ಡಿಜಿಟಲ್ ವಂಚನೆಗೆ ಹಣ ಕಳೆದುಕೊಂಡ್ರಾ? ಬ್ಯಾಂಕ್‌ಗಳಿಂದಲೇ ಪರಿಹಾರ: ಆರ್‌ಬಿಐ ಹೊಸ ರೂಲ್ಸ್
ಆನ್‌ಲೈನ್ ವಂಚನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಎಷ್ಟೇ ಹುಷಾರಾಗಿದ್ದರೂ ಸೈಬರ್ ವಂಚಕರು ಹೊಸ ಹೊಸ ರೀತಿಯಲ್ಲಿ ಮೋಸ ಮಾಡುತ್ತಿರುತ್ತಾರೆ. ಒಮ್ಮೆ ಹಣ ಹೋದರೆ ತಿರುಗಾ ಬರುವ ಸಂಭವ ಕಡಿಮೆ. ಇದೀಗ, ಡಿಜಿಟಲ್ ಮೋಸಕ್ಕೆ ಸಿಲುಕಿ ಹಣ ಕಳೆದುಕೊಳ್ಳುವವರಿಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಹತ್ವದ ರಕ್ಷಣೆ ನೀಡಿದೆ. ಹೊಸ ನಿಯಮಗಳ ಪ್ರಕಾರ, ವಂಚನೆಗೆ ಒಳಗಾದ ಗ್ರಾಹಕರು ಇದೀಗ ಪರಿಹಾರ ಪಡೆಯಬಹುದು. ಏನು, ಎಷ್ಟು? ವಿವರ ಇಲ್ಲಿದೆ.
ಈ ಹೊಸ ನಿಯಮಗಳು 2027ರ ಜನವರಿ 1ರಿಂದ ಜಾರಿಗೆ ಬರಲಿದ್ದು, ಆರಂಭದಲ್ಲಿ ಒಂದು ವರ್ಷದವರೆಗೆ ಅನ್ವಯವಾಗಲಿವೆ. ಆದರೆ ವಂಚನೆಗೆ ತುತ್ತಾದ ಹಣವೆಲ್ಲವೂ ನಿಮಗೆ ಮರಳಿ ಸಿಗಲ್ಲ. ಇದರಲ್ಲಿ, ₹50,000ವರೆಗೆ ಡಿಜಿಟಲ್ ವಂಚನೆಗೆ ಒಳಗಾದ ಅರ್ಹ ಗ್ರಾಹಕರು ಗರಿಷ್ಠ ₹25,000ವರೆಗೆ ಪರಿಹಾರ ಪಡೆಯಬಹುದು. ಇದು ಗರಿಷ್ಟ.

ಬ್ಯಾಂಕ್‌ಗಳ ಮೇಲಿದೆ ಹೊಣೆ
ಇಲ್ಲಿಯವರೆಗೆ ಡಿಜಿಟಲ್ ವಂಚನೆ ನಡೆದಾಗ ಗ್ರಾಹಕರೇ ತಮ್ಮ ತಪ್ಪಿಲ್ಲ ಎಂಬುದನ್ನು ಸಾಬೀತುಪಡಿಸಬೇಕಾಗುತ್ತಿತ್ತು. ಆದರೆ ಹೊಸ ನಿಯಮದ ಪ್ರಕಾರ, "ವಂಚನೆಗೆ ಗ್ರಾಹಕರೇ ಹೊಣೆʼ ಎಂದು ಸಾಬೀತುಪಡಿಸುವ ಹೊಣೆ ಬ್ಯಾಂಕ್‌ಗಳ ಮೇಲಿದೆ. ಹೀಗಾಗಿ ಅನಧಿಕೃತ ಡಿಜಿಟಲ್ ವ್ಯವಹಾರ ನಡೆದರೆ, ಬ್ಯಾಂಕ್‌ಗಳು ಸೂಕ್ತ ತನಿಖೆ ನಡೆಸಿ ಗ್ರಾಹಕರಿಗೆ ಪರಿಹಾರ ನೀಡಬೇಕಾಗುತ್ತದೆ.
