ಓದುಗರ ಪತ್ರ: ಶೀರೂರು ಸ್ವಾಮಿಗಳೇ ಪೀಠ ಬಿಟ್ಟು ಹೋಗಿ
ಶೀರೂರು ಸ್ವಾಮಿಗಳ ವಿಡಿಯೋ ಕುರಿತು 'ಮಾಧ್ಯಮಗಳಿಗೆ ಮಾಧ್ವ ಬ್ರಾಹ್ಮಣನ ಪ್ರಶ್ನೆಗಳು' ಎಂಬ ಲೇಖನವನ್ನು ಓದಿ ಆಶ್ಚರ್ಯವಾಯಿತು. ಬಿಟೀವಿ ವಾಹಿನಿಯಲ್ಲಿ ಪ್ರಸಾರವಾದ ವಿಡಿಯೋದ ಸಾಚಾತನದ ಬಗ್ಗೆ ಹಾಗೂ ಮಾಧ್ಯಮಗಳ ನಿಷ್ಠೆಯನ್ನು ಪ್ರಶ್ನಿಸುವ ಭರದಲ್ಲಿ "ನಮ್ಮನ್ನು ಪ್ರಶ್ನಿಸಬೇಡಿ" ಎಂಬ ಒಳಧ್ವನಿಯನ್ನು ಸೇರಿಸಿ ಬರೆದಂತಿದೆ ಆ ಲೇಖನ.
ಜಗತ್ತಿನ ಸತ್ಯತ್ವದ ಬಗ್ಗೆ ಸಾರಿದ ಶ್ರೀಮಧ್ವಾಚಾರ್ಯರ ಅನುಯಾಯಿಯಾಗಳಾದವರಿಗೆ "ತತ್ವ" ಎಂದರೆ ಅನಾರೋಪಿತವಾದ ಸತ್ಯ ಎಂಬ ತಿಳಿವಳಿಕೆ ಇರಬೇಕು. ಇದ್ದದ್ದನ್ನು ಇದ್ದ ಹಾಗೇ ಗ್ರಹಿಸುವ ವಿಷಯದಲ್ಲಿ ದಾರ್ಢ್ಯತೆಬೇಕು. ಸುಳ್ಳಿನ ಕತೆ ಹಾಗೂ ಮುಖವಾಡದ ಬದುಕು ಕಟ್ಟಿಕೊಂಡು ಮಧ್ವಾಚಾರ್ಯರ ಅನುಯಾಯಿ ಎಂದು ಹೇಳಿಕೊಂಡರೆ ಅದು ಆತ್ಮವಂಚನೆ ಹಾಗೂ ಅದು ಮಧ್ವಾಚಾರ್ಯರಿಗೆ ಮತ್ತು ಅವರ ಜ್ಞಾನದ ಪರಂಪರೆಗೆ ಮಾಡುವ ದೊಡ್ಡ ಮೋಸ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಶೀರೂರು ಸ್ವಾಮಿಗಳ ಹೊರತುಪಡಿಸಿ, ಉಡುಪಿಯ ಯಾರೊಬ್ಬರೂ 'ಅದು ತಿರುಚಲಾದ ವೀಡಿಯೋ' ಎಂಬ ಸಂದೇಹವನ್ನು ವ್ಯಕ್ತಪಡಿಸಿಲ್ಲ. (ಪ್ರಜಾವಾಣಿಯ ವರದಿಯಂತೆ ಶೀರೂರು ಸ್ವಾಮಿಗಳು ವೀಡಿಯೋ ನಕಲಿ ಎಂದಿದ್ದಾರಂತೆ ). ಆದರೆ ಉಡುಪಿಯ ಬಹುತೇಕ ಜನರಿಗೆ ಗೊತ್ತು ಅದು ನಕಲಿಯಲ್ಲ ಎನ್ನುವುದು.
ಆ ವೀಡಿಯೋದಲ್ಲಿ ಅವರ ಧ್ವನಿ ಮತ್ತು ಅವರ ನಡವಳಿಕೆ ಎಲ್ಲವೂ ಸಹಜವಾಗಿಯೇ ಇದೆ. ಹೀಗಾಗಿ ಮಾಧ್ಯಮದ ಮೇಲೆ ಗೂಬೆ ಕೂಡಿಸುವ ಬದಲು, ಗೂಬೆ ನಮ್ಮ ತಲೆ ಏರದ ಹಾಗೆ ಎಚ್ಚರ ವಹಿಸಬೇಕಾಗಿದೆ. ಶೀರೂರು ಸ್ವಾಮಿಗಳು ತಮ್ಮ ಮೇಲೆ ಆರೋಪ ಬಂದಾಗ ಜನರ ಹಾದಿ ತಪ್ಪಿಸುವ ಸಲುವಾಗಿ ಡ್ರಾಮಾ ಮಾಡುತ್ತಿರುವ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ ಗೂಬೆಗಳಾಗುವುದು ನಾವೇ. 'ಇನ್ನಾದರೂ ತಪ್ಪನ್ನು ತಪ್ಪು ಎಂದು ಒಪ್ಪಿಕೊಳ್ಳುವ ಪ್ರಾಮಾಣಿಕತೆ ಉಳಿಸಿಕೊಂಡು ಚರ್ಚಿಸೋಣ.'
ಶೀರೂರು ಸ್ವಾಮಿಗಳು ತಾನು ಮಾಡಿದ ತಪ್ಪು ಮುಚ್ಚುವ ಸಲುವಾಗಿ 'ಬೇರೆಯವರೂ ಹೀಗೆ ಮಾಡಿಲ್ಲವೇ' ಅಂತ ಪ್ರಶ್ನೆ ಎತ್ತಿದ್ದಾರೆ. 'ಅವರಿಗೊಂದು ನಿಯಮ ನನಗೊಂದು ನಿಯಮ' ಯಾಕೆ ಅಂತಲೂ ಕೇಳಿದ್ದಾರೆ. ತಪ್ಪು ಯಾರದ್ದಾದರೆ ಏನು?! ತಪ್ಪು ಮಾಡಿದ ಎಲ್ಲರೂ ಪೀಠತ್ಯಾಗ ಮಾಡಿ ಹೊರಗೆ ಹೋಗಲಿ.
ಶೀರೂರು ಸ್ವಾಮಿಗಳೇ, ನೀವು ನಿಮಗೆ ಮಕ್ಕಳು ಇರುವುದನ್ನು ಆ ವಿಡಿಯೋದಲ್ಲಿ ಧೈರ್ಯವಾಗಿ ಒಪ್ಪಿದ್ದೀರಿ. ಅಷ್ಟೇ ಧೈರ್ಯದಿಂದ ನಿಮಗೆ ಯಾರು ತಪ್ಪು ಮಾಡಿದ್ದಾರೆ ಎಂದು ನಿಖರವಾಗಿ ಗೊತ್ತೋ ಅವರ ಬಗ್ಗೆ ನಿಖರವಾದ ಮಾಹಿತಿ ಕೊಡಿ. ಸುಮ್ಮನೆ ಕಾಗೆ ಹಾರಿಸುವ ಕೆಲಸ ಮಾಡಬೇಡಿ. ತಪ್ಪಿತಸ್ಥರು ಯಾರೇ ಆದರೂ ಅವರು ಪೀಠದಲ್ಲಿ ಇರಲು ಅರ್ಹರಲ್ಲ.
ಈಗಾಗಲೇ ಬೃಂದಾವನದ ಅಡಿ ಸೇರಿದ ಕೆಲವರ ಬಗ್ಗೆಯೂ ಇದೇ ಆರೋಪ ಮಾಡಿದ್ದೀರಿ. ನೀವು ಹೇಳಿದಂತೆ, ಒಂದು ವೇಳೆ ಗತಿಸಿದವರು ಹಾಗೆ ತಪ್ಪು ದಾರಿಯಲ್ಲಿ ನಡೆದವರೇ ಆಗಿದ್ದರೆ ಅವರೂ ಒಂದು ಕಪ್ಪು ಚುಕ್ಕಿ ಎಂದು ನಮ್ಮ ಪಾರಂಪರಿಕ ಗೌರವದ ಪಟ್ಟಿಯಿಂದ ತೆಗೆದು ಹಾಕಿಬಿಡುತ್ತೇವೆ. ಇಂತಹ ಒಂದು ಸ್ವಚ್ಛತಾ ಅಭಿಯಾನದ ಉದ್ಘಾಟನೆ ನಿಮ್ಮಿಂದಲೇ ಆರಂಭವಾಗಲಿ.
ಮಾಧ್ಯಮಗಳಿಗೆ ಮಾಧ್ವ ಬ್ರಾಹ್ಮಣನ ಪ್ರಶ್ನೆಗಳು, ಉತ್ತರಿಸಿ...
ದಯವಿಟ್ಟು ಪೀಠತ್ಯಾಗ ಮಾಡಿ ಹಾಗೂ ಮುಂದಿನ ಪೀಠಾಧಿಪತಿ ಯಾರಾಗಬೇಕೆಂಬ ವಿಷಯದಲ್ಲಿ ನಿಮ್ಮ ಹಸ್ತಕ್ಷೇಪ ಇರದಂತೆ ನಿಮ್ಮ ಪಾಡಿಗೆ ನೀವು ಹೊರಗೆ ಹೋಗಿ. ನಿಮಗೆ ಬಾಲ್ಯದಲ್ಲಿ ಸನ್ಯಾಸದೀಕ್ಷೆ ಕೊಡುವಾಗ 'ನಿಮ್ಮ ಹಿಂದಿನವರು ಮಾಡಿದ ತಪ್ಪು' ಮತ್ತೆ ಮರುಳಿಸುವುದು ಬೇಡ.
ಇನ್ನೊಬ್ಬರ ಬಗ್ಗೆ ನೀವು ಮಾಡುತ್ತಿರುವ ಗುರುತರ ಆರೋಪ, ಒಬ್ಬ ಕಳ್ಳ ತಾನು ತಪ್ಪಿಸಿಕೊಳ್ಳುವ ಸಲುವಾಗಿ ಊರಿನಲ್ಲಿ ಇರುವವರನ್ನೆಲ್ಲಾ ಕಳ್ಳರೆಂದು ಕರೆದಂತೆ ಆಗಬಾರದು. ಪ್ರಾಮಾಣಿಕವಾದ ಬದಲಾವಣೆ ನಮ್ಮ ಸಮಾಜಕ್ಕೆ ಬೇಕು. ಅದಕ್ಕಾಗಿ ನಿಮ್ಮ ಬಗ್ಗೆ ನೀವು ಹೇಳಿಕೊಂಡ ಹಾಗೆ ಬೇರೆಯವರ ಬಗ್ಗೆ ಆಧಾರಸಹಿತವಾದ, ಗೊತ್ತಿರುವ ಸತ್ಯವನ್ನು ಹೇಳಿ. ಸುಳ್ಳು ಆರೋಪಗಳನ್ನು ಮಾಡಿ ಓಡಿಹೋಗುವ ಬದಲು ಪೀಠತ್ಯಾಗ ಮಾಡಿ ಹೋದರೂ ಕೂಡ ಶುದ್ಧೀಕರಣಕ್ಕೆ ನೆರವಾದಿರಿ ಎಂಬ ಗೌರವವನ್ನು ಕಾಪಾಡಿಕೊಳ್ಳುತ್ತೀರಿ.
ಮಠಗಳಲ್ಲಿ ಹಿಂದಿನವರು ಚೆನ್ನಾಗಿ ಆದಾಯ ಬರುವ ಹಾಗೆ ಆಸ್ತಿ-ಪಾಸ್ತಿ ಮಾಡಿಟ್ಟಿದ್ದರೆ ಅಥವಾ ಸ್ವಾಮಿಗಳು ಸಂಚಾರವಿಲ್ಲದೇ, ಪಾಠ- ಪ್ರವಚನಗಳ ಗೋಜೂ ಇಲ್ಲದೆ ಒಂದೇ ಕಡೆ ವರ್ಷಾನುಗಟ್ಟಲೆ ಕುಳಿತರೆ ಅಥವಾ ತೀರಾ ಏಕಾಂತವಾಗಿ ಇರುವ ಹಾಗೆ ಅವರು ವಾಸಿಸುವ ಕಟ್ಟಡ ಇದ್ದರೆ, ಜೊತೆಗೆ ಕೆಟ್ಟ ದಾರಿ ಹಿಡಿದು ಎಲ್ಲೂ ಸಲ್ಲದೇ ಮಠಕ್ಕೆ ಸೇರುವ ಸಿಬ್ಬಂದಿಯೂ ಅವರಿಗೆ ಸಿಕ್ಕಿಬಿಟ್ಟರೆ, ಮತ್ತು ಇತ್ತೀಚಿನ ಮೊಬೈಲ್ ಗಳೊಂದಿಗೆ ಸರಾಗವಾಗಿ ಬರುವ ಇಂಟರ್ ನೆಟ್ ಅವರಲ್ಲಿ ಇದ್ದರೆ (ಜೊತೆಗೆ ವಯಸ್ಸು ಕಡಿಮೆ ಇದ್ದರೆ ) ಕೆಡಲು ಇನ್ನೇನು ಬೇಕು ?