• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೃತಕ ಕಾಲು ಕಟ್ಟಿಕೊಂಡು ಆತ ಹಿಮಾಲಯದ ನೆತ್ತಿ ಗುದ್ದಿ ಬಂದ!

By * ವಿಶ್ವೇಶ್ವರ ಭಟ್
|

ಆಕಾಶದಲ್ಲಿ ಹುಟ್ಟಿದ ಮೋಡಗಳು ಮೊದಲ ' ಕೋಟಾ"ದಲ್ಲಿ ಒಂದಷ್ಟು ಮಳೆಯ ಹನಿಗಳನ್ನು ಉದುರಿಸಿ ಹೋಗಿವೆ. ಅವುಗಳನ್ನು ಸೇವಿಸಿದ ಮಣ್ಣು ತನ್ನ ವಾಸನೆಯನ್ನು ಚೆಲ್ಲುತ್ತಾ ಶಾಖವನ್ನು ಶಮನಗೊಳಿಸಿ ತಂಪನ್ನು ಸೂಚಿಸುತ್ತಿದೆ. ಪ್ರಕೃತಿ ಸೊಗಸಾಗಿ ಮಳೆಗಾಲದ ಮುನ್ನುಡಿ ಬರೆಯುತ್ತಿದ್ದರೆ, ಆಗಲೇ ಮನಸ್ಸಿನ ಒಳಮನೆಯಲ್ಲಿ ಮಳೆಯ ಧೋ ಧೋ ನಿನಾದ. ಇಡೀ ಪರಿಸರ ಹೊಸ ನಿರೀಕ್ಷೆ, ತಹತಹ, ಕಾಂಕ್ಷೆ, ಶಿಸ್ತಿಗೆ ಸಿದ್ಧವಾದಂತಿದೆ. ನಮ್ಮ ಸುತ್ತಮುತ್ತಲಿನ ಜಗತ್ತು ನಮಗರಿವಿಲ್ಲದಂತೆ ಹೊಸ ಆದೇಶ ಪಾಲನೆಗೆ ಸೆಟೆದು ನಿಂತಿದೆ.

ಜಗದ ನಿಯಮವೆಂಬ ಈ ಪರಿವರ್ತನೆಯ ವಿಸ್ಮಯಗಳನ್ನು ಬೆರಗುಗಣ್ಣುಗಳಿಂದ ಮೊಗೆದುಕೊಳ್ಳುತ್ತಿರುವಾಗ, ಆತನ ಜೀವನ ಕತೆ ನನ್ನಲ್ಲಿ ಅಪರಿಮಿತ ಅಚ್ಚರಿ, ಅತೀವ ಜೀವನೋತ್ಸಾಹ, ಅದ್ಭುತ ಸೆಳೆತ, ವಿಚಿತ್ರ ಕಂಗಾಲುತನ, ನನ್ನ ಬಗ್ಗೆ ಒಂದಷ್ಟು ಅಸಹನೆ ಮತ್ತು ಕೋಪ, ಕ್ಷಣ ಸಾವರಿಸಿಕೊಂಡು ಅವೆಲ್ಲವನ್ನು ಬದಿಗಿಟ್ಟು ಬದುಕಿನೆಡೆಗೆ ಒಂದು ದಿವ್ಯವಾದ ಪ್ರೀತಿ ಮೊಳೆಯುವಂತೆ ಮಾಡುತ್ತದೆ. ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು, ಏನೆಲ್ಲ ಸಾಧಿಸಬಹುದು ಎಂಬ ಲೋಕಾರೂಢಿ ಮಾತಿಗೆ ಆತ ನಿಚ್ಚಳ ನಿದರ್ಶನದಂತೆ ಕಂಗೊಳಿಸುತ್ತಾನೆ.

