• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲಂಚೂ ಇಲ್ಲ, ಬಾಕ್ಸೂ ಇಲ್ಲ, ಬ್ರಾಹ್ಮಣರ ಮೇಲೇಕೆ ಕೋಪ?

By ಶ್ರೀನಿಧಿ
|

" 'ಬ್ರಾಹ್ಮಿನ್ಸ್ ಲಂಚ್ ಬಾಕ್ಸ್' ಅನ್ನೋ ಹೆಸರಲ್ಲಿ ಕ್ಯಾಟರಿಂಗ್ ಸರ್ವೀಸ್ ಶುರು ಮಾಡಿದ್ದು ಹೌದು. ಅದು 2017ರಲ್ಲಿ. ಆದರೆ ಜಾತಿ ಹೆಸರಿಟ್ಟುಕೊಂಡೇ ದುಡ್ಡು ಮಾಡಲು ಹೊರಟವನಲ್ಲ ನಾನು. ಆ ಕ್ಯಾಟರಿಂಗ್ ಸರ್ವೀಸ್ ನಿಲ್ಲಿಸಿ ಆರು ತಿಂಗಳಾಗಿದೆ. ಈಗ ಆ ಪಾಂಪ್ಲೆಟ್ ಹಾಕಿ ಲೇಖನ ಬರೆದಿದ್ದಾರೆ".

-ಇಂಗ್ಲಿಷ್ ಮಾಧ್ಯಮವೊಂದರಲ್ಲಿ ಬಂದ ಲೇಖನಕ್ಕೆ ಸಂಬಂಧಿಸಿದಂತೆ ಆತ ಸಿಟ್ಟಾಗಿದ್ದರು. ಅವರ ಹೆಸರು ಶ್ರೀನಿಧಿ. ಕಳೆದ ವರ್ಷ ಆಗಸ್ಟ್ ಹದಿನೈದರಂದು ಬ್ರಾಹ್ಮಿನ್ಸ್ ಲಂಚ್ ಬಾಕ್ಸ್ ಅನ್ನೋ ಹೆಸರಲ್ಲಿ ಮನೆ-ಮನೆಗೆ ಊಟ ತಲುಪಿಸುವ, ಆ ಮೂಲಕ ತಾವೊಂದು ವೃತ್ತಿ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದರು. ಆ ಬಗ್ಗೆ ಒನ್ಇಂಡಿಯಾ ಕನ್ನಡದಲ್ಲಿ ಲೇಖನ ಕೂಡ ಬಂದಿತ್ತು.

ಊಟ-ತಿಂಡಿ ಮನೆಗೆ ತಲುಪಿಸುವ- 'ಬ್ರಾಹ್ಮಿನ್ ಲಂಚ್ ಬಾಕ್ಸ್'

"ಆದರೆ, ಅನಾರೋಗ್ಯದ ಕಾರಣಕ್ಕೆ- ವೈದ್ಯರ ಸಲಹೆ ಮೇರೆಗೆ ಈ ವರ್ಷದ ಜನವರಿಯಲ್ಲೇ ಲಂಚ್ ಬಾಕ್ಸ್ ನ ಸೇವೆ ನಿಲ್ಲಿಸಿ ಆಗಿದೆ. ಯಾಕೆ ಆ ಹೆಸರು ಇಟ್ಟಿರಿ ಎಂದು ಸೌಜನ್ಯಕ್ಕೂ ಈಗ ನಮ್ಮನ್ನು ಒಂದು ಮಾತು ಕೂಡ ಕೇಳದೆ ಜಾತಿ ಹೆಸರಲ್ಲಿ ಹೀಗೆ ಮಾಡುತ್ತಾರೆ ಎಂದು ವರದಿ ಮಾಡಿದರೆ ಸಿಟ್ಟು ಬರದೆ ಇರುತ್ತದಾ?" ಎಂದು ಮತ್ತೊಮ್ಮೆ ತಮ್ಮ ಅಸಮಾಧಾನ ಹೊರಹಾಕಿದರು.

ಅವರ ಸ್ಪಷ್ಟನೆಯ ಪೂರ್ಣ ವಿವರ ಇಲ್ಲಿದೆ.

ನಮಗೆ ಊಟದ ವ್ಯವಸ್ಥೆ ಮಾಡಿಕೊಡಿ ಎಂದು ಕೇಳಿದ್ದರು

ನಮಗೆ ಊಟದ ವ್ಯವಸ್ಥೆ ಮಾಡಿಕೊಡಿ ಎಂದು ಕೇಳಿದ್ದರು

"ನಮ್ಮದು ಬ್ರಾಹ್ಮಣ ಸಮುದಾಯದ ಕುಟುಂಬ. ನಾನು ಹಾಗೂ ನನ್ನ ತಮ್ಮ ಇಬ್ಬರೂ ವಿದ್ಯಾವಂತರೇ. ಆದರೆ ಅಪ್ಪ ಇಂದಿಗೂ ದೇವಸ್ಥಾನದ ಪೂಜೆ ಮಾಡುತ್ತಾರೆ, ಜ್ಯೋತಿಷ್ಯ ಹೇಳುತ್ತಾರೆ. ಅವರಿಗೆ ಸಹಾಯದ ಅಗತ್ಯ ಬಂದಾಗ ನಾವಿಬ್ಬರೂ ಹೋಗುತ್ತೇವೆ. ನಮ್ಮ ದೇವಸ್ಥಾನಕ್ಕೆ ಬರುವ ವಯಸ್ಸಾದವರೊಬ್ಬರು, ನಿಮ್ಮ ತಾಯಿಯವರಿಗೆ ಹೇಳಿ, ನಮಗೆ ಊಟದ ವ್ಯವಸ್ಥೆ ಮಾಡಿಸಿಕೊಡಿ. ಇಲ್ಲಿ ನಾವು ಗಂಡ-ಹೆಂಡತಿ ಮಾತ್ರ ಇದ್ದೀವಿ. ನಮ್ಮಿಂದ ಸಾಧ್ಯವಾದಷ್ಟು ಸಂಬಳವೂ ಕೊಡ್ತೀವಿ ಅಂದರು. ಅಮ್ಮನನ್ನು ಕೆಲಸಕ್ಕೆ ಕಳಿಸುವ ಉದ್ದೇಶ ಹಾಗೂ ಅಗತ್ಯ ಎರಡೂ ನಮಗೆ ಇರಲಿಲ್ಲ. ಆದ್ದರಿಂದ, ಅವರಿಗೆ ನಯವಾಗಿಯೇ 'ಆಗಲ್ಲ' ಅಂತ ಉತ್ತರ ಕೊಟ್ಟೆವು".

ಈ ಹೆಸರು ಬೇರೆಯವರಿಂದ ಬಂದ ಸಲಹೆ

ಈ ಹೆಸರು ಬೇರೆಯವರಿಂದ ಬಂದ ಸಲಹೆ

ಆದರೆ, ಇಂಥ ಸನ್ನಿವೇಶವನ್ನೇ, ಅಂದರೆ ಬಹಳ ಜನರು ಈ ರೀತಿ ಬ್ರಾಹ್ಮಣರ ಮನೆಯದೇ ಊಟ ಸಿಗಲಿ ಎಂದು ಹುಡುಕುವ ಅಥವಾ ಬ್ರಾಹ್ಮಣ ಅಡುಗೆಯವರನ್ನೇ ನೇಮಿಸಿಕೊಳ್ಳುವ ಉದ್ದೇಶ ಇರುವುದು ನಮ್ಮ ಗಮನಕ್ಕೆ ಬಂತು. ನಾನು ಹಾಗೂ ನನ್ನ ತಮ್ಮ ದರ್ಶನ್ ಒಂದು ಯೋಚನೆ ಮಾಡಿ, ಲಂಚ್ ಬಾಕ್ಸ್ ಸರ್ವೀಸ್ ಬಗ್ಗೆ ತೀರ್ಮಾನಿಸಿದೆವು. ಆದರೆ ನಮ್ಮ ಆಲೋಚನೆ ಬಹಳ ಜನಕ್ಕೆ ತಿಳಿಸಿದಾಗ, ಅವರೇ 'ಬ್ರಾಹ್ಮಿನ್ಸ್ ಲಂಚ್ ಬಾಕ್ಸ್' ಅಂತ ಹೆಸರಿಡಿ ಅಂದರು. ಹಾಗೆ ಬಹು ಜನರ ಸಲಹೆ ಮೇರೆಗೆ ಇಟ್ಟ ಹೆಸರು ಅದು. ಅಯ್ಯಂಗಾರ್ಸ್ ಬೇಕರಿ, ಗೌಡ್ರು ಹೋಟೆಲ್, ವೀರಶೈವ ಖಾನಾವಳಿ, ಜೈನ್ ಫುಡ್...ಹೀಗೆ ಅದಾಗಲೇ ಇರುವುದಕ್ಕೆ ನಮ್ಮದೊಂದು ಸೇರ್ಪಡೆ ಅಷ್ಟೇ ಆಗಿತ್ತು. ಈಗಲೂ ಚಾಮರಾಜಪೇಟೆಯ ಶಂಕರಪುರಂನಲ್ಲಿ ಬ್ರಾಹ್ಮಣರ ಕಾಫಿ ಕೇಂದ್ರ ಅನ್ನೋದು ಇದೆ. ಅದು ಬಹಳ ವರ್ಷಗಳಿಂದಲೂ ಇದೆ. ಬ್ರಾಹ್ಮಿನ್ಸ್ ಕೆಫೆ ಅಂತ ಹೆಸರಿನದೇ ಹೋಟೆಲ್ ಗಳು ಇವೆ. ಹಾಗಂತ ಅವುಗಳಿಂದ ಯಾರಿಗಾದರೂ ತೊಂದರೆ ಆಗಿದೆಯಾ?

