ಮುಖ್ಯಮಂತ್ರಿ ಸಿದ್ದರಾಮಯ್ಯ “ಕ್ಲಿಫ್ ಹ್ಯಾಂಗರ್” ಬಜೆಟ್ ಲೆಕ್ಕಾಚಾರ: ರಾಜಾರಾಂ ತಲ್ಲೂರು ಬರಹ
ಮುಖ್ಯಮಂತ್ರಿ ಸಿದ್ದರಾಮಯ್ಯ "ಕ್ಲಿಫ್ ಹ್ಯಾಂಗರ್" ಬಜೆಟ್ ಲೆಕ್ಕಾಚಾರ: ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರ ಬರಹ ಇಲ್ಲಿದೆ. ಶುಕ್ರವಾರ ತಮ್ಮ 17ನೇ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಅವರು ವಸ್ತುಶಃ "ಬೆಂಕಿಯನ್ನು ಬೆಳಕಾಗಿಸಬೇಕೆಂಬ ಎಚ್ಚರ"ದೊಂದಿಗೆ ಮಂಡಿಸಿರುವ ಬಜೆಟ್ ಇದು. ಹೊರಿಸಬಹುದಾದ ಹೊರೆಗಳನ್ನೆಲ್ಲ ಬಜೆಟ್‌ನಿಂದ ಹೊರಗಿರಿಸಿ, ಆರ್ಥಿಕತೆಯ ಲೆಕ್ಕಾಚಾರಗಳನ್ನೆಲ್ಲ ಅವುಗಳ ಪ್ರಪಾತದ ಅಂಚಿಗೆ ಕೊಂಡೊಯ್ದು ನಿಲ್ಲಿಸಿ, ಅವರು ತನ್ನ ಸುದೀರ್ಘ (ಮೂರೂವರೆತಾಸು) ಬಜೆಟ್ ಭಾಷಣವನ್ನು ನಿಂತೇ ಮಾಡಿ ಮುಗಿಸಿದ್ದಾರೆ.
ಸರ್ಕಾರವು ಆರ್ಥಿಕ ಹೊಣೆಗಾರಿಕೆ ಅಧಿನಿಯಮದ ಅಡಿಯಲ್ಲಿ ಇಲ್ಲಿಂದ ಮುಂದೆ ಒಂದು ಹೆಜ್ಜೆ ಇಟ್ಟರೂ ಅದು ಪ್ರಪಾತವೇ. ಹಾಗಾಗಿ, ಈ ವರ್ಷದಲ್ಲಿ ಸರ್ಕಾರವು ಆರ್ಥಿಕತೆಯ ಮಟ್ಟಿಗೆ ರಿವರ್ಸ್ ಗೇರ್ ಹಾಕದೇ ಬೇರೆ ಹಾದಿ ಇಲ್ಲ. 17 ಬಜೆಟ್‌ಗಳನ್ನು ಮಂಡಿಸಿರುವ ಚಾಣಾಕ್ಷ ಹಣಕಾಸು ಸಚಿವ ಸಿದ್ದರಾಮಯ್ಯ ಅವರು, ತನ್ನ ಬಜೆಟ್ ಭಾಷಣದಲ್ಲಿ ಅದನ್ನು ಭರಪೂರ ಮಾಡಿದ್ದಾರೆ. ನನ್ನ ಅಂದಾಜಿನಂತೆ ಇದು ಅತ್ಯಂತ "ಸ್ಟೆಲ್ಥ್ (stelth)" ಬಜೆಟ್ ಭಾಷಣಗಳಲ್ಲಿ ಒಂದು. ಇಂದಿನ ಬಜೆಟ್ ಭಾಷಣದಲ್ಲಿ ಹಲವು ಪ್ರಕಟಣೆಗಳು ಹೊಸದಲ್ಲ; ಇನ್ನು ಹಲವು ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಅಬ್ಬರ ತೋರಿಸಬಲ್ಲಂತಹವು ಎಂದು ಮೇಲುನೋಟಕ್ಕೆ ಅನ್ನಿಸಿತು. ಇನ್ನಷ್ಟೇ ವಿವರವಾಗಿ ಬಜೆಟ್ ಅನ್ನು ಗಮನಿಸಬೇಕಿದೆ.

