ಜೂನಿಯರ್ ರನ್ ಮಷೀನ್ ವೈಭವ್ ಕೈಬಿಟ್ಟು ದೊಡ್ಡ ತಪ್ಪು ಮಾಡ್ಬಿಟ್ರು: ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್‌ಗೆ ತರಾಟೆ
India vs Ireland T20I: ಬೆಲ್‌ಫಾಸ್ಟ್‌ನಲ್ಲಿ ನಡೆದ ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡದ ಪ್ಲೇಯಿಂಗ್ 11ನಿಂದ ಯುವ ಸ್ಫೋಟಕ ಬ್ಯಾಟರ್ ವೈಭವ್ ಸೂರ್ಯವಂಶಿ ಅವರನ್ನು ಹೊರಗಿಟ್ಟಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ. ಇದೀಗ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿ ಅಚ್ಚರಿ ಹೇಳಿಕೆ ನೀಡಿದ್ದಾರೆ. ಇದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ದೇಶಿ ಕ್ರಿಕೆಟ್ ಹಾಗೂ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಕ್ರಿಕೆಟ್ ದಿಗ್ಗಜರ ಗಮನ ಸೆಳೆದಿದ್ದ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಮೊದಲ ಬಾರಿಗೆ ಟೀಮ್ ಇಂಡಿಯಾ ಹಿರಿಯರ ತಂಡಕ್ಕೆ ಆಯ್ಕೆಯಾಗಿದ್ದರು. ಬೆಲ್‌ಫಾಸ್ಟ್‌ನಲ್ಲಿ ನಡೆದ ಪಂದ್ಯದ ಮೂಲಕ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲಿದ್ದಾರೆ ಎನ್ನುವ ನಿರೀಕ್ಷೆಯನ್ನು ಇಡೀ ಜಗತ್ತೇ ಇಟ್ಟುಕೊಂಡಿತ್ತು. ಆದರೆ ಭಾರತ ತಂಡವು ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಅವರ ಅನುಭವಿ ಆರಂಭಿಕ ಜೋಡಿಯನ್ನೇ ಮುಂದುವರಿಸಲು ನಿರ್ಧರಿಸಿತು. ಇದರಿಂದಾಗಿ ಸೂರ್ಯವಂಶಿ ತಮ್ಮ ಅವಕಾಶಕ್ಕಾಗಿ ಕಾಯಬೇಕಾಯಿತು.

ಮೈಕಲ್ ವಾನ್ ಅಚ್ಚರಿ ಹೇಳಿಕೆ
ಐರ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಭಾರತದ ಪ್ಲೇಯಿಂಗ್ 11 ಆಯ್ಕೆ ಬಗ್ಗೆ ಮೈಕಲ್ ವಾನ್ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ. 'ಭಾರತ ತಂಡ ವೈಭವ್ ಸೂರ್ಯವಂಶಿ ಅವರನ್ನು ಆಯ್ಕೆ ಮಾಡಿಲ್ಲ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಸದ್ಯದ ಮಟ್ಟಿಗೆ ಅವರೇ ವಿಶ್ವದ ಅತ್ಯುತ್ತಮ ಟಿ20 ಆಟಗಾರ,' ಎಂದು ವಾನ್ ಟ್ವೀಟ್ ಮಾಡುವ ಮೂಲಕ ಅಚ್ಚರಿ ವ್ಯಕ್ತಪಡಿಸಿದರು. ಈ ಮೂಲಕ ಟೀಮ್ ಇಂಡಿಯಾ ಆಯ್ಕೆ ಸಮಿತಿ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಅವರ ನಿಲುವಿಗೆ ವಿರೋಧ ವ್ಯಕ್ತಪಡಿಸಿದರು.
ಹರ್ಷಿತ್ ರಾಣಾ ಭರ್ಜರಿ ಬೌಲಿಂಗ್ ಪ್ರದರ್ಶನ
ಟಾಸ್ ಗೆದ್ದ ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಗಾಯದ ಸಮಸ್ಯೆಯಿಂದ ನಾಲ್ಕು ತಿಂಗಳ ಬಳಿಕ ತಂಡಕ್ಕೆ ಮರಳಿದ್ದ ವೇಗಿ ಹರ್ಷಿತ್ ರಾಣಾ ಭರ್ಜರಿ ಬೌಲಿಂಗ್ ಪ್ರದರ್ಶಿಸಿ, ಪವರ್‌ಪ್ಲೇ ಅವಧಿಯಲ್ಲೇ ಐರ್ಲೆಂಡ್‌ಗೆ ಆಘಾತ ನೀಡಿದರು. ಅವರು 24 ರನ್‌ಗಳಿಗೆ 3 ವಿಕೆಟ್ ಪಡೆದಿದ್ದರಿಂದ ಐರ್ಲೆಂಡ್ 36 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಐರ್ಲೆಂಡ್‌ಗೆ ಆಸರೆಯಾದ ಲೋರ್ಕನ್, ಡೆಲಾನಿ
ಆದರೆ ಆರಂಭಿಕ ಆಘಾತದಿಂದ ಚೇತರಿಸಿಕೊಂಡ ಐರ್ಲೆಂಡ್ ತಂಡಕ್ಕೆ ನಾಯಕ ಲೋರ್ಕನ್ ಟಕರ್ (36 ಎಸೆತಗಳಲ್ಲಿ 50 ರನ್) ಆಸರೆಯಾದರು. ನಂತರ ಬಂದ ಗರೆಥ್ ಡೆಲಾನಿ ಕೇವಲ 32 ಎಸೆತಗಳಲ್ಲಿ 49 ರನ್ ಚಚ್ಚಿದರೆ, ಜಾರ್ಜ್ ಡಾಕ್ರೆಲ್ ವೇಗದ 19 ರನ್ ಸೇರಿಸಿದರು. ಕೊನೆಯ ಓವರ್‌ಗಳಲ್ಲಿ ಭಾರತದ ವೇಗಿ ಪ್ರಸಿದ್ಧ್ ಕೃಷ್ಣ ಅವರ ಒಂದೇ ಓವರ್‌ನಲ್ಲಿ ಐರ್ಲೆಂಡ್ ಬ್ಯಾಟರ್‌ಗಳು 27 ರನ್ ಕದ್ದರು. ಇದು ಪಂದ್ಯದ ಪ್ರಮುಖ ತಿರುವು ಎನಿಸಿತು. ಅಂತಿಮವಾಗಿ ಐರ್ಲೆಂಡ್ ತಂಡವು 20 ಓವರ್‌ಗಳಲ್ಲಿ 182/9 ರನ್‌ಗಳ ಸವಾಲಿನ ಮೊತ್ತ ಪೇರಿಸಿತು.
ಬ್ಯಾಟಿಂಗ್‌ನಲ್ಲಿ ಎಡವಿದ ಭಾರತ
183 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ಭಾರತದ ಬ್ಯಾಟಿಂಗ್ ಲೈನ್‌ಅಪ್ ಆರಂಭದಲ್ಲೇ ಎಡವಿತು. ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಕೇವಲ 20 ಎಸೆತಗಳಲ್ಲಿ ಭರ್ಜರಿ ಅರ್ಧಶತಕ (50 ರನ್) ಸಿಡಿಸಿ ಭರವಸೆ ಮೂಡಿಸಿದರು. ಆದರೂ ಉಳಿದವರಿಂದ ಅವರಿಗೆ ಉತ್ತಮ ಬೆಂಬಲ ಸಿಗಲಿಲ್ಲ. ಐರ್ಲೆಂಡ್‌ನ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ಭಾರತದ ವಿಕೆಟ್‌ಗಳು ಸತತವಾಗಿ ಉರುಳಿದವು.
ಅದರಲ್ಲೂ ಪಾದಾರ್ಪಣೆ ಪಂದ್ಯವಾಡಿದ ಜೈ ಮುಂದ್ರಾ ಅವರು ಸಂಜು ಸ್ಯಾಮ್ಸನ್ ಅವರನ್ನು ಬೇಗನೇ ಔಟ್ ಮಾಡಿ ಪೆವಿಲಿಯನ್‌ಗೆ ಅಟ್ಟಿದರು. ಮತ್ತೊಬ್ಬ ಬೌಲರ್ ಮ್ಯಾಟ್ ಹೊಲಾರ್ಡ್ ಅವರು ಇಶಾನ್ ಕಿಶನ್ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಇಬ್ಬರನ್ನೂ ಪೆವಿಲಿಯನ್‌ಗೆ ಕಳುಹಿಸುವ ಮೂಲಕ ಭಾರತವನ್ನು ತೀವ್ರ ಒತ್ತಡಕ್ಕೆ ಸಿಲುಕಿಸಿದರು.
ತಿಲಕ್ ವರ್ಮಾ, ಶಿವಂ ದುಬೆ ಸೇರಿದಂತೆ ಕೆಳ ಕ್ರಮಾಂಕದ ಬ್ಯಾಟರ್‌ಗಳು ದೊಡ್ಡ ಮೊತ್ತ ಕಲೆಹಾಕಲು ವಿಫಲರಾದರು. ಅಂತಿಮವಾಗಿ ಭಾರತ ತಂಡ 18.5 ಓವರ್‌ಗಳಲ್ಲಿ 148 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಐರ್ಲೆಂಡ್ 34 ರನ್‌ಗಳ ಭರ್ಜರಿ ಜಯ ದಾಖಲಿಸಿತು. ಕ್ರಿಕೆಟ್‌ನ ಯಾವುದೇ ಮಾದರಿಯಲ್ಲಿ ಭಾರತದ ವಿರುದ್ಧ ಐರ್ಲೆಂಡ್‌ಗೆ ಸಿಕ್ಕ ಮೊದಲ ಗೆಲುವು ಇದಾಗಿದೆ.
ಇದೀಗ ಭಾರತ ತಂಡದ ಬ್ಯಾಟಿಂಗ್ ಲೈನ್ ಅಪ್ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅದರಲ್ಲೂ ಮೈಕಲ್ ವಾನ್ ಅವರು ವೈಭವ್ ಸೂರ್ಯವಂಶಿ ಅವರನ್ನು ಕೈಬಿಟ್ಟಿದ್ದರ ಬಗ್ಗೆ ಆಡಿದ್ದ ಮಾತುಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿವೆ. ಈ ಯುವ ಆಟಗಾರನಿಗೆ ಮುಂದಿನ ಪಂದ್ಯದಲ್ಲಾದರೂ ಅವಕಾಶ ಸಿಗಲಿದೆಯೇ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.












Click it and Unblock the Notifications