• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಧುಮುಕಿದ ಕಾಮತ್

By Staff
|
Google Oneindia Kannada News
ಬೆಳಿಗ್ಗೆ 5 ಗಂಟೆಗೆ ಯಾರೋ ಇವರ ಮನೆಯ ಮುಂದೆ ಕರಪತ್ರದ ಗಂಟನ್ನು ಇಟ್ಟು ಹೋಗುತ್ತಿದ್ದರು. ಅವನ್ನು ಹಂಚುವ ಕೆಲಸ ಇವರದಾಗಿತ್ತು. ಹೊರಗೆ ನೋಡಿದರೆ ಟೂಥ್‌ಪೌಡರ್ ಹಾಗೂ ವ್ಯಾಸ್‌ಲೇನ್ ತಯಾರಿಸುವ ಕಂಪನಿ. ಒಳಗೆ ಗುಪ್ತವಾಗಿ ಬಾಂಬು ತಯಾರಿಸುವುದು... ಎಂ.ವಿ.ಕಾಮತ್ ಅವರ ಆತ್ಮಚರಿತ್ರೆ 'ಎ ರಿಪೋರ್ಟರ್ ಎಟ್ ಲಾರ್ಜ್'ನ ಮುಂದುವರಿದ ಭಾಗ.

* ಸಂಗ್ರಹಾನುವಾದ : ಡಾ| 'ಜೀವಿ' ಕುಲಕರ್ಣಿ, ಮುಂಬೈ

1937-39ರಲ್ಲಿ ತಾವು ಮಂಗಳೂರು ಗವರ್ನಮೆಂಟ್ ಕಾಲೇಜಿನಲ್ಲಿ ಕಲಿಯುತ್ತಿರುವಾಗ ಒಂದರ್ಥದಲ್ಲಿ ಶಾಂತಿ ಇತ್ತು ಎಂದು ಕಾಮತರು ಬರೆಯುತ್ತಾರೆ. 1935ರ ಕಾಯ್ದೆಯ ಅನ್ವಯ, ಭಾರತದಲ್ಲಿ, ಐದು ಪ್ರಮುಖ ರಾಜ್ಯಗಳಲ್ಲಿ ಕಾಂಗ್ರೆಸ್ ರಾಜ್ಯವಿತ್ತು. ಇವರು ಮದ್ರಾಸ್ ರಾಜ್ಯದಲ್ಲಿದ್ದರು. ಅಲ್ಲಿಯ ಪ್ರಧಾನಿ ರಾಜಾಜಿ ವಿದ್ಯಾರ್ಥಿಗಳಿಗೆ ಕರೆಯಿತ್ತು, ರಾಜಕಾರಣದಲ್ಲಿ ತಲೆಹಾಕದೇ ಅಭ್ಯಾಸದಲ್ಲಿ ತೊಡಗಿರಲು ಹೇಳಿದ್ದರು. ಏಳು ವರ್ಷಗಳ ಹಿಂದೆ (1930ರಲ್ಲಿ) ಗಾಂಧೀಜಿಯವರು ವಿದ್ಯಾರ್ಥಿಗಳಿಗೆ ಶಾಲೆ ಕಾಲೇಜು ತೊರೆದು ಬೀದಿಗಿಳಿದು ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಲು ಕರೆಯಿತ್ತಿದ್ದರು. ಆಗ ಕಾಮತರಿಗೆ 9 ವರ್ಷ. ಸಂಗ್ರಾಮದಲ್ಲಿ ಧುಮುಕಲು ಸಾಧ್ಯವಾಗಿರಲಿಲ್ಲ. ಏಳು ವರ್ಷಗಳಲ್ಲಿ ಏಷ್ಟು ವ್ಯತ್ಯಾಸ.