ಈ ಬಜೆಟ್ ಮೂಲಕ ಮುಖ್ಯಮಂತ್ರಿಗಳು ತನ್ನ ಹಣಕಾಸು ನಿರ್ವಹಣಾ ಚಾತುರ್ಯ ಮಸುಕಾಗಿಲ್ಲ ಎಂದು ಪ್ರತಿಪಕ್ಷಗಳಿಗೂ, ಪಕ್ಷದೊಳಗಿನ ಸ್ಪರ್ಧಿಗಳಿಗೂ ತೋರಿಸಿದಂತಾಗಿದೆ. ಗ್ಯಾರಂಟಿಗಳಲ್ಲಿ ಕಡಿತ ಅಥವಾ ಗ್ಯಾರಂಟಿ ಲಾಭಗಳನ್ನು ಉಳ್ಳವರು ಬಡವರಿಗೆ ಬಿಟ್ಟುಕೊಡಲಿ - ಎಂಬ ಬಹುಪ್ರಚಲಿತದಲ್ಲಿದ್ದ ಬೇಡಿಕೆಗಳು, ಬೆಲೆ ಏರಿಕೆ, ಆರ್ಥಿಕ ಶಿಸ್ತಿನ ನಿಯಮಗಳ ಉಲ್ಲಂಘನೆಯಂತಹ ಯಾವುದೇ ಸ್ಪಷ್ಟ "ಲೋಪದ" ಚಿತ್ರಣಗಳನ್ನು ಬಜೆಟ್‌ನಲ್ಲಿಬಿಟ್ಟುಕೊಡದ ಸಿದ್ದರಾಮಯ್ಯ ಅವರು, ಅಷ್ಟರ ಮಟ್ಟಿಗೆ ಪ್ರತಿಪಕ್ಷಗಳ ನಿರೀಕ್ಷೆಗಳಿಗೆ ತಣ್ಣೀರೆರಚಿದ್ದಾರೆ.
ಬಜೆಟ್ ಯಾಕೆ ಕ್ಲಿಫ್ ಹ್ಯಾಂಗರ್ ಎಂದರೆ, ಆರ್ಥಿಕ ಹೊಣೆಗಾರಿಕೆ ಅಧಿನಿಯಮದ ಅಡಿಯಲ್ಲಿ ವಿತ್ತೀಯ ಕೊರತೆಯು GSDPಯ 2.95% ಇದೆ (3% ದಾಟುವಂತಿಲ್ಲ); ಒಟ್ಟು ಹೊಣೆಗಾರಿಕೆಯು GSDPಯ 24.94%ಕ್ಕೆ ಏರಿದೆ (25%ದಾಟುವಂತಿಲ್ಲ); ರಾಜ್ಯ ಸರ್ಕಾರ ನೀಡಿರುವ ಒಟ್ಟು ಖಾತರಿಗಳು ಎರಡು ವರ್ಷಗಳ ಹಿಂದಿನ ರಾಜಸ್ವ ಸ್ವೀಕೃತಿಯ 80%ನ್ನು ಮೀರುವಂತಿಲ್ಲ. ಇವೆಲ್ಲವೂ ಕೂಡ ಮುಂದೆ ಹೆಜ್ಜೆ ಇಡದಷ್ಟು ಅಂಚಿಗೆ ಬಂದು ನಿಂತಾಗಿದೆ. 2024-29ರ ನಡುವೆ ಸರ್ಕಾರ ಸ್ವೀಕರಿಸಿರುವ ಸಾರ್ವಜನಿಕ ಸಾಲಗಳಲ್ಲಿ 40%ನಷ್ಟು ಬಾಂಡ್‌ಗಳು ಮಚ್ಯೂರ್ ಆಗಲಿವೆ. ಸರ್ಕಾರದ ಆದಾಯದಲ್ಲೇ ಕೊರತೆ ಇರುವಾಗ, ಈ ಹೆಚ್ಚುವರಿ ಹೊರೆ ಸರ್ಕಾರವನ್ನು ಮತ್ತಷ್ಟು ಸಾಲದ ಸುಳಿಗೆ ಸಿಕ್ಕಿಸಿದರೂ ಅಚ್ಚರಿ ಇಲ್ಲ.
