• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ್ವಾಮೀಜಿಗಳ ಬದುಕಾದರೂ ಎಂತಹುದು?

By * ವಿಶ್ವೇಶ್ವರ ಭಟ್
|
ಸ್ವಾಮೀಜಿಗಳದು ವಿಚಿತ್ರ ಬದುಕು. ಅವರಿಗೆ ರಜೆಯೆಂಬುದು ಇಲ್ಲವೇ ಇಲ್ಲ. ನಿಗದಿತ ಸಮಯದ ಕೆಲಸವೆಂಬುದೂ ಇಲ್ಲ. ಹಾಗೆಂದು ಯಾವ ನಿತ್ಯಕರ್ಮ, ವ್ರತಗಳನ್ನೂ ತಪ್ಪಿಸುವ ಹಾಗಿಲ್ಲ. ಬೆಳಗ್ಗೆ ಮುಂಚೆ ಏಳಬೇಕು. ಪ್ರಾತಃವಿಧಿಗಳನ್ನು ಮುಗಿಸಬೇಕು. ಅದೂ ವಿಧಿಬದ್ಧವಾಗಿಯೇ ಜರುಗಬೇಕು. ಅನಂತರ ತಾಸುಗಟ್ಟಲೆ ಪೂಜೆ. ಕೆಲವು ಸ್ವಾಮೀಜಿಗಳು ಬೆಳಗ್ಗೆ ಮೂರಕ್ಕೆದ್ದು ಸೂರ್ಯನಮಸ್ಕಾರ, ಯೋಗದೊಂದಿಗೆ ಆ ದಿನಕ್ಕೆ ಮುನ್ನುಡಿ ಬರೆಯುವುದುಂಟು. (ಸಿದ್ಧಗಂಗಾ ಸ್ವಾಮೀಜಿಯವರಂತೂ ಏಳುವುದು ಬೆಳಗಿನಜಾವ ಎರಡೂ ಮುಕ್ಕಾಲಿಗೆ. ರಾತ್ರಿ ಎಷ್ಟು ಹೊತ್ತಿಗೆ ಮಲಗಿದರೂ ಏಳುವುದು ಅಷ್ಟೊತ್ತಿಗೇ.) ಪೂಜೆಯಾದ ನಂತರವೇ ಉಪಾಹಾರ ಸೇವನೆ. ಒಬ್ಬೊಬ್ಬ ಸ್ವಾಮೀಜಿಯವರದು ಒಂದೊಂದು ಅನುಷ್ಠಾನವಿಧಿಗಳಿದ್ದರೂ ಸಾಮಾನ್ಯವಾಗಿ ಎಲ್ಲರೂ ಈ ಕ್ರಮಗಳನ್ನು ಅನುಸರಿಸಲೇಬೇಕು. ಅಷ್ಟೊತ್ತಿಗೆ ಬೆಳಗಿನ ಒಂಬತ್ತೂವರೆ ಹತ್ತು ಗಂಟೆಯಾಗಿರುತ್ತದೆ.

ಅನಂತರ ಸಾರ್ವಜನಿಕರ, ಭಕ್ತರ ಭೇಟಿ, ಕಾರ್ಯಕ್ರಮ ಆರಂಭವಾದರೆ ಬಿಡುವೆಂಬುದೇ ಇಲ್ಲ. ಪುನಃ ಸಾಯಂಕಾಲ ಆರುಗಂಟೆಗೆ ಪೂಜೆ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮ. ಈ ಮಧ್ಯೆ ಪ್ರವಚನ, ಬೋಧನೆ, ಮಂತ್ರಾಕ್ಷತೆ ನೀಡುವುದು, ತೀರ್ಥಪ್ರಸಾದ ವಿತರಣೆ ನಡೆದಿರುತ್ತದೆ. ದಿನಕ್ಕೆ ಕನಿಷ್ಠ ನೂರು ಜನರನ್ನಾದರೂ ಭೇಟಿ ಮಾಡಬೇಕು. ಒಬ್ಬೊಬ್ಬರದು ಒಂದೊಂದು ಸಮಸ್ಯೆ. ಶಾಲೆ ಸೀಟಿನಿಂದ ಹಿಡಿದು ಚುನಾವಣೆಗೆ ಸೀಟು ಕೊಡಿಸುವ ತನಕ ಮಾತುಗಳು. ಗಂಡ-ಹೆಂಡತಿ ಸಮಸ್ಯೆ, ಗಡಿತಂಟೆ, ಮಗಳಿಗೆ ವರನನ್ನು ಹುಡುಕುವುದು, ಮದುವೆಗೆ ಹಣಕಾಸು ನೀಡುವುದು, ಮಗನಿಗೆ ನೌಕರಿ, ಅಳಿಯನಿಗೆ ಟ್ರಾನ್ಸ್‌ಫರ್, ಸೊಸೆಗೆ ಪ್ರಮೋಶನ್, ಮೊಮ್ಮಗನಿಗೆ ಎಲ್‌ಕೆಜಿಗೊಂದು ಸೀಟು... ಹೀಗೆ ಒಬ್ಬೊಬ್ಬ ಭಕ್ತನೂ ಸಮಸ್ಯೆ, ಬೇಡಿಕೆಗಳ ಗಂಟುಗಳನ್ನು ಹೊತ್ತುಕೊಂಡೇ ಬರುತ್ತಾನೆ. ಸ್ವಾಮೀಜಿಗಳಾದವರು ಯಾರಿಗೂ ಇಲ್ಲ ಎನ್ನಲು ಆಗುವುದಿಲ್ಲ. ಎಲ್ಲರೂ ಭಕ್ತರೇ. ಅದಕ್ಕಿಂತ ಹೆಚ್ಚಾಗಿ ಇಲ್ಲ ಅಂದ್ರೆ ಈ ಸ್ವಾಮಿ ಹತ್ರ ಏನೂ ಆಗೊಲ್ಲ. ಪ್ರಯೋಜನವಿಲ್ಲದ ಸ್ವಾಮಿ" ಅಂತ ಭಕ್ತರೇ ನಾಮ ಎಳೆದುಬಿಡುತ್ತಾರೆ. ಹೀಗಾಗಿ ಯಾವ ಸ್ವಾಮೀಜಿಗಳೂ ಭಕ್ತರನ್ನು ಖಾಲಿ ಕೈಯಲ್ಲಿ ಕಳಿಸುವ ಹಾಗಿಲ್ಲ. ಸ್ವಾಮೀಜಿಯವರನ್ನು ಭೇಟಿ ಮಾಡಲು ಬರದ ವ್ಯಕ್ತಿಗಳಿಲ್ಲ. ಎಲ್ಲ ರೋಗಗಳಿಗೂ ಸ್ವಾಮೀಜಿಗಳೇ ಮದ್ದು. ಎಲ್ಲ ತಾಪತ್ರಯಗಳಿಗೂ ಅವರೇ ಪರಿಹಾರ. ಎಲ್ಲರ ಸಮಸ್ಯೆಗಳನ್ನು ನಿವಾರಿಸುವ ಮುಖ್ಯಮಂತ್ರಿ, ಮಂತ್ರಿ, ಶಾಸಕ, ಸಂಸದರಿಗೆ ಸಮಸ್ಯೆಗಳು ಎದುರಾದರೆ ಅವರಿಗೆ ಸಂಜೀವಿನಿಗಳೆಂದರೆ ಸ್ವಾಮೀಜಿಗಳೇ. ಇನ್ನು ಚುನಾವಣೆಗಳು ಬಂದರೆ ಸ್ವಾಮೀಜಿಗಳೇ ಆಪದ್ಬಾಂಧವರು. ಮಂತ್ರಿಯಾಗಲು, ನಿಗಮ-ಮಂಡಳಿ ಅಧ್ಯಕ್ಷರಾಗಲು, ವಿ.ವಿ. ಉಪಕುಲಪತಿಯಾಗಲು ಸಹ ಸ್ವಾಮೀಜಿಗಳ ಕೃಪಾಕಟಾಕ್ಷ ಬೇಕು. ಈ ಎಲ್ಲ ಬೇಡಿಕೆಗಳನ್ನು ಹೊತ್ತು ಜನರು ಮಠಾಧೀಶರನ್ನು ಭೇಟಿಯಾಗಲು ಬರುತ್ತಾರೆ. ಯಾರನ್ನೂ ಖಾಲಿ ಕೈಯಲ್ಲಿ ಕಳಿಸುವಂತಿಲ್ಲ.