ಕಾಲೇಜಿನಲ್ಲಿರುವಾಗ ದೇಶದ ರಾಜಕೀಯ ಸ್ಥಿತಿಗತಿಗಳ ಅರಿವು ಕಾಮತರಿಗೆ ಇತ್ತು. ಆಗ ಮಹಮ್ಮದಲಿ ಜಿನ್ನಾ ಅವರು ಅಷ್ಟೊಂದು ಮಹತ್ವ ಪಡೆದಿರಲಿಲ್ಲ. ಬಿ.ಆರ್. ಅಂಬೇಡಕರರು ಪೂನಾ ಪ್ಯಾಕ್ಟ್'ನಿಂದಾಗಿ ಪ್ರಸಿದ್ಧಿ ಪಡೆದಿದ್ದರು. ಒಂದು ದಶಕದ ತರುವಾಯ, ಅಂಬೇಡಕರರನ್ನು ಎದುರಿಸುವ ಹಾಗೂ ಜಿನ್ನಾ ಅವರ ಮಲಬಾರ್ ಹಿಲ್‌ನ ಮೌಂಟ್ ಪ್ಲೆಸೆಂಟ್ ರೋಡ್‌ನಲ್ಲಿರುವ ಅರಮನೆಯಂತಹ ಸೌಧದ ಮುಂದೆ ಅವರ ಕಾರ್ಯದರ್ಶಿಯ ಅಸಭ್ಯ ವರ್ತನೆ ಸಹಿಸುವ ಪ್ರಸಂಗ ತಮಗೆ ಬಂದೀತೆಂದು ಕಾಮತರು ಊಹಿಸಿರಲಿಲ್ಲ. ಆಗ ಮುಸ್ಲಿಂ ಲೀಗ್ ಎಂಬ ಪಾರ್ಟಿಯ ನೇತಾರರಾಗಿ ಮಹಮ್ಮದಲಿ ಜಿನ್ನಾ ಅವರು ಅಂದಿನ ಯುನೈಟೆಡ್ ಪ್ರಾವಿನ್ಸ್ (ಇಂದಿನ ಉತ್ತರ ಪ್ರದೇಶ) ರಾಜ್ಯದ ಆಡಳಿತದಲ್ಲಿ ಮುಸ್ಲಿಮರಿಗೆ ಸ್ಥಾನವನ್ನು ಕೇಳಿದ್ದರು. ಆಗ ಗಾಂಧಿಯವರೊಡನೆ ಮಾತಾಡಲು ಬಯಸಿದ್ದರು. ನಿಷ್ಠುರವಾದಿಯಾದ ವಲ್ಲಭ ಭಾಯಿ ಪಟೇಲರು ಗಾಂಧೀಜಿಯವರಿಗೆ ಜಿನ್ನಾ ಅವರನ್ನು ಭೇಟಿಯಾಗಲು ಸಲಹೆ ನೀಡಿದ್ದರು. ಅವರ ಮಾತನ್ನು ಕಡೆಗಣಿಸಿ, ನೆಹರು ಅವರ ಮಾತನ್ನು ಕೇಳಿ ಗಾಂಧೀಜಿ ಜಿನ್ನಾ ಅವರ ಭೆಟ್ಟಿಗೆ ಒಪ್ಪಿಗೆ ನೀಡಿರಲಿಲ್ಲ. ಅಂದು ಜಿನ್ನಾ ಅವರ ಜೊತೆ ಮಾತುಕತೆ ನಡೆಸಿದ್ದರೆ ಮುಂದೆ ದೇಶವು ಇಬ್ಭಾಗವಾಗುತ್ತಿರಲಿಲ್ಲವೇನೋ ಎಂಬುದು ಕಾಮತರ ಅಭಿಪ್ರಾಯ.

1939ರಲ್ಲಿ ಕಾಮತರು ಮಂಬೈಯ ಸೇಂಟ್ ಝೇವಿಯರ್ಸ್ ಕಾಲೇಜು ಸೇರಿದ್ದರು. ಸೆಪ್ಟೆಂಬರ್ 4, ಇವರು ಕಾಲೇಜಿನ ಗೇಟಿನ ಬಳಿ ಬಂದಾಗ ಪೇಪರ ಮಾರುವ ಹುಡುಗ ಬಿಸಿಬಿಸಿ ಸುದ್ದಿ ಎಂದು ಕೂಗುತ್ತ ಬಂದ. ಹಿಂದಿನ ದಿನ ಮಧ್ಯಾಹ್ನ 11ಕ್ಕೆ ಬ್ರಿಟಿಶ್ ಪಾರ್ಲಿಮೆಂಟ್ ಜರ್ಮನಿಯ ವಿರುದ್ಧ ಯುದ್ಧ ಸಾರಿತ್ತು. ಭಾರತೀಯರು ಒಪ್ಪಲಿ ಬಿಡಲಿ ಜಾಗತಿಕ ಮಹಾಯುದ್ಧದಲ್ಲಿ, ಹಿಟ್ಲರನ ವಿರುದ್ಧ ನಡೆದ ಯುದ್ಧದಲ್ಲಿ, ಭಾಗವಹಿಸಬೇಕಾಗಿತ್ತು. ಅಂದಿನ ವೈಸ್‌ರಾಯ್ ಲಿನ್‌ಲಿಥ್‌ಗೋ ಯುದ್ಧದ ಬಗ್ಗೆ ಜಾಹೀರು ಪಡಿಸಿದ್ದರು. ಇದರಲ್ಲಿ ಭಾರತೀಯರ ಸಹಕಾರಕ್ಕಾಗಿ, ಸಿಮ್ಲಾದ ಅಂದಿನ ಬೇಸಿಗೆಯ ಅರಮನೆಗೆ, ಮಾತುಕತೆಗೆ ಬರಲು ಗಾಂಧೀಜಿಯವರನ್ನು ಆಮಂತ್ರಿಸಿದ್ದರು. ಆ ಸಭೆಯಲ್ಲಿ ಗಾಂಧೀಜಿ ಹೇಳಿದ್ದರು, ಈ ಯುದ್ಧದಲ್ಲಿ ಇಂಗ್ಲಂಡ್ ಹಾಗೂ ಫ್ರಾನ್ಸಗಳ ಬಗ್ಗೆ ಸಹಾನುಭೂತಿ ಇದೆ ಆದರೆ ನಾವು ಜಾಗತಿಕ ಮಹಾಯುದ್ಧವನ್ನು ಬೆಂಬಲಿಸುವುದಿಲ್ಲ'' ಎಂದು. 29, ಅಕ್ಟೋಬರ್ 1939ರಂದು ನಡೆದ ಕಾಂಗ್ರೆಸ್ ವರ್ಕಿಂಗ್ ಕಮೀಟಿ ಸಭೆಯಲ್ಲಿ ಕಾಂಗ್ರೆಸ್ ಆಳುತ್ತಿರುವ ಎಲ್ಲ ರಾಜ್ಯಗಳಲ್ಲಿ ತಾವು ರಾಜೀನಾಮೆ ನೀಡುವುದಾಗಿ ನಿರ್ಧರಿಸಿದ್ದರು. ಯುದ್ಧದಿಂದ ಭಾರತ ದೂರ ಉಳಿಯಲು ಬಯಸಿತ್ತು. ವಿದ್ಯಾರ್ಥಿಯಾದ ಕಾಮತರ ಮೇಲೆ ಇದು ಯಾವ ಪರಿಣಾಮ ಬೀರಿರಲಿಲ್ಲ. ಆಗ ಸುಭಾಸಚಂದ್ರ ಬೋಸ್ ಇನ್ನೂ ನೇತಾಜಿ ಆಗಿರಲಿಲ್ಲ, ಅವರ ಬಗ್ಗೆ ಜನರಲ್ಲಿ ಬಹಳ ಆದರ ಇತ್ತು.

ಆ ಕಾಲದಲ್ಲಿ ಕಾಮತರು ಮಾಟುಂಗಾದಲ್ಲಿ, ತಮ್ಮ ಅಣ್ಣನ ಮನೆಯಲ್ಲಿ ವಾಸವಾಗಿದ್ದರು. ಆ ದಿನಗಳಲ್ಲಿ ಟೈಮ್ಸ್ ಆಫ್ ಇಂಡಿಯಾ' ಬ್ರಿಟಿಶರ ಪರವಾದ ಪೇಪರ್ ಎಂದೇ ಪ್ರಸಿದ್ಧವಾಗಿತ್ತು. ಆದ್ದರಿಂದ ಕಾಮತರು ಭಾರತೀಯರ ಭಾವನೆಗಳನ್ನು ಪ್ರತಿನಿಧಿಸುವ ಫ್ರೀ ಪ್ರೆಸ್ ಜರ್ನಲ್' ತರಿಸುತ್ತಿದ್ದರು. ಭಾರತೀಯ ಸೇನೆಯಲ್ಲಿ ಸೈನಿಕರನ್ನು ತುಂಬುವ ಕೆಲಸ ಅದೇ ಶುರುವಾಗಿತ್ತು. 1942ರ ವರೆಗೆ ಯುದ್ಧದ ಪರಿಣಾಮ ತಮ್ಮ ಮೇಲೆ ಆಗಿರಲಿಲ್ಲ. ಜರ್ಮನಿಯ ಬಗ್ಗೆ ತಮಗೇನೂ ಗೊತ್ತಿರಲಿಲ್ಲ. ನಾಝೀ ಸರ್ವಾಧಿಕಾರಿತ್ವದ ಬಗ್ಗೆ ಅವರು ಕೇಳಿದ್ದರು ಅಷ್ಟೇ. ಹಿಟ್ಲರನ ಆತ್ಮಚರಿತ್ರೆ ಮೇನ್ ಕ್ಯಾಂಫ್' ಅವರು ಓದಿರಲಿಲ್ಲ. ಓದಿದ್ದರೆ ಜರ್ಮನಿಯ ಬಗ್ಗೆ ಇದ್ದ ಮೆಚ್ಚುಗೆ ಕಡಿಮೆಯಾಗುತ್ತಿತ್ತಂತೆ. ಹಿಟ್ಲರ್ ಭಾರತೀಯರನ್ನೂ ದ್ವೇಷಿಸುತ್ತಿದ್ದ ಎಂಬುದೂ ಅವರಿಗೆ ತಿಳಿದಿರಲಿಲ್ಲ.

ಕಾಮತರು ಬಿ.ಎಸ್.ಸಿ. ಡಿಗ್ರಿ ಪಡೆದಾಗ ಮಹಾಯುದ್ಧ ನಡೆದು ಎರಡು ವರ್ಷ ಆಗಿತ್ತು. ಇವರು ನೌಕರಿ ಹುಡುಕಲು ಆರಂಭಿಸಿದರು. ಅಮೇರಿಕೆಗೆ ಹೋಗಿ ಕ್ಯಾಲಿಫೋರ್ನಿಯಾದ ಬರ್‌ಕ್ಲೀ ಸ್ಕೂಲ್ ಆಫ್ ಜರ್ನ್ಯಲಿಜಂ'ನಲ್ಲಿ ಪ್ರಶಿಕ್ಷಣ ಪಡೆಯುವ ಹೆಬ್ಬಯಕೆ ಇವರಿಗಿತ್ತು. ಸಂಬಂಧಿಕರಿಂದ ಆರ್ಥಿಕ ಸಹಾಯ ಕೇಳಲು ಉಡುಪಿಗೆ ಬಂದರು. ಬ್ಯಾಂಕ್ ಅಧಿಕಾರಿಯಾದ, ಶ್ರೀಮಂತರಾದ ಸಂಬಂಧಿಕರೊಬ್ಬರಲ್ಲಿ ಈ ವಿಷಯ ಪ್ರಸ್ತಾಪಿಸಿದಾಗ ಅವರು ಆಸಕ್ತಿ ತೋರಲಿಲ್ಲ. ಕಾರ್ಪೊರೇಶನ್ ಬ್ಯಾಂಕ್ ಇವರ ಮನೆಯ ಬ್ಯಾಂಕ್‌ನಂತೆ ಇತ್ತು. ಅದರ ಡೈರೆಕ್ಟರ್, ಜನರಲ್ ಮ್ಯಾನೇಜರ್, ಅದರ ಲೀಗಲ್ ಎಡ್‌ವೈಜರ್ ಇವರ ಸಂಬಂಧಿಕರೇ ಆಗಿದ್ದರು. ಬ್ಯಾಂಕ್ ಸೇರಲು ಹೇಳಿದರು. 1941ರಲ್ಲಿ ಆ ಬ್ಯಾಂಕ್ ಸೇರಿದ್ದರೆ ತಾವು ಚೇರಮನ್ನರಾಗಿ ನಿವೃತ್ತರಾಗಬಹುದಾಗಿತ್ತು. ಇವರ ಸಹಪಾಠಿ ಕೆ.ಕೆ.ಪೈ ಸಿಂಡಿಕೇಟ್ ಬ್ಯಾಂಕಿನ ಚೇರಮನ್ನರಾಗಿ ನಿವೃತ್ತರಾದುದನ್ನು ನೆನೆಯುತ್ತಾರೆ. ಬ್ಯಾಂಕ್ ಸೇರುವ ಮನಸ್ಸಿಲ್ಲದೆ ಮುಂಬೈಗೆ ಮರಳಿದರು. ಕೆಲಸಕ್ಕಾಗಿ ಅರ್ಜಿ ಹಾಕತೊಡಗಿದರು.

ಬರ್‌ಕ್ಲೀಗೆ ಹೋಗುವ ಕನಸು ನನಸಾಗಲಿಲ್ಲ. ಆದರೆ ಕೆಲವು ವರ್ಷಗಳ ನಂತರ ಇವರು ಅಲ್ಲಿಗೆ ಹೋಗಿದ್ದರಂತೆ. ಜರ್ನ್ಯಲಿಜಂ ವಿದ್ಯಾರ್ಥಿಯಾಗಿ ಅಲ್ಲ, ಅಲ್ಲಿಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲು. ಆಗ ಅವರು ಪಿ.ಟಿ.ಐ. ಸಂಸ್ಥೆಯ ಯು.ಎನ್.ಓ. ಕರಸ್ಪಾಂಡೆಂಟ್ ಆಗಿದ್ದರಂತೆ. ಜೀವನದಲ್ಲಿ ಇಂತಹ ವಿಚಿತ್ರ ಘಟನೆಗಳು ಸಂಭವಿಸುತ್ತವೆ. ವಿದ್ಯಾರ್ಥಿಯಾಗದ ನಷ್ಟ ಅಂದು ಅತಿಥಿಯಾದುದರಿಂದ ಪರಿಹಾರ ಪಡೆದಿತ್ತು.

ವರ್ಲಿಯ ಒಂದು ಕಂಪನಿಯಲ್ಲಿ ಇವರಿಗೆ ದೊರೆತ ಪ್ರಥಮ ಕೆಲಸ ಕೆಮಿಸ್ಟನದು. ಸಂಬಳ ತಿಂಗಳಿಗೆ ರೂ.28. ಒಂದು ವಾರದಲ್ಲಿ ಚೀಫ್ ಕೆಮಿಸ್ಟ್ ಇವರಿಗೊಂದು ಟೆಸ್ಟ್ ಕೊಟ್ಟರು. ಇವರು ಯಶಸ್ವಿಯಾದರು. ಇವರನ್ನು ಲ್ಯಾಬ್‌ನಿಂದ ಫ್ಯಾಕ್ಟರಿಗೆ ವರ್ಗಾಯಿಸಿದರು. ಇವರಿಗೆ ಶಿಫ್ಟ್ ಡ್ಯೂಟಿ ಶುರುವಾಯ್ತು. ಅಲ್ಲಿ ಕಲಿಯುವುದೇನೂ ಇರಲಿಲ್ಲ. ಬೇಸರ ಬಂತು. ಒಂದು ಸಂಜೆ ಗೋಪು ಎಂಬ ಮಿತ್ರ(ಯು.ಜಿ.ರಾವ್) ಭೆಟ್ಟಿಯಾದ. ಅವನು ಬೋರ್ಡ್ ಶಾಲೆಯ ಇಂಗ್ಲಿಷ್ ಟೀಚರರ ಮಗ. ಇವರಿಗಿಂತ 5 ವರ್ಷ ದೊಡ್ಡವ. ಫ್ರೀ ಪ್ರೆಸ್ ಜರ್ನಲ್‌ದಲ್ಲಿ ಕೆಲಸಕ್ಕೆ ಸೇರಿದ್ದ. ಕಾಮತರಿಗೆ ಬರವಣಿಗೆಯಲ್ಲಿ ಆಸಕ್ತಿ ಇದ್ದುದನ್ನು ಅರಿತಿರುವುದರಿಂದ ತಮ್ಮ ಪತ್ರಿಕೆಗೆ ರಿಪೋರ್ಟರ್ ಆಗಿ ಸೇರಲು ಆಮಂತ್ರಿಸಿದ. ಇದು ಸುವರ್ಣಾವಕಾಶ' ಎಂದ. ಸಂಬಳ ಅರ್ಧದಷ್ಟು ಕಡಿಮೆ ಎಂದು ಇವರು ಸೇರಲಿಲ್ಲ. ಮುಂದೆ ಐದು ವರ್ಷಗಳ ನಂತರ ಸೇರಿದ ಕಥೆ ಮತ್ತೆ ಬರೆಯುತ್ತಾರೆ.

ಇವರ ಸಹಪಾಠಿಯೊಬ್ಬ ಕೆಂಪ್ ಅಂಡ್ ಕಂಪನಿಯಲ್ಲಿ ಕೆಲಸಮಾಡುತ್ತಿದ್ದ. ಅದು ಔಷಧಿ ಉತ್ಪಾದಿಸುವ ಕಂಪನಿ. ಅಲ್ಲಿ ಕೆಲಸ ಮುಂಜಾನೆ 9ರಿಂದ ಸಂಜೆ 5ರವರೆಗೆ ಇತ್ತು. ಶಿಫ್ಟಿನ ತೊಂದರೆ ಇರಲಿಲ್ಲ. ಸಂಬಳ ತಿಂಗಳಿಗೆ ರೂ.50. ಇವರು ಸೇರಿದರು. ಅಲ್ಲಿಯ ಲ್ಯಾಬೊರೆಟರಿ ಅವ್ಯವಸ್ಥೆಯ ಆಗರವಾಗಿತ್ತು. ಇವರು ಅದನ್ನು ಚೊಕ್ಕಾಗಿಸಿದರು. ಜನರಲ್ ಮೆನೆಜರ್ ಇವರ ಕೆಲಸ ನೋಡಿ ಒಮ್ಮೆಲೆ ಸಂಬಳ ರೂ.65 ಮಾಡಿಬಿಟ್ಟ. ಇವರಿಗೋ ಏಳನೆಯ ಸ್ವರ್ಗ ದೊರೆತಂತಾಯ್ತು. ಕರ್ಮಣ್ಯೇವಾಧಿಕಾರಸ್ತೇ ಮಾಫಲೇಷು ಕದಾಚನ' ಎಂಬ ಗೀತೆಯ ಸಾಲು ಇವರಿಗೆ ನೆನಪಾಯ್ತು. ಆಗ ಯುದ್ಧ ಕಾಲ. ಔಷಧಿಗಳಿಗೆ ವಿಪರೀತ ಡಿಮಾಂಡ್ ಇತ್ತು. ಅಮೇರಿಕೆಯ ಜಾನ್ ವೇತ ಕಂಪನಿಯಿಂದ ದೊಡ್ಡ ಆರ್ಡರ್ ಬಂತು. ಇವರ ಮಿತ್ರ ರಾಜಗೋಪಾಲನ್ ಟ್ಯಾಬ್ಲೆಟ್ ವಿಭಾಗದ ಮುಖ್ಯಸ್ಥನಾದರೆ ಇವರು ಇಂಜೆಕ್ಶೆನ್ ಉತ್ಪಾದನಾ ವಿಭಾಗದ ಮುಖ್ಯಸ್ಥರಾದರು. ಮುಂದೆ 1969-78ರ ಅವಧಿಯಲ್ಲಿ ಇವರು ಟೈಮ್ಸ್ ಅಫ್ ಇಂಡಿಯಾದ ಪ್ರತಿನಿಧಿಯಾಗಿ ವಾಶಿಂಗ್‌ಟನ್ ಡಿ.ಸಿ.ಯಲ್ಲಿದ್ದಾಗ ಜಾನ್ ವೇತ್ ಕಂಪನಿಯ ಸಂಪರ್ಕವಾದ ರೋಚಕ ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ.

ಒಂದು ದಿನ ಇವರು ವಾಶಿಂಗ್‌ಟನ್ ಪೋಸ್ಟ್ ಪತ್ರಿಕೆಯನ್ನು ಓದುತ್ತಿದ್ದರಂತೆ. ಒಂದು ಮೂಲೆಯಲ್ಲಿ ಚಿಕ್ಕ ಸುದ್ದಿಯೊಂದು ಪ್ರಕಟವಾಗಿತ್ತು. ಅಮೇರಿಕಾ ಸರಕಾರದ ಸೆನೆಟ್ ಸಬ್‌ಕಮೀಟಿ ಔಷಧಿ ಕಂಪನಿಗಳ ಬಗ್ಗೆ ಒಂದು ಹೇಳಿಕೆ ನೀಡಿದ್ದರು. ಅಮೇರಿಕೆಯ ಔಷಧಿ ಉತ್ಪಾದಿಸುವ ಕಂಪನಿಗಳು, ವಿಕಾಸಶೀಲ ದೇಶಗಳಲ್ಲಿ, ವಿಶೇಷವಾಗಿ ಲ್ಯಾಟಿನ್ ಅಮೇರಿಕೆಯಲ್ಲಿ, ತಮ್ಮ ಔಷಧಿಗಳ ಬೆಲೆಯನ್ನು ಗಗನಕ್ಕೇರಿಸಿದ್ದಾರೆ. ಒಂದು ಆಸ್ಪಿರಿನ್ ಮಾತ್ರೆಯ ಬೆಲೆ ಒಂದು ಡಾಲರ್!'' ಕಾಮತರು ಬರೆಯುತ್ತಾರೆ, ನಾನು ಕೂಡಲೇ ಸಬ್‌ಕಮೀಟಿಯ ಆಫೀಸಿಗೆ ಹೋದೆ. ನನ್ನ ಪರಿಚಯ ಹೇಳಿದೆ. ರಿಪೋರ್ಟಿನ ಒಂದು ಪ್ರತಿಯನ್ನು ನನಗೆ ಕೊಡಲು ಕೇಳಿದೆ. ಅಮೇರಿಕೆಯ ಪ್ರಮುಖ ಪತ್ರಿಕೆಗಳು ನಿರ್ಲಕ್ಷ್ಯ ತೋರಿದ ವಿಚಾರದಲ್ಲಿ ನಾನು ಆಸಕ್ತಿ ತೋರಿದ್ದರಿಂದ ಸೆಕ್ರೆಟರಿಗೆ ಮಹದಾನಂದವಾಯ್ತು. ನನಗೊಂದು ಪ್ರತಿ ಸಿಕ್ಕಿತು. ಅಮೇರಿಕೆಯ ಔಷಧ ಕಂಪನಿಗಳು ಬಲಾಢ್ಯವಾಗಿರುವುದರಿಂದ ಈ ಸುದ್ದಿ ಸರಿಯಾಗಿ ಬರದಿರದಂತೆ ಹತ್ತಿಕ್ಕಿದ್ದವು. ಇದು ಜನತೆಯ ಮೋಸವಾಗಿತ್ತು.''

