ಪಿಂಚಣಿ ವ್ಯವಸ್ಥೆಯಲ್ಲಿ ಹೊಸ ಬದಲಾವಣೆ: ನಿವೃತ್ತಿ ವಯಸ್ಸು 70ಕ್ಕೆ ಚರ್ಚೆ, ಭಾರತದಲ್ಲಿ ಜಾರಿಯಾದರೆ ಭಾರೀ ಸಂಕಷ್ಟ
ಭಾರತದಲ್ಲಿ ಪಿಂಚಣಿ ವ್ಯವಸ್ಥೆಗೆ ಸಂಬಂಧಿಸಿದಂತೆ ಹಲವು ಗೊಂದಲಗಳು ಇವೆ. ಅಲ್ಲದೆ ಹಳೆಯ ಪಿಂಚಣಿ ಹಾಗೂ ಹೊಸ ಪಿಂಚಣಿ ವ್ಯವಸ್ಥೆ ವಿಚಾರವಾಗಿಯೂ ಗೊಂದಲ, ಹಳೆಯ ಪಿಂಚಣಿಯನ್ನೇ ಜಾರಿ ಮಾಡಬೇಕು ಎನ್ನುವ ಆಗ್ರಹಗಳು ಕೇಳಿ ಬಂದಿವೆ. ಈ ರೀತಿ ಇರುವಾಗಲೇ ಜರ್ಮನಿಯು ಹೊಸ ಪಿಂಚಣಿ ವ್ಯವಸ್ಥೆಯನ್ನು ಜಾರಿ ಮಾಡಿದೆ. ಕೋವಿಡ್ ನಂತರದ ವರ್ಷದ ಬೆಳವಣಿಗೆಗಳು ಹಾಗೂ ಇದೀಗ ಇತ್ತೀಚಿನ ವರ್ಷಗಳಲ್ಲಿ ಮಧ್ಯಪ್ರಾಚ್ಯದಲ್ಲಿ ಎದುರಾದ ಯುದ್ಧ ಸೇರಿದಂತೆ ಹಲವು ಕಾರಣಗಳಿಗೆ ಭಾರತವೂ ಸೇರಿದಂತೆ ವಿವಿಧ ರಾಷ್ಟ್ರಗಳು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿವೆ. ಆರ್ಥಿಕ ಒತ್ತಡವನ್ನು ತಪ್ಪಿಸುವ ಉದ್ದೇಶದಿಂದ ಹಲವು ಮಾರ್ಗಗಳನ್ನು ಅಭಿವೃದ್ಧಿ ಹೊಂದಿರುವ ಹಾಗೂ ಶ್ರೀಮಂತ ರಾಷ್ಟ್ರಗಳೇ ಅಳವಡಿಸಿಕೊಳ್ಳುತ್ತಿವೆ. ಮುಂದೆ ಈ ಮಾದರಿ ಭಾರತಕ್ಕೆ ಬಂದರೂ ಅಚ್ಚರಿ ಇಲ್ಲ. ಈ ಹೊಸ ಪಿಂಚಣಿ ವ್ಯವಸ್ಥೆ ಭಾರತದಲ್ಲಿ ಒಂದೊಮ್ಮೆ ಜಾರಿಯಾದರೆ, ಭಾರತದಲ್ಲಿ ನಿರುದ್ಯೋಗ ಸಮಸ್ಯೆ ವಿಪರೀತವಾಗಲಿದೆ. ಇಷ್ಟಕ್ಕೂ ಜರ್ಮನಿಯಲ್ಲಿ ಜಾರಿಯಾಗಿರುವ ಹೊಸ ನೀತಿ ಏನು ಎನ್ನುವ ವಿವರ ಇಲ್ಲಿದೆ.