Feet firm on Mount Everestಬಾಲ್ಯದಲ್ಲಿ ಪೋಲಿಯಾಪೀಡಿತೆಯಾಗಿ ನಡೆಯಲಾಗದ ವಿಲ್ಮಾ ರುಡಾಲ್ಫ್‌ ಎಂಬ ಹೆಣ್ಣುಮಗಳು ವಿಶ್ವದ ವೇಗದ ರಾಣಿಯಾಗಿ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗಳಿಸಿದಾಗ, ಸದಾ ಸುತ್ತುವ ಭೂಮಿಗೂ ವಿಸ್ಮಯದ ತಲೆಚಕ್ಕರ್‌ ಬಂದಿರಬೇಕು. ಹಾಗಿತ್ತು ಆಕೆಯ ಸಾಧನೆ. ಆಕೆಯ ಜೀವನ ಕತೆ ಎಂಥವರಿಗೂ ಸ್ಫೂರ್ತಿ ಕಾರಂಜಿ. ಆಕೆಯ ಬಗ್ಗೆ ಹಿಂದೊಮ್ಮೆ ಬರೆದಾಗ ಸಾವಿರಾರು ಮಂದಿ ಬರೆದಿದ್ದರು. ವಿಲ್ಮಾ ಕತೆ ಅಂಥ ಕಂಪನ, ತಂಪನವನ್ನು ಹುಟ್ಟುಹಾಕಿತ್ತು. ಈಗ ಅಂಥದೇ ಮತ್ತೊಬ್ಬನ ಕತೆ ಮುಂದೆ ಕುಳಿತಿದ್ದೇನೆ. ಈ ರಾತ್ರಿಯೆಲ್ಲ ಕುಳಿತು ಅವನ ಜೀವನಗಾಥೆ ಓದುತ್ತಿದ್ದರೆ ನಿದ್ದೆ ಇಳಿಯದ ಕಣ್ಣೊಳಗೆ ಅವನದೇ ಸಾವಿರ ಪ್ರತಿಬಿಂಬ. ಮನಸ್ಸಿನ ಹಸಿಹಸಿ ನೆಲದಲ್ಲಿ ಆತನ 'ಕಾಲಿಲ್ಲದ ಹೆಜ್ಜೆ" ಗುರುತುಗಳು!

ಮಾರ್ಕ್‌ ಜೋಸೆಫ್‌ ಇಂಗಿಸ್‌! ಅದು ಆತನ ಹೆಸರು.

ಆತ ನ್ಯೂಜಿಲೆಂಡಿನ ಪರ್ವತಾರೋಹಿ. ಆತನಿಗೆ ಎರಡು ಕಾಲುಗಳಿಲ್ಲ. ಆದರೇನಂತೆ ಇಡೀ ಪ್ರಪಂಚವೇ ಮೂಗಿನ ಮೇಲೆ ಬೆರಳಿಡುವ ಸಾಧನೆ ಮಾಡಿದ. ಮೊನ್ನೆ ಮೇ 15ರಂದು ಆತ ಜಗತ್ತಿನ ಅತಿ ಎತ್ತರ ಪರ್ವತ ಮೌಂಟ್‌ ಎವರೆಸ್ಟ್‌ ಏರಿದ. ಹೌದು, ಎರಡೂ ಕಾಲುಗಳಿಲ್ಲದ ಇಂಗಿಸ್‌, ಕೃತಕ ಕಾಲುಗಳನ್ನು ಕಟ್ಟಿಕೊಂಡು ಸುಮಾರು ಇಪ್ಪತ್ತೊಂಬತ್ತು ಸಾವಿರ ಅಡಿ ಎತ್ತರದ ಎವರೆಸ್ಟ್‌ ಶಿಖರವೇರಿ, ಈ ಸಾಧನೆ ಮಾಡಿದ ವಿಶ್ವದ ಪ್ರಪ್ರಥಮ ಕಾಲಿಲ್ಲದ ಪರ್ವತಾರೋಹಿ ಎನಿಸಿಕೊಂಡ. ಎರಡೂ ಕಾಲು ಗಟ್ಟಿಮುಟ್ಟಾದವರಿಗೆ ಎವರೆಸ್ಟ್‌ ಆರೋಹಣ ಅಂದ್ರೆ ನಿಂತ ನೆಲ ಕುಸಿಯುವ ಅನುಭವ. ಗುಂಡಿಗೆ ಗಟ್ಟಿಯಿದ್ದವನೂ ತಟ್ಟಿ ನೋಡಿಕೊಳ್ಳಬೇಕು.