ಕಾಮತರು ಈ ವಿಷಯವನ್ನು ಟೈಮ್ಸ್ ಪತ್ರಿಕೆಯಲ್ಲಿ ಮುಖಪುಟದ ವಿಶೇಷ ಲೇಖನವಾಗಿ ಪ್ರಕಟಿಸಿದರು. ಎಲ್ಲ ಪ್ರಮುಖ ಔಷಧ ಕಂಪನಿಗಳ ಪಿ.ಆರ್.ಓ.ಗಳು ಕಾಮತರನ್ನು ಹುಡುಕಿಕೊಂಡು ಬಂದರು. ಇವರಿಗೆ ಪಾರ್ಟಿಗಾಗಿ ಆಹ್ವಾನ ಬರತೊಡಗಿದವು. ಕಾಮತರು ಇಲ್ಲ' ಎಂದು ವಿನಯದಿಂದ ಇಂಥ ಆಹ್ವಾನ ತಿರಸ್ಕರಿಸುತ್ತಿದ್ದರು. ಆದರೆ ಜಾನ್ ವೇತ್ ಕಂಪನಿಯ ಆಮಂತ್ರಣ ಬಂದಾಗ ಇವರಿಗೆ ಇಲ್ಲ' ಎನ್ನಲು ಮನಸ್ಸಾಗಲಿಲ್ಲ. ಇದಕ್ಕೆ ಬೇರೆ ಕಾರಣವಿತ್ತು. ಅವರ ಆಮಂತ್ರಣ ಸ್ವೀಕರಿಸಿ ನಾಲ್ಕು ಭಾರತೀಯ ಮಿತ್ರ-ಸಹೋದ್ಯೋಗಿಗಳೊಂದಿಗೆ ಪಾರ್ಟಿಗೆ ಹೋದರು. ತಾವು ಹಿಂದೆ 1942ರಲ್ಲಿ ಇವರ ಕಂಪನಿಗಾಗಿ ಇಂಜೆಕ್ಶೆನ್ ತಯಾರಿಸುತ್ತಿದ್ದ ಮುಂಬೈಯ ಕೆಂಪ್ ಅಂಡ್ ಕಂಪನಿಯಲ್ಲಿ ಕೆಲಸಕ್ಕಿದ್ದ ವಿಚಾರ ತಿಳಿಸಿದರು. ಈ ವಿಷಯ ತಿಳಿದು ಅವರಿಗೆಲ್ಲ ಅಚ್ಚರಿಯಾಯ್ತು. ಹಾಗಾದರೆ ನಾವು ನಿಮ್ಮನ್ನು ಸನ್ಮಾನಿಸಬೇಕು' ಅಂದರು. ತಮ್ಮ ಫ್ಯಾಕ್ಟರಿಯನ್ನು ತೋರಿಸಿದರು, ಮುಖ್ಯವಾಗಿ ಇಂಜೆಕ್ಶೆನ್ ವಿಭಾಗಕ್ಕೆ ಕರೆದೊಯ್ದರು. ಇವರು ಗಿಫ್ಟ್ ಸ್ವೀಕರಿಸಲು ನಾಕರಿಸಿದರಾದರೂ ನೆನಪಿಗಾಗಿ ಕಂಪನಿಯ ಹೆಸರು ಮುದ್ರಿತವಾದ ಪೆನ್-ಸೆಟ್ ಮಾತ್ರ ಸ್ವೀಕರಿಸಿದರು.

ಕ್ವಿಟ್ ಇಂಡಿಯಾ ಮೂವ್‌ಮೆಂಟ್' ಬಗ್ಗೆ ವಿವರವಾಗಿ ಬರೆಯುತ್ತಾರೆ. ತಮ್ಮ ಡೈರಿಯಲ್ಲಿ ದಾಖಲಿಸಿದ ವಿವರಗಳನ್ನೆಲ್ಲ ಬರೆಯುತ್ತಾರೆ. ಇವರ ಕಕ್ಕನೊಬ್ಬ ಒಂದು ವರ್ಷ ಜೇಲಿನಲ್ಲಿದ್ದರಂತೆ. 1940ರಲ್ಲಿ ಬ್ರಿಟಿಶರ ವಿರುದ್ಧ ವೈಯಕ್ತಿಕ ಪ್ರತಿಭಟನೆ ತೋರಲು ಗಾಂಧೀಜಿಯವರು ಕರೆ ನೀಡಿದಾಗ ಮೊದಲು ಕೋರ್ಟ್ ಅರೆಸ್ಟ್' ಆದವರು ವಿನೋಬಾ ಭಾವೆ. ಎರಡನೆಯ ವ್ಯಕ್ತಿ ಜವಾಹರಲಾಲ ನೆಹರು. ಆಗ ನೆಹರು ಅವರ ವಯಸ್ಸು 51. ಸಂಯುಕ್ತ ಪ್ರಾಂತದಲ್ಲಿ ಜನರನ್ನು ಕೆರಳಿಸಿ ಮಾತಾಡಿದ್ದಕ್ಕೆ ಅವರಿಗೆ ಎರಡು ವರ್ಷ ಜೇಲು ಶಿಕ್ಷೆಯಾಗಿತ್ತು.

