Vande Bharat: 2024ರಲ್ಲಿ ಟ್ರ್ಯಾಕ್‌ಗಿಳಿಯಲಿರುವ ವಂದೇ ಭಾರತ್ ರೈಲುಗಳ ವೈಶಿಷ್ಟ್ಯಗಳೇನು ಗೊತ್ತೇ? ಮಾಹಿತಿ, ವಿವರ
ನವದೆಹಲಿ, ಫೆಬ್ರವರಿ, 11: ಈಗಾಗಲೇ ಭಾರತದಲ್ಲಿ ವಂದೇ ಭಾರತ್ ಭಾರೀ ಜನಮನ್ನಣೆಯನ್ನು ಪಡೆದಿದೆ. ಇನ್ನು ಇದೇ ಮಾದರಿಯ ಕಡಿಮೆ ದೂರ ಪ್ರಯಾಣದ ವಂದೇ ಮೆಟ್ರೋ ಸೇರಿದಂತೆ ಮೂರು ರೈಲುಗಳು ಇದೇ ವರ್ಷದಲ್ಲಿ ಶೀಘ್ರದಲ್ಲೇ ಟ್ರ್ಯಾಕ್‌ಗಿಳಿಯಲಿವೆ ಎಂದು ತಿಳಿದುಬಂದಿದೆ. ಹಾಗಾದರೆ ಈ ಮೆಟ್ರೋ ಏನೆಲ್ಲ ವಿಶೇಷ ಸೌಲಭ್ಯಗಳನ್ನು ಹೊಂದಿರಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಭಾರತೀಯ ರೈಲ್ವೇ ಶೀಘ್ರದಲ್ಲೇ ಕಡಿಮೆ ದೂರದ ಐಷಾರಾಮಿ ಪ್ರಯಾಣಕ್ಕಾಗಿ ವಂದೇ ಮೆಟ್ರೋವನ್ನು ತರುತ್ತಿದ್ದು, ವಂದೇ ಮೆಟ್ರೋ 2024ರಲ್ಲಿ ಟ್ರ್ಯಾಕ್‌ಗಿಳಿಯಲು ಸಿದ್ಧವಾಗಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು 2023ರ ಬಜೆಟ್‌ನಲ್ಲಿ ವಂದೇ ಮೆಟ್ರೋ ಯೋಜನೆಯನ್ನು ಘೋಷಿಸಿದ್ದರು. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮಾದಾರಿಯಾದ ವಂದೇ ಮೆಟ್ರೋ, ಪ್ರಯಾಣಿಕರಿಗೆ ಅಲ್ಪಾವಧಿಗೆ ಸೂಪರ್‌ಫಾಸ್ಟ್ ಎಸಿ ಪ್ರಯಾಣದ ಆಯ್ಕೆಯನ್ನು ಒದಗಿಸುತ್ತದೆ. ಇದು ಗಂಟೆಗೆ 130 ವೇಗದಲ್ಲಿ ದೂರವನ್ನು ಕ್ರಮಿಸುತ್ತದೆ.

ವಂದೇ ಮೆಟ್ರೋ ರೈಲುಗಳನ್ನು 300 ಕಿಲೋ ಮೀಟರ್ ದೂರದವರೆಗೆ ವಿನ್ಯಾಸಗೊಳಿಸಲಾಗುತ್ತಿದೆ. ಮುಖ್ಯ ಇಎಂಯುಗಳನ್ನು ಬದಲಿಸಲು ವಂದೇ ಮೆಟ್ರೋವನ್ನು ತರಲಾಗುತ್ತಿದೆ. ಈ ರೈಲು 250ರಿಂದ 300 ಕಿಲೋ ಮೀಟರ್ ದೂರದ ಪ್ರಯಾಣ ಸೇವೆ ಒದಗಿಸುತ್ತದೆ. 2024ರಲ್ಲಿ ದೇಶದ ಮೊದಲ ವಂದೇ ಮೆಟ್ರೋ ರೈಲಿನ ತಯಾರಿಕೆ ಆರಂಭವಾಗಿದೆ. ಈ ರೈಲನ್ನು ಪ್ರಾರಂಭಿಸುವ ಗುರಿಯನ್ನು ಐಸಿಎಫ್ ಹೊಂದಿದೆ ಎಂದು ಐಸಿಎಫ್ ಜನರಲ್ ಮ್ಯಾನೇಜರ್ ಬಿಜಿ ಮಲ್ಯ ಹೇಳಿದ್ದಾರೆ.
ಬಿಜಿ ಮಲ್ಯ ಪ್ರಕಾರ, ವಂದೇ ಭಾರತ್ ಎಕ್ಸ್‌ಪ್ರೆಸ್‌ನಂತಹ ಎಲ್ಲಾ ಪ್ರಮುಖ ಸೌಲಭ್ಯಗಳನ್ನು ವಂದೇ ಮೆಟ್ರೋ ಹೊಂದಿರುತ್ತದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಮತ್ತು ವಂದೇ ಮೆಟ್ರೋ ನಡುವಿನ ದೊಡ್ಡ ವ್ಯತ್ಯಾಸವೆಂದರೆ, ನಿಂತಿರುವಾಗ ಪ್ರಯಾಣಿಸುವ ಆಯ್ಕೆ ಇರುತ್ತದೆ ಎಂದು ಅವರು ಹೇಳಿದರು. ವಂದೇ ಮೆಟ್ರೋದ ಪ್ರತಿ ಕೋಚ್‌ನಲ್ಲಿ 100 ಪ್ರಯಾಣಿಕರಿಗೆ ಆಸನ ವ್ಯವಸ್ಥೆ ಇರುತ್ತದೆ. ಇದಲ್ಲದೆ, ಈ ರೈಲಿನ ಪ್ರತಿ ಕಂಪಾರ್ಟ್‌ಮೆಂಟ್‌ನಲ್ಲಿ 200 ಪ್ರಯಾಣಿಕರು ನಿಂತು ಪ್ರಯಾಣಿಸಲು ಸಾಧ್ಯವಾಗುತ್ತದೆ ಎಂದು ಬಿಜಿ ಮಲ್ಯ ಹೇಳಿದ್ದಾರೆ.
ವಂದೇ ಮೆಟ್ರೋ ರೈಲುಗಳ ವೈಶಿಷ್ಟ್ಯಗಳೇನು?
1. ವಂದೇ ಮೆಟ್ರೋ ಕಾರ್ಯಾಚರಣೆಯ ವೇಗ ಗಂಟೆಗೆ 130 ಕಿ.ಮೀ.
2. ಇದು ಸಂಪೂರ್ಣ ಎಸಿ ರೈಲು ಆಗಿರುತ್ತದೆ.
3. ವಂದೇ ಮೆಟ್ರೋ ರೈಲಿನ ಗ್ಯಾಂಗ್‌ವೇಯನ್ನು ಸಂಪೂರ್ಣವಾಗಿ ಮುಚ್ಚಲಾಗುವುದು.
4. ಪ್ರತಿ ವಿಭಾಗವು 4 ಸ್ವಯಂಚಾಲಿತ ಬಾಗಿಲುಗಳನ್ನು ಹೊಂದಿರುತ್ತದೆ.
5. ರೈಲಿನ ವಿನ್ಯಾಸವು ಏರೋಡೈನಾಮಿಕ್ ಆಗಿರುತ್ತದೆ
6. ಈ ರೈಲಿನಲ್ಲಿ ಸಿಸಿಟಿವಿ ಕ್ಯಾಮೆರಾಗಳು, ಎಲ್‌ಸಿಡಿ ಡಿಸ್ಪ್ಲೇಯೊಂದಿಗೆ ಪಿಐಎಸ್ ವ್ಯವಸ್ಥೆ ಇರುತ್ತದೆ.
7. ಈ ರೈಲು ಸ್ವಯಂಚಾಲಿತ ಬೆಂಕಿ ಪತ್ತೆ ಮತ್ತು ಎಚ್ಚರಿಕೆ ವ್ಯವಸ್ಥೆಯನ್ನು ಹೊಂದಿರುತ್ತದೆ.
8. ರೋಲರ್ ಬ್ಲೈಂಡ್‌ಗಳೊಂದಿಗೆ ದೊಡ್ಡ ವಿಹಂಗಮ ಮೊಹರು ಕಿಟಕಿಗಳು, ತುರ್ತು ಟಾಕ್ ಬ್ಯಾಕ್ ಘಟಕ, ಮೊಬೈಲ್ ಚಾರ್ಜಿಂಗ್ ಸಾಕೆಟ್, ಮಾಡ್ಯುಲರ್ ವ್ಯಾಕ್ಯೂಮ್ ಟಾಯ್ಲೆಟ್, ಅಲ್ಯೂಮಿನಿಯಂ ಲಗೇಜ್ ರ್ಯಾಕ್ ಸೇರಿದಂತೆ ಹಲವು ವ್ಯವಸ್ಥೆಗಳನ್ನು ಒಳಗೊಂಡಿರುತ್ತದೆ.












Click it and Unblock the Notifications