Mark Joseph Inglisಪ್ರತಿ ವರ್ಷ ಸಾವಿರಾರು ಉತ್ಸಾಹಿ ಪರ್ವತಾರೋಹಿಗಳು ತುದಿಮುಟ್ಟುವುದಿರಲಿ ತಳದಲ್ಲಿಯೇ ತಲ್ಲಣಗೊಂಡು ತತ್ತರಿಸಿ ತೆವಳಿಕೊಂಡು ವಾಪಸು ಬಂದು ಬಿಡುತ್ತಾರೆ. ಆ ಹಿಮ, ಶೀತಗಾಳಿ, ದುರ್ಗಮ ಕಂದಕ, ಪ್ರಾಣವಾಯು ಕೊರತೆ, ವಿಚಿತ್ರ ಪರ್ವತ ಬೇನೆ, ವಿಷಮ ಹವಾಗುಣ, ಹಿಮ ಬಂಡೆಗಳ ಉರುಳು ನರ್ತನ, ಅರ್ಧಕ್ಕೇರಿದಾಗ ಮುಂದಕ್ಕೇರಲಾಗದ ಸೋಲಿನ ಕಹಿ, ವಾಪಸು ಬರಲು ಒಪ್ಪದ ಇಬ್ಬಂದಿತನ, ಹದಗೆಡುವ ಆರೋಗ್ಯ, ಕೈಕೊಡುವ ಸಲಕರಣೆಗಳು, ಹೆಜ್ಜೆಹೆಜ್ಜೆಗೆ ಎದುರಾಗುವ ಸಂಕಷ್ಟಗಳ ಸರಮಾಲೆ... ಇವನ್ನೆಲ್ಲ ದಾಟಿ ಏರಿ ಹೋಗುವುದೆಂದರೆ ತಮಾಷೆಯಲ್ಲ. ಇನ್ನು ಎರಡೂ ಕಾಲು ಇಲ್ಲದವನು ಇಂಥ ಸಾಹಸಕ್ಕೆ ಹೊರಡುವುದಿದೆಯಲ್ಲ, ಅಷ್ಟೇ ಅಲ್ಲ ಅದರಲ್ಲಿ ಸಾಧಿಸಿ ಜಯಿಸುವುದಿದೆಯಲ್ಲ ಅದು ನಿಜಕ್ಕೂ ಅಬ್ಬಬ್ಬಾ!

ಮಾರ್ಕ್‌ ಇಂಗಿಸ್‌ ಹುಟ್ಟಾ ಸಾಹಸಿ. ಐದು ನಿಮಿಷ ಕುಳಿತಲ್ಲಿ ಕುಳಿತಿರಲಾರದ, ನಿಂತಲ್ಲಿ ನಿಂತಿರಲಾರದ ಕ್ರಿಯಾಶೀಲ. ಪುಟಿಯುವ ಚೆಂಡು. ಆತನಿಗೆ ಜೀವನದಲ್ಲಿ ಆಯಾಸವೆಂದರೆ ಏನೆಂಬುದೇ ಗೊತ್ತಿಲ್ಲ. ಮೈಯಲ್ಲಿ ನೂರೆರಡು ಡಿಗ್ರಿ ಜ್ವರವೇರಿ ಬಂದಾಗಲೂ ಹತ್ತು ಮೈಲಿ ದೂರ ಓಡಿ ಅದನ್ನು ಆಚೆ ಬಿಟ್ಟು ಬರುತ್ತಿದ್ದವ. ಆತನಿಗೆ ಖಿನ್ನತೆ, ಬೋರು, ಏಕತಾನ, ಅಸಮಾಧಾನ, ವಿಷಣ್ಣ ಭಾವ, ಖೇದ ಎಂದೂ ಕಾಡಿಲ್ಲ. ಇದಕ್ಕಾಗಿ ಮುಖ ಸೊಟ್ಟಗೆ ಮಾಡಿಕೊಂಡವನಲ್ಲ. ' ನಾನೊಬ್ಬ ಪ್ರವಾಸಿಗ. ಪ್ರತಿ ಹೆಜ್ಜೆಯೂ ನನ್ನನ್ನು ಹೊಸತೊಂದು ಅನುಭವದೆಡೆಗೆ ಕರೆದೊಯ್ಯದಿದ್ದರೆ ನಾನು ಒಂದು ಹೆಜ್ಜೆ ಹಾಕಲಾರೆ". ಎನ್ನುವ ಮಾರ್ಕ್‌ನ ಉತ್ಸಾಹ ಅದೆಷ್ಟು ಅದಮ್ಯವಾಗಿರಬಹುದು, ಊಹಿಸಿ.

ಮಾರ್ಕ್‌ಗೆ ಮೊದಲಿನಿಂದಲೂ ಪರ್ವತದೆಡೆಗೆ ಅತೀವ ಆಸಕ್ತಿ. ಮನುಷ್ಯ ಅದೆಷ್ಟೇ ಎತ್ತರಕ್ಕೇರಿದರೂ ಪರ್ವತದ ಮುಂದೆ ಕುಬ್ಜ ಎಂದೇ ಭಾವಿಸಿದ್ದ ಆತ ಹಠಕ್ಕೆ ಬಿದ್ದು ವೃತ್ತಿಪರ ಪರ್ವತಾರೋಹಣ ತರಬೇತುದಾರನಾದ. ಪರ್ವತಾರೋಹಿಗಳು ಆಪಾಯಕ್ಕೆ ಸಿಲುಕಿದಾಗ ಅವರನ್ನು ರಕ್ಷಿಸುವ ತಂಡದಲ್ಲಿ ಕೆಲಸ ಆರಂಭಿಸಿದ ಮಾರ್ಕ್‌, ಪರ್ವತಾರೋಹಣದ ಎಲ್ಲ ಪಟ್ಟುಗಳನ್ನು ಕರಗತ ಮಾಡಿಕೊಂಡ. ನ್ಯೂಜಿಲೆಂಡ್‌ನ ಅತಿ ಎತ್ತರದ ಮೌಂಟ್‌ಕುಕ್‌ ಪರ್ವತವನ್ನೇ ತನ್ನ ಬದುಕಿನ ಬಯಲಾಗಿಸಿಕೊಂಡ. ಪರ್ವತಾರೋಹಿಗಳಿಗೆ ತರಬೇತುದಾರನಾಗಿ ಕೆಲಸಮಾಡುತ್ತಿದ್ದಾಗ ಇಪ್ಪತ್ತ್ಮೂರು ವರ್ಷದ ಮಾರ್ಕ್‌ಗೆ ಅನ್ನಿಸಿತು ತಾನೂ ಯಾಕೆ ಮೌಂಟ್‌ಕುಕ್‌ ಏರಬಾರದೆಂದು?

1982ರ ನವೆಂಬರ್‌ನಲ್ಲಿ ತನ್ನ ಸ್ನೇಹಿತ ಫಿಲಿಪ್‌ ಡೂಲ್‌ ಜತೆಗೂಡಿ ಮೌಂಟ್‌ಕುಕ್‌ ಏರಲು ಹೊರಟು ನಿಂತಾಗ ಆತನ ಜೀವನದಲ್ಲಿ ಅಂಥದೊಂದು ಘಟನೆ ಬದುಕಿನ ಗತಿಯನ್ನೇ ಬದಲಿಸಬಹುದೆಂದು ಅಂದುಕೊಂಡಿರಲಿಲ್ಲ. ಮಾರ್ಕ್‌-ಡೂಲ್‌ ಒಂದೊಂದೇ ಹೆಜ್ಜೆ ಕಿತ್ತು ಮೇಲೇರುತ್ತಿದ್ದರೆ, ಪರ್ವತಶೃಂಗ ಒಂದೊಂದೆ ಹೆಜ್ಜೆ ಅಂತರದಿಂದ ಕಿರಿದಾಗುತ್ತಿತ್ತು. ಅವರಿಬ್ಬರೂ ಹನ್ನೆರಡು ಸಾವಿರ ಅಡಿ ಎತ್ತರದ ಕುಕ್‌ ಪರ್ವತದ ಎದೆಯಮಟ್ಟಕ್ಕೆ ಏರಿರಬಹುದು, ಬೀಸಿತು ನೋಡಿ ಹಿಮಗಾಳಿ, ಮಾರ್ಕ್‌-ಡೂಲ್‌ ತರಗೆಲೆಗಳಂತೆ ತತ್ತರಿಸಿಹೋದರು. ಹಿಮಬಂಡೆಗಳು ಉರುಳತೊಡಗಿದವು. ಎಲುಬನ್ನು ಸೀಳುವ ಶೀತ ಗಾಳಿಯ ಹೊಡೆತ ಅವರಿಬ್ಬರನ್ನು ಕಲವಳಗೊಳಿಸಿತು. ಅರ್ಧಕ್ಕೇರಿದಾಗ ಒಂದೇ ಸಮನೆ ಇಂಥ ವೈಪರೀತ್ಯಗಳಾದರೆ ಮುಗೀತು, ಪರ್ವತಾರೋಹಿಗಳಾದವರು ಮೂಕ ಪ್ರೇಕ್ಷಕರಾಗುವುದಕ್ಕಿಂತ ಮತ್ತೇನನ್ನೂ ಮಾಡಲು ಸಾಧ್ಯವಿಲ್ಲ.

ಅಂದು ಮಾರ್ಕ್‌-ಡೂಲ್‌ ಮಾಡಿದ್ದು ದೇ. ಅವರಿಬ್ಬರೂ ಹಿಮಗುಹೆಯಲ್ಲಿ ಸಿಕ್ಕಿಬಿದ್ದರು. ಹೊರಬರಲು ಸಾಧ್ಯವೇ ಇರಲಿಲ್ಲ. ಹದಿಮೂರು ದಿನ ಅದೇ ವಿಷಮ ಹವಾಮಾನ. ಅವರಿಬ್ಬರನ್ನೂ ಬಚಾವ್‌ ಮಾಡಲು ನಡೆಸಿದ ಹೋರಾಟ ವಿಶ್ವದ ಗಮನಸೆಳೆದಿತ್ತು. ಆಶ್ಚರ್ಯಕರ ರೀತಿಯಲ್ಲಿ ಅವರು ಬದುಕುಳಿದಿದ್ದರು. ಆದರೆ ಹಿಮವ್ರಣ ಅವರನ್ನು ತಿಂದು ಹಾಕಿತ್ತು. ಮಾರ್ಕ್‌ನ ಎರಡೂ ಪಾದಗಳನ್ನು ಕತ್ತರಿಸದೇ ಬೇರೆ ದಾರಿಯೇ ಇರಲಿಲ್ಲ. ವೈದ್ಯರು ಬಹಳ ಪ್ರಯತ್ನಪಟ್ಟು ಮೊಣಕಾಲಿನ ಕೆಳಭಾಗವನ್ನು ಕತ್ತರಿಸಿ ಹಾಕಿದರು. ಕೈಬೆರಳುಗಳಿಗೂ ಹಿಮವ್ರಣ ಆವರಿಸಿದ್ದರೂ ಪುಣ್ಯವಶಾತ್‌ ಕತ್ತರಿಸುವ ಪ್ರಸಂಗ ಬರಲಿಲ್ಲ.

ಬೇರೆಯವರಾಗಿದ್ದರೆ ಎರಡೂ ಕಾಲುಗಳಿಲ್ಲದ ಬದುಕು ಮುಗಿದೇ ಹೋಯಿತೆಂದು ಭಾವಿಸುತ್ತಿದ್ದರು. ಮಾರ್ಕ್‌ ಸುಮ್ಮನೆ ಕುಳಿತುಕೊಳ್ಳಲಿಲ್ಲ. ತನಗೆ ಒದಗಿಬಂದ ಸ್ಥಿತಿಗೆ ಮರುಕಪಡಲಿಲ್ಲ. ಕೈಜೆಲ್ಲಿ ಕುಳಿತುಕೊಳ್ಳಲಿಲ್ಲ. ಗಾಲಿ ಕುರ್ಚಿಯಲ್ಲಿ ಕುಳಿತು ಓಡಾಡಲಾರಂಭಿಸಿದ. ಮೊದಲಿನಂತೆ ಓಡಾಡುವಂತಾಗಲು ಏನು ಮಾಡಬಹುದೆಂದು ಯೋಚಿಸತೊಡಗಿದ. ಈ ಮಧ್ಯೆ ಮಾರ್ಕ್‌ನ ವಿದ್ಯಾಭ್ಯಾಸ ಮುಂದುವರಿಸಬೇಕೆಂದು ಅನಿಸಿತು. ಲಿಂಕನ್‌ ವಿಶ್ವವಿದ್ಯಾಲಯ ಸೇರಿದ. ಮಾನವ ಜೈವಿಕ ರಾಸಾಯನ ಶಾಸ್ತ್ರದಲ್ಲಿ ಪ್ರಥಮ ಶ್ರೇಣಿಯಲ್ಲಿ ಬಿ.ಎ.ಆನರ್ಸ್‌ ಮುಗಿಸಿದ. ಆದಾದ ಬಳಿಕ ಲ್ಯುಕೇಮಿಯಾ ಕುರಿತು ಸಂಶೋಧನೆ ಕೈಗೆತ್ತಿಕೊಂಡ.

ಶರೀರ ಸುಮ್ಮನೆ ಕುಳಿತುಕೊಳ್ಳುವ ಜಾಯಮಾನದ್ದಲ್ಲ. ಮಾರ್ಕ್‌ ಮೊಂಟಾನ ವೈನ್‌ ಎಂಬ ವೈನ್‌ ತಯಾರಿಕಾ ಕಂಪನಿ ಸೇರಿದ. ವೈನ್‌ ತಯಾರಿಸುವ ಕಸುಬನ್ನು ಕಲಿತ. ಅಲ್ಲಿಯೇ ಸೀನಿಯರ್‌ ವೈನ್‌ಮೇಕರ್‌ ಆದರ. ಕೃತಕ ಕಾಲುಗಳನ್ನು ಕಟ್ಟಿಕೊಂಡು ನಿಧಾನ ಓಡಾಡಲಾರಂಭಿಸಿದ. ಪರ್ವತವೇರುವ ಆತನ ಆಸೆ ಜೀವಂತವಾಗಿಯೇ ಇತ್ತು. ಒಂದಲ್ಲ ಒಂದು ದಿನ ಮೌಂಟ್‌ಕುಕ್‌ ಏರಲೇ ಬೇಕೆಂದು ಹಠತೊಟ್ಟವನಂತೆ ಕೃತಕ ಕಾಲುಗಳಲ್ಲಿ ತಾಲೀಮು ನಡೆಸತೊಡಗಿದ. ಕಾಲಿಗೆ ಕಸುವು ತುಂಬಿಕೊಳ್ಳಲು ಸೈಕಲ್‌ ತುಳಿಯಲಾರಂಭಿಸಿದ.

ಮಾರ್ಕ್‌ ಏನೇ ಮಾಡಲಿ, ಅದರಲ್ಲಿ ಪರಿಣತಿ ಸಾಧಿಸಿ ತುತ್ತತುದಿಗೇರಬೇಕೆಂದು ಹಂಬಲಿಸುವವ. ಸೈಕಲ್‌ ತುಳಿಯುವ ಮಾರ್ಕ್‌ಗೆ ತಾನೇಕೆ ಉತ್ತಮ ಸೈಕಲ್‌ ಪಟುವಾಗಬಾರದೆಂದು ಅನ್ನಿಸಿತು. ಇದರಲ್ಲಿಆತನ ಪರಿಶ್ರಮ, ಶ್ರದ್ದೆ ಅದೆಷ್ಟಿತ್ತೆಂದರೆ 1998ರಲ್ಲಿ ವಿಕಲಾತೀತರ ವಿಶ್ವ ಚಾಂಪಿಯನ್‌ಶಿಪ್‌ ಸೈಕಲ್‌ ಸ್ಪರ್ಧೆಯಲ್ಲಿ ನ್ಯೂಜಿಲೆಂಡನ್ನು ಪ್ರತಿನಿಧಿಸಿದ. 2000ದಲ್ಲಿ ಸಿಡ್ನಿ ಪ್ಯಾರಾ ಒಲಂಪಿಕ್ಸ್‌ನಲ್ಲಿ ಸಾವಿರ ಮೀಟರ್‌ ಸೈಕಲ್‌ ಸ್ಪರ್ಧೆಯಲ್ಲಿ ಬಂಗಾರದ ಪದಕ ಪಡೆದ.

