ರಾವಣನ ಗೆಟಪ್‌ನಲ್ಲಿ ಯಶ್ ಬರೋಕೆ ರೆಡಿ, ಕೊನೆಗೂ ಘೋಷಣೆ ಆಯ್ತು ರಾಮಾಯಣ ಟ್ರೈಲರ್ ರಿಲೀಸ್ ಡೇಟ್
ನಟ ರಾಕಿಂಗ್ ಸ್ಟಾರ್ ಯಶ್ ರಾವಣನ ಪಾತ್ರದಲ್ಲಿ ನಟಿಸುತ್ತಿರುವ, ನಿರ್ದೇಶಕ ನಿತೇಶ್ ತಿವಾರಿ ಅವರ 'ರಾಮಾಯಣ' (Ramayana) ಚಿತ್ರದ ಬಿಡುಗಡೆಗೆ ಅಧಿಕೃತ ದಿನಾಂಕ ನಿಗದಿಯಾಗಿದೆ. ಈ ವರ್ಷದ ದೀಪಾವಳಿ ಹಬ್ಬದ ಭರ್ಜರಿ ಉಡುಗೊರೆಯಾಗಿ ತೆರೆಗೆ ಬರಲಿರುವ ಈ ಮಹಾಕಾವ್ಯದ ಟ್ರೈಲರ್ ಅನ್ನು ಜುಲೈ 24ರಂದು ಜಗತ್ತಿನಾದ್ಯಂತ ಏಕಕಾಲಕ್ಕೆ ಅನಾವರಣಗೊಳಿಸಲು ಚಿತ್ರತಂಡ ಸಜ್ಜಾಗಿದೆ.
ಸಾವಿರಾರು ವರ್ಷಗಳಿಂದ ರಾಮಾಯಣವು ತನ್ನ ಧರ್ಮ, ಮರ್ಯಾದೆ, ಧೈರ್ಯ ಮತ್ತು ಕರುಣೆಯ ಆದರ್ಶಗಳ ಮೂಲಕ ತಲೆಮಾರುಗಳಿಗೆ ಪ್ರೇರಣೆಯಾಗಿದೆ. ಈಗ ಭಾರತದ ಅತ್ಯಂತ ಶ್ರೇಷ್ಠ ನಾಗರಿಕತೆಯ ಮಹಾಕಾವ್ಯವನ್ನು ಹಿಂದೆಂದೂ ಭಾರತೀಯ ಚಿತ್ರರಂಗದಲ್ಲಿ ಪ್ರಯತ್ನಿಸದ ಅತ್ಯುನ್ನತ ಮಟ್ಟದಲ್ಲಿ ಜಗತ್ತಿನ ಮುಂದೆ ಪ್ರಸ್ತುತಪಡಿಸಲು ಒಂದು ಹೊಸ ಪಯಣ ಆರಂಭವಾಗುತ್ತಿದೆ ಎಂದು ಚಿತ್ರದ ನಿರ್ಮಾಪಕರು ಹೇಳಿದ್ದಾರೆ.

ಅಮೆರಿಕದ ಕಾಮಿಕ್-ಕಾನ್‌ನಲ್ಲಿ ಫಸ್ಟ್ ಲುಕ್
ಟ್ರೈಲರ್ ಬಿಡುಗಡೆಗೂ ಒಂದು ದಿನ ಮುಂಚಿತವಾಗಿ ಜುಲೈ 23ರಂದು ಅಮೆರಿಕದ ಪ್ರಸಿದ್ಧ 'ಸ್ಯಾನ್ ಡಿಯಾಗೋ ಕಾಮಿಕ್-ಕಾನ್' (SDCC) ವೇದಿಕೆಯಲ್ಲಿ ಚಿತ್ರದ ಫಸ್ಟ್ ಲುಕ್ ಸ್ಕ್ರೀನಿಂಗ್ ನಡೆಯಲಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿತ್ರದ ಪ್ರಚಾರಕ್ಕಾಗಿ ಇಡೀ ತಂಡ ಅಮೆರಿಕಕ್ಕೆ ಹಾರುತ್ತಿದೆ. ಅಲ್ಲಿ ಸುಮಾರು 4,800 ಆಸನಗಳ ಸಾಮರ್ಥ್ಯದ ಹಾಲ್‌ನಲ್ಲಿ ನಡೆಯಲಿರುವ ವಿಶೇಷ ಸಂವಾದದಲ್ಲಿ ಚಿತ್ರದ ನಾಯಕ ನಟ ರಣಬೀರ್ ಕಪೂರ್, ಸಹ-ನಿರ್ಮಾಪಕ ಹಾಗೂ ರಾವಣನ ಪಾತ್ರಧಾರಿ ರಾಕಿಂಗ್ ಸ್ಟಾರ್ ಯಶ್, ನಿರ್ದೇಶಕ ನಿತೇಶ್ ತಿವಾರಿ ಮತ್ತು ಪ್ರೈಮ್ ಫೋಕಸ್ ಸಂಸ್ಥೆಯ ನಮಿತ್ ಮಲ್ಹೋತ್ರಾ ಪಾಲ್ಗೊಳ್ಳಲಿದ್ದಾರೆ. ಭಾರತೀಯ ಕಾಲಮಾನದ ಪ್ರಕಾರ ಜುಲೈ 24ರ ಮುಂಜಾನೆ 3:15ಕ್ಕೆ ಈ ಗ್ಲೋಬಲ್ ಪ್ಯಾನೆಲ್ ಕಾರ್ಯಕ್ರಮ ಜರುಗಲಿದೆ.
From Bharat to the world, the Ramayana trailer premieres worldwide on 24th July, 2026. 🏹 pic.twitter.com/rphSFR99OE
— The World Of Ramayana (@WorldOfRamayana) July 11, 2026
ಟಾಪ್ ಸ್ಟಾರ್‌ಗಳ ಸಂಗಮ
ಈ ಚಿತ್ರದಲ್ಲಿ ದೇಶದ ವಿಭಿನ್ನ ಚಿತ್ರರಂಗದ ಪ್ರಮುಖ ತಾರೆಗಳು ಒಂದಾಗಿದ್ದಾರೆ. ಶ್ರೀರಾಮನಾಗಿ ರಣಬೀರ್ ಕಪೂರ್, ಸೀತಾ ಮಾತೆಯಾಗಿ ಸಾಯಿ ಪಲ್ಲವಿ, ರಾವಣನಾಗಿ ರಾಕಿಂಗ್ ಸ್ಟಾರ್ ಯಶ್, ಹನುಮಂತನಾಗಿ ಸನ್ನಿ ಡಿಯೋಲ್, ಲಕ್ಷ್ಮಣನ ಪಾತ್ರದಲ್ಲಿ ರವಿ ದುಬೆ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಪ್ರೈಮ್ ಫೋಕಸ್ ಸ್ಟುಡಿಯೋಸ್ ಜೊತೆಗೆ ಆಸ್ಕರ್ ಪ್ರಶಸ್ತಿ ವಿಜೇತ ಜಾಗತಿಕ ವಿಎಫ್ಎಕ್ಸ್ ದೈತ್ಯ ಸಂಸ್ಥೆ 'ಡಿಎನ್‌ಇಜಿ' (DNEG) ಮತ್ತು ಯಶ್ ಅವರ 'ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್' ಜಂಟಿಯಾಗಿ ನಿರ್ಮಿಸುತ್ತಿವೆ.
ಶ್ರೀರಾಮನ ವನವಾಸ, ಸೀತೆಯ ಅಪಹರಣ ಮತ್ತು ಲಂಕಾಧಿಪತಿ ರಾವಣನ ವಿರುದ್ಧ ನಡೆಯುವ ಮಹಾ ಯುದ್ಧದ ಕಥಾಹಂದರ ಹೊಂದಿರುವ ಈ ಸಿನಿಮಾವನ್ನು ಎರಡು ಭಾಗಗಳ ಸರಣಿಯಾಗಿ ತರಲಾಗುತ್ತಿದೆ. ಚಿತ್ರದ ಮೊದಲ ಭಾಗವು 2026ರ ದೀಪಾವಳಿ ಹಬ್ಬದ ವೇಳೆಗೆ ವಿಶ್ವಾದ್ಯಂತ ಅತ್ಯಾಧುನಿಕ ಐಮ್ಯಾಕ್ಸ್ (IMAX) ಪರದೆಗಳಲ್ಲಿ ಅಬ್ಬರಿಸಲಿದ್ದು, ಎರಡನೇ ಭಾಗವು 2027ರ ದೀಪಾವಳಿಗೆ ಪ್ರೇಕ್ಷಕರ ಮುಂದೆ ಬರಲಿದೆ. ಜುಲೈ 24ರಂದು ಬಿಡುಗಡೆಯಾಗಲಿರುವ ಟ್ರೈಲರ್ ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆಯುವುದಂತೂ ಗ್ಯಾರಂಟಿ. ಅದರಲ್ಲಿ ಯಶ್ ರಾವಣನಾಗಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲವಂತೂ ಅಭಿಮಾನಿಗಳಲ್ಲಿ ಮೂಡಿದೆ.


Click it and Unblock the Notifications