ಬ್ರಾಹ್ಮಣರ ಮೇಲೆ ಮಾತ್ರ ಸಿಟ್ಟಿದೆಯಾ ಎಂಬ ಅನುಮಾನ

ಬ್ರಾಹ್ಮಣರ ಮೇಲೆ ಮಾತ್ರ ಸಿಟ್ಟಿದೆಯಾ ಎಂಬ ಅನುಮಾನ

ಜಾತಿ ಹೆಸರಲ್ಲಿ ಹೀಗೆಲ್ಲ ಮಾಡುತ್ತಾರೆ ಎಂದು ಆಕ್ಷೇಪದ ಧ್ವನಿಯಲ್ಲಿ ಲೇಖನ ಬರೆದವರಿಗೆ ನನ್ನ ಕೆಲವು ಪ್ರಶ್ನೆ ಹಾಗೂ ಆಕ್ಷೇಪಗಳಿವೆ. ದಲಿತ ಪತ್ರಕರ್ತರಿಗೆ ಮಾತ್ರ ಕಿಟ್ ಅಂತ ಸರಕಾರದಿಂದಲೇ ಯೋಜನೆ ಮಾಡಿದಾಗ, ಇದು ಹೀಗ್ಯಾಕೆ-ತಪ್ಪು ಅಂತ ಯಾಕೆ ಹೇಳಲ್ಲ? ದಲಿತ ಮಕ್ಕಳನ್ನು ಮಾತ್ರ ಶಾಲೆಯಿಂದ ಉಚಿತ ಪ್ರವಾಸಕ್ಕೆ ಕರೆದುಕೊಂಡು ಹೋಗ್ತೀವಿ ಅಂದಾಗ, ಮಕ್ಕಳಲ್ಲಿ ಜಾತಿ ವಿಷ ಬೀಜ ಬಿತ್ತಬೇಡಿ ಅಂತ ಯಾಕೆ ಗದರಲ್ಲ? ಶಾಲೆ-ಕಾಲೇಜು ಅಲ್ಲಿ ಇಲ್ಲಿ ಎಲ್ಲ ಕಡೆ ಜಾತಿ ಅನ್ನೋ ಕಾಲಂ ತೆಗೆದುಹಾಕಿಸಲು ಯಾಕೆ ಶ್ರಮ ಹಾಕಲ್ಲ? ಸರಿ, ನಾವೊಂದು ವ್ಯಾಪಾರವನ್ನೇ ಆರಂಭಿಸಿ, ಅದನ್ನು ಮುಚ್ಚಿ ಆರು ತಿಂಗಳ ನಂತರ ಹೀಗೆ ಫೋನ್ ನಂಬರ್ ಕೂಡ ಬರುವಂತೆ ಲೇಖನ ಬರೆಯುವಾಗ ನಮ್ಮದೊಂದು ಅಭಿಪ್ರಾಯ ಕೇಳಬೇಕು ಅಂತ ಯಾಕೆ ಅನಿಸಲ್ಲ? ನಮ್ಮ ಅಭಿಪ್ರಾಯವನ್ನೂ ಪಡೆಯದೆ, ಹೀಗೆ ಜಾತಿ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವವರು ಇದ್ದಾರೆ ಅಂತ ಬರೆಯುವವರಿಗೆ ಬ್ರಾಹ್ಮಣರ ಮೇಲೇ ಸಿಟ್ಟಿದೆಯಾ ಅಂತ ನನಗೆ ಅನುಮಾನ ಆಗುತ್ತದೆ.

ಬೇರೆಯವರ ವ್ಯವಹಾರಕ್ಕೆ ಅಡ್ಡಿಯಾಗಿತ್ತಾ?

ಬೇರೆಯವರ ವ್ಯವಹಾರಕ್ಕೆ ಅಡ್ಡಿಯಾಗಿತ್ತಾ?

ಆಯಾ ಜಾತಿಯದು ಅಂತ ಅದರದೇ ಸಂಸ್ಕೃತಿ ಇರುತ್ತದೆ. ಅದು ಆಹಾರಕ್ಕೂ ಅನ್ವಯಿಸುತ್ತದೆ. ಬ್ರಾಹ್ಮಣರ ಮನೆಯ ಸಾರು, ