ಟಿ20 ವಿಶ್ವಕಪ್ ಟ್ರೋಫಿಯನ್ನು ಮನೆಗೆ ತನ್ನಿ, ನಾವು ನಿಮ್ಮ ಪರ: ಜೆಮಿಮಾ ರೋಡ್ರಿಗಸ್ ವಿಶೇಷ ಸಂದೇಶ
T20 World Cup 2026 FInal: ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕೆಲವೇ ಕ್ಷಣಗಳಲ್ಲಿ ಭಾರತ-ನ್ಯೂಜಿಲೆಂಡ್ ನಡುವೆ ಐಸಿಸಿ ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಆರಂಭವಾಗಲಿದೆ. ಇದಕ್ಕೂ ಮುನ್ನ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ತಾರೆಗಳಾದ ಜೆಮಿಮಾ ರೋಡ್ರಿಗಸ್ ಅವರು ಸೂರ್ಯಕುಮಾರ್ ಯಾದವ್ ನಾಯಕಯತ್ವದ ಟೀಂ ಇಂಡಿಯಾಗೆ ವಿಶೇಷ ಸಂದೇಶದೊಂದಿಗೆ ಶುಭಹಾರೈಸಿದ್ದಾರೆ.
ಸೂರ್ಯಕುಮಾರ್ ಯಾದವ್ ನಾಯತ್ವದ ಭಾರತ ತಂಡವು, ತವರಿನಲ್ಲೇ ಟಿ20 ಕಿರೀಟವನ್ನು ಉಳಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಈ ಪಂದ್ಯವನ್ನು ಗೆದ್ದರೆ, ಸತತ ಎರಡು ಬಾರಿ ಟಿ20 ವಿಶ್ವಕಪ್ ಗೆದ್ದ ಮೊದಲ ತಂಡವಾಗಿ ಮತ್ತು ದಾಖಲೆಯ ಮೂರನೇ ಬಾರಿಗೆ ವಿಶ್ವ ಚಾಂಪಿಯನ್ ಆಗಿ ಭಾರತ ಹೊರಹೊಮ್ಮಲಿದೆ. ಮತ್ತೊಂದೆಡೆ, ನ್ಯೂಜಿಲೆಂಡ್ ತಂಡವು 1998ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ನಂತರ ತಮ್ಮ ಮೊದಲ ಐಸಿಸಿ ವೈಟ್-ಬಾಲ್ (ಏಕದಿನ ಅಥವಾ ಟಿ20) ಟ್ರೋಫಿಯನ್ನು ಗೆಲ್ಲುವ ತವಕದಲ್ಲಿದೆ.

ಭಾರತ ತಂಡವು 2024ರಲ್ಲಿ ಟಿ20 ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತು. ಕಳೆದ ವರ್ಷ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನೂ ಗೆದ್ದು ಬೀಗಿತು. ಮತ್ತೊಂದೆಡೆ, ಮಹಿಳಾ ಕ್ರಿಕೆಟ್ ತಂಡವು ಚೊಚ್ಚಲ ಏಕದಿನ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಳ್ಳುವ ಮೂಲಕ ಇತಿಹಾಸ ನಿರ್ಮಿಸಿತು.
ಇದೀಗ ಟಿ20 ವಿಶ್ವಕಪ್ 2026 ಫೈನಲ್‌ನಲ್ಲಿ ಪುರುಷರ ತಂಡ ಗೆಲುವು ಸಾಧಿಸಿದರೆ, ಭಾರತವು ಕೇವಲ ಎರಡು ವರ್ಷಗಳ ಅಂತರದಲ್ಲಿ ನಾಲ್ಕನೇ ಐಸಿಸಿ ಪ್ರಶಸ್ತಿಯನ್ನು ಗೆದ್ದಂತಾಗುತ್ತದೆ. ಇದು ವಿಶ್ವ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮತ್ತು ಮರೆಯಲಾಗದ ಸಾಧನೆಯಾಗಲಿದೆ.