ಮಠಾಧೀಶರಾದವರು ದಿನಕ್ಕೆ ಕನಿಷ್ಠ ಎರಡು ಕಾರ್ಯಕ್ರಮಗಳಲ್ಲಾದರೂ ಭಾಗವಹಿಸಬೇಕು. ಸಾಮಾನ್ಯವಾಗಿ ಕೊನೆಯಲ್ಲಿ ಅವರ ಆಶೀರ್ವಚನ ಇರುವುದರಿಂದ ಕಾರ್ಯ ಕ್ರಮ ಮುಗಿಯುವ ತನಕ ಕುಳಿತುಕೊಳ್ಳಬೇಕಾದ ಅನಿವಾರ್ಯತೆ. ಸ್ವಾಮೀಜಿಯವರ ಮೇಲೆಯೇ ಎಲ್ಲರ ಗಮನ ನೆಟ್ಟಿರುವುದರಿಂದ ಗಂಭೀರವಾಗಿ ವರ್ತಿಸಬೇಕು. ಎಲ್ಲೂ ವರ್ತನೆಯಲ್ಲಿ ಎಡವುವಂತಿಲ್ಲ. ಹಾವಭಾವದಲ್ಲಿ ಸಂಯಮ ಮೀರುವಂತಿಲ್ಲ. ಎಷ್ಟೇ ಸಿಟ್ಟು ಬಂದರೂ ತೋರಿಸಿಕೊಳ್ಳುವಂತಿಲ್ಲ. ಇವೆಲ್ಲವನ್ನೂ ಮುಗುಳ್ನಗೆಯಲ್ಲಿಯೇ ನುಂಗಬೇಕು. ಹಾಗೆಯೇ ಮಾತೂ ಸಹ. ಎಲ್ಲೂ ಮಾತು ತೂಕ ಕಳೆದುಕೊಳ್ಳಬಾರದು. ಅಂಕೆ ಮೀರಬಾರದು. ಸ್ವಾಮೀಜಿಯವರು ಸದಾ ಜಾಗೃತರಾಗಿರಬೇಕು. ಇನ್ನು ಅವರು ಎಲ್ಲ ಆಕರ್ಷಣೆಗಳಿಂದ ದೂರವಿರಬೇಕು. ಸಿನಿಮಾ, ಮನರಂಜನೆ ವರ್ಜ್ಯ. ಕೆಲವು ಸ್ವಾಮಿಗಳಿಗೆ ವಿದೇಶ ಪ್ರಯಾಣವೂ ನಿಷಿದ್ಧ. ಊಟ, ತಿಂಡಿಯಲ್ಲೂ ಸಂಯಮ ಮುಖ್ಯ. ಬಾಯಿಚಪಲ ಎಂದು ಪಿಜ್ಜಾ, ಬರ್ಗರ್, ಪಾನಿಪುರಿ, ಐಸ್‌ಕ್ರೀಮ್‌ಗಳನ್ನೆಲ್ಲ ಸೇವಿಸುವಂತಿಲ್ಲ. ಇನ್ನು ಉಪವಾಸ, ಚಾತುರ್ಮಾಸ್ಯ, ಇನ್ನಿತರ ವ್ರತಗಳೆಲ್ಲ ಅನ್ವಯ. ಕಾಮ, ಕ್ರೋಧ, ಮದ, ಮತ್ಸರಗಳನ್ನು ಪ್ರಕಟಪಡಿಸುವಂತಿಲ್ಲ. ಇಂದ್ರಿಯ ನಿಗ್ರಹಕ್ಕೆ ಪ್ರಥಮ ಆದ್ಯತೆ. ಹಣವಿದೆಯೆಂದೋ, ಭಕ್ತರು ಕೊಡಿಸಿದ್ದಾರೆಂದೋ ಒಳ್ಳೆಯ ಪ್ಯಾಂಟು, ಶರ್ಟ್, ಕೋಟು, ಸೂಟು, ಬೂಟು, ವಾಚು, ಉಂಗುರಗಳನ್ನು ಧರಿಸುವಂತಿಲ್ಲ. ಹ್ಯಾಟು, ಕನ್ನಡಕ, ಚೈನು ಹಾಕುವಂತಿಲ್ಲ. ಅತ್ತರು ಸಿಂಪಡಿಸಿಕೊಳ್ಳುವಂತಿಲ್ಲ. ಕೂದಲಿಗೆ, ಉಗುರಿಗೆ ಬಣ್ಣ ಬಳಿದುಕೊಳ್ಳುವಂತಿಲ್ಲ. ಮೈತುಂಬಾ ಖಾವಿ ಬಟ್ಟೆ, ಮರದ ಪಾದುಕೆಯೇ ಗತಿ. ಒಂದು ದಿನ ಸಹ ತಮ್ಮಿಷ್ಟ ಬಂದ ಹಾಗೆ ಬಿಡುಬೀಸಾಳಾಗಿ ಇರುವಂತಿಲ್ಲ. ಹೆಂಗಸರ ಹತ್ತಿರ ಎರಡು ಮಾತಾಡಿದರೆ ಕಮ್ಮಿ, ಮೂರಾದರೆ ಜಾಸ್ತಿ, ನಾಲ್ಕಾದರೆ ಅಪವಾದ! ತಂದೆ-ತಾಯಿಯನ್ನು ಹಾಗೆ ಕರೆಯುವಂತಿಲ್ಲ. ತಂದೆ-ತಾಯಿ ಎಂಬ ಮಮಕಾರವನ್ನು ಕಡಿದುಕೊಳ್ಳಬೇಕು. ಅವರೆಡೆ ಹೆಚ್ಚಿನ ಪ್ರೀತಿ-ವಾತ್ಸಲ್ಯ ತೋರುವಂತಿಲ್ಲ. ಎಲ್ಲರಂತೆ ಅವರನ್ನೂ ಕಾಣಬೇಕು. ಇದಕ್ಕಿಂತ ಬಲವಾದ ನಿಗ್ರಹ ಇನ್ನೊಂದಿದೆಯಾ?

ಇಂದ್ರಿಯ ನಿಗ್ರಹ, ವ್ರತಾಚರಣೆ, ನಿಯಮನಿಷ್ಠೆ ಪಾಲನೆಯಲ್ಲಿ ಜೈನಮುನಿಗಳು ಇನ್ನೂ ಒಂದು ಕೈ ಮೇಲು. ಕೆಲವು ವರ್ಷಗಳ ಹಿಂದೆ, ಶ್ರವಣಬೆಳಗೊಳದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರೊಂದಿಗೆ ಕೆಲವು ದಿನ ಒಡನಾಡುವ, ಅವರೊಂದಿಗೆ ಸಂಚರಿಸುವ ಸುಯೋಗ ನನಗೆ ಲಭಿಸಿತ್ತು. ಆ ಸಂದರ್ಭದಲ್ಲಿ ಅವರು ಪಾಲಿಸುತ್ತಿದ್ದ ನಿಯಮಗಳು, ಧಾರ್ಮಿಕ ವಿಧಿ-ವಿಧಾನಗಳು, ನಿತ್ಯಾಚರಣೆಗಳನ್ನು ಕಂಡು ಅಚ್ಚರಿಪಟ್ಟಿದ್ದೆ. ಇದನ್ನೇ ಎರಡು ವರ್ಷಗಳ ಹಿಂದೆ ಜೈನಮುನಿ ಮುನಿಶ್ರೀ ತರುಣಸಾಗರ ಅವರಲ್ಲಿ ಕಂಡು ಮೂಕವಿಸ್ಮಿತನಾಗಿದ್ದೆ. ಪ್ರಪಂಚದಲ್ಲಿ, ಜೀವನದಲ್ಲಿ ಏನು ಬೇಕಾದರೂ ಆಗಬಹುದು, ಆದರೆ ಜೈನಮುನಿಯಾಗುವುದು ಮಾತ್ರ ಸಣ್ಣ ಮಾತಲ್ಲ. ಮನುಷ್ಯಮಾತ್ರರಿಂದ ಆಗದ ಕೆಲಸ. ಆದರೆ ಮುನಿಯಾಗಬಯಸಿದರೆ ಅವೆಲ್ಲ ಶಿಷ್ಟಾಚಾರಗಳಿಗೆ ಒಳಗಾಗಲೇಬೇಕು, ನಿಯಮಗಳನ್ನು ಪಾಲಿಸಲೇಬೇಕು. ಸ್ವಲ್ಪವೂ ರಿಯಾಯಿತಿಯಾಗಲಿ, ವಿನಾಯಿತಿಯಾಗಲಿ ಇಲ್ಲವೇ ಇಲ್ಲ. ಮುನಿಶ್ರೀ ತರುಣಸಾಗರ ಹೇಳುತ್ತಿದ್ದರು- ಜೈನಮುನಿಗಳಾಗುವುದು ಸುಲಭವೋ ಕಷ್ಟವೋ ಅದು ಬೇರೆ ಮಾತು. ನೀವು ಮತ್ತೇನೂ ಮಾಡಬೇಡಿ, ನಾಲ್ಕು ಜನರ ಮುಂದೆ ಪಬ್ಲಿಕ್‌ನಲ್ಲಿ ಹತ್ತು ನಿಮಿಷ ಬಟ್ಟೆಬಿಚ್ಚಿ ಬೆತ್ತಲೆಯಾಗಿ ನಿಂತುಕೊಳ್ಳಿ ಸಾಕು, ನೋಡೋಣ ಅದು ನಿಮ್ಮಿಂದ ಆಗುವುದಾ? ಸಾಧ್ಯವೇ ಇಲ್ಲ. ಜೈನಮುನಿಗಳು ಪಾಲಿಸುವ ಇನ್ನಿತರ ನಿಯಮಗಳ ಬಗ್ಗೆ ಮಾತಾಡುವುದು ಬೇಡ."

ಮುನಿಶ್ರೀ ತರುಣಸಾಗರ ಅವರನ್ನೇ ತೆಗೆದುಕೊಳ್ಳಿ. ಅವರು ವಿಮಾನ, ರೈಲು, ಹಡಗು ಏರುವುದಿರಲಿ, ವಾಹನವನ್ನೇ ಹತ್ತುವುದಿಲ್ಲ, ದ್ವಿಚಕ್ರವಾಹನವನ್ನೂ ಮುಟ್ಟುವುದಿಲ್ಲ. ದಿಲ್ಲಿಯಿಂದ ಬೆಂಗಳೂರಿಗೆ ಬರುವುದಿದ್ದರೂ ಕಾಲ್ನಡಿಗೆಯಲ್ಲಿಯೇ ಆಗಮಿಸುತ್ತಾರೆ. ವಾಪಸ್ ಅಲ್ಲಿಗೆ ಹೊಗುವುದಿದ್ದರೂ ಕಾಲ್ನಡಿಗೆಯಲ್ಲೇ. ಅದೇ ಅವರ ವಾಹನ! ಎಂಥ ತುರ್ತುಸ್ಥಿತಿಯಲ್ಲೂ ಅವರು ವಾಹನ ಏರುವುದಿಲ್ಲ. ಅಂಥ ತುರ್ತುಸನ್ನಿವೇಶ ಎದುರಾದರೆ ಅವರನ್ನು ಅನಾಮತ್ತು ನಾಲ್ವರು ಎತ್ತಿಕೊಂಡು ಹೋಗುತ್ತಾರೆಯೇ ಹೊರತು ವಾಹನದಲ್ಲಿ ಕರೆದೊಯ್ಯುವುದಿಲ್ಲ. ಈ ಕಾರಣದಿಂದ ಅವರು ವಿದೇಶ ಪ್ರಯಾಣ ಮಾಡುವ ಛಾನ್ಸೇ ಇಲ್ಲ.