ಈ ಸ್ಥಿತಿ ಹೇಗಿದೆ ಎಂಬುದಕ್ಕೆ ಉದಾಹರಣೆ ಬೇಕಿದ್ದರೆ, 2018-19ರಲ್ಲಿ ಸರ್ಕಾರ ತನ್ನ ಸಾಲಗಳಿಗೆ ತನ್ನ ಆದಾಯದಲ್ಲಿ 9% ಭಾಗವನ್ನು ಬಡ್ಡಿಗಾಗಿ ಪಾವತಿಸುತ್ತಿದ್ದರೆ, 2025-26ಕ್ಕೆ ಅದು ಆದಾಯದ 16%ಗೆ ಏರಿದೆ ಹಾಗೂ ಈ ಬಾರಿ ಬಜೆಟ್‌ನಲ್ಲದು 20%ಗೆ ತಲುಪಿದೆ. ಸರ್ಕಾರದ ಆಡಿಟ್ ನಡೆಸಿದ CAG (2023)ಯು, 2028-29ರ ಹೊತ್ತಿಗೆ ರಾಜ್ಯ ಸರ್ಕಾರ ಪಾವತಿಸಬೇಕಾಗುವ ಬಡ್ಡಿಯ ಪ್ರಮಾಣವು ಸಾಲದ ಅಸಲಿನ 50%ನಷ್ಟಾಗಬಹುದು ಎಂದು ಎಚ್ಚರಿಸಿತ್ತು.
ಗ್ಯಾರಂಟಿಗಳನ್ನು ಆರಂಭಿಸಿದಲ್ಲಿಂದ ಇಲ್ಲಿಯ ತನಕ ಸರ್ಕಾರ ಅದಕ್ಕೆಂದು 1, 21,598 ಕೋಟಿ ರೂ.ಗಳನ್ನು ವ್ಯಯಿಸಿದೆ. ದೇಶವಿಡೀ ಆರ್ಥಿಕ ಅಸಮಾನತೆಯಿಂದ ನಲುಗುತ್ತಿರುವಾಗ, ಇದೊಂದು ಕ್ರಾಂತಿಕಾರಕ ಕ್ರಮವಾಗಿದ್ದು, ಅದನ್ನು ದಮ್ಮುಕಟ್ಟಿಯಾದರೂ ಮುಂದುವರಿಸಿರುವುದಕ್ಕೆ ಸಿದ್ದರಾಮಯ್ಯ ಅವರಿಗೆ ಶಹಬ್ಬಾಸ್ ಅನ್ನಲೇಬೇಕು. ಅದರ ಫಲಿತಾಂಶಗಳೂ GSDP ಹೆಚ್ಚಳದಲ್ಲಿ ಎದ್ದು ಕಾಣಿಸುತ್ತಿವೆ.
ಅನಗತ್ಯ ಖರ್ಚುಗಳನ್ನು ಬಿಗಿಹಿಡಿದು, ಭ್ರಷ್ಟಾಚಾರಕ್ಕೆ ಕಡಿವಾಣ ತೊಡಿಸಿ, ಈ ಒಂದು-ಒಂದೂವರೆ ವರ್ಷಗಳನ್ನು ಕಳೆಯುವುದು ಈ ಸರ್ಕಾರಕ್ಕೆ ಸಾಧ್ಯವಾದರೆ, ಮುಂದಿನ ಚುನಾವಣೆಗಳ ರನ್‌ಅಪ್ ವೇಳೆ, ಆರೋಗ್ಯಕರ ಬೊಕ್ಕಸದೊಂದಿಗೆ ಜನರೆದುರು ತೆರಳುವುದು ಹಾಗೂ ಮತ್ತೊಂದು ಅವಧಿಗೆ ಎದೆಯುಬ್ಬಿಸಿ ಮತ ಯಾಚಿಸುವುದು ಸರ್ಕಾರಕ್ಕೆ ಸಾಧ್ಯ ಆಗಲಿದೆ. ಬೇರೆ ಸ್ವಯಂಕೃತ ಅಪರಾಧಗಳೇನೂ ಸಂಭವಿಸದಿದ್ದರೆ, ಜನರು ಈ ಸರ್ಕಾರವು ಸಕಾಲದಲ್ಲಿ ಸಾರ್ವತ್ರಿಕ ಮೂಲಾದಾಯ ಪರಿಕಲ್ಪನೆಯಡಿ ನೀಡಿದ ಆರ್ಥಿಕ ನೆರವನ್ನು ಮರೆಯಲಾರರು.
ಬಜೆಟ್ ಸಾಗುತ್ತಿರುವ ಹಾದಿಯ ಬಗ್ಗೆ ಒಂದು ಆತಂಕ ಎಂದರೆ, ಒಕ್ಕೂಟ ಮಟ್ಟದ್ದು. ಸಂವಿಧಾನದ ಜಂಟಿಪಟ್ಟಿ ಮಾತ್ರವಲ್ಲದೇ ರಾಜ್ಯಪಟ್ಟಿಯಲ್ಲೂ ಎಲ್ಲೆಡೆ ನೀತ್ಯಾತ್ಮಕ ಹಸ್ತಕ್ಷೇಪ ಮಾಡುತ್ತಿರುವ ಕೇಂದ್ರಸರ್ಕಾರವು GST ಮಾತ್ರವಲ್ಲದೇ ಬೇರೆ ಕಾರ್ಯಕ್ರಮಗಳ ಅನುಷ್ಠಾನದಲ್ಲೂ, ಸಬ್ಸಿಡಿ-ತನ್ನ ಪಾಲುಗಳ ನೀಡಿಕೆಯ ವೇಳೆ ಷರತ್ತುಗಳನ್ನು ಹಾಕುವ ಮೂಲಕ, ತನ್ನ ನೆರಳು ಸರ್ಕಾರದ ಮೇಲೆ ಗಾಢವಾಗಿ ಬೀಳುವಂತೆ ನೋಡಿಕೊಳ್ಳುತ್ತಿದೆ.
ಅದರ ಫಲವಾಗಿಯೇ PPP (ಖಾಸಗಿ ಸಾರ್ವಜನಿಕ ಸಹಭಾಗಿತ್ವ); ಸರ್ಕಾರಿ ಸೊತ್ತುಗಳನ್ನು ಪರಾಭಾರೆ ಮಾಡಿ ಮಾನೆಟೈಸೇಷನ್; ಆಯಕಟ್ಟಿನ ಜಾಗಗಳಲ್ಲಿನ ಅಪರಾಧಗಳನ್ನು ಕ್ರಿಮಿನಲ್ ಅಪರಾಧ ವ್ಯಾಪ್ತಿಯಿಂದ ಹೊರತರಲು ಹೊಸ ಕಾನೂನು (ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್); ಮಲ್ಟಿ ಮೋಡಲ್ ಲಾಜಿಸ್ಟಿಕ್ಸ್; ಸಮಗ್ರ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆ, ಐಟಿ ಪಾರ್ಕ್, ಹೆಸರು ಬದಲಾವಣೆ (ವಿಕ್ಟೋರಿಯಾ ಆಸ್ಪತ್ರೆ), ಆಕ್ರೊನಿಮ್ (11G)ಬಳಕೆ ...ಇತ್ಯಾದಿ ಸಂಗತಿಗಳ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಕೇಂದ್ರ ಸರಕಾರಿ ಭಾಷೆಯಲ್ಲೇ ಮಾತನಾಡತೊಡಗಿದೆ.
ಇದು ಸ್ವಲ್ಪ ಆತಂಕದಾಯಕ ಬೆಳವಣಿಗೆ. ಹಣಕಾಸು ಆಯೋಗದ ಜೊತೆ ಗುದ್ದಾಡಿ ತೆರಿಗೆಗಳಲ್ಲಿ ರಾಜ್ಯದ ಪಾಲು ಹೆಚ್ಚಿಸಿಕೊಂಡಷ್ಟೇ ಪ್ರಬಲವಾಗಿ ಕೇಂದ್ರದ ಜೊತೆ ಈ ಎಲ್ಲ ವಿಚಾರಗಳಲ್ಲೂ ಗುದ್ದಾಡಿ, ಹೊಸ ಹಾದಿಯನ್ನು ಕಂಡುಕೊಳ್ಳದಿದ್ದರೆ ದೇಶದ ಒಕ್ಕೂಟ ವ್ಯವಸ್ಥೆ ಖಂಡಿತಾ ಅಪಾಯಕ್ಕೆ ಸಿಲುಕಲಿದೆ. ಈ ನಿಟ್ಟಿನಲ್ಲಿ ಬಲವಾಗಿ ನಿಲ್ಲಬಲ್ಲ ಸೈದ್ಧಾಂತಿಕ ಛಾತಿ ಇರುವವರೆಂದರೆ ತಮಿಳುನಾಡಿನ ಸ್ಟಾಲಿನ್ ಮತ್ತು ಕರ್ನಾಟಕದ ಸಿದ್ದರಾಮಯ್ಯ.
