ

ಇದು ಮೋಸವಲ್ಲ, ಶ್ವಾನಗಳ ರಕ್ಷಣೆಯ ಕಾರ್ಯ

ಆದರೆ, ಈ ವಿಡಿಯೋ ಅಸಲಿಯತ್ತು ಬೇರೆಯೇ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ಯುವತಿಯೊಬ್ಬಳು ಬೀದಿನಾಯಿಯನ್ನು ಪ್ರೀತಿಯಿಂದ ಸವರುತ್ತಾ, ಬೆನ್ನಹಿಂದೆ ಬಲೆಬೀಸಿ ಹಿಡಿದ ವಿಡಿಯೋ ಭಾರಿ ಚರ್ಚೆಗೆ ಗ್ರಾಸವಾಗಿತ್ತು. "ನಾಯಿಯ ನಿಯತ್ತಿಗೆ ಮನುಷ್ಯ ಮಾಡಿದ ದ್ರೋಹ" ಎಂದು ಹಲವರು ಇದನ್ನು ಟ್ರೋಲ್ ಮಾಡಿದ್ದರೆ, ಇನ್ನೂ ಕೆಲವರು "ನಾಯಿ ಹಿಡಿಯಲು ಇದೇ ಸೂಕ್ತ ಉಪಾಯ" ಎಂದು ಕೊಂಡಾಡಿದ್ದರು. ಆದರೆ, ಈ ಇಡೀ ಕಾರ್ಯಾಚರಣೆಯ ಹಿಂದಿರುವ ನಿಜವಾದ ಕಾರಣ ಇದೀಗ ಬೆಳಕಿಗೆ ಬಂದಿದೆ.

ಅಸಲಿಗೆ, ಆ ಯುವತಿ ನಾಯಿಗೆ ಯಾವುದೇ ದ್ರೋಹ ಬಗೆದಿಲ್ಲ ಅಥವಾ ಅದನ್ನು ಹಿಂಸಿಸಲು ಆ ರೀತಿ ಮಾಡಿಲ್ಲ. ಬದಲಿಗೆ, ಬೀದಿನಾಯಿಗಳ ಸಂಖ್ಯೆಯನ್ನು ನಿಯಂತ್ರಿಸಲು ಮತ್ತು ಅವುಗಳ ಆರೋಗ್ಯ ರಕ್ಷಣೆಗಾಗಿ ನಡೆಸಲಾಗುವ 'ಸಂತಾನಹರಣ ಚಿಕಿತ್ಸೆ' ಕಾರ್ಯಾಚರಣೆಯ ಪ್ರಮುಖ ಭಾಗವಿದು. ಈ ಕುರಿತು ಮಾಹಿತಿ ಹಂಚಿಕೊಂಡಿರುವ ಸ್ವಯಂಸೇವಕರು, "ನಮ್ಮ ಮೊದಲ ಹಂತದ ಶ್ವಾನ ಸಂತಾನಹರಣ ಪ್ರಕ್ರಿಯೆಯು ಅತ್ಯಂತ ಯಶಸ್ವಿಯಾಗಿ ಪೂರ್ಣಗೊಂಡಿದೆ. ಇದಕ್ಕೆ ಧನಸಹಾಯ ನೀಡಿದ ಹಾಗೂ ಶ್ರಮಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಇಲ್ಲಿ ನಡೆಯುವ ಪ್ರತಿಯೊಂದು ಸರ್ಜರಿಯೂ ಸಹ, ಮುಂದಿನ ದಿನಗಳಲ್ಲಿ ಬೀದಿಗಳಲ್ಲಿ ನೂರಾರು ಮುಗ್ಧ ನಾಯಿಮರಿಗಳು ಅನಾಥವಾಗಿ ಹುಟ್ಟಿ, ಆಹಾರವಿಲ್ಲದೆ ನರಳುತ್ತ ರೋಗಗಳಿಗೆ ತುತ್ತಾಗುವುದನ್ನು ತಪ್ಪಿಸುತ್ತದೆ. ಇದು ನಮ್ಮ ಭಾಗದ ಬೀದಿನಾಯಿಗಳ ಉತ್ತಮ ಆರೋಗ್ಯ ಹಾಗೂ ಸಾರ್ವಜನಿಕರ ಸುರಕ್ಷತೆ ಎರಡಕ್ಕೂ ಅತಿ ಮುಖ್ಯ" ಎಂದು ತಿಳಿಸಿದ್ದಾರೆ.

ಒಂದು ಸರ್ಜರಿಗೆ ₹3,000 ವೆಚ್ಚ: ನೆರವಿಗೆ ಮನವಿ

ಬೀದಿನಾಯಿಗಳನ್ನು ಅಮಾನವೀಯವಾಗಿ ಕೊಲ್ಲುವ ಅಥವಾ ಎಲ್ಲೆಂದರಲ್ಲಿ ಸ್ಥಳಾಂತರಿಸುವ ಬದಲು, ಕಾನೂನಾತ್ಮಕವಾಗಿ ಅವುಗಳ ಸಂಖ್ಯೆಯನ್ನು ನಿಯಂತ್ರಿಸಲು ಈ ಸಂತಾನಹರಣ ಚಿಕಿತ್ಸೆ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ಪ್ರಸ್ತುತ ಒಂದು ಶ್ವಾನದ ಸಂತಾನಹರಣ ಚಿಕಿತ್ಸೆ ಹಾಗೂ ಅದರ ನಂತರದ ಆರೈಕೆಗೆ ಸುಮಾರು ₹3,000 ವೆಚ್ಚವಾಗುತ್ತದೆ. ಸದ್ಯ ಮೊದಲ ಹಂತ ಮುಗಿದಿದ್ದರೂ, ಇನ್ನೂ ಹತ್ತಾರು ನಾಯಿಗಳಿಗೆ ಈ ಚಿಕಿತ್ಸೆ ಕೊಡಿಸಬೇಕಾದ ಅನಿವಾರ್ಯತೆ ಇದೆ. ಬೀದಿ ಶ್ವಾನಗಳ ಅತಿಯಾದ ಜನಸಂಖ್ಯೆಯನ್ನು ತಡೆಗಟ್ಟಲು ಸಾರ್ವಜನಿಕರು ಹಾಗೂ ದಾನಿಗಳು ನಿರಂತರವಾಗಿ ಕೈಜೋಡಿಸಬೇಕಿದೆ ಎಂದು ಅವರು ವಿನಂತಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+