ಈ ಮಧ್ಯೆ ಮಾರ್ಕ್‌ ಊರೂರು ತಿರುಗುತ್ತಾ ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರಗಳನ್ನು ಏರ್ಪಡಿಸಿ, ಜೀವನದಲ್ಲಿ ಯಶಸ್ಸನ್ನು ಸಾಧಿಸುವುದರ ಬಗ್ಗೆ ಬೋದಿಸಲಾರಂಭಿಸಿದ. ಎಲ್ಲ ವೈರುಧ್ಯಗಳನ್ನು ಮೀರಿ ಬದುಕಿನಲ್ಲಿ ಮುಂದೆ ಬರುವುದು ಹೇಗೆಂಬ ಆತನ ಮಾತುಗಳು ಎಂಥವನಲ್ಲೂ ಪ್ರೇರಣೆಯ ಕಿಡಿ ಹೊತ್ತಿಸುತ್ತಿತ್ತು. ಕಾರಣ ಅವನ ನಿದರ್ಶನಗಳಲ್ಲಿ ಅವನೇ ನಾಯಕನಾಗಿರುತ್ತಿದ್ದ. ಇದು ಜನರಿಗೆ ತೀವ್ರವಾಗಿ ತಟ್ಟುತ್ತಿದ್ದವು.

ಆದರೂ ಒಳಗೆ ಮಲಗಿದ್ದ ಆ ಆಸೆ ಕಣ್ಣುಮುಚ್ಚಿರಲಿಲ್ಲ. ಒಳಗೊಳಗೆ ಬುದುಗುಡುತ್ತಲೇ ಇತ್ತು. ಮೌಂಟ್‌ಕುಕ್‌ ಏರುವ ಪ್ರಯತ್ನವಂತೂ ಜಾರಿಯಲ್ಲಿತ್ತು. ಪರ್ವತದಿಂದ ಜಾರಿಬಿದ್ದು ಕಾಲು ಕತ್ತರಿಸಿಕೊಂಡು ಇಪ್ಪತ್ತು ವರ್ಷಗಳು ಕಳೆದುಹೋಗಿದ್ದವು. ಮಾರ್ಕ್‌ ಕೃತಕ ಕಾಲುಗಳನ್ನು ಕಟ್ಟಿಕೊಂಡು ಮೌಂಟ್‌ಕುಕ್‌ ಪರ್ವತದೆಡೆಗೆ ಮುಖಮಾಡಿ ನಿಂತ. ಯಾವ ಪರ್ವತ ಆತನನ್ನು ಆತನನ್ನು ಕೆಳಕ್ಕೆ ದಬ್ಬಿತ್ತೋ, ಯಾವ ಪರ್ವತದಿಂದ ಬಿದ್ದು ಹಿಮವ್ರಣಗಳಿಂದ ಕಾಲುಗಳನ್ನು ಕತ್ತರಿಸಿಕೊಳ್ಳುವಂತಾಗಿತ್ತೋ, ಅದೇ ಪರ್ವತವನ್ನು ಕಾಲುಗಳಿಲ್ಲದೇ, ಕೃತಕ ಕಾಲುಗಳಲ್ಲಿ ಏರಿ, ಆ ಪರ್ವತದ ನೆತ್ತಿಯನ್ನು ಕಾಲಿನಿಂದ ಗುದ್ದಿ ಬಂದ! ಹಠ, ಛಲ ಅಂದ್ರೆ ಇದು ಎಂದರು ಮಾರ್ಕ್‌ನ ಸಾಹಸ, ಸಾಧನೆ ನೋಡಿದವರು.