ಅಗಸ್ಟ್ 9, 1942 ಮುಂಬೈಯ ಗೋವಾಲಿಯಾ ಟ್ಯಾಂಕ್ ಬಳಿ ನಡೆದ ಎ.ಐ.ಸಿ.ಸಿ. ಸಭೆಯಲ್ಲಿ ಕ್ವಿಟ್ ಇಂಡಿಯಾ' ಚಳವಳಿ ಪ್ರಾರಂಭಗೊಂಡಾಗ ಕಾಮತರು ಅಲ್ಲಿದ್ದರು. ಆ ಸ್ಥಳ ತಮ್ಮ ಆಫೀಸಿನಿಂದ ನಡೆದುಕೊಂಡು ಬರುವಷ್ಟು ಸಮೀಪದಲ್ಲಿತ್ತು ಎಂದು ಬರೆಯುತ್ತಾರೆ. ಡು ಆರ್ ಡೈ' ಘೋಷಣೆ ಅಲ್ಲಿ ಮೊಳಗಿತ್ತು. ಅಲ್ಲಿ ಹಂಚಲಾದ ಕರಪತ್ರದ ವಿವರಗಳನ್ನು ಬರೆಯುತ್ತಾರೆ. ವಿದ್ಯಾರ್ಥಿಗಳಿಗೆ ವಿಶೇಷವಾಗಿ ಈ ಕೆಲಸ ಕೈಕೊಳ್ಳಲು ಕರೆ ಇತ್ತು. 1) ಸರಕಾರಿ ಕಾರ್ಯಯಂತ್ರವನ್ನು ನಿಷ್ಕ್ರಿಯಗೊಳಿಸುವುದು, 2) ಸರಕಾರಿ ನೌಕರರನ್ನು ಒಲಿಸುವುದು, (ಒಲಿಯದಿದ್ದರೆ) ತೊಂದರೆ ಕೊಡುವುದು, 3) ಸೈನಿಕರನ್ನು ಹಾಗೂ ಯುದ್ಧದ ಸಾಮಗ್ರಿಯನ್ನು ಒಯ್ಯುವ ಟ್ರಕ್‌ಗಳನ್ನು ನಾಶಗೊಳಿಸುವುದು, 4) ಅಂಚೆತಂತಿಗಳನ್ನು ಕತ್ತರಿಸುವುದು, ರೇಲ್ವೆ ಹಳಿಗಳನ್ನು ಕಿತ್ತಿಹಾಕುವುದು, 5) ನಿರಕ್ಷರರಿಗೆ ಸರಿಯಾದ ಮಾರ್ಗ ತೋರುವುದು. ಜನರು ಕಾಯದೆಯನ್ನು ತಮ್ಮ ಕೈಗೆ ತೆಗೆದುಕೊಂಡಿದ್ದರು. ಜಯಪ್ರಕಾಶ ನಾರಾಯಣರು ಭೂಗತರಾಗಿದ್ದರು. ಎಲ್ಲೆಡೆ ಗೊಂದಲದ ವಾತಾವರಣವಿತ್ತು.

ಮಾಟುಂಗಾದಲ್ಲಿ ಕೆಲವು ತರುಣರು ಒದೆಡೆ ಸೇರಿ ಏನಾದರೂ ಮಾಡೋಣ ಎಂದರು. ಸ್ವಯಂಸೇವಕರಾದ ಕಾಮತರಿಗೆ ಎರಡು ಕೆಲಸ ಹೇಳಲಾಗಿತ್ತು. 1) ಇವರಿಗೆ ಕೊಟ್ಟ ಪ್ರದೇಶದಲ್ಲಿ ಸ್ಲೋಗನ್‌ಗಳನ್ನು ಬರೆಯುವುದು, 2) ನ್ಯೂಜ್ ಲೆಟರ್‌ಗಳನ್ನು ಹಂಚುವುದು. ಬೆಳಿಗ್ಗೆ 5 ಗಂಟೆಗೆ ಯಾರೋ ಇವರ ಮನೆಯ ಮುಂದೆ ಕರಪತ್ರದ ಗಂಟನ್ನು ಇಟ್ಟು ಹೋಗುತ್ತಿದ್ದರು. ಅವನ್ನು ಹಂಚುವ ಕೆಲಸ ಇವರದಾಗಿತ್ತು. ಹೊರಗೆ ನೋಡಿದರೆ ಟೂಥ್‌ಪೌಡರ್ ಹಾಗೂ ವ್ಯಾಸ್‌ಲೇನ್ ತಯಾರಿಸುವ ಕಂಪನಿ. ಒಳಗೆ ಗುಪ್ತವಾಗಿ ಬಾಂಬು ತಯಾರಿಸುವುದು. ಖಡಕಿ ಫ್ಯಾಕ್ಟರಿಯಲ್ಲಿ ಬಾಂಬು ತಯಾರಿಸುವಲ್ಲಿ ತರಬೇತಿ ಹೊಂದಿದವನೊಬ್ಬ ಇವರಿಗೆ ಸಹಾಯಮಾಡಲು ಬರುತ್ತಿದ್ದ. ಇದರಲ್ಲಿ ಕಾಮತರಿಗೂ ಕೆಲಸವಿತ್ತು. ಇವರ ಮುಖಂಡ ಐಯ್ಯರ್ ಎಂಬವರನ್ನು ಪೋಲೀಸರು ಹಿಡಿದು ಜೇಲಿಗೆ ಹಾಕಿದರು. ಹೀಗಾಗಿ ಇವರ ಕ್ರಾಂತಿಕಾರಿ ಚಟುವಟಿಕೆ ಅರ್ಧಕ್ಕೆ ನಿಂತಿತ್ತು.

