• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ್ವಾಮೀಜಿಗಳಾಗುವುದೆಂದರೆ ಅಪರಿಗ್ರಹದ ಪರಾಕಾಷ್ಠೆ!

By Staff
|
ನಮ್ಮಲ್ಲಿ ಅನೇಕರಿಗೆ ಸ್ವಾಮೀಜಿಗಳಾಗುವುದೆಂದರೆ ಬಹಳ ನಿರಾಯಾಸದ, ಶ್ರಮವಿಲ್ಲದ ಬದುಕು ಎಂಬ ಭಾವನೆಯಿದೆ. ಜಗತ್ತಿನ ಯಾವ ಜಂಜಡಗಳನ್ನೂ ತಲೆಗೆಹಚ್ಚಿಕೊಳ್ಳದ ಅತೀವ ಸುಖದ ಬದುಕು ಎಂಬ ಕಲ್ಪನೆಯಿದೆ. ಅದೊಂದು ಜವಾಬ್ದಾರಿಯಿಲ್ಲದ ಸುಖ ಎಂದು ಅಂದುಕೊಂಡವರೂ ಉಂಟು. ಆದರೆ...

* ವಿಶ್ವೇಶ್ವರ ಭಟ್

ಶುದ್ಧ ಪಡಪೋಶಿ ಆದರೆ ಪ್ರಗತಿಪರ, ಬುದ್ಧಿಜೀವಿ ಎಂದೆಲ್ಲ ಕರೆದುಕೊಳ್ಳುತ್ತಿರುವ ವ್ಯಕ್ತಿಯೊಬ್ಬರು ಇತ್ತೀಚೆಗೆ ಮಠಾಧೀಶರು, ಸ್ವಾಮೀಜಿಗಳ ಬಗ್ಗೆ ತೀರಾ ಕ್ಷುಲ್ಲಕ ಅಥವಾ ತಮ್ಮ ವ್ಯಕ್ತಿತ್ವಕ್ಕೆ ಸರಿಹೊಂದುವ ಮಾತುಗಳನ್ನು ಹೇಳಿದರು. ಅವರ ಪ್ರಕಾರ, ಸ್ವಾಮೀಜಿಗಳೆಂದರೆ ಸುಖಜೀವಿಗಳು, ಜವಾಬ್ದಾರಿಯಿಲ್ಲದವರು, ಪರಾವಲಂಬಿಗಳು, ಭಕ್ತರು ಕೊಡುವ ಹಣ್ಣು-ಹಂಪಲು ತಿಂದು ದಕ್ಷಿಣೆ ಹಣದಲ್ಲಿ ಮಜಾ ಉಡಾಯಿಸುವವರು, ಜನರ ಕಣ್ಣಲ್ಲಿ ಸಾಕ್ಷಾತ್ ಭಗವಂತನೆಂದು ಕರೆಸಿಕೊಂಡು ಜನರಿಗೇ ಮಂಕುಬೂದಿ ಎರಚುವವರು... ಇದೇ ಧಾಟಿಯಲ್ಲಿ ಅವರ ಮಾತು ಮುಂದುವರಿದಿತ್ತು. ತಾವು ಯಾವ ಸ್ವಾಮೀಜಿಯವರನ್ನು ಉದ್ದೇಶಿಸಿ ಈ ಆಣಿಮುತ್ತುಗಳನ್ನು ಉದುರಿಸಿದ್ದು ಎಂಬುದನ್ನು ಸ್ಪಷ್ಟಪಡಿಸಿದ್ದರೆ ಗೋಟಾವಳಿಯೇ ಇರುತ್ತಿರಲಿಲ್ಲ. ಆದರೆ ಸ್ವಾಮೀಜಿ ಅಥವಾ ಮಠಾಧೀಶರೆಲ್ಲ ಹೀಗೇ ಎಂದು ಹೇಳಿದರೆ ಅವರ ಮಾತುಗಳನ್ನು ಒಪ್ಪಲು ಆಗುವುದಿಲ್ಲ ಎನ್ನುವುದಕ್ಕಿಂತ ಇಂಥ ಉದ್ಧಟ ಹೇಳಿಕೆಯನ್ನು ಪ್ರಶ್ನಿಸಬೇಕಾಗುತ್ತದೆ.