ಮುನಿಗಳ ಆಹಾರಸೇವನೆ ವಿಚಿತ್ರ. ದಿನಕ್ಕೆ ಭಕ್ತರು ನೀಡುವ ಮೂರು ಮುಷ್ಟಿಯೇ ಭೋಜನ. ಬೆಳಗ್ಗೆ ಉಪಾಹಾರವಿಲ್ಲ. ಮಧ್ಯಾಹ್ನ ಹನ್ನೊಂದರೊಳಗೆ ಈ ಮೂರುಮುಷ್ಟಿ ಭೋಜನ ಮುಗಿಯಬೇಕು. ಕಾರಣಾಂತರಗಳಿಂದ ಸಮಯ ಜಾರಿದರೆ ಮರುದಿನವೇ ಆಹಾರ ಸೇವನೆ. ಮಧ್ಯ ತೊಟ್ಟು ನೀರನ್ನೂ ಕುಡಿಯುವಂತಿಲ್ಲ. ಊಟಕ್ಕೆ ಕೈಯನ್ನೇ ತಾಟನ್ನಾಗಿ ಬಳಸಬೇಕು. ಯಾವುದೇ ಪಾತ್ರೆಯನ್ನಾಗಲಿ ಉಪಯೋಗಿಸುವಂತಿಲ್ಲ. ನಿಂತುಕೊಂಡೇ ಆಹಾರ ಸೇವಿಸಬೇಕು. ಸಾಕು-ಬೇಕು ಎಂಬುದನ್ನು ಕೈಸನ್ನೆಯಿಂದಲೇ ತಿಳಿಸಬೇಕು. ಆಹಾರದಲ್ಲಿ ಕೂದಲು ಅಥವಾ ಕ್ರಿಮಿಕೀಟಗಳು ಸಿಕ್ಕರೆ ಊಟ ಮಾಡುವಂತಿಲ್ಲ. ಊಟಕ್ಕೆ ಮುನ್ನ ಸಾವಿನ ಸುದ್ದಿ ಬಂದರೆ ಊಟ ಮಾಡಕೂಡದು. ಕುಡಿಯಲು ಬಾವಿ ನೀರನ್ನು ಮಾತ್ರ ಉಪಯೋಗಿಸಬೇಕು. ನಲ್ಲಿನೀರು, ಮಿನರಲ್ ವಾಟರ್ ಸಹ ವರ್ಜ್ಯ. ಮುನಿಗಳು ರಸಪರಿತ್ಯಾಗಿಗಳು. ಅಂದರೆ ಸ್ವಾದಿಷ್ಠ ಭೋಜನವನ್ನಾಗಲಿ, ಆಹಾರವನ್ನಾಗಲಿ ಸೇವಿಸುವಂತಿಲ್ಲ. ಹಾಗೆಯೇ ರಸಭರಿತ, ಪೌಷ್ಟಿಕ ಆಹಾರವನ್ನೂ ಮುಟ್ಟುವಂತಿಲ್ಲ!

ಮುನಿಗಳ ಕೇಶಲೋಚನ(ಕೂದಲು ಕತ್ತರಿಸಿಕೊಳ್ಳುವುದು)ವಂತೂ ಹೃದಯವಿದ್ರಾವಕ. ತಲೆಕೂದಲನ್ನು ಅವರೇ ಸ್ವತಃ ಕೈಯಿಂದ ಕಿತ್ತುಕೊಳ್ಳುತ್ತಾರೆ. ಕೈಗೆ ಬೂದಿಯನ್ನು ಸವರಿಕೊಂಡು (ಆಂಟಿಸೆಪ್ಟಿಕ್‌ನಂತೆ) ಒಂದೊಂದೇ ಕೂದಲನ್ನು ಕೀಳುತ್ತಿದ್ದರೆ ತಲೆಯಿಂದ ರಕ್ತ ಜಿನುಗುತ್ತಿರುತ್ತದೆ. ಅದನ್ನು ಲೆಕ್ಕಿಸದೇ ಕೂದಲನ್ನು ಕೀಳುತ್ತಿರುತ್ತಾರೆ. ಅನಂತರ ಹುಬ್ಬು, ಮೀಸೆ ಹಾಗೂ ಗಡ್ಡದ ಕೂದಲನ್ನು ಸಹ ಕೈಯಿಂದಲೇ ಕೀಳುತ್ತಾರೆ. ಆ ದೃಶ್ಯವನ್ನಂತೂ ನೋಡಲಾಗುವುದಿಲ್ಲ. ಕೂದಲನ್ನು ಜಗ್ಗಿಜಗ್ಗಿ ಕೈಬೆರಳುಗಳೆಲ್ಲ ರಕ್ತಸಿಕ್ತವಾಗಿರುತ್ತದೆ. ಆದರೂ ಮುನಿಗಳು ಮಾತ್ರ ಕೂದಲನ್ನು ಎಳೆಯುತ್ತಿರುತ್ತಾರೆ. ಅವರ ಮುಖದಲ್ಲಿ ನೋವಿನ ಒಂದೇ ಒಂದು ಗೆರೆಯೂ ಮೂಡಿರುವುದಿಲ್ಲ. ಮುನಿಗಳು ಸಣ್ಣಗೆ ನಗುತ್ತಿರುತ್ತಾರೆ!

ಮುನಿಗಳು ಮಲಗುವುದು ಬರೀ ನೆಲದ ಮೇಲೆ ಅಥವಾ ಮರದ ಮಣೆಯ ಮೇಲೆ. ಎಷ್ಟೇ ಚಳಿ, ಗಾಳಿ, ಮಳೆಯಿರಲಿ ಚಾದರ ಹೊದೆಯುವುದಿಲ್ಲ. ಎಂಥ ಸೆಖೆಯಲ್ಲೂ ಫ್ಯಾನ್ ಉಪಯೋಗಿಸುವುದಿಲ್ಲ. ಅಲ್ಲದೇ ನಿತ್ಯ ಅದಂತಧಾವನ. ಅಂದರೆ ಹಲ್ಲನ್ನೂ ಉಜ್ಜುವುದಿಲ್ಲ. ಚಾತುರ್ಮಾಸ್ಯ ಸಂದರ್ಭದಲ್ಲಿ ತೇವಾಂಶವಿರುವುದರಿಂದ ಜೀವಹಿಂಸೆಯಾಗುವುದೆಂದು ಹೊರಗೂ ಹೋಗುವುದಿಲ್ಲ. ಸ್ನಾನಕ್ಕೆ ಸೋಪನ್ನು ಬಳಸುವುದಿಲ್ಲ. ಇದು ಅಪರಿಗ್ರಹದ ಪರಾಕಾಷ್ಠೆ! ದೇಹದಂಡನೆಯ ಉತ್ತುಂಗ! ಇನ್ನು ಈ ಬದುಕು ಸಾಕೆನಿಸಿದರೆ ಮುನಿಗಳು ಶರಣಾಗುವುದು ಸಲ್ಲೇಖನಕ್ಕೆ(ಇಚ್ಛಾಮರಣ). ಊಟ, ನೀರನ್ನು ತ್ಯಜಿಸಿ, ಉಪವಾಸಬಿದ್ದು ಮರಣ ಹೊಂದುತ್ತಾರೆ. ದೇಹದ ಮಮಕಾರವನ್ನು ತೊಡೆದು ಆತ್ಮಶಕ್ತಿಯಿಂದಲೇ ಬದುಕು ಸಾಗಿಸುವ ಜೈನಮುನಿಗಳಂತೆ ಒಂದು ದಿನ ಸಹ ಬದುಕುವುದು ನಮ್ಮಿಂದ ಸಾಧ್ಯವಿಲ್ಲ!

ಸುಮ್ಮನೆ ಟೀಕಿಸಬಾರದು. ಬಾಯಿಗೆ ಬಂದಂತೆ ಮಾತಾಡಬಾರದು. ಸ್ವಾಮೀಜಿಗಳಾಗುವುದು ತಮಾಷೆಯಲ್ಲ, ಹಾಂ.

« ಸ್ವಾಮೀಜಿಗಳಾಗುವುದೆಂದರೆ ಅಪರಿಗ್ರಹದ ಪರಾಕಾಷ್ಠೆ!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more