Tamarind Farming: ಹುಣಸೆ ಕೃಷಿಯಲ್ಲಿ ಹೊಸ ಕ್ರಾಂತಿ: ಟ್ರ್ಯಾಕ್ಟರ್ ಸಹಾಯದಿಂದ ಯಂತ್ರ ತಯಾರಿಸಿದ ರೈತ ಚಂದ್ರಶೇಖರ, ವಿಡಿಯೋ
Tamarind Farming: ಹುಣಸೆ ಕೃಷಿಯಲ್ಲಿ ಈಗ ಎದುರಾಗಿರುವ ಬಹುದೊಡ್ಡ ಸಮಸ್ಯೆ ಎಂದರೆ ಹುಣಸೆ ಇಳುವರಿಯ ಸಂದರ್ಭದಲ್ಲಿ ಮರ ಹತ್ತುವುದಕ್ಕೆ ಕೃಷಿ ಕಾರ್ಮಿಕರು ಸಿಗದೆ ಇರುವುದು ಹಾಗೂ ಯಂತ್ರಗಳ ಕೊರತೆ. ಈ ಸಮಸ್ಯೆಗೆ ರೈತ ಹಾಗೂ ವಕೀಲ ನೋಟರಿ ಚಂದ್ರಶೇಖರ ಅವರು ಪರಿಹಾರ ಕಂಡುಕೊಂಡಿದ್ದಾರೆ. ಈ ಮಾದರಿಯು ಇದೀಗ ಹುಣಸೆ ಬೆಳೆಯ ರೈತರಿಗೆ ಹೆಚ್ಚು ಪ್ರಯೋಜನವಾಗಲಿದೆ. ಅಲ್ಲದೆ ಸರಳವಾಗಿ ರೈತರೇ ಮಾಡಿಕೊಳ್ಳಬಹುದಾದ ಸಾಧನಗಳನ್ನು / ಯಂತ್ರಗಳನ್ನು ಇವರು ಪರಿಚಯಿಸಿದ್ದಾರೆ. ಈ ಯಂತ್ರಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಹುಣಸೆ ಯಂತ್ರ ಸೇರಿದಂತೆ ವಿವಿಧ ಯಂತ್ರ ಹಾಗೂ ರೈತರಿಗೆ ಉಪಯುಕ್ತವಾಗುವ ಮಾಹಿತಿಯನ್ನು ಚಂದ್ರಶೇಖರ ಅವರು Oneindia Kannadaದೊಂದಿಗೆ ಹಂಚಿಕೊಂಡಿದ್ದಾರೆ.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸಿದ್ದನಕಟ್ಟೆ ಗ್ರಾಮದ ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಚಂದ್ರಶೇಖರ ಅವರು ಕೃಷಿ ಯಂತ್ರಗಳ ತಯಾರಿಕೆಯಲ್ಲಿ ಹೊಸ ಸಾಧನೆಯನ್ನೇ ಮಾಡಿದ್ದಾರೆ. ಹುಣಸೆ ಬರಗಾಲದಲ್ಲೂ ರೈತರ ಕೈಹಿಡಿಯುವ ಬೆಳೆ. ಕರ್ನಾಟಕದ ಈ ಬೆಳೆಯು ಹಲವು ಕಾರಣಗಳಿಗೆ ಸವಾಲನ್ನು ಎದುರಿಸುತ್ತಿದೆ. ಹುಣಸೆ ಹಣ್ಣನ್ನು ಮರದಿಂದ ಕೀಳುವುದು ಹಾಗೂ ಸಿಪ್ಪೆ ಸುಲಿಯುವುದು ಬಹಳ ಸವಾಲಾಗಿ ಪರಿಣಮಿಸಿದೆ.