ಹಿಂದಿನ ವರ್ಷ ಹಿಂಸಾರಸಿಕ, ಪಕ್ಕಾ ತಿರಸಟ್ಟು ಪತ್ರಕರ್ತನೊಬ್ಬ ಜೈನಮುನಿಗಳಾದ ಮುನಿಶ್ರೀ ತರುಣಸಾಗರ ಅವರ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಬರೆದು, ಹುಚ್ಚುಪ್ಯಾಲಿ ಕೋತಿ ಸಂದಿಯೊಳಗೆ ಅದೇನನ್ನೋ ಸಿಕ್ಕಿಸಿಕೊಂಡಿತು ಎಂಬ ಹಾಗೆ ಫಜೀತಿಗೆ ಒಳಗಾಗಿದ್ದ. ಅವನ ಪ್ರಕಾರ ಸಿನಿಮಾನಟಿ ಬೆತ್ತಲೆಯಾದರೆ ಅಶ್ಲೀಲ ಎನ್ನುವುದಾದರೆ, ಜೈನಮುನಿಗಳು ಬೆತ್ತಲೆಯಾಗಿ ತಿರುಗಾಡುವುದು ಅಶ್ಲೀಲವಲ್ಲವೇ? ಈ ಕಾರಣಕ್ಕೆ ಜೈನಮುನಿಗಳಾದ ತರುಣಸಾಗರ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಬರೆದಿದ್ದ. ಅವನ ಈ ಮಾತನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲವೆಂಬುದು ಬೇರೆ ಮಾತು.

ಸ್ವಯಂಘೋಷಿತ ಬುದ್ಧಿಜೀವಿಗಳೆನಿಸಿಕೊಂಡವರು ಆಗಾಗ ಸಾಧು-ಸಂತರು, ಮಠಾಧೀಶರು, ಸ್ವಾಮೀಜಿಗಳ ಬಗ್ಗೆ ಹೇಳುತ್ತಿರುತ್ತಾರೆ. ಇದು ಹೊಸತೇನೂ ಅಲ್ಲ. ಆ ಹೇಳಿಕೆಗಳಲ್ಲೂ ಹೊಸತನವೇನೂ ಇಲ್ಲ. ಅವು ಆಗಾಗ ಬಂದು ಹೋಗುತ್ತಿರುತ್ತವೆ. ಅಷ್ಟರಮಟ್ಟಿಗೆ ಅವರು ಪ್ರಗತಿಪರ ಅಥವಾ ಬುದ್ಧಿಜೀವಿಗಳು ಎಂದು ಕರೆಸಿಕೊಳ್ಳುತ್ತಾರೆ ಅಥವಾ ತಾವು ಹಾಗೆ ಎಂದು ಸಮಾಧಾನಪಟ್ಟುಕೊಳ್ಳುತ್ತಾರೆ. ಬುದ್ಧಿಜೀವಿಗಳೂ ತಮ್ಮ ಅಸ್ತಿತ್ವ ಉಳಿಸಿಕೊಳ್ಳಬೇಕಲ್ಲ? ಹೀಗಾಗಿ ಆಗಾಗ ಹೀಗೆ ಹೇಳುವ ಅನಿವಾರ್ಯತೆ ಅವರಿಗಿದೆ ಎಂದು ಅವರ ಮಾತುಗಳನ್ನು ಕಸದಬುಟ್ಟಿಗೆ ಹಾಕುವುದು ಒಳ್ಳೆಯದು. ಆದ್ದರಿಂದ ಈ ಮಾತುಗಳನ್ನೂ ಅದನ್ನು ಎಲ್ಲಿ ಹಾಕಬೇಕೋ ಅಲ್ಲಿಗೆ ಹಾಕಿಬಿಡೋಣ. ಹೆಚ್ಚಿನ ಮಹತ್ವ ಕೊಡಬೇಕಿಲ್ಲ.

ನಾನು ಇತ್ತೀಚೆಗೆ ಓಶೋ ಉಪನಿಶದ್' ಓದುತ್ತಿದ್ದೆ. ಅದರಲ್ಲಿನ ಒಂದು ವಾಕ್ಯ ಹೀಗಿದೆ- "ಭಾರತವು ಜಗತ್ತಿಗೆ ಪ್ಲೇಟೋ, ಅರಿಸ್ಟಾಟಲ್, ಆಕ್ಟಿವಸ್, ಹೆಗೆಲ್ ಅವರಂಥ ಮಹಾನ್ ದಾರ್ಶನಿಕರನ್ನು ಕೊಟ್ಟಿಲ್ಲದಿರಬಹುದು. ಆದರೆ ಜಗತ್ತಿನ ಯಾವ ದೇಶವೂ ಒಬ್ಬ ಗೌತಮಬುದ್ಧ, ನೇಮಿನಾಥ, ಬಾಹುಬಲಿ, ಆದಿನಾಥ, ಕಬೀರ, ತಿರುವಳ್ಳುವರ್, ಮಹಾವೀರನಂಥ ವ್ಯಕ್ತಿಯನ್ನು ನೀಡಿಲ್ಲ. ಪಶ್ಚಿಮದ ದೇಶಗಳು ವಿಜ್ಞಾನಿ, ಕವಿ, ಕಲಾವಿದರನ್ನು ಕೊಟ್ಟಿರಬಹುದು. ಆದರೆ ಅವು ಸಾಧು-ಸಂತರನ್ನು ಕೊಟ್ಟಿಲ್ಲ. ಸಂತರು-ಸ್ವಾಮೀಜಿಗಳು ಭಾರತದ ಏಕಾಧಿಪತ್ಯ. ಸಂತ-ಸ್ವಾಮೀಜಿಗಳಿದ್ದಾರಲ್ಲ ಅವರು ಸಂಪೂರ್ಣ ಭಿನ್ನವಾದ ಮಾನವಜೀವಿಗಳು. ಅವರು ಬರೀ ಮೇಧಾವಿಗಳಲ್ಲ, ಕಲಾವಿದರಲ್ಲ, ವಿಜ್ಞಾನಿಗಳಲ್ಲ. ಅವರು ದೈವಿಕತೆಯ ವಾಹಕ ವ್ಯಕ್ತಿಗಳು. ಅವರು ದೇವತ್ವವನ್ನು ಆಹ್ವಾನಿಸುವವರು. ಅವೆಷ್ಟೋ ಸಾವಿರ ವರ್ಷಗಳಿಂದ ಅವರು ದೈವತ್ವವನ್ನು ಈ ದೇಶದ ಮಣ್ಣಿನಲ್ಲಿ ತುಂಬುತ್ತಾ ಬಂದಿದ್ದಾರೆ. ಅದಕ್ಕಾಗಿ ಭಾರತ ಉಳಿದೆಲ್ಲ ದೇಶಗಳಿಂದ ಭಿನ್ನವಾಗಿದೆ. ಈ ದೇಶದಲ್ಲಿರುವಷ್ಟು ಸಾಧು-ಸಂತರು, ಸ್ವಾಮೀಜಿಗಳು ಮತ್ತ್ಯಾವ ದೇಶದಲ್ಲೂ ಇಲ್ಲ. ಹಿಮಾಲಯದಲ್ಲಿ ಲಕ್ಷಾಂತರ ಸಾಧು-ಸಂತರು ಇದ್ದಾರೆ. ಅವರೆಲ್ಲ ಸತ್ಯದ ಅನ್ವೇಷಕರು, ಪ್ರತಿಪಾದಕರು. ಅವರನ್ನೆಲ್ಲ ಅರಿಯಬೇಕಾದರೆ ಪ್ರತ್ಯೇಕ ಮನಸ್ಥಿತಿ ಬೇಕಾಗುತ್ತದೆ. ಇಲ್ಲದಿದ್ದರೆ ಭಾರತದ ಸಾಧು-ಸಂತರು, ಸ್ವಾಮೀಜಿಗಳು ಅರ್ಥವಾಗುವುದಿಲ್ಲ. ಈ ಕಾರಣಕ್ಕಾಗಿ ಅವರನ್ನು ಅರಸಿಕೊಂಡು ಅಸಂಖ್ಯ ಜನ ಬರುತ್ತಾರೆ. ಭಾರತ ಬಡದೇಶವಾಗಿರಬಹುದು. ಆದರೆ ಇದು ಮೂಲತಃ ಶ್ರೀಮಂತ ದೇಶ. ಈ ಶ್ರೀಮಂತಿಕೆಯಿದೆಯಲ್ಲ ಅದು ಒಳಗಿನದು, ಅಗೋಚರವಾದುದು. ಈ ಬಡದೇಶದ ಸಂತರು, ಸ್ವಾಮೀಜಿಗಳು ಮಾನವ ಜೀವಿಗಳಿಗೆ ಕೊಡಲು ಸಾಧ್ಯವಾಗುವ ಎಲ್ಲ ಮಹಾನ್ ಐಶ್ವರ್ಯಗಳನ್ನು ಕೊಡಬಲ್ಲರು."

