ಡಿಕೆಶಿ ಕ್ಲಾಸ್‌ಮೇಟ್‌ ಕ್ರೇಜಿಸ್ಟಾರ್ ರವಿಚಂದ್ರನ್ MLC ಆಗ್ತಾರಾ? ಹಂಸಲೇಖ ಹೇಳಿದ್ದಿಷ್ಟು

ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಶೈಲಿಯಿಂದ ಹೊಸ ಅಲೆ ಸೃಷ್ಟಿಸಿದ ಜೋಡಿ ಅಂದ್ರೆ ಅದು ನಟ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಸಂಗೀತ ನಿರ್ದೇಶಕ ನಾದ ಬ್ರಹ್ಮ ಹಂಸಲೇಖ ಅವರದ್ದು. ಪ್ರೇಮಲೋಕದ ಚಿತ್ರದ ಮೂಲಕ ಹೊಸ ಅಲೆಯನ್ನೇ ಸೃಷ್ಟಿಸಿದ ಈ ಜೋಡಿ ಪ್ರೀತಿ ಮಾಡಬಾರದು, ಮಾಡಿದರೆ ಜಗಕ್ಕೆ ಹೆದರಬಾರದು ಎಂದು ಪ್ರೇಮದ ಅಮಲಲ್ಲಿ ಇರೋ ಮನಸುಗಳಿಗೆ ಧೈರ್ಯ ತುಂಬಿದವರು. ಸೋಲೇ ಇಲ್ಲ...ಅನ್ನೋ ಮೂಲಕ ನೊಂದ ಹೃದಯಗಳಿಗೆ ಸಾಂತ್ವನ ಹೇಳಿದವರು. ಪ್ರೀತ್ಸೋದ್‌ ತಪ್ಪಾ ಎಂದು ಕೇಳಿ, ಪ್ರೀತಿಯನ್ನು ಲೋಕಕ್ಕೇ ಪಸರಿಸಿದ ಈ ಜೋಡಿ ಕನ್ನಡಿಗರ ಹೃದಯದಲ್ಲಿ ಪ್ರೀತಿಯ ಬೀಜ ಬಿತ್ತಿ, ಅದರ ಮಹತ್ವ ಸಾರಿದವರು.

ಪ್ರೇಮಲೋಕದಿಂದ ಆರಂಭವಾದ ಕ್ರೇಜಿ-ಹಂಸಲೇಖ ಅವರ ಜೋಡಿ ಅಣ್ಣಯ್ಯ, ರಾಮಾಚಾರಿ, ರಣಧೀರ, ಯುಗಪುರುಷ, ಪ್ರೀತ್ಸೋದ್‌ ತಪ್ಪಾ, ಮನೆದೇವರು, ಶ್ರೀರಾಮಚಂದ್ರ, ಶಾಂತಿ ಕ್ರಾಂತಿ.... ಹೀಗೆ ಕನ್ನಡ ಚಿತ್ರ ಜಗತ್ತನ್ನು ಕಥೆ ಹಾಗೂ ಸಂಗೀತದ ಮೂಲಕ ಶ್ರೀಮಂತಗೊಳಿಸಿ, ಹೀಗೂ ಚಿತ್ರ ನಿರ್ಮಿಸಬಹುದಾ ಎಂಬುದನ್ನು ತೋರಿಸಿ, ಮೋಡಿ ಮಾಡಿದವರು. ಕ್ರೇಜಿಸ್ಟಾರ್ ಜೊತೆ ನಟಿಸುವ ಮೂಲಕ ಜೂಹಿ ಚಾವ್ಲಾ, ಶಿಲ್ಪಾ ಶೆಟ್ಟಿ, ಖುಷ್ಬೂ, ಮಾಲಾಶ್ರೀ, ಸೌಂದರ್ಯ, ಸುಧಾರಾಣಿ ಸೇರಿ ಎಲ್ಲ ನಟಿಯರೂ ತಮ್ಮ ಡಿಮ್ಯಾಂಡ್ ಹೆಚ್ಚಿಸಿಕೊಂಡರು.

