ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವನ ತೊಡೆಯೇರಿರುವ ಪಾರ್ವತಿಯ ಕಂಡಿರುವಿರಾ?

By * ರೋಹಿಣಿ ಬಳ್ಳಾರಿ
|
Google Oneindia Kannada News

Shiva Parvati temple in Gudekote, Kudligi
ಇದು ಶಿವಪಾರ್ವತಿ ದೇವಸ್ಥಾನ. ಶಿವನ ತೊಡೆಯ ಮೇಲೆ ಪಾರ್ವತಿ ಆಸೀನಳಾಗಿದ್ದಾಳೆ. ಇದೊಂದು ಅಪರೂಪದಲ್ಲೇ ಅಪರೂಪವಾದ ದೇವಸ್ಥಾನ. ಹೀಗಾಗಿ ಈ ದೇವಸ್ಥಾನ ಸರ್ವಧರ್ಮೀಯರ ಗಮನ ಸೆಳೆಯುತ್ತಿದೆ. ಕುತೂಹಲಗಳನ್ನು ಕೆರಳಿಸುತ್ತಿದೆ. ಈ ದೇವಸ್ಥಾನ ನೋಡಲು ಸಿಗುವುದು ಬೇರೆಲ್ಲೂ ಅಲ್ಲ. ದೇಶವನ್ನು ಐತಿಹಾಸಿಕವಾಗಿ, ಸಾಂಸ್ಕೃತಿಕವಾಗಿ, ಶ್ರೀಮಂತಿಕೆ ಹಾಗೂ ಧಾರ್ಮಿಕವಾಗಿ ದೇಶ - ವಿದೇಶಗಳಲ್ಲಿ ಖ್ಯಾತಿಗೊಳಿಸಿರುವ ವಿಜಯನಗರ ಸಾಮ್ರಾಜ್ಯದ ವ್ಯಾಪ್ತಿಯ ಒಂದು ಗ್ರಾಮದಲ್ಲಿ. ನಿಮಗೀಗ ಅರ್ಥವಾಗಿರಬೇಕು.

ಈ ಗ್ರಾಮ ಇರುವುದು ಇಂದಿನ ಗಣಿ ಜಿಲ್ಲೆ, ಬಿರು ಬಿಸಲಿನ ನಾಡು, ಸ್ಟೀಲ್ ಸಿಟಿ ಬಳ್ಳಾರಿ ಜಿಲ್ಲೆಯಲ್ಲಿ ಎನ್ನುವುದು ನಿಮ್ ಊಹೆ ಅಲ್ಲವೇ? ನಿಮ್ಮೆಲ್ಲರ ಊಹೆ ಸರಿಯಾಗಿಯೇ ಇದೆ. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಎನ್ನುವ ಪಾಳೆಗಾರರ ಆಳ್ವಿಕೆ ವ್ಯಾಪ್ತಿಯಲ್ಲಿದ್ದ ಒಂದು ಗ್ರಾಮದ ಮುಖ್ಯರಸ್ತೆಯಲ್ಲೇ ಈ ದೇವಸ್ಥಾನ ಇದೆ. ಪಾಳೆಗಾರರ ಆಳ್ವಿಕೆಯಿಂದ ಸ್ಮಾರಕಗಳು, ಕೋಟೆ, ಕಟ್ಟಡಗಳು ಈಗಲೂ ಇದ್ದರೂ ಗ್ರಾಮಸ್ಥರಿಗೆ ಇವುಗಳ ಮೌಲ್ಯ, ಮಹತ್ವ ಅಷ್ಟಾಗಿ ಮೂಡಿಲ್ಲ. ಕಾರಣ ಇಲ್ಲಿಯವರಿಗೆ ದುಡಿದುಣ್ಣುವುದೇ ಕಾಯಕ.

ಎಲ್ಲರ ಕಣ್ಣಿಗೆ ಬೀಳುವಂತೆ, ದಾರಿಹೋಕರ ಗಮನ ಸೆಳೆಯುವಂತೆಯೇ ಈ ದೇವಸ್ಥಾನ ಇದ್ದರೂ ಕೂಡ ವೀರಶೈವ ಅಥವಾ ಹಿಂದೂ ಧಾರ್ಮಿಕರಿಂದಲೇ ಬಹುತೇಕ ಕಡೆಗಣಿಸಲ್ಪಟ್ಟಿದೆ ಎಂದರೂ ತಪ್ಪಾಗಲಾರದು. ಬಳ್ಳಾರಿ ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರು ಕೂಡ ಕೇವಲ ಹಂಪೆ, ಹೊಸಪೇಟೆಯನ್ನು ಮಾತ್ರ ಐತಿಹಾಸಿಕ, ಸಾಂಸ್ಕೃತಿಕ ಸ್ಮಾರಕಗಳ ಕೇಂದ್ರವನ್ನಾಗಿ ಪರಿಗಣಿಸುತ್ತಾರೆ. ಆದರೆ, ಕೂಡ್ಲಿಗಿ, ಕೊಟ್ಟೂರು, ಹೂವಿನಹಡಗಲಿ, ಸಿರುಗುಪ್ಪ, ಕುರುಗೋಡು, ತೆಕ್ಕಲಕೋಟೆ ಬಲಕುಂದಿ, ಸೇರಿ ಇನ್ನಿತರೆ ವಿವಿಧ ಸ್ಮಾರಕಗಳತ್ತ ಗಮನ ನೀಡುವುದಿಲ್ಲ. ಇನ್ನು ಸ್ಥಳೀಯ ಪ್ರವಾಸಿಗರಲ್ಲೂ ಆಸಕ್ತಿ ಇಲ್ಲ.

ಇಲ್ಲಿರುವ ದೇವಸ್ಥಾನವೇ ಶಿವಪಾರ್ವತಿ ದೇವಸ್ಥಾನ. ಸಾಮಾನ್ಯವಾಗಿ ನಾವು - ನೀವೆಲ್ಲಾ ನೋಡಿರುವುದು ಶಿವ ದೇವಸ್ಥಾನ, ಈ ಗರ್ಭ ಗುಡಿಗೆ ಎದುರಲ್ಲಿ ನಂದಿ ವಿಗ್ರಹ, ಸಮೀಪದಲ್ಲೇ ಪಾರ್ವತಿ ದೇವಸ್ಥಾನ ಇರುವುದನ್ನು ಮಾತ್ರ. ಆದರೆ, ನೀವಿಲ್ಲ ಕಾಣುವುದು ಶಿವನ ತೊಡೆಯನ್ನೇರಿ ಕೂತಿರುವ ಪಾರ್ವತಿಯ ಕಪ್ಪು ಶಿಲೆಯ ಏಕಶಿಲಾ ವಿಗ್ರಹದ ದೇವಸ್ಥಾನ.

ಸಂಸಾರಸ್ಥ ಶಂಕರ : ಸಂಸಾರ ಪರಿತ್ಯಾಗನಾಗಿ, ವೈರಾಗಿಯಾಗಿ, ಸ್ಮಶಾನವಾಗಿಯಾಗಿ, ಧ್ಯಾನಾಸಕ್ತನಾಗಿ, ಇಲ್ಲವೇ ತನ್ನ ಪುತ್ರರಾದ ಗಣೇಶ, ಷಣ್ಮುಖರೊಂದಿಗೆ ಶಿವ ಅಥವಾ ಶಿವ - ಪಾರ್ವತಿ ಇರುವುದು ನಾವು - ನೀವೆಲ್ಲಾ ಕಾಣುವುದ ಸಹಜ. ಆದರೆ, ಇಲ್ಲಿ ಶಿವ ಪತ್ನಿ ಪಾರ್ವತಿ ಸಮೇತವಾಗಿ ಕಾಣಿಸಿಕೊಂಡು ಸಂಸಾರದಲ್ಲಿ ಇದ್ದು ಸಾಧಿಸಬೇಕು. ಸಂಸಾರದಿಂದಲೇ ಮುಕ್ತಿ' ಎನ್ನುವಂತೆ ಅನೇಕರಿಗೆ ಸೂಚ್ಯವಾಗಿ ಹೆಣ್ಣು ಸಮಾಜದ ಅವಿಭಾಜ್ಯ ಅಂಗ ಎನ್ನುವುದನ್ನು ಸಾರಿದ್ದಾನೆ.

ಶಿವನ ಎಡಗೈಯಲ್ಲಿ ತ್ರಿಶೂಲ. ತ್ರಿಶೂಲದ ಮೇಲ್ಬಾಗದಲ್ಲಿ ರುಂಡ. ಶಿವನ ಬಲಗೈಯಲ್ಲಿ ಪ್ರಿಯವಾದ ನಾದ ನುಡಿಸುವ ಡಮರುಗ ಆಭರಣಗಳಾಗಿ ಇವೆ. ಪಾರ್ವತಿ ತನ್ನ ಬಲಗೈಯನ್ನು ಶಿವನ ಬೆನ್ನ ಮೇಲೆ ಹಾಕಿ ಸಂಸಾರದ ಪ್ರೀತಿ, ಅನ್ಯೋನ್ಯತೆಯನ್ನು ತೋರಿದ್ದಾಳೆ. ಹೆಣ್ಣು ಸಂಸಾರದ ಅವಿಭಾಜ್ಯ ಅಂಗ, ಹೆಣ್ಣು ಸಮಾಜದ ಕನ್ನಡಿ ಎಂದು ಸಾರಿದ್ದಾಳೆ. ಅಷ್ಟೇ ಅಲ್ಲ, ಶಿವನ ತಲೆಯಲ್ಲಿ ಜಟೆಯೇ ಇಲ್ಲ. ಜಟೆಯ ಜೊತೆ ಜೊತೆಯಲ್ಲೇ ಇರುತ್ತಿದ್ದ ಅರ್ಧ ಚಂದ್ರನಿಗೂ ಶಿಲ್ಪಿ ತಿಲಾಂಜಲಿ ನೀಡಿದ್ದಾನೆ. ಶಿವನ ಉಪ ಪತ್ನಿ, ಪಾರ್ವತಿಯ ಸಹೋದರಿ ಗಂಗೆಯಾಗಲೀ ಮೂರ್ತಿಯಲ್ಲಿ ಇಲ್ಲವೇ ಇಲ್ಲ. ಶಿವ - ಪಾರ್ವತಿಯರ ಏಕಾಂತದ ಪ್ರಸನ್ನತೆಯ ತಲ್ಲೀನತೆಯೇ ಈ ಮೂರ್ತಿಯ ಕಲ್ಪನೆ ಆಗಿದೆ.

ಶಿವ - ಪಾರ್ವತಿ ಇಬ್ಬರೂ ಕೂಡ ಕಿರೀಟಧಾರಿಗಳು. ಶಿವನ ಮೂರನೇ ಕಣ್ಣು, ಹಣೆಗಣ್ಣು ಅತ್ಯಂತ ಸೌಮ್ಯವಾಗಿ ಕಾಣಸಿಗುತ್ತದೆ. ಹಸನ್ಮುಖಿಗಳಾಗಿ ಕಾಣುವ ಈ ಪತಿ - ಪತ್ನಿಯಲ್ಲಿ ಸೃಷ್ಟಿಯ ಗಹನವಾದ ಮೌನ ಸಂಭಾಷಣೆ, ಏಕಾಂತತೆಯ ಪರಸ್ಪರ ತಲ್ಲೀನತೆಗಳು ಇರುವಂತೆ ಇದೆ. ಶಿವನ ಎಡಗಾಲ ತೊಡೆಯ ಮೇಲೆ ಪಾರ್ವತಿ ಬಲಗಾಲ ತೊಡೆಯನ್ನು ಇರಿಸಿದ್ದಾಳೆ. ಶಿಲ್ಪಿಯ ಕೆತ್ತನೆಯಲ್ಲಿ ಮೂಡಿರುವ ತಲೆಗೂದಲು, ಆಕರ್ಷಿಸುವ ಕುಸುರಿ ಕಲೆ, ವೈಶಿಷ್ಟಗಳಲ್ಲೇ ವಿಶಿಷ್ಟ ಎನಿಸುವ ಕಲ್ಪನೆ ಎಲ್ಲವೂ ಸೂಕ್ಷ್ಮವಾಗಿ ಗಮನಾರ್ಹವಾದವೇ.

ಐತಿಹಾಸಿಕ ಹಿನ್ನೆಲೆ : ಪಾಳೆಗಾರರ ಆಡಳಿತದಲ್ಲಿದ್ದ ಈ ಗ್ರಾಮದ ಗುಡ್ಡದ ಮೇಲೆ ಕೋಟೆ ಇರುವ ಕಾರನ ಈ ಗ್ರಾಮಕ್ಕೆ ಗುಡ್ಡದಕೋಟೆ, ಗುಡ್ದಕೋಟೆ, ಗುಡೇಕೋಟೆ ಎಂದೆಲ್ಲಾ ಕಾಲಾಂತರದಲ್ಲಿ ಕರೆಯಿಸಿಕೊಂಡು ಬದಲಾಗಿದೆ. ಈ ಪಾಳೆಗಾರರ ಪೈಕಿ ಬಾಣಾಸುರ ಎನ್ನುವ ಸಾಮಾಂತನೇ ಪ್ರಮುಖನು. ಬಲಿಷ್ಠನು ಆಗಿದ್ದನು ಎನ್ನಲಾಗಿದೆ. ಮಹಾಶಿವಭಕ್ತನಾಗಿದ್ದ ಬಾಣಾಸುರನು ತನ್ನ ಪ್ರಜೆಗಳು ಸದಾ ಸುಖಿಗಳಾಗಿ, ಸುರಕ್ಷಿತವಾಗಿ ಇರಬೇಕು. ನೆರೆಹೊರೆಯ ಸಾಮಂತರು, ಅರಸರು ನಡೆಸುವ ದಾಳಿಗಳಿಗೆ ಸುಲಭವಾಗಿ ತುತ್ತಾಗಬಾರದು ಎಂದು ಸಂಕಲ್ಪ ತೊಟ್ಟಿದ್ದನು. ಇದೇ ಪ್ರಾರ್ಥನೆಯಲ್ಲಿ ಶಿವಪೂಜೆಯನ್ನು ನೆರವೇರಿಸುತ್ತಿದ್ದನು. ಈತನ ಪೂಜಾ ಸಂಕಲ್ಪದಂತೆ ಶಿವಪಾರ್ವತಿಯರು ಈತನ ಗುಡೇಕೋಟೆಯ ಜನರ ರಕ್ಷಣೆಗೆ ಮುಂದಾಗಿದ್ದರು. ಕಾರಣ ಅವರು ಊರ ಹೊರಭಾಗದಲ್ಲಿ ಒಟ್ಟಾಗಿ ಕುಳಿತಿದ್ದಾರೆ ಎನ್ನುವುದೇ ಈ ದೇವಸ್ಥಾನದ ವೈಶಿಷ್ಟ್ಯ.

ಮೂಲ ಗರ್ಭ ಗುಡಿಯ ಎಡಭಾಗದಲ್ಲಿ ಗಣೇಶ, ಬಲಭಾಗದಲ್ಲಿ ನಾಟ್ಯ ರೂಪಿ ದುರ್ಗೆ ಪ್ರತಿಷ್ಠಾಪಿತರಾಗಿದ್ದಾರೆ. ನಂದಿಯೂ ಈ ದಂಪತಿಗಳ ಎದುರಲ್ಲೇ ಕುಕ್ಕರಗಾಲಲ್ಲಿ ಧ್ಯಾನಾಸಕ್ತನಾಗಿ ಕೂತಿದ್ದಾನೆ. ದೇವಸ್ಥಾನದ ಎದುರಲ್ಲಿ ಅಳಿದುಳಿದ ಗುರಡಗಂಭ ಇದೆ. ದೇವಸ್ಥಾನಕ್ಕೆ ಆಧುನಿಕ ಸ್ಪರ್ಶವಾಗಿ ವಿದ್ಯುತ್ ಸಂಪರ್ಕ ಬಂದಿದೆ. ಕಟ್ಟಡ ತಲೆ ಎತ್ತಿದೆ. ಆದರೂ, ದೇವಸ್ಥಾನದ ಆವರಣದಲ್ಲಿ ಸ್ವಚ್ಛತೆ ಕನಸಿನ ಮಾತು. ಶಿವರಾತ್ರಿ ಬಂದಾಗ ಮಾತ್ರ ಊರ ಜನರ ದೇವತೆ ಈ ದಂಪತಿಗಳು. ಇಲ್ಲವಾದಲ್ಲಿ ದನಕರುಗಳ ಹುಲ್ಲುಗಾವಲು, ಊರ ಜನರ ತಣ್ಣನೆಯ ನಿದ್ರಾಸ್ಥಳ.

ಅನೈತಿಕ ಚಟುವಟಿಕೆ : ಈ ದೇವಸ್ಥಾನದ ಹಿಂಭಾಗದಲ್ಲೇ ಕೃಷಿಯೋಗ್ಯ ನೀರಾವರಿ ಭೂಮಿ ಇದೆ. ಕೃಷಿಕರೂ ಇಲ್ಲಿಗೆ ಬಂದು ಕೆಲ ಹೊತ್ತು ತಂಗುತ್ತಾರೆ. ಅವರು ಈ ದೇವಸ್ಥಾನ ತಮ್ಮದೇ' ಎಂದು ಪರಾಮರ್ಶಿಸಿದರೆ ಸಾಕು ಈ ದೇವಸ್ಥಾನ ಮುಂದಿನ ಪೀಳಿಗೆಗೆ ಅವರ ಕೊಡುಗೆ ಆಗಿ ಉಳಿಯುತ್ತದೆ. ಇಲ್ಲವಾದಲ್ಲೆ ರಸ್ತೆ ಅಗಲೀಕರಣ ಅಥವಾ ನಿರ್ಲಕ್ಷ್ಯದಿಂದಾಗಿ, ಅನೈತಿಕ ಚಟುವಟಿಕೆಗಳ ತಾಣವಾಗಿ ದೇವಸ್ಥಾನ ಇಲ್ಲವಾಗುತ್ತದೆ ಎನ್ನುವುದು ಅನೇಕರ ಆತಂಕ. ಈ ದೇವಸ್ಥಾನ ಹೊಯ್ಸಳರ ಕಾಲದ ಕೆತ್ತನೆ ಎನ್ನುವ ಅನೇಕರು, ಈ ಕುರಿತು ಹೆಚ್ಚಿನ ಅಧ್ಯಯನ, ಸಂಶೋಧನೆ ನಡೆಯಬೇಕಿದೆ. ನಿರ್ಲಕ್ಷ್ಯಕ್ಕೆ ಒಳಗಾಗಿರುವ ಈ ಶಿವಪಾರ್ವತಿ ದೇವಸ್ಥಾನದ ಮಾಹಿತಿ ಇತಿಹಾಸ ಆಸಕ್ತರಿಗೆ ತಿಳಿಯಬೇಕಿದೆ ಎನ್ನುವುದೇ ಅನೇಕರ ಆಶಯ.

ಬರೀ ಶಿವಪಾರ್ವತಿ ದೇವಸ್ಥಾನ ಮಾತ್ರ ಇಲ್ಲಿಲ್ಲ. ಆಂಜನೇಯ, ಚೌಡಮ್ಮ, ಮಲಿಯಮ್ಮ, ರಾಮಲಿಂಗೇಶ್ವರ, ಬಸವಣ್ಣ, ಕಾಳಮ್ಮ, ಈಶ್ವರ, ಲಕ್ಷ್ಮೀ ವೆಂಕಟೇಶ್ವರ, ಚೌಳೇಶ್ವರ, ಪಂಚಲಿಂಗೇಶ್ವರ ಸೇರಿ ವಿವಿಧ ದೇವಸ್ಥಾನಗಳೂ ಇಲ್ಲಿವೆ. ಇಲ್ಲಿಯ ಪಾಳೆಗಾರರು ಚಿತ್ರದುರ್ಗದ ನಾಯಕರ ಜೊತೆ ವೈವಾಹಿಕ ಸಂಬಂಧಗಳನ್ನು ಬೆಳೆಸಿದ್ದರು. ಇದರ ಫಲವಾಗಿ ಗುಡೇಕೋಟೆಯ ಛಲವಾದಿ ಚಿನ್ನಪ್ಪನ ಮಗಳಾದ ಓಬವ್ವ ಚಿತ್ರದುರ್ಗ ಕೋಟೆಯನ್ನು ವಿರೋಧಿಗಳಿಂದ ರಕ್ಷಿಸಿದ ಒನಕೆ ಓಬವ್ವಳಾಗಿದ್ದು ಇತಿಹಾಸ. ಈ ಊರು ಓಬವ್ವಳ ತವರೂರು ಎನ್ನುವುದೂ ಹೆಮ್ಮೆಯ ಸಂಗತಿ.

English summary
Have you ever seen Parvati sitting on the lap of Shiva? Here is is one of the rarest temples in Karnataka. Located in Gudekote village in Kudligi taluk in Bellary district, is picture of negligence. It has become hub of many illegal activities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X