NWKRTC ನೇಮಕಾತಿ: ಏಪ್ರಿಲ್‌ನಲ್ಲಿ ವಿವಿಧ ಹುದ್ದೆಗಳ ಪರೀಕ್ಷೆ, ವೇಳಾಪಟ್ಟಿ ಪ್ರಕಟಿಸಿದ ಕೆಇಎ, ಪ್ರವೇಶ ಪತ್ರದ ಅಪ್ಡೇಟ್
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೇಮಕಾತಿಗೆ ಸಂಬಂಧಿಸಿದಂತೆ ಯಾರೆಲ್ಲ ಅರ್ಜಿ ಸಲ್ಲಿಸಿದ್ದರೋ ಅವರಿಗೆ ಶುಭ ಸುದ್ದಿ ನೀಡಿದೆ. ಸಂಸ್ಥೆಯ ಖಾಲಿ ಹುದ್ದೆಗಳ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟಿಸಿದೆ. ಕರ್ನಾಟಕದ ಎರಡು ಕಡೆಗಳಲ್ಲಿ ಪರೀಕ್ಷೆ ನಡೆಯಲಿದ್ದು, ದಿನಾಂಕ ಗಮನಿಸಿ ಪರೀಕ್ಷಾರ್ಥಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಪ್ರಾಧಿಕಾರದ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ತಿಳಿಸಿದ್ದಾರೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ (NWKRTC) ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಏಪ್ರಿಲ್ 9ರಂದು ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ಲಿಖಿತ ಪರೀಕ್ಷೆ ನಡೆಸಲಾಗುವುದು. ಈ ಸಂಬಂಧ ದಿನಾಂಕ, ಸಮಯ, ಪರೀಕ್ಷೆ, ಅಂಕಗಳು ಸೇರಿದಂತೆ ಅಗತ್ಯ ಮಾಹಿತಿ ಒಳಗೊಂಡ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.

ಖಾಲಿ ಹುದ್ದೆಗಳು ಯಾವುವು?
ಸಹಾಯಕ ಆಡಳಿತಾಧಿಕಾರಿ, ಸಹಾಯಕ ಲೆಕ್ಕಾಧಿಕಾರಿ, ಸಹಾಯಕ ಕಾನೂನು ಅಧಿಕಾರಿ, ಸಹಾಯಕ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ, ಸಹಾಯಕ ತಾಂತ್ರಿಕ ಶಿಲ್ಪಿ ಹಾಗೂ ಸಹಾಯಕ ಸಂಚಾರ ವ್ಯವಸ್ಥಾಪಕ ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಈ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಳ್ಳಬಹುದು. ಸದ್ಯದಲ್ಲೇ ಪರೀಕ್ಷೆಗೆ ಪ್ರವೇಶ ಪತ್ರ ಬಿಡುಗಡೆ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು https://cetonline.karnataka.gov.in/kea/ ಭೇಟಿ ನೀಡುವಂತೆ ಕೋರಲಾಗಿದೆ.
ಪರೀಕ್ಷೆ ವೇಳಾಪಟ್ಟಿ, ಸಮಯ, ಹೆಚ್ಚಿನ ವಿವರ
NWKRTC ನೇಮಕಾತಿ ಪರೀಕ್ಷೆ 2026 ಏಪ್ರಿಲ್ 9ರ ಗುರುವಾರದಂದು ಪರೀಕ್ಷೆಗಳು ನಡೆಯಲಿವೆ. ಅಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 12.30 ರವರೆಗೆ ಪತ್ರಿಕೆ-1ರ ಪರೀಕ್ಷೆ ನಡೆಯಲಿದೆ. ಮಧ್ಯಾಹ್ನ 2.30 ರಿಂದ ಸಂಜೆ 4.30 ರವರೆಗೆ ನಿರ್ದಿಷ್ಟ ಪತ್ರಿಕೆ-2ರ ಪರೀಕ್ಷೆಯನ್ನು ಆಯೋಜಿಸಲಾಗಿದೆ. ಪ್ರತಿ ಪತ್ರಿಕೆಯು 100 ಪ್ರಶ್ನೆಗಳನ್ನು ಒಳಗೊಂಡಿದ್ದು, ಒಟ್ಟು 300 ಗರಿಷ್ಠ ಅಂಕ ಹೊಂದಿವೆ. ಪರೀಕ್ಷಾ ಕೇಂದ್ರದಲ್ಲಿ ಕಟ್ಟುನಿಟ್ಟಿನ ತಪಾಸಣೆ ಇರುವ ಕಾರಣ ಅಭ್ಯರ್ಥಿಗಳು ಪರೀಕ್ಷೆ ಆರಂಭದ ಕನಿಷ್ಠ ಎರಡು ಗಂಟೆ ಮುನ್ನವೆ ಪರೀಕ್ಷೇ ಕೇಂದ್ರದಲ್ಲಿ ಹಾಜರಿರಬೇಕು ಎಂದು ಪ್ರಾಧಿಕಾರ ಸೂಚನೆ ನೀಡಿದೆ.
ಋಣಾತ್ಮಕ ಮೌಲ್ಯಮಾಪನ
ಋಣಾತ್ಮಕ ಮೌಲ್ಯಮಾಪನದ ಆಧಾರದಲ್ಲಿ ಪರೀಕ್ಷೆಯ ಅಂಕಗಳನ್ನು ನಿರ್ಧರಿಸಲಾಗುತ್ತದೆ. ಅಂದರೆ ಪ್ರತಿ ಒಂದು ತಪ್ಪು ಉತ್ತರಕ್ಕೆ ಗರಿಷ್ಠ ಅಂಕಗಳ ಪೈಕಿ ಕಾಲು ಭಾಗದಷ್ಟು ಅಂದರೆ 0.75 ಅಂಕಗಳನ್ನು ಕಡಿತವಾಗಲಿದೆ. ನಾಲ್ಕು ತಪ್ಪಿಗೆ ಒಂದು ಅಂಕ ಕಡಿತವಾಗಲಿದೆ. ಪ್ರಶ್ನೆಗೆ ಉತ್ತರ ಗೊತ್ತಿರದೇ ಇದ್ದಾಗ ಉತ್ತರಿಸಲು ಇಚ್ಛಿಸದಿದ್ದರೆ ಓಎಂಆರ್ ಶೀಟ್‌ನಲ್ಲಿ ನೀಡಲಾಗಿರುವ ಐದನೇ ವೃತ್ತವನ್ನು ಕಡ್ಡಾಯವಾಗಿ ಭರ್ತಿಗೊಳಿಸಬೇಕು. ಅದಕ್ಕೆ ಪರೀಕ್ಷೆ ಕೊನೆಯ ಐದು ನಿಮಿಷ ಸಮಯ ನೀಡಲಾಗುತ್ತದೆ. ಒಂದು ವೇಳೆ ಯಾವುದೇ ವೃತ್ತ ತುಂಬದಿದ್ದರೂ ಸಹಿತ 0.75 ಅಂಕ ಕಡಿತಗೊಳಿಸಲಾಗುತ್ತದೆ ಎಂದು ಕೆಇಎ ವಿವರಿಸಿದೆ.
ಕೆಇಎ ನೇಮಕಾತಿ ಅಧಿಸೂಚನೆ
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಈ ಹಿಂದೆ 2025ರ ನವೆಂಬರ್ 19ರಂದು ಅಧಿಸೂಚನೆ ಹೊರಡಿಸಿತ್ತು. ಇದೇ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿನ ಸದರಿ ಖಾಲಿ ಹುದ್ದೆಗಳ ನೇಮಕಾತಿಗೆ ಪ್ರಕ್ರಿಯೆ ಆರಂಭಿಸಿರುವ ಬಗ್ಗೆ ಮಾಹಿತಿ ನೀಡಿ ಅರ್ಜಿ ಆಹ್ವಾನಿಸಿತ್ತು. ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳು ಪರೀಕ್ಷೆ ಬಗ್ಗೆ ಕುತೂಹಲ ಹೊಂದಿದ್ದು, ಅವರ ನಿರೀಕ್ಷೆಯಂತೆ ವೇಳಾಪಟ್ಟಿ ಪ್ರಕಟವಾಗಿದೆ.












Click it and Unblock the Notifications