ಇನ್ನು ಹುಣಸೆ ಇಳುವರಿಯ ಸಂದರ್ಭದಲ್ಲಿ ಕೃಷಿ ಕೆಲಸಗಾರರ ಕೊರತೆ ಎದುರಾಗಿದೆ. ಹುಣಸೆ ಮೌಲ್ಯವರ್ಧನೆಯಲ್ಲಿ ಇಂದಿಗೂ ಹಲವು ಸವಾಲುಗಳು ಇವೆ. ಅದರಲ್ಲೂ ಕರ್ನಾಟಕ ಮತ್ತು ತಮಿಳುನಾಡಿನ ಹುಣಸೆಯು ದೇಶದ ಇನ್ನುಳಿದ ಜಿಲ್ಲೆಗಳ ಹುಣಸೆ ಹಣ್ಣಿಗಿಂತಲೂ ಭಿನ್ನವಾಗಿವೆ. ಕರ್ನಾಟಕ ಮತ್ತು ತಮಿಳುನಾಡಿನ ಭಾಗಗಳಲ್ಲಿನ ಹುಣಸೆ ಹಣ್ಣು ಅಲ್ಪ ಪ್ರಮಾಣದ ತೇವಾಂಶವನ್ನು ಒಳಗೊಂಡಿರುತ್ತದೆ. ಆದರೆ ಇದೇ ಸಂದರ್ಭದಲ್ಲಿ ದೇಶದ ಇನ್ನುಳಿದ ಭಾಗಗಳಲ್ಲಿ ಹುಣಸೆ ತೇವಾಂಶ ಕಡಿಮೆ. ಹುಣಸೆ ಸಂಸ್ಕರಣೆ ಎರಡನೇ ಹಂತವಾಗಿದೆ. ಆದರೆ ಮೊದಲ ಹಂತ ಹುಣಸೆ ಹಣ್ಣನ್ನು ಮರದಿಂದ ಬಿಡಿಸುವುದು. ಇದಕ್ಕೆ ರೈತರು ಸಿಗುತ್ತಿಲ್ಲ ಎನ್ನುವ ಕೊರಗಿನ ನಡುವೆಯೇ ಅತಿ ಕಡಿಮೆ ಬೆಲೆಯಲ್ಲಿ ಬಲಿಷ್ಠವಾದ ಯಂತ್ರವನ್ನು ತಯಾರಿಸುವ ಮೂಲಕ ಹುಣಸೆ ಕೃಷಿಯಲ್ಲಿ ಚಂದ್ರಶೇಖರ ಹೊಸ ಕ್ರಾಂತಿ ಮಾಡಿದ್ದಾರೆ.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸಿದ್ದನಕಟ್ಟೆ ಗ್ರಾಮದ ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಚಂದ್ರಶೇಖರ ಅವರು ಹುಣಸೆ ಬಿಡಿಸುವುದಕ್ಕೆ ತಾವೇ ಯಂತ್ರವನ್ನು ಮಾಡಿಕೊಂಡಿದ್ದಾರೆ. ಅವಶ್ಯಕತೆಯೇ ಆವಿಷ್ಕಾರಕ್ಕೆ ಮೂಲ ಕಾರಣ ಎನ್ನುವಂತೆ ಈ ಹುಣಸೆ ಯಂತ್ರ ತಯಾರಾಯಿತು. ತಂದೆ ಮೃತಪಟ್ಟಿದ್ದರಿಂದ ಮನೆ, ಕೃಷಿ ಜವಾಬ್ದಾರಿಗಳನ್ನು ನಾವೇ ಮಾಡಿಕೊಳ್ಳಬೇಕಾಗಿತ್ತು. ಕಡು ಬಡತನದಲ್ಲಿ ವಿದ್ಯಾಭ್ಯಾಸ ಮಾಡಿದೆ. ತೋಟದ ಕೆಲಸ, ಶಿಕ್ಷಣ ಎನ್ನುವಂತಹ ಸವಾಲುಗಳು ನನ್ನ ಮುಂದಿತ್ತು. ಒಂದೊಂದೇ ಪರಿಹಾರಗಳನ್ನು ನಾನೇ ಕಂಡುಕೊಂಡೆ ಎನ್ನುವುದು ಚಂದ್ರಶೇಖರ್ ಅವರ ಮಾತು. ಈಗ ಅವರು ಹುಣಸೆ ಕೃಷಿ ಸೇರಿದಂತೆ ವಿವಿಧ ಕೃಷಿಗೆ ಸಂಬಂಧಿಸಿದಂತೆ 50ಕ್ಕೂ ಹೆಚ್ಚು ಯಂತ್ರಗಳನ್ನು ತಯಾರಿಸಿದ್ದಾರೆ. ಟ್ರ್ಯಾಕ್ಟರ್ ಅಟ್ಯಾಚ್‌ಮೆಂಟ್‌ಗಳ ಸಹಾಯದೊಂದಿಗೆ ತಯಾರಾಗಿರುವ ಯಂತ್ರಗಳ ಸಂಖ್ಯೆಯೇ ಹೆಚ್ಚಾಗಿರುವುದು ವಿಶೇಷ. ಇನ್ನು ಚಂದ್ರಶೇಖರ ಅವರೊಂದಿಗೆ ಕೃಷಿ ಹಾಗೂ ಕೃಷಿ ಯಂತ್ರಗಳ ತಯಾರಿಕೆಯಲ್ಲಿ ಅವರ ಪತ್ನಿ ಪಂಕಜಾ ಅವರ ಸಹಕಾರ, ನೆರವೂ ಸಹ ಇದೆ.
