• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಕೆಯ ನೆನಪಾದೊಡನೆ ಕಂಬನಿಯ ನಾವೆಯೇಕೆ ತೇಲಿ ಬರುತ್ತದೆ ?

By Staff
|
Vishweshwar Bhat ವಿಶ್ವೇಶ್ವರ ಭಟ್‌

noorentumaatu@yahoo.com

ವಿಲ್ಮಾ !

ಪುಸ್ತಕವನ್ನು ಓದಿ ಕೆಳಗಿಟ್ಟಾಗ ಹೃದಯವೆಲ್ಲ ತೇವ ತೇವ.

ಅಪಘಾತದಲ್ಲಿ ಎರಡೂ ಕಾಲುಗಳನ್ನು ಕಳೆದುಕೊಂಡರೂ ಜೀವನದಲ್ಲಿ ಮಹತ್ತರವಾದುದನ್ನು ಸಾಧಿಸಬೇಕೆಂದು ಹಂಬಲಿಸಿ, ಆ ದಿಸೆಯಲ್ಲಿ ಕಾರ್ಯ ಪ್ರವೃತ್ತರಾಗಿರುವ ಬಂಟವಾಳ ಮೂಲದ ಓದುಗ ಮಿತ್ರ ಕೆ. ಎಸ್‌. ಅನಂತ್‌ ಬಂದು ‘ಇಂದೇ ಈ ಕೃತಿಯನ್ನು ಓದಿ’ ಎಂದು ಹೇಳಿದಾಗ ತಡೆದುಕೊಳ್ಳಲಾಗಲಿಲ್ಲ. ಅನಂತ್‌ ಅವರ ಸಹೋದರ ವಿಷ್ಣು ಅಣ್ಣನನ್ನು ಬನಶಂಕರಿಯಿಂದ ಕರೆದುಕೊಂಡು( ಎತ್ತಿಕೊಂಡು) ಬಂದಿದ್ದರು. ‘ಸಾರ್‌, ಈ ಪುಸ್ತಕ ಓದಿ. ಸಾಧ್ಯವಾದರೆ ನಿಮ್ಮ ಅಂಕಣದಲ್ಲಿ ನಾಲ್ಕು ಸಾಲು ಬರೆಯಿರಿ. ನನ್ನಂಥ ಸಾವಿರಾರು ಜನರಿಗೆ ಬದುಕುವ ಆಸೆ ಮೂಡೀತು. ಈ ಪುಸ್ತಕ ಓದಿದಂದಿನಿಂದ ನನ್ನ ಬದುಕಿನ ಗತಿಯೇ ಬದಲಾಗಿದೆ.’ ಎಂದರು.

ಅನಂತ್‌ ಅವರನ್ನು ದಿಟ್ಟಿಸಿ ನೋಡಿದರೆ ಕಣ್ಣುಗಳಲ್ಲಿ ಶಾಂತಿ ಕಾರಂಜಿ. ಹುರುಪಿನ ಹುಲುಸು, ಮೈ ಮನಗಳಲ್ಲಿ ಸಾಧನೆಯ ಛಲ. ಆದರೆ ಕಾಲುಗಳೇ ಇಲ್ಲ. ವಿಧಿ ಅವರ ಕಾಲನ್ನು ಕಚಕ್ಕನೇ ಕತ್ತರಿಸಿದ್ದಾನೆ. ಗಾಲಿ ಕುರ್ಚಿಯಲ್ಲಿ ಚಲಿಸಬೇಕು. ಒಮ್ಮೆ ಸಮತೋಲನ ತಪ್ಪಿ ಬಿದ್ದು ತಲೆಗೆ ಸಣ್ಣ ಏಟು ಆಗಿತ್ತು. ಹೀಗಾಗಿ ವಿಷ್ಣು ಈಗ ಊರುಗೋಲು. ಎಷ್ಟು ದಿನಾಂತ ಹೀಗೆ ಪರಾವಲಂಬಿಯಾಗಿರೋದು ? ಹಾಗಂತ ಅನಂತ್‌ ಏನೂ ಇಲ್ಲದವರಲ್ಲ. ಕೊರಳಿಗೆ ಇಂಜಿನಿಯರಿಂಗ್‌ ಪದವಿಯಿದೆ. ಹೆಗಲ ಮೇಲೊಂದು ಎಂಬಿಎ ಡಿಗ್ರಿಯಿದೆ. ಬೆಂಗಳೂರಿಗೆ ಬಂದು ಮೆಜೆಸ್ಟಿಕ್‌ ಹೊಟೇಲಿನಲ್ಲಿ ವೇಟರ್‌ ಆಗಿ ಲಾಡ್ಜ್‌ನಲ್ಲಿ ಮ್ಯಾನೇಜರ್‌ ಆಗಿ, ಬೆಳಗ್ಗೆ ಪತ್ರಿಕೆ ಹಂಚುವ ಹುಡುಗನಾಗಿ, ಶ್ರೀಮಂತರ ಮನೆಯ ಮಕ್ಕಳಿಗೆ ಸಾಯಂಕಾಲ ಟ್ಯೂಶನ್‌ ಹೇಳಿ ಕಷ್ಟಪಟ್ಟು ಸಂಪಾದಿಸಿದ ಡಿಗ್ರಿಗಳಿವು. ಇನ್ನೇನು ಉದ್ಯೋಗದ ಬೇಟೆ ಆರಂಭಿಸಬೇಕೆನ್ನುವಷ್ಟರಲ್ಲಿ ಅಪಘಾತದಲ್ಲಿ ಕಾಲು ತುಂಡಾಯಿತು. ಬದುಕು ಮುಗ್ಗರಿಸಿ ಬಿತ್ತು. ಆಸೆಗಳೆಲ್ಲ ಬೋರಲಾದವು. ಆದರೆ ಒಳಗಿನ ಛಲ ಇದೆಯಲ್ಲ ಅದು ಕುದಿಯುತ್ತಲೇ ಇತ್ತು.

ಆ ಪುಸ್ತಕವೊಂದು ಸಿಗದಿದ್ದರೆ ಅವರ ಬಾಳು ಏನಾಗುತ್ತಿತ್ತೋ ಅವರಿಗೆ ಗೊತ್ತಿಲ್ಲ. ಆದರೆ ಈಗ ಅವರು ಕೈ ತುಂಬಾ ಸಂಪಾದಿಸುವ ಕನ್ಸಲ್ಟನ್ಸಿ ಸರ್ವೀಸ್‌ ಆರಂಭಿಸಿದ್ದಾರೆ. ಕಾಲಿಲ್ಲದವರಿಗಾಗಿ ಏನಾದರೂ ಮಹತ್ತರವಾದುದನ್ನು ಮಾಡುವ ಸಂಕಲ್ಪ ತೊಟ್ಟಿದ್ದಾರೆ.

ಅನಂತ್‌ ಬಿಟ್ಟು ಹೋದ ಕಂಬನಿಗಳಲ್ಲಿ ಅವರ ನೆನಪಿನ ನಾವೆ ತೇಲುತ್ತಲೇ ಇತ್ತು !

Wilma Rudolph - First American to win 3 Gold Medals in Olympics‘ವಿಲ್ಮಾ’ ತೆರೆದುಕೊಳ್ಳಲಾರಂಭಿಸಿತು.

ಇದು ವಿಲ್ಮಾ ರುಡಾಲ್ಫ್‌ಳ ಆತ್ಮಕಥೆ. ನೀವು ಈಕೆಯ ಹೆಸರನ್ನು ಕೇಳಿರಬಹುದು. 1960 ರೋಮ್‌ ಒಲಿಂಪಿಕ್ಸ್‌ನಲ್ಲಿ ತನ್ನ 18ನೇ ವಯಸ್ಸಿನಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಪಡೆದ ಚಿಗರೆ. ಇಷ್ಟೇ ಆಗಿದ್ದರೆ ಅದರಲ್ಲೇನೂ ವಿಶೇಷ ಇರಲಿಲ್ಲ. ಆದರೆ ಈಕೆ ತನಗೆ ಹತ್ತು ವರ್ಷ ಆಗುವವರೆಗೆ ಈ ಭೂಮಿಯ ಮೇಲೆ ಕಾಲುಗಳನ್ನೇ ಇಟ್ಟಿರಲಿಲ್ಲ. ಅವಳ ಕಾಲುಗಳೆರಡನ್ನೂ ಪೊಲಿಯೋ ತಿಂದು ಹಾಕಿತ್ತು.

ವಿಲ್ಮಾಳದು ಕರುಣಾಜನಕ ಕತೆ. ವಿಲ್ಮಾಳ ತಂದೆ ಎಡ್‌ ಹಾಗೂ ಬ್ಲಾಂಚಿ ಆಫ್ರಿಕಾದ ಮೂಲದವರು. ಹಾಗೇ ಬಡತನವೂ ಅವರ ಮೂಲವೇ. ‘ಉದ್ಯೋಗವಿಲ್ಲದ ತಂದೆಗೆ ಊರ ತುಂಬಾ ಮಕ್ಕಳು ’ ಎಂಬಂತೆ ಇವರಿಗೆ 22 ಮಕ್ಕಳು. ಇಪ್ಪತ್ತನೆಯವಳೇ ವಿಲ್ಮಾ. ದುಡಿಯುವ ಕೈಗಳು ಎರಡಾದರೆ ತಿನ್ನುವ ಕೈಗಳು ಇಪ್ಪತ್ತೆರಡು. ಔಷಧಕ್ಕೆ ಹಣವಿಲ್ಲದೇ ಕಾಯಿಲೆ ಬಿದ್ದು ಅಕ್ಕ ಸತ್ತಳು. ಕೆಲವು ಸಲ ಮನೆಯಲ್ಲಿ ತಿನ್ನಲು ಏನೂ ಇರುತ್ತಿರಲಿಲ್ಲ. ಬರೀ ಕಾಲಿ ಪಾತ್ರೆಗಳ ಸದ್ದು. ತಾಯಿ ಶ್ರೀಮಂತರ ಮನೆಯಲ್ಲಿ ಗಾರ್ಡನಿಂಗ್‌, ಲಾಂಡ್ರಿ ಕೆಲಸಕ್ಕೆ ಹೋಗುತ್ತಿದ್ದಳು. ತಂದೆ ರೈಲ್ವೇ ನಿಲ್ದಾಣದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ. ತಾಯಿಯ ಸಾಮಿಪ್ಯ ಬಿಟ್ಟರೆ ವಿಲ್ಮಾಗೆ ಸಿಕ್ಕಿದೇನೂ ಇಲ್ಲ. ಆಕೆಗೆ ನಾಲ್ಕು ವರ್ಷ ಆಗುವತನಕ ಹೊಸ ಬಟ್ಟೆ ಸಹ ಹಾಕಿರಲಿಲ್ಲ. ಅಕ್ಕಂದಿರ ಹರಿದ ಬಟ್ಟೆಯೇ ಗತಿ.

ವಿಲ್ಮಾ ಎರಡು ವರ್ಷದವಳಿದ್ದಾಗ ಕಾಲುಗಳು ಕೊಕ್ಕೆಯಾಗುತ್ತಾ ಹೋದವು. ಪಾದಗಳು ಮುರುಟಿಕೊಳ್ಳತೊಡಗಿದವು. ನಾಳೆ ಸರಿ ಹೋದೀತು, ನಾಡಿದ್ದು ಸರಿಹೋದೀತು ಎಂದು ತಂದೆ ತಾಯಿ ನಿರ್ಲಕ್ಷ್ಯ ತಾಳಿದರು. ನಾಲ್ಕು ವರ್ಷವಾದರೂ ಪಾದ ಬೆರಳು ಬಿಚ್ಚಿಕೊಳ್ಳಲೇ ಇಲ್ಲ. ಡಾಕ್ಟರಿಗೆ ತೋರಿಸಿದರೆ ಪೊಲಿಯೋ ಎಂದರು. ನಡೆದಾಡುವುದು ಅನುಮಾನ ಎಂದರು. ಚಿಕಿತ್ಸೆ ಮಾಡಿಸೋಣ ಅಂದರೆ ದುಡ್ಡಿಲ್ಲ. ವಿಲ್ಮಾ ತನ್ನ ಪಾಡಿಗೆ ತಾನು ಬಿದ್ದುಕೊಂಡಿರುತ್ತಿದ್ದಳು. ವಾರಿಗೆಯವರೆಲ್ಲ ಓಡಾಡಿ ನಲಿದಾಡಿದ್ದರೆ ಹಾಸಿಗೆ ಮೇಲೆ ಮಂಕು ಕವಿದು ಮಲಗಿರುತ್ತಿದ್ದಳು. ಈ ಮಧ್ಯೆ ನ್ಯೂಮೋನಿಯಾ, ಸಿಡುಬು ಬಾಧೆ. ತಂದೆ ತಾಯಿಯಂತೂ ವಿಲ್ಮಾ ಬದುಕುವ ಆಸೆಯನ್ನೇ ಕೈ ಬಿಟ್ಟಿದ್ದರು. ದಿನದಿಂದ ದಿನಕ್ಕೆ ಆಕೆಯ ಆರೋಗ್ಯ ಹದಗೆಡುತ್ತಲೇ ಹೋಯಿತು. ಶಾಲೆಯೆಂಬುದು ಕನಸಾಯಿತು. ಮನೆಯಲ್ಲಿ ಅಕ್ಕನ ಪಾಠ. ದಿನದಲ್ಲಿ ಎರಡು ತಾಸು ಪಾಠ ಬಿಟ್ಟರೆ ಉಳಿದ ಸಮಯವೆಲ್ಲ ಹಾಸಿಗೆ ಮೇಲೆ. ಹೀಗೆ ಮಲಗಿದಾಗ ಕಿಟಕಿಯತ್ತ ದೃಷ್ಟಿ ಹಾಯಿಸಿದರೆ ಪಕ್ಕದ ಮೈದಾನದಲ್ಲಿ ನೂರಾರು ಮಂದಿ ಓಟ, ಆಟದಲ್ಲಿ ನಿರತರಾಗಿರುವ ದೃಶ್ಯ ನಿತ್ಯ ರಾಚುತ್ತಿತ್ತು. ಆಕೆ ಇದನ್ನು ನೋಡುತ್ತಾ ಟೈಂಪಾಸ್‌ ಮಾಡುತ್ತಿದ್ದಳು.

ಒಂದು ದಿನ ಆಕೆಗೆ ಅನಿಸಿತು. ನಾನೂ ಹೀಗೇ ಓಡಾಡಬೇಕು, ಎಲ್ಲರಂತೆ ಓಡಬೇಕು, ಛಂಗನೆ ಚಿಗಿತು ಹಾರುವ ಚಿಗರೆಯಂತಾಗಬೇಕು ಜಗತ್ತಿನಲ್ಲಿಯೇ ಅತಿವೇಗದ ಓಟಗಾರ್ತಿಯಾಗಬೇಕು ! ಹೌದು ನಾನು ಹಾಗಾಗಲೇಬೇಕು !

ಆದರೆ ಕಾಲುಗಳನ್ನು ನೆಲಕ್ಕೂರಲು ಆಗುತ್ತಿಲ್ಲ. ಇನ್ನು ನಡೆಯುವುದೆಂತು, ಓಡುವುದೆಂತು, ಅತಿ ವೇಗದ ಓಟಗಾರ್ತಿಯಾಗುವುದೆಂತು.

ಪರವಾಗಿಲ್ಲ. ಯಾಕಾಗುವುದಿಲ್ಲ. ಈಗಲೇ ಪ್ರಯತ್ನಿಸುತ್ತೇನೆ ಎಂದ ವಿಲ್ಮಾ ಮೈ ಕೊಡವಿ ಹಾಸಿಗೆಯಿಂದ ಮೇಲೆದ್ದಳು. ಮುಗ್ಗರಿಸಿ ಬಿದ್ದಳು. ಆದರೆ ಛಲ ಮುಗ್ಗರಿಸಲಿಲ್ಲ.

ಮನೆಯ ಗೋಡೆ ಹಿಡಿದು ವಿಲ್ಮಾ ಮೆಲ್ಲ ಮೆಲ್ಲನೆ ನಡೆಯತೊಡಗಿದಳು. ನಾಲ್ಕು ಹೆಜ್ಜೆಗೆ ಕಾಲು ಸೋತುಹೋಗುತ್ತಿತ್ತು. ಆದರೂ ನಡೆಯುವದನ್ನು ಬಿಡುತ್ತಿರಲಿಲ್ಲ. ದಿನಕ್ಕೆ ಹತ್ತೆಂಟು ಹೆಜ್ಜೆ ಹಾಕಿದರೆ ಎರಡು ದಿನ ಕಾಲು ನೋವು. ಆದರೆ ಒಂದು ದಿನ ಕೂಡ ನಡೆಯುವುದನ್ನು ಬಿಡಲಿಲ್ಲ. ಎರಡು ವರ್ಷಗಳಲ್ಲಿ ಗೋಡೆ, ಊರುಗೋಲು ಬಿಟ್ಟು ನಡೆದಾಡಲು ಆರಂಭಿಸಿದಳು.

ವಿಲ್ಮಾಗೆ ಒಂಭತ್ತುವರ್ಷ ತುಂಬಿದಾಗ ಕೊಕ್ಕೆಯಾದ ಕಾಲು, ಮುರುಟಿದ ಪಾದಗಳು ಅದೇ ಸ್ಥಿತಿಯಲ್ಲಿ ಗಟ್ಟಿಯಾಗಿದ್ದವು. ವಿಲ್ಮಾ ಸಮುದ್ರದಡದಲ್ಲಿ ಗುಡ್ಡಗಾಡುಗಳಲ್ಲಿ ಒಂದೇ ಸಮನೆ ಓಡುತ್ತಿದ್ದರೆ ಶಾಲೆಗೆ ಹೋಗುವುದು ಬಿಟ್ಟು ಜೀವನ ಹಾಳು ಮಾಡಿಕೊಳ್ಳುತ್ತೀಯಾ ಅಂತ ಪಾಲಕರು, ಅಕ್ಕಂದಿರು ರೇಗುತ್ತಿದ್ದರು. ಆದರೆ ಆಕೆ ಅದಾವುದನ್ನೂ ಕಿವಿಗೆ ಹಾಕಿಕೊಳ್ಳುತ್ತಿರಲಿಲ್ಲ. ತನ್ನೂರಿನಲ್ಲಿ ನಡೆದ ಓಟದ ಸ್ಪರ್ಧೆಯಲ್ಲಿ ಮೊದಲ ಬಾರಿಗೆ ಪಾಲ್ಗೊಂಡಾಗ ಎಲ್ಲರೂ ಗುರಿ ಸೇರಿದ ಕೆಲಸ ಸಮಯದ ನಂತರ ಆಕೆ ಗುರಿ ತಲುಪಿದ್ದಳು. ಆಗಾದರೂ ಅವಳು ಓಡುವುದನ್ನು ಬಿಡಬೇಕಿತ್ತು. ಬೇರೆಯವರಾದರೆ ಓಡುವುದನ್ನು ಬಿಟ್ಟು ‘ಓಡಿ ಹೋಗುತ್ತಿದ್ದರು.’

ನಡೆದಾಡಲಾಗದವಳು ದಿನ ಐದಾರು ಮೈಲಿ ಓಡತೊಡಗಿದ್ದಳು. ಬೆಳಗ್ಗೆಯಾಗುತ್ತಿದ್ದಂತೆ ಕಾಲಿಗೆ ಮಸಾಜು, ಓಟ, ಓಡಿದಷ್ಟೂ ಓಡಬೇಕೆಂಬ ತವಕ. ವಿಲ್ಮಾಳಲ್ಲಾದ ಈ ಅಸಾಧರಣ ಬದಲಾವಣೆಯ ಚಮತ್ಕಾರ ಕಂಡು ಎಲ್ಲರಿಗೂ ಅಚ್ಚರಿ. ಈ ಮಧ್ಯೆ ಆಕೆ ತನ್ನೂರಿನಲ್ಲಿರುವ ವಿಶ್ವವಿದ್ಯಾಲಯದ ಕೋಚ್‌ ಬಳಿ ಹೋಗಿ ‘ನಾನು ಜಗತ್ತಿನ ವೇಗದ ಓಟಗಾರ್ತಿಯಾಗಬೇಕು. ನನಗೆ ಮಾರ್ಗದರ್ಶನ ಮಾಡಿ.ನನಗೆ ಗುರುವಾಗಿ. ಕೈಬಿಡಬೇಡಿ’ ಎಂದು ಬೇಡಿಕೊಂಡಳು. ಆಕೆಯ ಶಾರೀರಿಕ ದೋಷ ಆತನಿಗೆ ಗೊತ್ತಿತ್ತು. ಆದರೆ ಆತ ಆಕೆಯ ಆಸೆಗೆ ತಣ್ಣೀರೆರಚಲಿಲ್ಲ. ಆಯಿತು ಎಂದ.

ಆಕೆಯ ಕಾಲುಗಳಲ್ಲಿ ಅಂಥ ಕಸುವು, ವೇಗವಿದೆಯೆಂಬುದನ್ನು ಕೋಚ್‌ ಕಲ್ಪಿಸಿಕೊಂಡಿರಲಿಲ್ಲ. ಅದಕ್ಕಿಂತ ಹೆಚ್ಚಾಗಿ ಆತನನ್ನು ಆಕರ್ಷಿಸಿದ್ದು ಆಕೆಯ ಅದಮ್ಯ ಆತಮವಿಶ್ವಾಸ. ಎರಡು ವರ್ಷ ತರಬೇತಿ ಮುಗಿಸುವ ಹೊತ್ತಿಗೆ ವಿಲ್ಮಾ ಅಮೆರಿಕದ ಮೊದಲ ಮೂರು ಓಟಗಾರರ ಪೈಕಿ ಒಬ್ಬಳಾಗಿದ್ದಳು !

