ಬಾಡಿಗೆ ಮನೆಗೂ ವಾಸ್ತು ಅನ್ವಯವಾಗುತ್ತದೆಯೇ, ತಜ್ಞರು ಹೇಳುವುದೇನು
ವಾಸ್ತು ಶಾಸ್ತ್ರ ಅಂದರೆ ಸ್ವಂತ ಮನೆಗೆ ಮಾತ್ರ... ಬಾಡಿಗೆ ಮನೆಗೆ ಅದು ಕೆಲಸ ಮಾಡೋದಿಲ್ಲ. ಎಂಬ ಮಾತು ಬಹಳಷ್ಟು ಜನರ ನಡುವೆ ಕೇಳಿಬರುತ್ತದೆ. ಮನೆ ನಮ್ಮದೇ ಅಲ್ಲ, ಗೋಡೆ ಒಡೆಯಲು ಆಗೋದಿಲ್ಲ, ದಿಕ್ಕು ಬದಲಾಯಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಹಲವರು ವಾಸ್ತುವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಾರೆ.
ಇದು ಸಂಪೂರ್ಣ ನಿಜವಲ್ಲ
ವಾಸ್ತು ಶಾಸ್ತ್ರ ಎಂದರೆ ಕೇವಲ ಮನೆಯ ನಿರ್ಮಾಣ ಮಾತ್ರವಲ್ಲ, ನಾವು ಆ ಮನೆಯಲ್ಲಿ ಹೇಗೆ ಬದುಕುತ್ತೇವೆ, ಮನೆಯ ಸ್ವಚ್ಚತೆ, ಗಾಳಿ, ಬೇಳಕು, ಯಾವ ವಸ್ತುಗಳನ್ನು ಯಾವ ಜಾಗದಲ್ಲಿ ಇಡುತ್ತೆವೆ ಇದೆಲ್ಲವು ವಾಸ್ತುವಿನ ಒಂದು ಭಾಗವಾಗಿದೆ. ವಿಶೇಷವಾಗಿ ಬಾಡಿಗೆ ಮನೆಯಲ್ಲಿ, ದೊಡ್ಡ ದೊಡ್ಡ ಬದಲಾವಣೆಗಳಿಗಿಂತ ಸಣ್ಣ ಅಭ್ಯಾಸಗಳೇ ಹೆಚ್ಚು ಪರಿಣಾಮ ಬೀರುತ್ತವೆ.

ದಿಕ್ಕಿಗಿಂತ ಮೊದಲು ಮನೆಯಲ್ಲಿ ಗೊಂದಲ
ಬಹಳಷ್ಟು ಬಾಡಿಗೆ ಮನೆಗಳಲ್ಲಿ ಅನಗತ್ಯ ವಸ್ತುಗಳು ಜಾಸ್ತಿ ಇರುತ್ತವೆ. ಬಳಸದ ಪೆಟ್ಟಿಗೆಗಳು, ಹಾಳಾದ ಸಾಮಾನುಗಳು, ಯಾವಾಗಲಾದರು ಬೇಕಾಗಬಹುದು ಎಂದು ಇಟ್ಟುಕೊಂಡ ವಸ್ತುಗಳು ಮನೆಗೆ ಭಾರವಾದ ಅನುಭವ ಕೊಡುತ್ತವೆ.
ಹಾಸಿಗೆಯ ಕೆಳಗೆ, ಮನೆಯ ಮೂಲೆಗಳಲ್ಲಿ ಹಾಗೂ ಸ್ಟೋರ್ ರೂಮ್‌ನಲ್ಲಿ ಇರುವ ಅನಗತ್ಯ ವಸ್ತುಗಳನ್ನು ತೆಗೆದುಹಾಕುವುದು ಅತ್ಯಂತ ಸರಳ ಮತ್ತು ಪರಿಣಾಮಕಾರಿ ವಾಸ್ತು ಪರಿಹಾರ. ಮನೆ ಸ್ವಚ್ಛವಾಗಿದ್ದರೆ ಮನಸ್ಸೂ ಹಗುರವಾಗಿರುತ್ತದೆ.
ಗಾಳಿ ಮತ್ತು ಬೆಳಕು ಮನೆಯ ವಾತಾವರಣ ಬದಲಿಸುತ್ತವೆ
ಯಾವ ಮನೆ ಸದಾ ಕತ್ತಲಾಗಿ, ಮುಚ್ಚಿದಂತಿರುತ್ತದೋ ಅಲ್ಲಿ ಬೇಸರ ಮತ್ತು ಒತ್ತಡ ಹೆಚ್ಚಾಗುತ್ತದೆ. ಪ್ರತಿದಿನ ಕಿಟಕಿಗಳನ್ನು ತೆರೆದು ಗಾಳಿ ಮತ್ತು ಸೂರ್ಯನ ಬೆಳಕು ಒಳಗೆ ಬರುವಂತೆ ನೋಡಿಕೊಳ್ಳಬೇಕು. ನೈಸರ್ಗಿಕವಾದ ಬೆಳಕು ಕಡಿಮೆ ಇದ್ದರೆ ತೀವ್ರ ಬಿಳಿ ಲೈಟ್‌ಗಳ ಬದಲು ಮೃದುವಾದ ಬೆಳಕಿನ ದೀಪಗಳನ್ನು ಬಳಸುವುದು ಒಳ್ಳೆಯದು. ಬೆಳಕು ಮತ್ತು ಗಾಳಿ ಮನೆಯಲ್ಲಿ ಚೈತನ್ಯ ಹೆಚ್ಚಿಸುತ್ತವೆ.
ಅಡಿಗೆ ಮನೆ ಸ್ವಚ್ಛವಾಗಿದ್ದರೆ ಮನೆಯ ಶಕ್ತಿ ಸಮತೋಲವಾಗಿರುತ್ತದೆ
ಬಾಡಿಗೆ ಮನೆಯ ಅಡಿಗೆಮನೆ ಎಲ್ಲ ಸಮಯದಲ್ಲೂ ಪರಿಪೂರ್ಣವಾಗಿರೋದಿಲ್ಲ. ಆದರೆ ಸ್ವಚ್ಛತೆ ಮತ್ತು ಸರಿಯಾದ ವ್ಯವಸ್ಥೆ ಬಹಳ ಮುಖ್ಯ. ಗ್ಯಾಸ್ ಸ್ಟೌವ್ ಅನ್ನು ಸ್ವಚ್ಛವಾಗಿಡಿ. ಚಾಕು ಅಥವಾ ತೀಕ್ಷ್ಣ ವಸ್ತುಗಳನ್ನು ಸರಿಯಾಗಿ ಇಡಿ. ಸಿಂಕ್ ಮತ್ತು ಸ್ಟೌವ್ ತುಂಬಾ ಹತ್ತಿರ ಇದ್ದರೆ ಮಧ್ಯೆ ಸಣ್ಣ ಮ್ಯಾಟ್ ಅಥವಾ ಖಾಲಿ ಜಾಗ ಇಡುವುದರಿಂದ ದೃಷ್ಟಿಗೆ ಸಮತೋಲನ ಸಿಗುತ್ತದೆ.
ಹಾಸಿಗೆಯ ಮತ್ತು ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ
ಮನೆಯ ದಿಕ್ಕು ಬದಲಾಯಿಸಲು ಸಾಧ್ಯವಿಲ್ಲ ಆದರೆ, ಹಾಸಿಗೆಯ ಸ್ಥಳವನ್ನು ಸರಿಯಾಗಿ ಇಡಬಹುದು. ಹಾಸಿಗೆಯ ತಲೆ ಭಾಗಕ್ಕೆ ಗಟ್ಟಿಯಾದ ಗೋಡೆ ಇದ್ದರೆ ಮಾನಸಿಕವಾಗಿ ಭದ್ರತೆ ಅನುಭವವಾಗುತ್ತದೆ.
ಸಾಧ್ಯವಾದರೆ ಹಾಸಿಗೆಯನ್ನು ನೇರವಾಗಿ ಬಾಗಿಲಿನ ಎದುರಿಗೆ ಇಡಬಾರದು. ಹಾಸಿಗೆಯ ಕೆಳಗೆ ಕಸ ಅಥವಾ ಅನಗತ್ಯ ವಸ್ತುಗಳನ್ನು ಇಡಬೇಡಿ. ಹಾಸಿಗೆಯ ಎದುರು ಕನ್ನಡಿ ಇದ್ದರೆ ರಾತ್ರಿ ವೇಳೆ ಅದನ್ನು ಮುಚ್ಚುವುದು ಒಳ್ಳೆಯದು ಎಂದು ವಾಸ್ತು ತಜ್ಞರು ಹೇಳುತ್ತಾರೆ.
ಸಣ್ಣ ಬದಲಾವಣೆಗಳೇ ದೊಡ್ಡ ವ್ಯತ್ಯಾಸ ತರುತ್ತವೆ
ಬಾಡಿಗೆ ಮನೆಯಲ್ಲಿ ವಾಸ್ತು ಅಂದರೆ ಗೋಡೆ ಒಡೆಯುವುದು ಅಥವಾ ದೊಡ್ಡ ಬದಲಾವಣೆ ಮಾಡುವುದು ಅಲ್ಲ. ಸ್ವಚ್ಛತೆ, ಬೆಳಕು, ಸರಿಯಾದ ವ್ಯವಸ್ಥೆ ಮತ್ತು ಶಾಂತ ವಾತಾವರಣವನ್ನು ನಿರ್ಮಿಸುವುದು ಮುಖ್ಯವಾಗಿರುತ್ತದೆ.














Click it and Unblock the Notifications