ಇಷ್ಟಾದರೂ ಮಾರ್ಕ್‌ನ ಸಾಧನೆಯ ಹಸಿವು ಇಂಗಲಿಲ್ಲ. ಮೌಂಟ್‌ ಎವರೆಸ್ಟ್‌ ಏರಿಯೇ ತೀರಬೇಕೆಂಬ ಆಸೆ ಪುಟಿಪುಟಿಯುತ್ತಿತ್ತು. ಮತ್ತೆ ಶುರುವಾಗಿಯಿತು ಸಾಮು, ತಾಲೀಮು. ಮಾರ್ಕ್‌ ಎಚ್ಚರಿಕೆಯಿಂದ ಸಿದ್ಧನಾಗತೊಡಗಿದ. ಎವರೆಸ್ಟ್‌ ಏರುವ ಮೊದಲು ಅದಕ್ಕಿಂತ ತುಸು ಕಡಿಮೆ ಎತ್ತರದ(8ಸಾವಿರ ಮೀಟರ್‌) ನೇಪಾಳದ ಚೋ ಓಯೋ ಪರ್ವತವೇರಲು ನಿರ್ಧರಿಸಿದ. ಇದನ್ನೇರಿದರೆ ಎವರೆಸ್ಟ್‌ ಸಲೀಸಾದೀತೆಂಬುದು ಅವನ ಲೆಕ್ಕಾಚಾರವಾಗಿತ್ತು. 2004ರಲ್ಲಿ ಮಾರ್ಕ್‌ ಮೂವರು ಪರ್ವತಾರೋಹಿಗಳೊಂದಿಗೆ ಚೋ ಓಯೋ ಏರಿದ.

ಇನ್ನುಳಿದದ್ದು ಎವರೆಸ್ಟ್‌ ಮಾತ್ರ. ಅದು ಅಷ್ಟು ಸುಲಭವಾಗಿರಲಿಲ್ಲ. ಕೆಲವರು ಮಾರ್ಕ್‌ಗೆ ಬೇಡವೆಂದು ಬುದ್ಧಿ ಹೇಳಿದರು. ಆದರೆ ಕೇಳಬೇಕಲ್ಲ. ಈ ವರ್ಷದ ಏಪ್ರಿಲ್‌ ಮೊದಲ ವಾರದಲ್ಲಿ ತನ್ನ ಜೀವಮಾನದ ಆಸೆ ಪೂರೈಸಲು ಹೊರಟು ನಿಂತ. ಈ ವರ್ಷವಷ್ಟೇ ಹದಿನಾಲ್ಕು ಜನರನ್ನು ಬಲೆತೆಗೆದುಕೊಂಡ ಎವರೆಸ್ಟ್‌ ಮಾರ್ಕ್‌ನನ್ನು ಸುಲಭಕ್ಕೆ ಬಿಟ್ಟುಕೊಡಲಿಲ್ಲ. 6400 ಮೀಟರ್‌ ಎತ್ತರದಲ್ಲಿದ್ದಾಗ ಮಾರ್ಕ್‌ ಕೆಳಕ್ಕುರುಳಿದ. ಆತನ ಕೃತಕ ಕಾಲಿನ ಕಾರ್ಬನ್‌ ಫೈಬರ್‌ ತುಂಡಾಯಿತು. ಅದನ್ನು ಅಲ್ಲಿಯೇ ರಿಪೇರಿ ಮಾಡಿಕೊಂಡ. ಬೇಸ್‌ಕ್ಯಾಂಪ್‌ನಿಂದ ಬೇರೆ ಕೃತಕ ಕಾಲನ್ನು ತರಿಸಿಕೊಂಡ. ಪುನಃ ಮೇಲಕ್ಕೇರತೊಡಗಿದ ನೋಡಿ.

ಆ ದಿನ ಮೌಂಟ್‌ ಎವರೆಸ್ಟ್‌ ಮಾರ್ಕ್‌ನ ಕಾಲಕೆಳಗೆ ನಿಂತಿತ್ತು. ಎವರೆಸ್ಟ್‌ ನೆತ್ತಿಯ ಮೇಲೆ ಮಾರ್ಕ್‌ನ ಮಾರ್ಕ್‌ ಅಚ್ಚೊತ್ತಿತ್ತು. ಆತನ ಮಹಾಸಾಹಸ ಕಂಡು ಆ ಹಿಮಪರ್ವತ ತಣ್ಣಗೆ ಬೆವೆತಿರಬೇಕು. ಮಾರ್ಕ್‌, ನಿನಗೊಂದು ಶರಣು ಮಾರಾಯಾ!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more