1960ರಲ್ಲಿ ರೋಮ್‌ ಓಲಿಂಪಿಕ್ಸ್‌ಗೆ ವಿಲ್ಮಾ ನಿರೀಕ್ಷೆಯಂತೆ ಆಯ್ಕೆಯಾದಳು. ಮೊದಲು ಒಂದು ನೂರು ಮೀಟರ್‌ ಓಟದ ಸ್ಪರ್ಧೆ. ಕಣದಲ್ಲಿ ಜುಟ್ಟಾ ಹೈನ್‌. ಈಕೆ ತನ್ನ ಜೀವನದಲ್ಲಿ ಸೋಲನ್ನು ಕಂಡವಳೇ ಅಲ್ಲ. ಅದಕ್ಕೂ ಹಿಂದಿನ ಓಲಿಂಪಿಕ್ಸ್‌ನಲ್ಲಿ ನಾಲ್ಕು ಚಿನ್ನ ಬಾಚಿದ ಜಿಂಕೆ. ಮೊದಲ ಬಾರಿಗೆ ವಿಲ್ಮಾ- ಜುಟ್ಟಾ ಹಣಾಹಣಿ. ವಿಶ್ವಾದ್ಯಂತ ಕುತೂಹಲ. ಜುಟ್ಟಾ ಮುಂದೆ ಕುಂಟಿ ವಿಲ್ಮಾ ಯಾವ ಮರದ ತೊಪ್ಪಲು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ವಿಲ್ಮಾ ಇಡೀ ಜಗತ್ತನ್ನೇ ಮೂಕ ವಿಲ್ಮತಗೊಳಿಸಿದ್ದಳು. ಕೇವಲ 10. 8 ಸೆಕೆಂಡ್‌ಗಳಲ್ಲಿ ನೂರು ಮೀಟರ್‌ ಓಡಿ ಪ್ರಪ್ರಥಮ ಚಿನ್ನದ ಪದಕ ಬಾಚಿಕೊಂಡಳು !

ಮರುದಿನ ಇನ್ನೂರು ಮೀಟರ್‌ ಓಟದ ಸ್ಪರ್ಧೆ. ಪುನಃ ಜುಟ್ಟಾ- ವಿಲ್ಮಾ ಜಿದ್ದಾಜಿದ್ದಿ. ಜುಟ್ಟಾ ಇಂಥ ಹೀನಾಯ ಸೋಲನ್ನು ಊಹಿಸಿರಲಿಲ್ಲ. ವಿಲ್ಮಾ ಎರಡುನೂರು ಮೀಟರ್‌ ದೂರವನ್ನು ಕೇವಲ 23. 2 ಸೆಕೆಂಡ್‌ಗಳಲ್ಲಿ ಕ್ರಮಿಸಿ ಹಿಂದಿನ ಸಾಧನೆ ಅಳಿಸಿ ಹೊಸ ದಾಖಲೆ ಬರೆದಳು. ಎರಡನೆಯ ಚಿನ್ನದ ಪದಕ.

ಮೂರನೆಯದು ನಾನೂರು ಮೀಟರ್‌ ರಿಲೇ ಸ್ಪರ್ಧೆ. ಸಾಮಾನ್ಯವಾಗಿ ಸ್ಪರ್ಧೆಯಲ್ಲಿ ಅತಿ ವೇಗವಾಗಿ ಓಡುವವರು ಕೊನೆಯಲ್ಲಿರುತ್ತಾರೆ. ಇಲ್ಲೂ ಸಹಾ ಜುಟ್ಟಾ- ವಿಲ್ಮಾ ಕಟಾಕಟಿ. ಶುರುವಾಯಿತು ಓಟ. ಮೊದಲ ಮೂವರು ಓಟಗಾರರು ಒಬ್ಬರಿಗೊಬ್ಬರು ಕೋಲ (ಬ್ಯಾಟನ್‌) ನ್ನು ಬದಲಿಸುತ್ತಾ ಓಡತೊಡಗಿದರು. ಸ್ಪರ್ಧೆಯ ಕೊನೆಯ ಹಂತದಲ್ಲಿ ವಿಲ್ಮಾಗೆ ಬ್ಯಾಟನ್‌ ಹಸ್ತಾಂತರಿಸುವಾಗ ಕೆಳಕ್ಕೆ ಬಿದ್ದಿತು. ಅಷ್ಟರೊಳಗೆ ಜುಟ್ಟಾ ಓಡಲಾರಂಭಿಸಿದ್ದಳು. ಬ್ಯಾಟನ್‌ ಕೈಗೆತ್ತಿಕೊಂಡ ವಿಲ್ಮಾ ಅದ್ಯಾವ ಪರಿ ಓಡಿದಳೆಂದರೆ ಕೆಲವೇ ಸೆಕೆಂಡ್‌ಗಳಲ್ಲಿ ಜುಟ್ಟಾಳನ್ನು ಹಿಂದೆ ಹಾಕಿ ಮತ್ತೊಮ್ಮೆ ವಿಶ್ವ ದಾಖಲೆ ಬರೆದಳು !

ಪೊಲೀಯೋ ಪೀಡಿತೆ ಹುಟ್ಟಾ ನತದೃಷ್ಟೆ, ಒಂಬತ್ತಾದರೂ ನೆಲಕ್ಕೆ ಪಾದವನ್ನೇ ಸ್ಪರ್ಶಿಸದಾಕೆ, ಕೇವಲ ಛಲವನ್ನೇ ಬಂಡವಾಳವಾಗಿಟ್ಟುಕ್ಕೊಂಡು ಸಮಸ್ತ ವಿಶ್ವವೇ ಬೆರಗಾಗುವ ಸಾಧನೆ ಮಾಡಿದಳಲ್ಲ. ತನ್ನ ವೈಕಲ್ಯ ವೈಫಲ್ಯವನ್ನೇ ಮೆಟ್ಟಿ ನಿಂತಳಲ್ಲ ಅದು ನಿಜಕ್ಕೂ ಅದ್ಭುತ ಅದ್ಭುತ.

ಇಂದಿಗೂ ಓಲಿಂಪಿಕ್ಸ್‌ನ ಸ್ಮೃತಿಚಿತ್ರ ಸರಿದು ಹೋದರೆ ಸಾಕು ವಿಲ್ಮಾ ಕಂಗೊಳಿಸುತ್ತಾಳೆ. ಆಕೆಯ ನೆನಪೇ ರೋಮಾಂಚನ. ಓಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಾಗ ‘ನಿನ್ನ ಸಾಧನೆಗೆ ಪ್ರೇರಣೆಯೇನು’ ಅಂತ ಕೇಳಿದರೆ ನಿಸ್ಸಂದೇಹವಾಗಿ ‘ವಿಲ್ಮಾ’ ಅಂತಾರೆ. 1988ರ ಓಲಿಂಪಿಕ್ಸ್‌ನಲ್ಲಿ ಮೂರು ಚಿನ್ನ ಗೆದ್ದ ಓಟಗಾರ್ತಿ ಫ್ಲಾರೆನ್ಸ್‌ ಜಾಯ್ನರ್‌ ತನ್ನ ಮನೆ ಮುಂದೆ ವಿಲ್ಮಾಳ ಪ್ರತಿಮೆ ಮಾಡಿ ನಿತ್ಯ ಪೂಜೆ ಮಾಡುತ್ತಾಳೆ. 1944ರಲ್ಲಿ ಮಿದುಳು ಕ್ಯಾನ್ಸರ್‌ನಿಂದ ತನ್ನ 54ನೇ ವಯಸ್ಸಿನಲ್ಲಿ ವಿಲ್ಮಾ ತೀರಿಕೊಂಡಾಗ ಅಂತಿಮ ನಮನ ಸಲ್ಲಿಸಲು ಅಮೆರಿಕದ ಅಧ್ಯಕ್ಷ ಸಾಕ್ಷಾತ್‌ ಪಾರ್ಥಿವ ಶರೀರದ ಮುಂದೆ ನಿಂತಿದ್ದ. ಶ್ರದ್ಧಾಂಜಲಿ ಪುಸ್ತಕದಲ್ಲಿ Wilma, entire universe salute you ಅಂತ ಬರೆದ.

