Video Viral: ಬೆಂಗಳೂರು ಮೆಟ್ರೋದಲ್ಲಿ ನಕಲಿ ಗನ್ ಹಿಡಿದು ಪ್ರಾಂಕ್: ಪೊಲೀಸರಿಂದ ಯುವಕನಿಗೆ ಶಾಸ್ತಿ
ಬೆಂಗಳೂರು: ಸಾಮಾಜಿಕ ಜಾಲತಾಣದ ಪ್ರಭಾವ ಹೆಚ್ಚಿರುವ ಇಂದಿನ ದಿನಗಳಲ್ಲಿ ರೀಲ್ಸ್ ಜೊತೆಗೆ ಪ್ರಾಂಕ್ ವಿಡಿಯೋ ಮಾಡುವ ಹುಚ್ಚು ಸಹ ಹಲವರಲ್ಲಿ ಹೆಚ್ಚಾಗುತ್ತಿದೆ. ಇದೇ ರೀತಿ ಬೆಂಗಳೂರಿನ ನಮ್ಮ ಮೆಟ್ರೋ ರೈಲಿನಲ್ಲಿ ಪ್ರಯಾಣಿಕರಿಗೆ ಗನ್ ತೋರಿಸಿ ಪ್ರಾಂಕ್ ಮಾಡಲು ಮುಂದಾಗಿದ್ದ ಯುವಕನನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ. ಸಹ ಪ್ರಯಾಣಿಕರು ಈತನ ನಡವಳಿಕೆ ನೋಡಿ ಗಾಬರಿಯಾಗಿದ್ದರು. ಕೂಡಲೇ ಎಚ್ಚೆತ್ತ ಮೆಟ್ರೋ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದರು.
ಪ್ರಯಾಣಿಕರಿಗೆ ಮಕ್ಕಳ ಆಟಿಕೆ ಗನ್ ಹಿಡಿದಿದ್ದ ಯುವಕ ಪ್ರಾಂಕ್ ಮಾಡಲು ಯತ್ನಿಸಿದ್ದ. ಈತ ಪಾಂಡಿಚೇರಿ ಮೂಲದ ಅರ್ಜುನ್ ಎಂದು ತಿಳಿದು ಬಂದಿದೆ. ಮಾಡಿದ ತಪ್ಪಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ನಿಗಮಕ್ಕೆ ದಂಡ ಕಟ್ಟಿದ್ದಾನೆ.

ಅಷ್ಟಕ್ಕೂ ಮೆಟ್ರೋದಲ್ಲಿ ಆಗಿದ್ದೇನು?
ನಮ್ಮ ಮೆಟ್ರೋ ದೀಪಾಂಜಲಿ ನಗರದಿಂದ ಎಂದಿನಂತೆ ನೇರಳೆ ಮಾರ್ಗದಲ್ಲಿ ಸಂಚಾರ ನಡೆಸಿತ್ತು. ಅದರಲ್ಲಿ ಪ್ರಯಾಣಿಕರೊಂದಿಗೆ ಕೂತಿದ್ದ ಯುವಕ ಅರ್ಜುನ್ ಜೇಬಿಗೆ ಕೈ ಹಾಕಿ ಪಿಸ್ತೂಲ್/ಗನ್ ತೆಗೆದು ಜನರತ್ತ ತೋರಿಸಿ ಹೆದರಿಸಿ ಪ್ರಾಂಕ್ ಮಾಡಲು ಮುಂದಾಗಿದ್ದ. ಈ ವೇಳೆ ಸಹ ಪ್ರಯಾಣಿಕರು ಆತಂಕಗೊಂಡಿದ್ದರು. ಅದರಲ್ಲಿ ಒಬ್ಬರು ಸೆರೆಹಿಡಿದ ಯುವಕನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಯುವಕನ ಈ ನಡೆಗೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಮೆಟ್ರೋ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದರು. ವಿಚಾರಣೆ ವೇಳೆ ಇದು ಅಟಿಕೆಯ ಗನ್ ಪ್ರಾಂಕ್ ಮಾಡಲು ಇಟ್ಟುಕೊಂಡಿದ್ದೆ ಎಂದು ಆತ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ. ಪೊಲೀಸರು ಆತನಿಂದ ಕ್ಷಮಾಪಣೆ ಪತ್ರ ಬರೆಸಿಕೊಂಡು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
ಮೆಟ್ರೋ ನಿಗಮದಿಂದ ಯುವಕನಿಗೆ ದಂಡ
ನಮ್ಮ ಮೆಟ್ರೋದಲ್ಲಿ ಸಹಪ್ರಯಾಣಿಕರಿಗೆ ಆತಂಕಕ್ಕೆ ಕಾರಣವಾಗಿದ್ದರಿಂದ ಹಾಗೂ ನಿಯಮ ಮೀರಿದ್ದರಿಂದ ಯುವಕನಿಗೆ ದಂಡ ವಿಧಿಸಿದೆ. ಆಟಿಕೆ ಗನ್ ಹಿಡಿದ ಪರಿಣಾಮ ಯುವಕ 400 ರೂಪಾಯಿ ದಂಡ ಪಾವತಿಸಿದ ಘಟನೆ ನಡೆದಿದೆ. ಮೆಟ್ರೋದಲ್ಲಿ ಇತರರಿಗೆ ತೊಂದರೆ ಆಗದಂತೆ ನಿಯಮ ಪಾಲಿಸುವಂತೆ ಎಚ್ಚರಿಸಿದರೂ ತಿಂಡಿ ತಿನ್ನುವುದು, ಗುಟ್ಕಾ ಸೇವನೆ ಜೊತೆಗೆ ಪ್ರಾಂಕ್ ಯತ್ನದಂತಹ ಘಟನೆಗಳು ನಡೆಯುತ್ತಲೇ ಇವೆ.












Click it and Unblock the Notifications