ವಂಚನೆಯ ಮೊತ್ತ ₹50,000 ಮೀರದಿದ್ದರೆ ಮಾತ್ರ ಈ ಯೋಜನೆ ಅನ್ವಯಿಸುತ್ತದೆ. ಪರಿಹಾರದ ಮೊತ್ತ ₹25,000, ಆದರೆ ಇದು ಫಿಕ್ಸೆಡ್ ಅಲ್ಲ. ಗ್ರಾಹಕರಿಗೆ ಉಂಟಾದ ನಿವ್ವಳ ನಷ್ಟದ (Net Loss) ಶೇ.85 ಅಥವಾ ₹25,000 - ಇವೆರಡರಲ್ಲಿ ಯಾವುದು ಕಡಿಮೆಯೋ ಅಷ್ಟು ಮಾತ್ರ ಸಿಗುತ್ತದೆ. ವಿಶೇಷ ಅಂದರೆ, ಈ ಸೌಲಭ್ಯವನ್ನು "ಜೀವನದಲ್ಲಿ ಒಮ್ಮೆ ಮಾತ್ರʼʼ ಪಡೆಯಲು ಅವಕಾಶವಿದೆ.
ಉದಾಹರಣೆ ನೋಡಿ. ಒಬ್ಬ ವ್ಯಕ್ತಿಗೆ ₹30,000 ವಂಚನೆಯಾದರೆ, ನಂತರ ಬ್ಯಾಂಕ್ ₹10,000 ಹಣವನ್ನು ಮರಳಿ ಪಡೆದರೆ, ಗ್ರಾಹಕರ ನಿವ್ವಳ ನಷ್ಟ ₹20,000 ಆಗುತ್ತದೆ. ಈ ಸಂದರ್ಭದಲ್ಲಿ ₹20,000ರ ಶೇ.85 ಅಂದರೆ ₹17,000 ಪರಿಹಾರ ಸಿಗುತ್ತದೆ.
ಇನ್ನೊಂದು ಉದಾಹರಣೆಯಲ್ಲಿ, ನಿವ್ವಳ ನಷ್ಟ ₹40,000 ಇದ್ದರೆ ಅದರ ಶೇ.85 ಅಂದರೆ ₹34,000 ಆಗುತ್ತದೆ. ಆದರೆ ಗರಿಷ್ಠ ಮಿತಿ ₹25,000 ಇರುವುದರಿಂದ ಗ್ರಾಹಕರಿಗೆ ₹25,000 ಮಾತ್ರ ಸಿಗುತ್ತದೆ.
₹50,000ಕ್ಕಿಂತ ಹೆಚ್ಚು ನಷ್ಟವಾದರೆ?
ಒಂದು ವೇಳೆ ಡಿಜಿಟಲ್ ವಂಚನೆಯ ಮೊತ್ತ ₹50,000 ಮೀರಿದ್ದರೆ ಈ ಹೊಸ ಪರಿಹಾರ ಯೋಜನೆ ಅನ್ವಯಿಸುವುದಿಲ್ಲ. ಅಂತಹ ಪ್ರಕರಣಗಳನ್ನು ಈಗಿರುವ ನಿಯಮಗಳ ಪ್ರಕಾರವೇ ಬ್ಯಾಂಕ್‌ಗಳು ನಿರ್ವಹಿಸುತ್ತವೆ. ಅಂದರೆ ತನಿಖೆ, ಮರಳಿ ಬಂದರೆ ಬಂತು, ಇಲ್ಲದಿದ್ದರೆ ಇಲ್ಲ.