ಬದುಕಿರುವಾಗಲೇ ದಂತಕತೆಯಾದ ‘ವಿಲ್ಮಾ’ ಆತ್ಮಕಥೆ ಓದುತ್ತಿದ್ದರೆ ಹೆಳವನೂ ಕೂಡ ಒಂದಪ ಸಟೆದು ನಿಲ್ಲುತ್ತಾನೆ. ಎಂಥ ಅಸಾಹಯಕತೆ, ವಿಷಾದ, ವಿಷಣ್ಣತೆ ಕವಿದಾಗಲೂ ಆಕೆಯ ಜೀವನಗಾಥೆ ಹಿಡಿ ಹುರುಪು, ಉಬ್ಬರ ಉತ್ಸಾಹವನ್ನು ಎಬ್ಬಿಸುತ್ತದೆ.

ವಿಲ್ಮಾಳ ಬದುಕಿನ ಹೆಜ್ಜೆಗಳ ಮೇಲೆ ನಡೆದಾಡುತ್ತಾ ಸಾಗಿದಾಗ ಹುಟ್ಟು ಕುಂಟನಾದರೂ ಛಲದಿಂದಲೇ ಅದನ್ನು ಮೆಟ್ಟಿನಿಂತು ಅಮೆರಿಕದ ಅಧ್ಯಕ್ಷನಾದ, ಗಾಲಿ ಕುರ್ಚಿಯಿಂದಲೇ ದೇಶವನ್ನಾಳಿದ ಜನಪ್ರಿಯ ಅಧ್ಯಕ್ಷನೆಂಬ ಹೆಗ್ಗಳಿಕೆಗೆ ಪಾತ್ರನಾದ ಫ್ರಾಂಕ್ಲಿನ್‌ ರೂಸ್‌ವೆಲ್ಟ್‌ ಅಯಾಚಿತವಾಗಿ ನೆನಪಾಗುತ್ತಾನೆ. ಇದೇ ಹಾದಿಯಲ್ಲಿ ನಡೆದಾಗ ನಮ್ಮಲ್ಲಿಯೇ ಇಂಥ ಸಾಧನೆ ಮಾಡಿದ ಅನೇಕರು ಕಣ್ಣ ಮುಂದೆ ನಿಲ್ಲುತ್ತಾರೆ. ಎರಡೂ ಕಾಲುಗಳನ್ನು ಕಳೆದುಕೊಂಡರೂ ಸತತ ಎರಡು ಯುದ್ಧಗಳಲ್ಲಿ ಭಾರತದ ಸೇನೆಯನ್ನು ಮುನ್ನಡೆಸಿದ, ಸ್ವತಃ ಟ್ಯಾಂಕರ್‌ನಲ್ಲಿ ಕುಳಿತು ವೈರಿ ಸೇನೆಯನ್ನು ಕಂಗೆಡಿಸಿದ ಕ್ಯಾಪ್ಚನ್‌ ಪರಮ ಜಗತ್‌ ಸಿಂಗ್‌, ಅಂಗವೈಕಲ್ಯದ ನಡುವೆಯೂ ಗಾಲಿ ಕುರ್ಚಿಯಲ್ಲಿಯೇ ಜಾವಲಿನ್‌, ಶಾಟ್‌ಪುಟ್‌, ಡಿಸ್ಕಸ್‌ ಥ್ರೋ ಕ್ರೀಡೆಯಲ್ಲಿ ರಾಷ್ಟ್ರೀಯ ಪ್ರಶಸ್ತಿ ಗಳಿಸಿದ ಕನ್ನಡತಿ ಮಾಲತಿ ಹೊಳ್ಳ, ನಡೆದಾಡಲಾಗದಿದ್ದರೂ ಸದಾ ಚಟುವಟಿಕೆಯಿಂದ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಎಂ. ಕೆ. ಶ್ರೀಧರ್‌, ಕಾಲು ಊನವನ್ನು ಬದಿಗೊತ್ತಿ ನೃತ್ಯ ವೈಭವ ಮೆರೆದ ಸುಧಾ ಚಂದ್ರನ್‌, ಮಾಂಸದ ಮುದ್ದೆ ಸ್ಟೀಫನ್‌ ಹಾಕಿಂಗ್‌... ಹಾದು ಹೋಗುತ್ತಾರೆ.

ಅಂದ ಹಾಗೆ ವಿಲ್ಮಾಳನ್ನು ಪರಿಚಯಿಸಿದ ಅನಂತ್‌ಗೆ, ಅವರ ಒತ್ತಾಸೆಗೆ ಮಿಡಿತಗಳಿರಲಿ.

( ಸ್ನೇಹ ಸೇತು: ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more