Paytm ಗ್ರಾಹಕರಿಗೆ ಬಿಗ್ ಶಾಕ್: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲೈಸೆನ್ಸ್ ರದ್ದುಗೊಳಿಸಿದ ರಿಸರ್ವ್ ಬ್ಯಾಂಕ್

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (RBI) ಹಣಕಾಸು ವಲಯದಲ್ಲಿ ಅತಿ ಕಠಿಣ ಕ್ರಮವೊಂದನ್ನು ಕೈಗೊಂಡಿದ್ದು, 'ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್'ನ ಬ್ಯಾಂಕಿಂಗ್ ಪರವಾನಗಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ. ಏಪ್ರಿಲ್ 24, 2026 ರ ವ್ಯವಹಾರದ ಅವಧಿ ಮುಕ್ತಾಯದ ನಂತರ ಈ ಆದೇಶ ಜಾರಿಗೆ ಬಂದಿದ್ದು, ಇಂದಿನಿಂದಲೇ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ತನ್ನ ಯಾವುದೇ ಬ್ಯಾಂಕಿಂಗ್ ಚಟುವಟಿಕೆಗಳನ್ನು ನಡೆಸುವಂತಿಲ್ಲ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ. ನಿರಂತರವಾಗಿ ನಿಯಮಗಳ ಉಲ್ಲಂಘನೆಯ ಕಾರಣಕ್ಕಾಗಿ ಈ ನಿರ್ಧಾರ ಪ್ರಕಟಿಸಲಾಗಿದೆ.

ಯಾವ ಕಾಯ್ದೆಯಡಿ ಪರವಾನಗಿ ರದ್ದು?

ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949 ರ (BR Act) ಸೆಕ್ಷನ್ 22(4) ರ ಅಡಿಯಲ್ಲಿ ನೀಡಲಾದ ಅಧಿಕಾರವನ್ನು ಚಲಾಯಿಸಿ ರಿಸರ್ವ್ ಬ್ಯಾಂಕ್ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಈ ನಿರ್ಧಾರದಿಂದಾಗಿ, ಪೇಟಿಎಂ ಬ್ಯಾಂಕ್ ಇಂದಿನಿಂದಲೇ ಜಾರಿಗೆ ಬರುವಂತೆ ಹಣದ ಠೇವಣಿ ಪಡೆಯುವುದು ಅಥವಾ ಬ್ಯಾಂಕಿಂಗ್‌ಗೆ ಸಂಬಂಧಿಸಿದ ಯಾವುದೇ ಕೆಲಸಗಳನ್ನು ಮಾಡುವಂತಿಲ್ಲ.

Reserve Bank of India

ಅಷ್ಟೇ ಅಲ್ಲದೆ, ಈ ಮೊದಲು ನೀಡುತ್ತಿದ್ದ ಇತರ ಯಾವುದೇ ಹೆಚ್ಚುವರಿ ಸೇವೆಗಳನ್ನು ಒದಗಿಸುವುದನ್ನೂ ಸಹ ಪೂರ್ಣವಾಗಿ ನಿಷೇಧಿಸಲಾಗಿದೆ. ಅಂದರೆ, ಪೇಟಿಎಂ ಬ್ಯಾಂಕ್ ಇನ್ನು ಮುಂದೆ ಬ್ಯಾಂಕ್ ಆಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ.

ಹೈಕೋರ್ಟ್ ಮೆಟ್ಟಿಲೇರಲಿರುವ ಆರ್‌ಬಿಐ

ಬ್ಯಾಂಕಿಂಗ್ ಪರವಾನಗಿ ರದ್ದುಪಡಿಸಿದ ಬೆನ್ನಲ್ಲೇ ಆರ್‌ಬಿಐ ಮುಂದಿನ ಕಾನೂನು ಪ್ರಕ್ರಿಯೆಗಳಿಗೂ ಚಾಲನೆ ನೀಡಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ ಅನ್ನು ಅಧಿಕೃತವಾಗಿ ಮುಚ್ಚಲು ರಿಸರ್ವ್ ಬ್ಯಾಂಕ್ ಶೀಘ್ರದಲ್ಲೇ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಿದೆ.

ಗ್ರಾಹಕರಿಗೆ ಮತ್ತು ಮಾರುಕಟ್ಟೆಗೆ ರವಾನೆಯಾದ ಸಂದೇಶವೇನು?

ಕಳೆದ ಕೆಲವು ವರ್ಷಗಳಿಂದಲೇ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲೆ ಆರ್‌ಬಿಐ ಮೇಲೆ ಒಂದು ಕಣ್ಣಿಟ್ಟಿತ್ತು ಹಾಗೂ ಹಲವು ನಿರ್ಬಂಧಗಳನ್ನು ವಿಧಿಸುತ್ತಲೇ ಬಂದಿತ್ತು. ಕೆವೈಸಿ (KYC) ನಿಯಮಗಳ ಗಂಭೀರ ಉಲ್ಲಂಘನೆ ಹಾಗೂ ಪಾರದರ್ಶಕತೆಯ ಕೊರತೆಯಂತಹ ಹಲವು ದೂರುಗಳು ಕೇಳಿಬಂದಿದ್ದವು. ಈ ಬಗ್ಗೆ ಹಲವು ಬಾರಿ ಎಚ್ಚರಿಕೆ, ಗಡುವು ನೀಡಿದರೂ ಸರಿಯಾದ ಸ್ಪಂದನೆ ಸಿಗದ ಕಾರಣ, ಅಂತಿಮವಾಗಿ ರಿಸರ್ವ್‌ ಬ್ಯಾಂಕ್ ಈ ಅತ್ಯಂತ ಕಠಿಣ ನಿರ್ಧಾರ ಕೈಗೊಂಡಿದೆ.

ಹಣಕಾಸು ವಲಯದಲ್ಲಿ ಭದ್ರತೆ, ಪಾರದರ್ಶಕತೆ ಮತ್ತು ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶದಿಂದ ರಿಸರ್ವ್ ಬ್ಯಾಂಕ್ ಈ ಹೆಜ್ಜೆ ಇಟ್ಟಿದೆ. ದೇಶದ ಯಾವುದೇ ಹಣಕಾಸು ಸಂಸ್ಥೆಯು ಆರ್‌ಬಿಐ ನಿಯಮಗಳನ್ನು ಮೀರಿ ಕಾರ್ಯನಿರ್ವಹಿಸಿದರೆ ಇಂತಹ ಕಠಿಣ ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂಬುದಕ್ಕೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಪ್ರಕರಣ ಸ್ಪಷ್ಟ ಉದಾಹರಣೆಯಾಗಿದೆ. ಬ್ಯಾಂಕಿಂಗ್ ವಲಯದಲ್ಲಿನ ಇತರ ಸಂಸ್ಥೆಗಳು ಕಟ್ಟುನಿಟ್ಟಾಗಿ ನಿಯಮ ಪಾಲನೆ ಮಾಡುವಂತೆ ಎಚ್ಚರಿಕೆಯ ಸಂದೇಶವನ್ನೂ ಇದು ರವಾನಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+