ಸ್ವಾಮಿ ರಾಮ ಅವರು ತಮ್ಮ ಹಿಮಾಲಯನ್ ಮಾಸ್ಟರ್‍ಸ್' ಕೃತಿಯಲ್ಲಿ ಸ್ವಾಮೀಜಿಗಳು, ಸಂತರು ಈ ದೇಶದ ಕಣಕಣವನ್ನು ಶ್ರೀಮಂತಗೊಳಿಸಿದ್ದಾರೆ. ಅವರು ಕೇವಲ ದೈವೀ ಆರಾಧಕರಲ್ಲ. ನಮ್ಮ ಲೌಕಿಕ ಕಷ್ಟಗಳಿಗೆ ಅಧ್ಯಾತ್ಮದ ಮೂಲಕ ಪರಿಹಾರ ನೀಡಬಲ್ಲ ಸಾಮಾನ್ಯ ವೈದ್ಯರು. ಈ ದೇಶದಲ್ಲಿ ಇಷ್ಟೊಂದು ಸಮಸ್ಯೆಗಳಿದ್ದರೂ ಜನ ಸುಖ, ಸಮಾಧಾನದಿಂದ ಇರುವುದಾದರೆ ಅದಕ್ಕೆ ಸಂತಗಣವೇ ಕಾರಣ" ಎಂದು ಹೇಳಿದ್ದಾರೆ. ಓಶೋ ಉಪನಿಶದ್‌ನಲ್ಲಿರುವ ಒಂದು ವಾಕ್ಯ ಸ್ವಾಮೀಜಿಗಳ ಕುರಿತಾದ್ದು. ಅದನ್ನು ಗಮನಿಸಬೇಕು- ಎಲ್ಲರಿಗೂ ಸ್ವಾಮೀಜಿಗಳಾಗುವ ಅರ್ಹತೆಯಿರುವುದಿಲ್ಲ. ಅವರು ಜೀವನದಲ್ಲಿ ಎಲ್ಲವನ್ನೂ ತ್ಯಜಿಸಿದವರು. ಸನ್ಯಾಸತ್ವದಂಥ ಕಠಿಣತಮ ಪರೀಕ್ಷೆ ಮತ್ತೊಂದಿಲ್ಲ. ಸನ್ಯಾಸಿ ಎಲ್ಲ ಆಸೆಗಳಿಂದ ಮುಕ್ತನಾದವನು. ಆತ ಒಂದು ಸತ್ಯವನ್ನು ಅರಸಿಕೊಂಡು ಹೊರಟವನು. ಇಂದ್ರಿಯ ನಿಗ್ರಹದಂಥ ಸತ್ವಪರೀಕ್ಷೆ ಮನುಷ್ಯನಿಗೆ ಮತ್ತೊಂದಿಲ್ಲ. ಸನ್ಯಾಸಿಯಷ್ಟು ದೇಹದಂಡನೆಯನ್ನು ಯಾರೂ ಅನುಭವಿಸಲಾರರು.'