ಸರ್ಕಾರವು ಹಠಾತ್ ಸಾವು, ಕುಸಿದುಬಿದ್ದು ಸಾವುಗಳ ನಿಟ್ಟಿನಲ್ಲಿ ಏನಾದರೂ ಪ್ರೊಆಕ್ಟಿವ್ ಕ್ರಮಗಳನ್ನು ಈ ಬಜೆಟ್‌ನಲ್ಲಿ ಕೈಗೊಳ್ಳಲಿದೆ ಎಂಬ ಆಸೆ ಇತ್ತು. ಆದರೆ, ಹೃದಯದ ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸಲು ST-Elevated Myocardial Infarction (STEMI) ಕಾರ್ಯಕ್ರಮದಡಿ ಒಟ್ಟು 9.4 ಲಕ್ಷ ECG ಗಳನ್ನು ಮಾಡಲಾಗಿದ್ದು, 13,933 ತೀವ್ರ ಹೃದಯಾಘಾತದ ರೋಗಿಗಳನ್ನು ಪತ್ತೆ ಹಚ್ಚಿ ಇವರಲ್ಲಿ 7,668 ರೋಗಿಗಳಿಗೆ ಚಿಕಿತ್ಸೆಯನ್ನು ನೀಡಲಾಗಿದೆ ಎಂಬ ಪೋಸ್ಟ್‌ಮಾರ್ಟಂಗೆ ಸರ್ಕಾರ ಸೀಮಿತವಾಗಿದೆ.
ಜನರ ರಕ್ಷಣೆ ಸರ್ಕಾರದ ಸಾಂವಿಧಾನಿಕ ಜವಾಬ್ದಾರಿ. ಅವರು ರಕ್ಷಿಸಿರುವ ನೂರು ಪಟ್ಟು ಹೆಚ್ಚು ಜನ ರಾಜ್ಯದಲ್ಲಿ ಈಗಾಗಲೇ ಸಾವಿಗೀಡಾಗಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ನಿಲುವಿನ ಬಗ್ಗೆ ವೈಯಕ್ತಿಕವಾಗಿ ನನಗೆ ತೀರಾ ಬೇಸರ ಇದೆ.ಉಳಿದಂತೆ, ಸರ್ಕಾರದ ಘೋಷಣೆಗಳ ಚರ್ವಿತ ಚರ್ವಣ ಒಂದೆಡೆ ಇಟ್ಟುಬಿಡೋಣ. ಸರ್ಕಾರ ತನ್ನ ರಾಜಸ್ವ ಸಂಗ್ರಹದಲ್ಲಿ ಈ ಬಾರಿ ನಿರೀಕ್ಷಿತ ಸಾಧನೆ ಆಗದೆಂಬ ಲಕ್ಷಣ ಇರುವಾಗಲೇ, ಬಜೆಟ್ ವರ್ಷಕ್ಕೆ ರಾಜಸ್ವದ ಪ್ರತೀ ಅಂಶದಲ್ಲೂ ಏರಿಕೆಯ ಆಶಯವನ್ನು ತೋರಿಸಿದೆ. ಬೆಲೆಗಳು ಏರಿಕೆ ಆಗದಿದ್ದರೂ, ಆ ಅಂಶಗಳ ಮಟ್ಟಿಗೆ ಜನರಿಂದ ಸಂಗ್ರಹ ಜಾಸ್ತಿ ಮಾಡಿಕೊಳ್ಳುವ ಇರಾದೆ ಸರಕಾರಕ್ಕಿದೆ ಎಂಬುದು ಇದರಿಂದ ಸ್ಪಷ್ಟ. ಅದು ಎಲ್ಲಿ, ಮತ್ತು ಹೇಗೆ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications