ಸಂಗೀತ ಲೋಕದಲ್ಲಿ ವೈಯಕ್ತಿಕ ಜೀವನ ತುಂಬಾ ದುಃಖದಿಂದ ಕೂಡಿರುತ್ತೆ: ಎಸ್.ಜಾನಕಿ ನಿಧನಕ್ಕೆ ಇಳಯರಾಜ ಭಾವುಕ
ದಕ್ಷಿಣ ಭಾರತದ ಗಾನಕೋಕಿಲೆ ಎಸ್.ಜಾನಕಿ ಅವರ ಅಗಲಿಕೆ ಇಡೀ ಭಾರತೀಯ ಚಿತ್ರರಂಗವನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಜಾನಕಮ್ಮ ಅವರ ಕಂಠಸಿರಿಯನ್ನು ಅತ್ಯಂತ ಅದ್ಭುತವಾಗಿ ಬಳಸಿಕೊಂಡು ನೂರಾರು ಕ್ಲಾಸಿಕ್ ಹಿಟ್‌ಗಳನ್ನು ನೀಡಿದ್ದ ದಕ್ಷಿಣ ಭಾರತದ ಹೆಮ್ಮೆಯ ಸಂಗೀತ ನಿರ್ದೇಶಕ ಇಳಯರಾಜ ಅವರು ತಮ್ಮ ಆಪ್ತ ಒಡನಾಡಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ತಮ್ಮ ವೈಯಕ್ತಿಕ ಜೀವನದಲ್ಲಿ ನೋವುಗಳು ಮತ್ತು ಕಷ್ಟಗಳನ್ನು ಎದುರಿಸಿದ ಹೊರತಾಗಿಯೂ, ಜಾನಕಿ ತನ್ನ ಕಠಿಣ ಪರಿಶ್ರಮ ಮತ್ತು ಅಪಾರ ಪ್ರತಿಭೆಯ ಮೂಲಕ ಜಗತ್ತಿಗೆ ತನ್ನ ಸಾಮರ್ಥ್ಯ ಪದೇ ಪದೇ ನಿರೂಪಿಸಿದಳು. ಅವಳಿಗೆ ಅವಳೇ ಸಾಟಿ" ಎಂದು ಇಳಯರಾಜ ಕಂಬನಿ ಮಿಡಿದಿದ್ದಾರೆ.
ಜಾನಕಿ ಅವರ ನಿಧನದ ಹಿನ್ನೆಲೆ ವಿಡಿಯೋ ಹಂಚಿಕೊಂಡಿರುವ ಇಳಯರಾಜ, ಜಾನಕಮ್ಮ ಅವರ ವೃತ್ತಿಪರತೆಯನ್ನು ಶ್ಲಾಘಿಸಿದ್ದಾರೆ. ತಮಗೂ ಮತ್ತು ಜಾನಕಮ್ಮ ಅವರಿಗೂ ಇದ್ದ ಸಾಮ್ಯತೆಯನ್ನು ನೆನಪಿಸಿಕೊಂಡ ಅವರು, "ಸಂಗೀತ ಪ್ರಪಂಚದಲ್ಲಿ ಜಾಗತಿಕ ಮಟ್ಟದ ಅನೇಕ ದಿಗ್ಗಜರು ಮತ್ತು ಪ್ರತಿಭಾವಂತರ ವೈಯಕ್ತಿಕ ಜೀವನ ತುಂಬಾ ದುಃಖದಿಂದ ಕೂಡಿರುತ್ತೆ. ಜಾನಕಿ ಅಮ್ಮ ಕೂಡ ಜೀವನದಲ್ಲಿ ಸಾಕಷ್ಟು ನೋವುಗಳನ್ನು ಸಹಿಸಿಕೊಂಡವರು. ಆ ನೋವೆಲ್ಲವನ್ನೂ ಮರೆತು ತಾವು ಹಾಡುವ ಪ್ರತಿಯೊಂದು ಹಾಡಿನಲ್ಲೂ ತಮ್ಮ ಅಪ್ರತಿಮ ಪ್ರತಿಭೆ ತೋರಿಸುತ್ತಿದ್ದರು" ಎಂದು ನೆನೆದಿದ್ದಾರೆ.

ಇಳಯರಾಜ-ಜಾನಕಿ ಮ್ಯಾಜಿಕಲ್ ಕಾಂಬಿನೇಷನ್
"ನಾನು ಹೇಳಿಕೊಟ್ಟ ಹಾಡನ್ನು ಅವರು ಅತ್ಯಂತ ಭಕ್ತಿಯಿಂದ ಗಟ್ಟಿಯಾಗಿ ಹಿಡಿದುಕೊಳ್ಳುತ್ತಿದ್ದರು. ಆಕೆಯ ಕಠಿಣ ಪರಿಶ್ರಮ ನನ್ನ ಪರಿಶ್ರಮಕ್ಕೆ ಸಮನಾಗಿತ್ತು, ಬಹುಶಃ ನನಗಿಂತಲೂ ಹೆಚ್ಚಾಗಿತ್ತು" ಎಂದು ಇಳಯರಾಜ ಭಾವುಕರಾಗಿದ್ದಾರೆ. ಅರ್ಧ ಶತಮಾನಕ್ಕೂ ಹೆಚ್ಚು ಕಾಲ ನಡೆದ ಜಾನಕಮ್ಮ ಅವರ ಸುದೀರ್ಘ ಗಾನಯಾತ್ರೆಯಲ್ಲಿ ಅನೇಕ ಸಂಗೀತ ನಿರ್ದೇಶಕರು ಅವರ ಧ್ವನಿ ಬಳಸಿಕೊಂಡಿದ್ದಾರೆ. ಆದರೆ, ಇಳಯರಾಜ ಅವರ ಸಂಗೀತ ಸಂಯೋಜನೆಯಲ್ಲಿ ಜಾನಕಮ್ಮ ಹಾಡಿದ ಹಾಡುಗಳು ಇತಿಹಾಸ ಸೃಷ್ಟಿಸಿದವು. ಜಾನಕಿ ಅವರ ಧ್ವನಿಯ ಏರಿಳಿತ ಮತ್ತು ಭಾವನೆಗಳನ್ನ ಅಭಿವ್ಯಕ್ತಪಡಿಸುವ ಶೈಲಿಯನ್ನು ಇಳಯರಾಜ ಸೂಕ್ಷ್ಮವಾಗಿ ಬಳಸಿಕೊಂಡಿದ್ದರು.
