LPG: ಬೆಂಗಳೂರಿಗೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಪೂರೈಕೆ ತಕ್ಷಣವೇ ಆರಂಭಿಸಿ: ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಪತ್ರ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಅಭಾವ ಉಂಟಾಗಿರುವ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಪತ್ರ ಬರೆದು ಪೂರೈಕೆಯನ್ನು ಸರಿಪಡಿಸುವಂತೆ ಒತ್ತಾಯಿಸಿದ್ದಾರೆ. ಕೇಂದ್ರ ಸರ್ಕಾರದ ಹೊಸ ಆದೇಶದಿಂದಾಗಿ ಬೆಂಗಳೂರಿನ ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಮಾರ್ಚ್ 9ರಂದು ಕೇಂದ್ರ ಪೆಟ್ರೋಲಿಯಂ ಸಚಿವಾಲಯವು ಹೊರಡಿಸಿದ ಪರಿಷ್ಕೃತ ಆದೇಶದ ಪ್ರಕಾರ, ತೈಲ ಮಾರುಕಟ್ಟೆ ಕಂಪನಿಗಳು ಉತ್ಪಾದಿಸುವ ಎಲ್‌ಪಿಜಿಯನ್ನು ಕೇವಲ ಗೃಹಬಳಕೆಯ ಗ್ರಾಹಕರಿಗೆ ಮಾತ್ರ ಪೂರೈಸಬೇಕು ಎಂದು ಸೂಚಿಸಲಾಗಿದೆ. ಮನೆಗಳಿಗೆ ನಿರಂತರ ಅನಿಲ ಪೂರೈಕೆ ಮಾಡುವ ಕೇಂದ್ರದ ಉದ್ದೇಶ ಶ್ಲಾಘನೀಯವಾದರೂ, ಇದರ ಅನುಷ್ಠಾನದಿಂದಾಗಿ ಬೆಂಗಳೂರಿನಲ್ಲಿ ವಾಣಿಜ್ಯ ಸಿಲಿಂಡರ್‌ಗಳ ಲಭ್ಯತೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ ಎಂದಿದ್ದಾರೆ.

ಹೋಟೆಲ್ ಬಂದ್ ಭೀತಿ
ನಗರದ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್‌ಗಳು ಸಿಲಿಂಡರ್ ಸಿಗದೆ ಪರದಾಡುತ್ತಿವೆ. ಪೂರೈಕೆ ತಕ್ಷಣವೇ ಆರಂಭವಾಗದಿದ್ದರೆ ಅನೇಕ ಹೋಟೆಲ್‌ಗಳನ್ನು ತಾತ್ಕಾಲಿಕವಾಗಿ ಮುಚ್ಚಬೇಕಾದ ಪರಿಸ್ಥಿತಿ ಬರಬಹುದು ಎಂದು ಸಿಎಂ ಎಚ್ಚರಿಸಿದ್ದಾರೆ. ಬೆಂಗಳೂರಿನಲ್ಲಿ ಲಕ್ಷಾಂತರ ಜನರಿಗೆ ಊಟ ಒದಗಿಸುವ ಸಣ್ಣ ಹೋಟೆಲ್‌ಗಳು, ಮೆಸ್‌ಗಳು ಮತ್ತು ಕ್ಯಾಟರಿಂಗ್ ಘಟಕಗಳ ಮೇಲೆ ಇದು ನೇರ ಪರಿಣಾಮ ಬೀರಲಿದೆ ಎಂದಿದ್ದಾರೆ.
I have written to Union Petroleum & Natural Gas Minister Shri @HardeepSPuri regarding the shortage of commercial LPG in Bengaluru following a recent order by the Ministry of Petroleum & Natural Gas prioritising domestic LPG supply.
— Siddaramaiah (@siddaramaiah) March 10, 2026
This has disrupted supply for hotels, mess… pic.twitter.com/FyymFuGds9
ಬೆಂಗಳೂರಿನ ವಾಣಿಜ್ಯ ಬೇಡಿಕೆಯನ್ನು ಈ ಹಿಂದೆ ಮೂರು ಪ್ರಮುಖ ಕಂಪನಿಗಳು ಪೂರೈಸುತ್ತಿದ್ದವು. IOCLನಿಂದ ಪ್ರತಿದಿನ ಸುಮಾರು 500-550 ಮೆಟ್ರಿಕ್ ಟನ್, HPCLನಿಂದ ಸುಮಾರು 300 ಮೆಟ್ರಿಕ್ ಟನ್, BPCLನಿಂದ 230 ಮೆಟ್ರಿಕ್ ಟನ್ ಬರುತ್ತಿತ್ತು. ಈ ಪೂರೈಕೆಯಲ್ಲಿ ದಿಢೀರ್ ವ್ಯತ್ಯಯವಾಗಿರುವುದರಿಂದ ಇಡೀ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಬೆಂಗಳೂರಿನ ದೈನಂದಿನ ಜೀವನದ ಮೇಲೆ ಉಂಟಾಗುತ್ತಿರುವ ಈ ಗಂಭೀರ ಪರಿಣಾಮವನ್ನು ತಡೆಯಲು ಕೇಂದ್ರ ಸಚಿವರು ಕೂಡಲೇ ಮಧ್ಯಪ್ರವೇಶಿಸಿ, ವಾಣಿಜ್ಯ ಎಲ್‌ಪಿಜಿ ಪೂರೈಕೆಯನ್ನು ಯಥಾಸ್ಥಿತಿಗೆ ತರಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಅವರು ಪತ್ರದ ಮೂಲಕ ಕೋರಿದ್ದಾರೆ.
ಹೋಟೆಲ್, ಪಿಜಿಗಳಿಗೆ ಹೊಡೆತ
ಕೇಂದ್ರವು ಗೃಹಬಳಕೆಯ ಸಿಲಿಂಡರ್‌ಗಳ ಪೂರೈಕೆಗೆ ಮೊದಲ ಆದ್ಯತೆ ನೀಡುವಂತೆ ಆದೇಶಿಸಿತ್ತು. ಈ ನಿರ್ಧಾರದ ನಂತರ ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದ್ದು, ಬೆಂಗಳೂರಿನ ಉದ್ದಿಮೆಗಳು ಸಂಕಷ್ಟಕ್ಕೆ ಸಿಲುಕಿವೆ. ವಾಣಿಜ್ಯ ಸಿಲಿಂಡರ್‌ಗಳ ಕೊರತೆಯಿಂದಾಗಿ ನಗರದಲ್ಲಿ ನಿತ್ಯ ಲಕ್ಷಾಂತರ ಜನರಿಗೆ ಊಟ ಒದಗಿಸುವ ಹೋಟೆಲ್‌ಗಳು ಅಡುಗೆ ಮಾಡಲು ಗ್ಯಾಸ್ ಇಲ್ಲದೆ ಪರದಾಡುತ್ತಿವೆ. ಹಾಸ್ಟೆಲ್‌ಗಳು ಮತ್ತು ಪಿಜಿಗಳಲ್ಲಿ ವಿದ್ಯಾರ್ಥಿಗಳು, ಉದ್ಯೋಗಿಗಳಿಗೆ ಸಕಾಲಕ್ಕೆ ಆಹಾರ ಒದಗಿಸುವುದು ಕಷ್ಟವಾಗಿದೆ. ಛತ್ರಗಳು ಮತ್ತು ಸಮುದಾಯ ಭವನಗಳಲ್ಲಿಯೂ ಶುಭ ಸಮಾರಂಭಗಳ ಅಡುಗೆ ಕೆಲಸಗಳಿಗೆ ಅಡಚಣೆಯಾಗಿದೆ.
ಲಕ್ಷಾಂತರ ಜನರ ದೈನಂದಿನ ಜೀವನದ ಮೇಲೆ ಪ್ರಭಾವ ಬೀರುತ್ತಿರುವ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಹೋಟೆಲ್ ಮತ್ತು ಹಾಸ್ಟೆಲ್ ಉದ್ಯಮಕ್ಕೆ ಪೂರಕವಾಗುವಂತೆ ವಾಣಿಜ್ಯ ಎಲ್‌ಪಿಜಿ ಪೂರೈಕೆಯನ್ನು ತಕ್ಷಣವೇ ಯಥಾಸ್ಥಿತಿಗೆ ತರಬೇಕು ಮತ್ತು ಮಾರುಕಟ್ಟೆಯಲ್ಲಿ ಉಂಟಾಗಿರುವ ಕೃತಕ ಅಭಾವವನ್ನು ನೀಗಿಸಲು ಕೇಂದ್ರ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ.












Click it and Unblock the Notifications