ಜರ್ಮನಿ ತನ್ನ ಪಿಂಚಣಿ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ಮುಂದಾಗಿದೆ. ಜರ್ಮನಿಯಲ್ಲಿ ನಿವೃತ್ತಿ ವಯಸ್ಸನ್ನು 2090ರ ವೇಳೆಗೆ ಹಂತ ಹಂತವಾಗಿ 70 ವರ್ಷಗಳಿಗೆ ಏರಿಸುವ ಮಹತ್ವದ ಪ್ರಸ್ತಾಪವನ್ನು ಮುಂದಿರಿಸಿದೆ. ವಯಸ್ಸಾದವರ ಜನಸಂಖ್ಯೆ ಮತ್ತು ಹೆಚ್ಚುತ್ತಿರುವ ಪಿಂಚಣಿ ಹೊರೆ ಕಾರಣಕ್ಕೆ ಜರ್ಮನಿಯು ಈ ರೀತಿಯ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಆದರೆ, ಇದೇ ಮಾದರಿಯನ್ನು ಭಾರತದಲ್ಲಿ ಜಾರಿಗೊಳಿಸಿದರೆ ಪರಿಸ್ಥಿತಿ ಭಿನ್ನವಾಗಿರಲಿದೆ. ಈಗಾಗಲೇ ಉದ್ಯೋಗಕ್ಕಾಗಿ ಲಕ್ಷಾಂತರ ಯುವಕರು ಸ್ಪರ್ಧಿಸುತ್ತಿದ್ದಾರೆ. ಹಿರಿಯರು ಇನ್ನಷ್ಟು ವರ್ಷ ಸೇವೆಯಲ್ಲಿ ಮುಂದುವರಿದರೆ ಹೊಸ ಉದ್ಯೋಗಾವಕಾಶಗಳು ಕಡಿಮೆಯಾಗುವ ಸಾಧ್ಯತೆ ಇದೆ. ಹೀಗಾಗಿ ಜರ್ಮನಿಯ ಈ ಕ್ರಮ ಭಾರತದಲ್ಲಿಯೂ ಚರ್ಚೆಗೆ ಕಾರಣವಾಗಿದೆ. ನಿವೃತ್ತಿ ವಯಸ್ಸು ಹೆಚ್ಚಿದರೆ ಉದ್ಯೋಗ ಕೊರತೆ ಮತ್ತಷ್ಟು ತೀವ್ರವಾಗುತ್ತದೆಯೇ ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ. ಪಿಂಚಣಿಯ ಕಾರಣಕ್ಕೆ ಈಗಾಗಲೇ ಭಾರತೀಯ ಸೇನೆಯಲ್ಲಿ ಹಲವು ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ.

ಜರ್ಮನಿ ಸರ್ಕಾರವು ನೇಮಿಸಿರುವ ತಜ್ಞರ ಆಯೋಗವು ನಿವೃತ್ತರ ವಯಸ್ಸನ್ನು ಹೆಚ್ಚಿಸುವುದಕ್ಕೆ ಮತ್ತು ಅಕಾಲಿಕ ನಿವೃತ್ತಿ ಆಯ್ಕೆಗಳನ್ನು ಹಂತಹಂತವಾಗಿ ರದ್ದುಗೊಳಿಸಲು ಶಿಫಾರಸು ಮಾಡಿದೆ. ಜರ್ಮನ್ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ ಈ ಶಿಫಾರಸುಗಳನ್ನು ಬೆಂಬಲಿಸಿದೆ. ಇದು ಭವಿಷ್ಯದ ಪೀಳಿಗೆಗೆ ಪಿಂಚಣಿ ಯೋಜನೆಗೆ ಸಹಕಾರಿಯಾಗಲಿದೆ ಎಂದು ಹೇಳಲಾಗಿದೆ. ಆದರೆ ಒಂದೊಮ್ಮೆ ಇದು ಭಾರತದಲ್ಲಿ ಜಾರಿಯಾದರೆ ಭಾರತದಲ್ಲಿ ಭಾರೀ ಸಂಕಷ್ಟವೇ ಎದುರಾಗಲಿದೆ. ಭಾರತದಲ್ಲಿ ಈಗಾಗಲೇ ಸರ್ಕಾರಿ ಉದ್ಯೋಗಗಳಿಂದ ನಿವೃತ್ತರಾಗುವವರ ವಯಸ್ಸನ್ನು ಹೆಚ್ಚಿಸಲಾಗಿದೆ. ಇದು ಹೊಸದಾಗಿ ಉದ್ಯೋಗ ಹುಡುಕುತ್ತಿರುವವರಿಗೆ ಭಾರೀ ಸಂಕಷ್ಟವನ್ನು ತಂದೊಡ್ಡಿದೆ. ಹೀಗಾಗಿ ಹೊಸದಾಗಿ ನಿವೃತ್ತ ಅವಧಿಯನ್ನು ಹೆಚ್ಚಿಸಿದರೆ ಭಾರತೀಯ ಯುವಕರಿಗೆ ಇನ್ನಷ್ಟ ಸಂಕಷ್ಟ ನಿಶ್ಚಿತ ಎಂದೇ ಹೇಳಲಾಗಿದೆ.












Click it and Unblock the Notifications