ಬ್ರಿಟಿಶರು ಮತ್ತು ಅವರ ಮಿತ್ರ ರಾಷ್ಟ್ರಗಳು ಯುದ್ಧದಲ್ಲಿ ಜಯ ಗಳಿಸುತ್ತ ಬಂದರು. ಭಾರತದಲ್ಲಿ 60,000 ದೇಶಭಕ್ತರು ಜೇಲಿನಲ್ಲಿದ್ದರು. 900 ಜನರು ಅಹುತಿಯಾದರು. ಗಾಂಧೀಜಿಯವರನ್ನು ಮೇ 6, 1944ರಂದು ಜೇಲಿನಿಂದ ಹೊರಬಿಟ್ಟರು. ಆಗ ಅನೇಕ ಕ್ರಾಂತಿಕಾರಿಗಳೂ ಹೊರಗೆ ಬಂದರು. ಮಾಟುಂಗಾದ ಮಾಧವನ್ ಎಂಬವರು ಹೊರಗೆ ಬಂದರು ಮುಂದೆ ಇವರು ಮುಂಬೈ ಮೇಯರ್ ಆದರು ಎಂಬುದನ್ನು ಕಾಮತರು ನೆನೆಯುತ್ತಾರೆ. ಅವರು ಯುಥ್ ಕ್ಯಾಂಪ್' ನಡೆಸುತ್ತಿದ್ದರು. ಕಾಮತರು ಅದರಲ್ಲಿ ಭಾಗವಹಿಸುತ್ತಿದ್ದರು. ಒಂದು ಸಭೆಯಲ್ಲಿ ಯಾರೋ ರಾಜಗೋಪಾಲಚಾರಿ ಅವರ ಅಂಗಿಗೆ ಟಾರ್ ಬಳಿದರು. ನಂತರ ಅವರು ತಮ್ಮ ಭಾಷಣದಲ್ಲಿ ಹೇಳಿದರು, ನೀವು ಟಾರ್ ಬಳಿದು ನನ್ನ ಶರ್ಟ್ ಬದಲಿಸುವಂತೆ ಮಾಡಬಹುದು, ಆದರೆ ಏನು ಮಾಡಿದರೂ ನನ್ನ ಅಭಿಪ್ರಾಯ ಬದಲಿಸಲಾರಿರಿ.'' ನಪೂ ಗಾರ್ಡನ್ ಸಭೆಯಲ್ಲಿ ಕಾಮತರು ಸ್ವಯಂಸೇವಕರು. ಒಮ್ಮೆ ಅತಿಥಿ ಭಾಷಣಕಾರರು ಬಾರದೇ ಇದ್ದಾಗ ಮಾಧವನ್ ಕಾಮತರಿಗೆ ಧ್ವಜ ಹಾರಿಸಲು ಹೇಳಿದರು. ಭಾಷಣ ಮಾಡಲು ಆಜ್ಞಾಪಿಸಿದರು. ಕಾಮತರಿಗೆ ಗುಗ್ಗು ಇತ್ತು. ಅಂದು ಅದು ಮಾಯವಾಯಿತು. ಇವರು ಕೆಲಸ ಮಾಡುತ್ತಿದ್ದ ಕಂಪನಿ ಭಾರತೀಯರದಾಗಿತ್ತು ಅದರೆ ಜನರಲ್ ಮೆನೆಜರ್ ಬ್ರಿಟಿಶ್ ಆಗಿದ್ದ. ಅವನ ಕೆಳಗೆ ದುಡಿಯಬಾರದೆಂದು, ರಾಜೀನಾಮೆ ನೀಡಬೇಕೆಂದು ಕಾಮತರು ನಿರ್ಧರಿಸಿದರು.

ಕಾಮತ್ ಸರಣಿಯ ಹಿಂದಿನ ಪುಟಗಳು

ಕಾಲೇಜು ಮುಗಿದ ಮೇಲೆಯೇ ನಿಜ ಜೀವನದ ಆರಂಭ
ಉಡುಪಿಯಲ್ಲಿ ಗಾಂಧಿ, ನೆಹರು, ರಾಜಾಜಿ ಜೊತೆ ಒಡನಾಟ
ಅಂದಿನ ಸುಖ ವಂಚಿತ ಇಂದಿನ ಮಕ್ಕಳು
ಕಾಮತರಿಗೆ ವರದಾನವಾದ ಯೌವನದ ಸಂಸ್ಕಾರ
ತುಂಬಿದ ಮನೆಯಲ್ಲಿ ಕಾಮತರ ಅಕ್ಕರೆಯ ಬಾಲ್ಯ
ಕಾಮತ್‌ರ ಆತ್ಮಚರಿತ್ರೆಯಲ್ಲಿ ಭೂತ, ವರ್ತಮಾನದ ಮೆಲುಕು
ಹೆಮ್ಮೆಯ ಕನ್ನಡಿಗ, ಪತ್ರಕರ್ತ ಎಂ.ವಿ.ಕಾಮತ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X