Ravichandran

ಈ ಜೋಡಿ ಜೊತೆಯಾಗಿ ಮಾಡಿದ ಸಿನಿಮಾ ಅಂದ್ರೆ, ಫ್ಲಾಪ್ ಆಗೋ ಚಾನ್ಸೇ ಇಲ್ಲ ಎನ್ನುತ್ತಿತ್ತು ಗಾಂಧಿನಗರ. ಅದೇನೋ ಆಯಿತು, ಈ ಜೋಡಿ ಮೇಲೆ ಅದ್ಯಾರ ಕೆಟ್ಟ ಕಣ್ಣು ಬಿತ್ತೋ ಗೊತ್ತಿಲ್ಲ. ಈ ಜೋಡಿ ಇನ್ನು ಜೊತೆಯಾಗಿ ಸಿನಿಮಾವೇ ಮಾಡೋಲ್ಲ ಅಂದು ಬಿಡ್ತು. ಅಲ್ಲಿವರೆಗೂ ಸಿನಿ ರಸಿಕರನ್ನು ಮೋಡಿ ಮಾಡಿದ ಜೋಡಿ ಬೇರೆ ದಾರಿ ಹುಡುಕಿಕೊಂಡಿತು. ಆದ್ರೆ ಇಬ್ಬರೂ ಒಟ್ಟಿಗೆ ಇದ್ದಾಗ ಕೈಹಿಡಿದ ಯಶಸ್ಸು ಇಬ್ಬರಿಗೂ ಮತ್ತೆ ಸಿಗಲಿಲ್ಲ. ಸಾರ್ವಕಾಲಿಕ ಹಿಟ್ ಹಾಡುಗಳನ್ನು ನೀಡಿದ ಹಂಸಲೇಖ ಮತ್ತೆ ಅಂಥದ್ದೊಂದು ಅದ್ಭುತ ಸೃಷ್ಟಿಸಲಿಲ್ಲ. ರವಿಚಂದ್ರನ್ ಕೋಟಿಗಟ್ಟಲೆ ಹಾಕಿ ಮಾಡಿದ ಸಿನಿಮಾಗಳು ತೋಪು ಹಿಡಿದವು. ಅವತ್ತಿಂದ ಇಲ್ಲಿವರೆಗೂ ಈ ಜೋಡಿಯನ್ನು ಒಂದು ಮಾಡಬೇಕು ಎಂದು ಲೆಜೆಂಡರಿ ಸಿಂಗರ್ ಎಸ್‌ಪಿ ಬಾಲಸುಬ್ರಹ್ಮಣ್ಯಂ ಸೇರಿ ಕನ್ನಡ ಹಾಗೂ ದಕ್ಷಿಣ ಭಾರತೀಯ ಸಿನಿ ಜಗತ್ತಿನ ದಿಗ್ಗಜರು ಯತ್ನಿಸಿದ್ದರು. ಆದ್ರೆ ಫಲ ಕೊಟ್ಟಿರಲಿಲ್ಲ. ಸೋತರೂ ಇಬ್ಬರೂ ಪಾಠವೂ ಕಲಿಯಲಿಲ್ಲ. ಸುಮಾರು ಇಪ್ಪತ್ತೈದು ವರ್ಷಗಳ ಕಾಲ ಇವರಿಬ್ಬರನ್ನು ಒಂದು ಮಾಡುವ ಯತ್ನ ಫಲ ಕೊಡಲೇ ಇಲ್ಲ.

ಮತ್ತೆ ಒಂದಾದ್ರು ಕ್ರೇಜಿ ಪ್ರೇಮಲೋಕ-ಹಂಸಲೇಖ

ಎಲ್ಲದಕ್ಕೂ ಒಂದು ಟೈಮ್ ಬರಬೇಕು ಅಂತಾರಲ್ಲ ಹಾಗೆ, ಬೇರೆಯಾದ ಈ ಜೋಡಿ ಕಾಲು ಶತಕದ ನಂತರ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಒಂದಾಯಿತು. ಇದಕ್ಕೆ ಕಾರಣವಾಗಿದ್ದು ಕ್ರೇಜಿಸ್ಟಾರ್‌ ರವಿಚಂದ್ರನ್ ಅವರ 65ನೇ ಹುಟ್ಟುಹಬ್ಬ. ಈ ಜೋಡಿ ಜೊತೆ ಕೆಲಸ ಮಾಡಿ ಬದುಕು ಕಟ್ಟಿಕೊಂಡ ಹಲವು ಕಲಾವಿದರ ಸಮ್ಮುಖದಲ್ಲಿ ಕೆಂಗೇರಿಯ ಜಿಕೆ ಅರೇನಾದಲ್ಲೂ ಕ್ರೇಜಿ ಬ್ರಹ್ಮ ಎನ್ನುವ ಸಂಗೀತ ಸಂಜೆಯನ್ನು ಅಭಿಮಾನಿಗಳು ಹಮ್ಮಿಕೊಂಡಿದ್ದರು. ಇವರಿಬ್ಬರ ಸೂಪರ್‌ಹಿಟ್‌ ಹಾಡುಗಳನ್ನು ಖ್ಯಾತ ಗಾಯಕರಾದ ರಾಜೇಶ್ ಕೃಷ್ಣನ್, ಅನುರಾಧ ಭಟ್, ಮಧು ಬಾಲಕೃಷ್ಣ, ಮನು, ಐಶ್ವರ್ಯ ರಂಗರಾಜನ್ ಹಾಡಿ, ಅಲ್ಲಿ ನೆರೆದ ಜನಸ್ತೋಮವನ್ನು ರಂಜಿಸಿದರು. ಮತ್ತೊಮ್ಮೆ ಕನ್ನಡ ಚಿತ್ರರಂಗದ ಎವರ್‌ಗ್ರೀನ್‌ ಹಾಡುಗಳನ್ನು ಕೇಳಿದ ಅಭಿಮಾನಿಗಳು ಸಂಗೀತದ ಸಾಗರದಲ್ಲಿ ತೇಲಿದರು.

ಇದೇ ಸಂದರ್ಭದಲ್ಲಿ ಪ್ರತಿಯೊಂದೂ ಅದ್ಭುತ ಹಾಡು ಹುಟ್ಟಿದ ಸಂದರ್ಭವನ್ನು ನೆನಪಿಸಿಕೊಂಡಿದ್ದು ಅಲ್ಲದೇ, ಚಿತ್ರ ನಿರ್ಮಿಸುವಾಗ ನಡೆದ ಹಲವು ಘಟನೆಗಳನ್ನು ಮೆಲುಕು ಹಾಕಿದರು. ರವಿಚಂದ್ರನ್ ಮಾತನಾಡಿ, ಹಂಸಲೇಖ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಸಂಗೀತ, ಪ್ರೀತಿಯೇ ಕೇಂದ್ರಬಿಂದುವಾದ ಚಿತ್ರ ಮಾಡಲಿದ್ದು, ಅದು ಚಿತ್ರರಂಗದ ಎಲ್ಲ ದಾಖಲೆಗಳನ್ನು ಉಡೀಸ್ ಮಾಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಹೊರಗೆ ಮಳೆ ಸುರಿಯುತ್ತಿತ್ತು. ಹವಾಮಾನ ತಂಪಾಗಿತ್ತು, ಆದ್ರೂ ತಮ್ಮದೇ ವಿಭಿನ್ನ ಶೈಲಿಯಲ್ಲಿ ಕ್ರೇಜಿಸ್ಟಾರ್ ಕೂಲಿಂಗ್ ಗ್ಲಾಸ್‌ ಹಾಕ್ಕೊಂಡು, ನೆರೆದ ನಟಿಯರ ಜೊತೆ ಖ್ಯಾತ ಹಾಡುಗಳಿಗೆ ಹೆಜ್ಜೆ ಹಾಕಿದರು.

Ravichandran

ಇದೇ ಸಂದರ್ಭದಲ್ಲಿ ರವಿಚಂದ್ರನ್ ಅವರನ್ನು ಯಜಮಾನರು ಎಂದೇ ಸಂಬೋಧಿಸುತ್ತಿದ್ದ ಹಂಸಲೇಖ, ತಮ್ಮ ಜೀವನ ಅವರಿಂದ ಹೀಗೆ ಬೆಳಕು ಕಂಡಿತು ಎಂಬುದನ್ನು ಮನದುಂಬಿ ಹಂಚಿಕೊಂಡರು. ಅಲ್ಲದೇ ಚಿನ್ನದ ಪದಕ ನೀಡಿ, ಕ್ರೇಜಿ ಹುಟ್ಟುಹಬ್ಬಕ್ಕೆ ಹರಸಿದರು. ಇದೇ ವೇಳೆ ರವಿಚಂದ್ರನ್ ಕ್ಲಾಸ್‌ಮೇಟ್‌ ಡಿ.ಕೆ.ಶಿವಕುಮಾರ್ ಅವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದು, ಯಜಮಾನರು ಎಂಎಲ್‌ಸಿ ಆಗುವ ಸಾಧ್ಯತೆ ಇದೆ ಎಂದರು. ಅಷ್ಟಕ್ಕೂ ಎಂಎಲ್‌ಸಿ ಅಂದ್ರೆ ಮ್ಯೂಸಿಕ್‌ ಲವಿಂಗ್‌ ಸಿನಿಮಾ ಎಂದು ವ್ಯಾಖ್ಯಾನಿಸಿ, ಮತ್ತೊಂದಿಷ್ಟು ಅತ್ಯುತ್ತಮ ಚಿತ್ರಗಳನ್ನು ಕೊಡಲಿ ಎಂದು ಹಾರೈಸಿದರು.

ಸಿನಿಮಾಗಾಗಿ ಹೆಂಡತಿ ಮಕ್ಕಳನ್ನ ಕಡೆಗಣಿಸಿದೆ

ಇದಕ್ಕೆ ಪ್ರತಿಕ್ರಿಯೆ ನೀಡಿದ ರವಿಚಂದ್ರನ್, ನನ್ನ ಕೊನೆಯ ಉಸಿರು ಇರುವವರೆಗೂ ಚಿತ್ರರಂಗಕ್ಕಾಗಿಯೇ ದುಡಿಯಲಿದ್ದು, ಇದುವರೆಗೆ ಜೀವನ ಸವೆಸಿದ್ದು ಅದೇ ಚಿತ್ರಕ್ಕಾಗಿ. ಸೋಲು, ಗೆಲುವು ಎಲ್ಲವನ್ನೂ ಕಂಡಿದ್ದೇನೆ. ಹೆಂಡತಿ, ಮಕ್ಕಳನ್ನು 15 ವರ್ಷಗಳ ಕಾಲ ಕಡೆಗಣಿಸಿದ್ದು ಇದೇ ಸಿನಿಮಾಕ್ಕಾಗಿ. ಆಗ ಪತ್ನಿ ಸುಮತಿಯೇ ನನ್ನ ಕುಟುಂಬವನ್ನು ನೋಡಿಕೊಂಡಿದ್ದು, ಪೋಷಕರ ಕಾಳಜಿ ವಹಿಸಿದ್ದು. ಅವಳು ಇಲ್ಲ ಅಂದ್ರೆ ನನ್ನ ಬದುಕು ಹೀಗೆ ಇರ್ತಾ ಇರಲಿಲ್ಲ. ಮನೆದೇವರು ಚಿತ್ರದ ಜಾನೂ ಪಾತ್ರಕ್ಕೆ ಸ್ಪೂರ್ತಿಯೇ ನನ್ನ ಪತ್ನಿ ಸುಮತಿ ಅಂದರು. ಒಟ್ಟಿನಲ್ಲಿ ಈ ಕಾರ್ಯಕ್ರಮ ಕನ್ನಡ ಚಿತ್ರರಂಗದ ಆ ದಿನಗಳನ್ನು ಮೆಲಕು ಹಾಕುವಂತೆ ಮಾಡಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+