ಸ್ವಾಮೀಜಿಗಳು, ಮಠಾಧೀಶರದ್ದೂ ಹೆಚ್ಚೂಕಮ್ಮಿ ಇದೇ ಬದುಕು. ದೇಹದಂಡನೆಯ ಬದುಕು. ಅದನ್ನೇ ಐಶಾರಾಮಿ, ಜವಾಬ್ದಾರಿಯಿಲ್ಲದ ಜೀವನವೆಂದರೆ ಹೇಗೆ? ನಮ್ಮಲ್ಲಿ ಅನೇಕರಿಗೆ ಸ್ವಾಮೀಜಿಗಳಾಗುವುದೆಂದರೆ ಬಹಳ ನಿರಾಯಾಸದ, ಶ್ರಮವಿಲ್ಲದ ಬದುಕು ಎಂಬ ಭಾವನೆಯಿದೆ. ಜಗತ್ತಿನ ಯಾವ ಜಂಜಡಗಳನ್ನೂ ತಲೆಗೆಹಚ್ಚಿಕೊಳ್ಳದ ಅತೀವ ಸುಖದ ಬದುಕು ಎಂಬ ಕಲ್ಪನೆಯಿದೆ. ಅದೊಂದು ಜವಾಬ್ದಾರಿಯಿಲ್ಲದ ಸುಖ ಎಂದು ಅಂದುಕೊಂಡವರೂ ಉಂಟು. ಹಾಗೆ ಭಾವಿಸಿದವರು ತ್ರಯಂಭಕೇಶ್ವರ ಶಾಸ್ತ್ರಿಗಳ ಸನ್ಯಾಸಿಯ ಬದುಕು' ಎಂಬ ಗ್ರಂಥವನ್ನು ಓದಬೇಕು. 1942ರಲ್ಲಿ ಪ್ರಕಟಗೊಂಡ ಈ ಕೃತಿಯಲ್ಲಿ ಅವರು ಸ್ವಾಮೀಜಿಗಳ ಜೀವನದ ಕಷ್ಟ-ಸುಖಗಳನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದಾರೆ- ಸ್ವಾಮೀಜಿಗಳು ಸರ್ವಸಂಗ ಪರಿತ್ಯಾಗಿಗಳು. ಯಾವ ಸ್ವಾಮೀಜಿಯೂ ಏಕಾಏಕಿ ಹಾಗೆ ಆದವರಲ್ಲ. ಸ್ವಾಮಿ ಪಟ್ಟಕ್ಕೇರಲು ಅರ್ಹತೆಗಳಿವೆ. ಶಾರೀರಿಕ ಪರೀಕ್ಷೆಗಳಿವೆ. ಪಟ್ಟವೇರಿದ ನಂತರ ಅವರು ಪೀಠದ ಮರ್‍ಯಾದೆ ಕಾಪಾಡಲು ಹಲವಾರು ಕಟ್ಟಳೆಗಳ ಮಿತಿಯಲ್ಲಿಯೇ ಕೆಲಸ ಮಾಡಬೇಕಾಗುತ್ತದೆ. ಸ್ವಾಮೀಜಿಗಳು ಎಲ್ಲ ಆಸೆಗಳಿಂದ ಹೊರತಾಗಿಲ್ಲದಿರಬಹುದು. ಆದರೆ ಯಾವ ಆಸೆಗಳನ್ನೂ ಪ್ರಕಟಪಡಿಸುವಂತಿಲ್ಲ. ಅವರು ಯಾವ ಆಸೆಯನ್ನು ಈಡೇರಿಸಿಕೊಂಡರೂ ಅದು ಹೊರಜಗತ್ತಿಗೆ ಗೊತ್ತಾಗುತ್ತದೆ. ಅದರಿಂದ ಅವರ ಸನ್ಯಾಸತ್ವಕ್ಕೇ ಧಕ್ಕೆಯಾಗುತ್ತದೆ. ಆದ್ದರಿಂದ ಸ್ವಾಮೀಜಿಗಳು ತಮ್ಮ ಆಸೆಯನ್ನು ನಿಗ್ರಹಿಸಲು ನಿತ್ಯವೂ ಶ್ರಮಿಸಬೇಕಾಗುತ್ತದೆ. ಇದೇನು ಸಣ್ಣ ಕೆಲಸವಲ್ಲ. ಜನರು ಸನ್ಯಾಸಿಗಳ ಕಾಲಿಗೆರಗಬಹುದು, ಪಾದಪೂಜೆ ಮಾಡಬಹುದು. ಪಲ್ಲಕ್ಕಿಯಲ್ಲಿ ಹೊತ್ತು ಮೆರೆಸಬಹುದು. ಆದರೆ ಅವರು ತಮ್ಮ ಆಸೆಗಳನ್ನು ಈಡೇರಿಸಿಕೊಳ್ಳದಷ್ಟು ಅಶಕ್ತರು ಹಾಗೂ ಆಸೆಗಳನ್ನು ಅದುಮಿಟ್ಟುಕೊಳ್ಳುವಷ್ಟು ಗಟ್ಟಿಗರು. ಸ್ವಾಮೀಜಿಗಳ ಕಷ್ಟ ಅವರು ಪೀಠವೇರುತ್ತಿದ್ದಂತೆ ಆರಂಭವಾಗುತ್ತದೆ. ಅದೊಂದು ಮುಳ್ಳಿನ ಪೀಠ. ಅದರ ಮೇಲೆ ಕುಳಿತು ನೋಯಿಸಿಕೊಂಡವರಿಗೆ ಗೊತ್ತು ನೋವೆಷ್ಟು, ನಂಜೆಷ್ಟು, ನಲಿವೆಷ್ಟು ಎಂಬುದು. ಹೀಗಾಗಿ ಸ್ವಾಮೀಜಿಗಳಾಗಲು ಯಾರೂ ಮುಂದೆ ಬರುವುದಿಲ್ಲ. ಅದೊಂದು ಅಪೂರ್ವ ತಪಸ್ಸು."

ಮುಂದೆ ಓದಿ : ಸ್ವಾಮೀಜಿಗಳ ಬದುಕಾದರೂ ಎಂತಹುದು? »

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more