Tamarind Farming: ಹೇಗಿದೆ ಹುಣಸೆ ಯಂತ್ರ
ಈ ಹುಣಸೆ ಯಂತ್ರವನ್ನು ಸಂಪೂರ್ಣವಾಗಿ ಟ್ರ್ಯಾಕ್ಟರ್ ಸಹಾಯದಿಂದ ನಿರ್ಮಾಣ ಮಾಡಲಾಗಿದೆ. ಹುಣಸೆ ಮರದ ಎತ್ತರಕ್ಕೆ ಈ ಯಂತ್ರವನ್ನು ಎತ್ತರಿಸಿಕೊಳ್ಳಬಹುದಾಗಿದೆ. ಟ್ರ್ಯಾಕ್ಟರ್‌ನ ಟ್ರೈಲರ್ ಕನೆಕ್ಟರ್ ರಬ್ಬರ್ (Trailer Connector Rubber)ಗಳಿಗೆ ಯಂತ್ರವನ್ನು ಅಳವಡಿಸಲಾಗಿದೆ. ಸೆಂಟ್ರಾಂಫ್ ಗ್ರಾವಿಟಿಯನ್ನು / ಹುಣಸೆ ಬಿಡಿಸುವಾಗ ಯಂತ್ರದ ಮೇಲೆ ಇರುವ ಕೃಷಿಕರು ಬೀಳದಂತೆ ಯಂತ್ರದ ಸಾಧನಗಳನ್ನು ಅಳವಡಿಸಲಾಗಿದೆ. ಈ ಹುಣಸೆ ಯಂತ್ರವು ಮೂರು ರೀತಿಯಲ್ಲಿ ಕೆಲಸ ಮಾಡುತ್ತದೆ. ಸುಮಾರು 20 ಅಡಿಗಳ ವರೆಗೆ ಎತ್ತರವನ್ನು ಒಳಗೊಂಡಿದೆ. ಯಾವುದೇ ಆತಂಕವಿಲ್ಲದೆ ರೈತರು ಈ ಯಂತ್ರದ ಮೇಲೆ ಹತ್ತಿ ಹುಣಸೆ ಹಣ್ಣನ್ನು ಬಿಡಿಸಬಹುದಾಗಿದೆ. ಬ್ರೇಕ್ ಸಿಸ್ಟಮ್ ಸಹ ಈ ಯಂತ್ರದಲ್ಲಿ ಇದೆ. ಅಲ್ಲದೆ ಸೇಪ್ಟಿ ಲಾಕರ್ ಸಹ ಅಳವಡಿಸಲಾಗಿದೆ. ಯಂತ್ರದ ಒಟ್ಟಾರೆ ತೂಕವು 200 ಕೆ.ಜಿ ಇದೆ.
ಹುಣಸೆ ಕೃಷಿ / ಯಂತ್ರದ ಬಗ್ಗೆ ಹೆಚ್ಚಿನ ಮಾಹಿತಿಗೆ
ಪದ್ಮರಾಜು, ತೋವಿನಕೆರೆ, ತುಮಕೂರು ಜಿಲ್ಲೆ ದೂರವಾಣಿ ಸಂಖ್ಯೆ 9945323787 ಇವರನ್ನು ಸಂಪರ್ಕಿಸಬಹುದು.












Click it and Unblock the Notifications