• search
  • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಿಪ್ಪಗಿರಿಯಲ್ಲಿ ಅಪರೋಕ್ಷ ಜ್ಞಾನಿ ಮೋಹನದಾಸರ ಆರಾಧನೆ

By ಕೆ. ಕೆ. ಕುಲಕರ್ಣಿ
|

ಗುಂತಕಲ್, ಜೂನ್ 07 : ಇಲ್ಲಿಗೆ ಸಮೀಪ ಶ್ರೀ ವಿಜಯದಾಸರ ಕಟ್ಟೆಯ ಹತ್ತಿರದಲ್ಲಿ ಶ್ರೀ ಮೋಹನದಾಸರ ಆರಾಧನಾ ಮಹೋತ್ಸವವು ಅತ್ಯಂತ ವಿಜೃಂಭಣೆಯಿಂದ ಜೇಷ್ಠ ಶುದ್ಧ ಪಂಚಮಿಯಿಂದ ಸಪ್ತಮಿವರೆಗೆ ಜರುಗಲಿದೆ ಎಂದು ವಿಜಯದಾಸರ ಟ್ರಸ್ಟ್ ತಿಳಿಸಿದೆ.

ಅಪರೋಕ್ಷ ಜ್ಞಾನಿಗಳೆನಿಸಿದ ಮೋಹನದಾಸರ ಆರಾಧನೆಯನ್ನು ಚಿಪ್ಪಗಿರಿಯ ಪ್ರಶಾಂತ ಸ್ಥಳದಲ್ಲಿ ಆಚರಿಸಲಾಗುತ್ತಿದೆ. ಆರಾಧನೆ ಜೂನ್ 9, ಭಾನುವಾರದಿಂದ ಆರಂಭವಾಗಲಿದ್ದು, ಮೂರು ದಿನಗಳ ಕಾಲ ನೆರವೇರಲಿದೆ. ಊರೂರಿಂದ ಸಹಸ್ರಾರು ಭಕ್ತಾದಿಗಳು ಈ ಆಚರಣೆಯಲ್ಲಿ ಭಾಗವಹಿಸಲಿದ್ದಾರೆ.

ಜಾತಿ-ಮತಗಳ ಮೀರುವ ಪ್ರಯತ್ನಕ್ಕೆ ನಾಂದಿಯಾಗಲಿ ಕನಕಜಯಂತಿ

ಭಾರತೀಯ ಆಧ್ಯಾತ್ಮಿಕ ಪರಂಪರೆಗೆ ಹರಿದಾಸರು ನೀಡಿದ ಸಾಹಿತ್ಯ ಕೊಡುಗೆ ಅಪಾರ. ವೇದಗಳ ಸಾರವನ್ನು ಕನ್ನಡ ತಿಳಿಭಾಷೆಯಲ್ಲಿ ನೀಡಿ ಜನಸಾಮಾನ್ಯರಿಗೆ ನೀಡಿದ ಹರಿದಾಸರು ಮಾನವ ಜನಾಂಗಕ್ಕೆ ಮಹದುಪಕಾರ ಮಾಡಿದ್ದಾರೆ. ಹರಿದಾಸರ ಪರಂಪರೆಯಲ್ಲಿ ಮೋಹನ ದಾಸರ ಪಾತ್ರ ಪ್ರಮುಖವಾದದ್ದು. ವಿಜಯದಾಸರ ಕೃಪಾ ಛತ್ರದಲ್ಲಿ ಬೆಳೆದ ದಾಸರು ಅಪರೋಕ್ಷ ಜ್ಞಾಗಳೆನಿಸಿದ ಚಂದ್ರುಂಶ ಸಂಭೂತರು.

ಮೋಹನದಾಸರ ಚರಿತ್ರೆ ವಿಜಯದಾಸರ ಚರಿತ್ರೆಯೊಂದಿಗೆ ಹಾಸುಹೊಕ್ಕಾಗಿದೆ. ಬಡತನ, ಸಾಮಾಜಿಕ ಉಪೇಕ್ಷೆಗಳಿಂದ ಬಾಲ್ಯದಲ್ಲಿಯೇ ಸಾವನ್ನು ಕಾಣಬಹುದಾಗಿದ್ದ ಜೀವವೊಂದು, ಮಹಾಮಹಿಮ ವಿಜಯದಾಸರು ತೋರಿದ ಮಾನವೀಯತೆಯಿಂದ ಬದುಕುಳಿದು, ಬೆಳೆದು ದಾಸ ಪರಂಪರೆಗೆ ದಿವ್ಯ ಕೊಡುಗೆ ನೀಡಿದ ಅವರ ಜೀವನ ಚರಿತ್ರೆ ಭಕ್ತರಿಗೆ ಸ್ಫೂರ್ತಿದಾಯಕವಾಗಿದೆ.