ಮಹಿಳಾ ತಂಡದಿಂದ ಶುಭಹಾರೈಕೆಗಳ ಸುರಿಮಳೆ
ಮಹಿಳಾ ಏಕದಿನ ವಿಶ್ವಕಪ್ ವಿಜೇತ ತಂಡದ ಆಟಗಾರ್ತಿಯರಾದ ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮಾ ಮತ್ತು ಸ್ನೇಹ ರಾಣಾ ಅವರು ಅಹಮದಾಬಾದ್‌ನಲ್ಲಿ ನಡೆಯಲಿರುವ ಫೈನಲ್ ಪಂದ್ಯಕ್ಕಾಗಿ ಪುರುಷರ ತಂಡಕ್ಕೆ ಹೃತ್ಪೂರ್ವಕ ಶುಭ ಹಾರೈಸಿದ್ದಾರೆ. ಬಿಸಿಸಿಐ ಕೂಡ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಈ ಕುರಿತು ಒಂದು ವಿಡಿಯೋವನ್ನು ಹಂಚಿಕೊಂಡಿದೆ.
ಇಂದು ರಾತ್ರಿ ತವರಿನಲ್ಲೇ ವಿಶ್ವಕಪ್ ಗೆಲ್ಲುವ ಗುರಿಯೊಂದಿಗೆ ಕಣಕ್ಕಿಳಿಯುತ್ತಿರುವ ಪುರುಷರ ತಂಡಕ್ಕೆ ಮತ್ತೊಂದು ಶುಭಶಯಗಳು ಎಂದು ಬರೆದುಕೊಂಡು ಗಮನ ಸೆಳೆದಿದೆ. ಈ ವಿಡಿಯೋದಲ್ಲಿ ಆಟಗಾರ್ತಿಯರು ತಮ್ಮ ಗೆಲುವಿನ ಅನುಭವವನ್ನು ಹಂಚಿಕೊಳ್ಳುತ್ತಾ, ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡವು ಫೈನಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
"ನಾನು ಎಲ್ಲರಿಗೂ ಶುಭ ಹಾರೈಸುತ್ತೇನೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರೀ ಪ್ರಮಾಣದಲ್ಲಿ ಜನಸಂದಣಿ ಇರಲಿದೆ. ವಿಶ್ವಕಪ್ ಫೈನಲ್ ಆಡಲು ಇದೊಂದು ಅದ್ಭುತ ವಾತಾವರಣ," ಎಂದು ಮಜುಂದಾರ್ ಹೇಳಿದ್ದಾರೆ.
ಜೆಮಿಮಾ ರೋಡ್ರಿಗಸ್ ವಿಶೇಷ ಸಂದೇಶ
"ವಿಶ್ವಕಪ್ ಫೈನಲ್‌ಗಾಗಿ ಮೆನ್ ಇನ್ ಬ್ಲೂ ತಂಡಕ್ಕೆ ಶುಭ ಹಾರೈಕೆಗಳು. ನಾವೆಲ್ಲರೂ ನಿಮಗೆ ಬೆಂಬಲ ನೀಡುತ್ತಿದ್ದೇವೆ. ಗೆದ್ದು ಬನ್ನಿ," ಎಂದು ದೀಪ್ತಿ ಶರ್ಮಾ ಹೇಳಿದರೆ, ಜೆಮಿಮಾ ರೋಡ್ರಿಗಸ್, "ಟ್ರೋಫಿಯನ್ನು ಮನೆಗೆ ತನ್ನಿ. ನಾವು ನಿಮ್ಮ ಪರವಾಗಿ ಪ್ರಾರ್ಥಿಸುತ್ತಿದ್ದೇವೆ," ಎಂದು ಹೇಳಿದ್ದಾರೆ. ಅಂದರೆ, ನಮ್ಮ ದೇಶ ಫೈನಲ್ ಪಂದ್ಯದಲ್ಲಿ ಗೆದ್ದೇ ಗೆಲ್ಲುತ್ತದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.












Click it and Unblock the Notifications