ಪರಿಹಾರವನ್ನು ನೇರವಾಗಿ ಗ್ರಾಹಕರ ಬ್ಯಾಂಕೇ ಅವರ ಖಾತೆಗೆ ಜಮಾ ಮಾಡುತ್ತದೆ. ದೂರು ಸ್ವೀಕರಿಸಿದ ಬಳಿಕ ಬ್ಯಾಂಕ್ ತನಿಖೆ ನಡೆಸಿ, ಈಗಾಗಲೇ ವಾಪಸ್ ಬಂದಿರುವ ಹಣವನ್ನು ಕಡಿತಗೊಳಿಸಿ ಉಳಿದ ನಷ್ಟದ ಆಧಾರದ ಮೇಲೆ ಪರಿಹಾರವನ್ನು ಲೆಕ್ಕ ಹಾಕುತ್ತದೆ. ಈ ಪರಿಹಾರದ ವೆಚ್ಚವನ್ನು ಅಂತಿಮವಾಗಿ ಆರ್‌ಬಿಐ ಹಾಗೂ ಸಂಬಂಧಿತ ಬ್ಯಾಂಕ್‌ಗಳು ಹಂಚಿಕೊಳ್ಳಲಿವೆ.
ಯಾಕೆ ಈ ಕ್ರಮ?
ಭಾರತದಲ್ಲಿ ಯುಪಿಐ (UPI) ಸೇರಿದಂತೆ ಡಿಜಿಟಲ್ ಪಾವತಿಗಳ ಬಳಕೆ ವೇಗವಾಗಿ ಹೆಚ್ಚುತ್ತಿದೆ. ಅದರ ಜೊತೆಗೆ ಆನ್‌ಲೈನ್ ವಂಚನೆಗಳ ಸಂಖ್ಯೆಯೂ ಏರಿಕೆಯಾಗುತ್ತಿದೆ.
ಮೇ ತಿಂಗಳಲ್ಲೇ ಯುಪಿಐ ಮೂಲಕ 23.2 ಬಿಲಿಯನ್ ವ್ಯವಹಾರಗಳು ನಡೆದಿದ್ದು, ಅವುಗಳ ಒಟ್ಟು ಮೌಲ್ಯ ಸುಮಾರು ₹29.9 ಲಕ್ಷ ಕೋಟಿ ತಲುಪಿದೆ. ಇಂತಹ ಪರಿಸ್ಥಿತಿಯಲ್ಲಿ ವಂಚನೆಗೆ ಒಳಗಾಗುವ ಗ್ರಾಹಕರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಆರ್‌ಬಿಐ ಈ ಹೊಸ ವ್ಯವಸ್ಥೆಯನ್ನು ಪರಿಚಯಿಸಿದೆ.
ಇಲ್ಲಿ ಗಮನಿಸಬೇಕಾದ್ದು ಏನೆಂದರೆ, ಇದು ₹50,000ವರೆಗಿನ ಡಿಜಿಟಲ್ ವಂಚನೆಗೆ ಮಾತ್ರ ಅನ್ವಯ. ಹಾಗೂ ಒಬ್ಬ ಗ್ರಾಹಕನಿಗೆ ಜೀವನದಲ್ಲಿ ಒಮ್ಮೆ ಮಾತ್ರ ಈ ಸೌಲಭ್ಯ. ನಿವ್ವಳ ನಷ್ಟದ 85% ಅಥವಾ ಗರಿಷ್ಠ ₹25,000 ಪರಿಹಾರ ಮಾತ್ರ ಲಭ್ಯ. ಇದು 2027ರ ಜನವರಿ 1ರಿಂದ ಜಾರಿಯಾಗಲಿದೆ. ವಂಚನೆಯಲ್ಲಿ ಗ್ರಾಹಕರ ತಪ್ಪು ಇದೆ ಎಂದು ಸಾಬೀತುಪಡಿಸುವ ಹೊಣೆ ಬ್ಯಾಂಕ್‌ಗಳದ್ದಾಗಿರುತ್ತದೆ. ಅವು ಸಾಬೀತುಪಡಿಸಿದರೆ ಪರಿಹಾರ ದೊರೆಯುವುದಿಲ್ಲ.
(ಬರಹ: ಭವಾನಿ ಭಟ್)














Click it and Unblock the Notifications