ಆನೆಗುಂದಿ ಭೀಮಪ್ಪ ನಾಯಕ ಎಂಬ ಶ್ರೀಮಂತ ಸರಾಫ ಕುಟುಂಬದ ಒಡೆಯ. ಇಡೀ ಕುಟುಂಬದ ಹಿತ ಚಿಂತನೆ ಮಾಡಿದ ಭೀಮಪ್ಪ ನಾಯಕ, ತನ್ನ ಮಡದಿ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಮಾಡಿರಲಿಲ್ಲ. ಪತ್ನಿಯು ಗರ್ಭಿಣಿಯಾಗಿದ್ದಾಗ ಅಕಾಲಿಕ ಸಾವಿಗೀಡಾದರು. ಪತಿಯ ವಿಯೋಗದಿಂದ ಅವರ ಪತ್ನಿ ಬರಿಗೈಯಲ್ಲಿ ತವರು ಮನೆ ಆಶ್ರಯ ಪಡೆಯಬೇಕಾಯಿತು. ಆದರೆ ಮಗು ಜನಿಸಿದ ನಂತರ ತವರಿನ ಆಶ್ರಯ ತಪ್ಪಿ ಊರು ಊರು ಅಲೆಯ ಬೇಕಾದ ಸನ್ನಿವೇಶ ಎದುರಾಯಿತು.

ಉಡುಪಿಯಲ್ಲಿರುವುದು ಕನಕನ ಕಿಂಡಿ ಅಲ್ಲ: ಹೊಸ ವಿವಾದ

ಇಂತಹ ಒಂದು ಸಂದರ್ಭದಲ್ಲಿ ವಿಜಯದಾಸರು, ಹಂಪಿಯ ಚಕ್ರತೀರ್ಥದ ಬಳಿ ಸತ್ರಯಾಗವನ್ನು ಹಮ್ಮಿಕೊಂಡಿದ್ದರು. ನಿರಂತರ ಅನ್ನದಾನ, ಜ್ಞಾನದಾನ ನಡೆದಿತ್ತು. ಸಾವಿರಾರು ಭಕ್ತರು ಅಲ್ಲಿ ನೆರೆಯುತ್ತಿದ್ದರು. ಮಗುವಿನೊಂದಿಗೆ ಭೀಮಪ್ಪ ನಾಯಕನ ಮಡದಿಯು ಅಲ್ಲಿಗೆ ಬರುವವಳಾಗಿದ್ದಳು.

ಬಡತನವನ್ನೇ ಉಂಡಿದ್ದ ಆ ಸಾದ್ವಿಗೆ ಪೋಷಕರು ಇಲ್ಲದೇ ಕಜ್ಜಿಯಿಂದ ಬಳಲುತ್ತಿದ್ದ ಮಗುವನ್ನು ಕಂಡು ಅಲ್ಲಿದ್ದ ಜನರು ಬೇಸತ್ತಿದ್ದರು. ಜನರ ಉಪೇಕ್ಷೆಯಿಂದ ನೊಂದ ಸಾದ್ವಿ ಮಗುವಿನೊಂದಿಗೆ ನದಿಗೆ ಹಾರಲು ಹೊರಟಾಗ ವಿಜಯದಾಸರು ಅಲ್ಲಿಗೆ ಆಗಮಿಸಿ ಆತ್ಮಹತ್ಯೆ ಮಹಾಪಾಪ ಎಂದು ತಿಳಿಸಿ ಅವಳನ್ನು ಮನೆಗೆ ಕರೆತಂದರು. ಕಜ್ಜಿಯಿಂದ ಬಳಲುತ್ತಿದ್ದ ಮಗುವನ್ನು ತೊಡೆಯ ಮೇಲೆ ಹಾಕಿಕೊಂಡು ದೈವ ಪ್ರೇರಣೆಯಿಂದ ಸುಂದರವಾದ ಪದ್ಯವೊಂದನ್ನು ಹೇಳಿದರು.

ಚಿರಂಜೀವಿಯಾಗಲೋ ಚಿನ್ನ ನೀನು ಹರಿದಾಸರ ಪಾದಧೂಳಿಯಾಗಿ ಎಂಬ ಆ ಪದ್ಯವು ಇಂದಿಗೂ ಆಸ್ತಿಕರ ಪಾಲಿಗೆ ನಿತ್ಯ ಮಂತ್ರವಾಗಿದೆ. ಮಾನವ ಜೀವನ ಹೇಗೆ ಇರಬೇಕು ಎಂಬುದು ಸರಳ ಸುಂದರವಾದ ಈ ಪದ್ಯದಲ್ಲಿ ಮಾರ್ಮಿಕವಾಗಿ ವಿವರಿಸಲ್ಪಟ್ಟಿದೆ. ವಿಜಯದಾಸರು ನಂತರ ಮಗುವಿನ ಕಿವಿಯಲ್ಲಿ ಮಂತ್ರೋಪದೇಶ ಮಾಡಿ ತಮ್ಮ ಮಡದಿಗೆ ಒಪ್ಪಿಸಿದರು. ಪುತ್ರ ಶೋಕದಿಂದ ಬಳಲುತ್ತಿದ್ದ ದಾಸರ ಪತ್ನಿ ತಾನೇ ಸ್ವತಃ ಹೆತ್ತ ಮಗುವಿನಂತೆ ಜೋಪಾನ ಮಾಡಿದರು. ಸುಂದರ ಮಗುವಿಗೆ ಮೋಹನ ಎಂದು ನಾಮಕರಣ ಮಾಡಿದರು. ದಾಸ ದಂಪತಿಗಳ ಆರೈಕೆಯಲ್ಲಿ ಬೆಳೆದು ಅವರ ಹಾದಿಯಲ್ಲಿಯೇ ಹೆಜ್ಜೆ ಹಾಕಿ ಹರಿದಾಸ, ಸಾಹಿತ್ಯ ಪರಂಪರೆಯನ್ನು ಬೆಳೆಸಿದ ಮೋಹನದಾಸರ ಆರಾಧನೆಯನ್ನು ಪ್ರತಿ ವರ್ಷ ಜೇಷ್ಠ ಶುದ್ಧ ಪಂಚಮಿಯಿಂದ ಸಪ್ತಮಿವರೆಗೆ ಶ್ರೀ ಕ್ಷೇತ್ರ ಚಿಪ್ಪಗಿರಿಯಲ್ಲಿ ಆಚರಿಸಲಾಗುತ್ತಿದೆ.

ಚಿಪ್ಪಗಿರಿ ಎಲ್ಲಿ ಬರುತ್ತದೆ, ಹೋಗುವುದು ಹೇಗೆ? : ದಾಸ ಸಾಹಿತ್ಯ ವರೇಣ್ಯ ವಿಜಯದಾಸರ (1682-1755) ತಪೋಭೂಮಿಯಾದ ಚಿಪ್ಪಗಿರಿ ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯಲ್ಲಿ ಬರುತ್ತದೆ. ಗುಂತಕಲ್ ವರೆಗೆ ರೈಲಿನಲ್ಲಿ ಹೋಗಿ, ಅಲ್ಲಿಂದ ಬಾಡಿಗೆ ವಾಹನಗಳ ಮೂಲಕ 10 ಕಿ.ಮೀ. ದೂರದಲ್ಲಿರುವ ಚಿಪ್ಪಗಿರಿ ತಲುಪಬಹುದು ಅಥವಾ ಬೆಂಗಳೂರಿನಿಂದ ಖಾಸಗಿ ವಾಹನದ ಮೂಲಕವೂ ಅನಂತಪುರದ ಮೇಲಿಂದ ಚಿಪ್ಪಗಿರಿಗೆ ಹೋಗಬಹುದು. ಬಳ್ಳಾರಿಯಿಂದ ಚಿಪ್ಪಗಿರಿ ಕೇವಲ 66 ಕಿ.ಮೀ. ದೂರದಲ್ಲಿದೆ. ಅಲ್ಲಿ ಇಳಿದುಕೊಳ್ಳಲು ಎಲ್ಲ ವ್ಯವಸ್ಥೆಯೂ ಇದೆ.

English summary
Mohanadasara aradhane in Chippagiri, Andhra Pradesh, will be held from June 9 for 3 days. Mahanadararu is disciple of Vijaya Dasaru, who consecrated Anjaneya Swamy in Chippagiri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X