Music maestro Ilaiyaraaja paid an emotional tribute to legendary singer S. Janaki, recalling her dedication, hardships, and their iconic musical partnership after her passing.ಹಳ್ಳಿ ಸೊಗಡಿನ ಜಾನಪದ ಶೈಲಿಯಿಂದ ಹಿಡಿದು ಕ್ಲಾಸಿಕಲ್ ಸೋಲೋಗಳವರೆಗೆ, ವಿರಹದ ತೀವ್ರ ವೇದನೆಯಿಂದ ಹಿಡಿದು ಪ್ರೇಮದ ತುಂಟಾಟದವರೆಗೆ ಎಲ್ಲ ಮಾದರಿಯ ಹಾಡುಗಳಿಗೂ ಜಾನಕಿ ತಮ್ಮ ಧ್ವನಿಯ ಮೂಲಕ ಜೀವ ತುಂಬುತ್ತಿದ್ದರು. ದಕ್ಷಿಣ ಭಾರತದ ಚಿತ್ರರಂಗದಲ್ಲಿ ಅದರಲ್ಲೂ ವಿಶೇಷವಾಗಿ ತಮಿಳು ಸಿನಿರಂಗದಲ್ಲಿ ಇಳಯರಾಜ, ಎಸ್.ಜಾನಕಿ ಹಾಗು ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಕಾಂಬಿನೇಷನ್ ಒಂದು ಸುವರ್ಣ ಯುಗವನ್ನೇ ಸೃಷ್ಟಿಸಿತ್ತು.
ಜಾನಕಮ್ಮ ಅವರು ಎಸ್‌ಪಿಬಿ ಜೊತೆಗೂಡಿ ಸಾವಿರಾರು ಯುಗಳ ಗೀತೆಗಳನ್ನು ಹಾಡಿದ್ದರು. ಇದಕ್ಕೂ ಮುನ್ನ ಪಿ.ಬಿ.ಶ್ರೀನಿವಾಸ್ ಅವರಂತಹ ದಿಗ್ಗಜರೊಂದಿಗೂ ಅವರು ವೇದಿಕೆ ಹಂಚಿಕೊಂಡಿದ್ದರು. ಇಳಯರಾಜ ಅವರ ಸಂಗೀತದಲ್ಲಿ ಮೂಡಿಬಂದ ಈ ಜೋಡಿಯ ರೋಮ್ಯಾಂಟಿಕ್ ಮತ್ತು ಜಾನಪದ ಶೈಲಿಯ ಹಾಡುಗಳು ದಶಕಗಳ ಕಾಲ ದಕ್ಷಿಣದ ಸಂಗೀತ ಲೋಕವನ್ನು ಆಳಿದ್ದವು.
ನೋವಿನಲ್ಲೇ ಮುಗಿದ ಜೀವನ ಪಯಣ
ಇಳಯರಾಜ ಅವರು ಹೇಳಿದಂತೆ ಜಾನಕಮ್ಮ ಅವರ ವೈಯಕ್ತಿಕ ಜೀವನ ಸುಲಭದ್ದಾಗಿರಲಿಲ್ಲ. ಅವರ ಪತಿ ವಿ.ರಾಮಪ್ರಸಾದ್ ಅವರು 1997ರಲ್ಲೇ ನಿಧನರಾಗಿದ್ದರು. ದುರದೃಷ್ಟವಶಾತ್, ಇದೇ ವರ್ಷದ ಆರಂಭದಲ್ಲಿ ಜಾನಕಮ್ಮ ಅವರು ತಮ್ಮ ಮಗನನ್ನೂ ಕಳೆದುಕೊಂಡಿದ್ದರು. ಕೊನೆಯ ದಿನಗಳಲ್ಲಿ ಅವರು ತಮ್ಮ ಮೊಮ್ಮಗಳೊಂದಿಗೆ ವಾಸಿಸುತ್ತಿದ್ದರು. ಜೀವನದ ಸಾಲು ಸಾಲು ದುರಂತಗಳ ನಡುವೆಯೂ ಕೋಟ್ಯಂತರ ಸಂಗೀತ ಪ್ರಿಯರನ್ನು ತಮ್ಮ ಹಾಡಿನ ಮೂಲಕ ನಗಿಸಿದ, ಅಳಿಸಿದ ಆ ಅಪ್ರತಿಮ ಧ್ವನಿ ಈಗ ಇತಿಹಾಸದ ಪುಟ ಸೇರಿದೆ.


Click it and Unblock the Notifications
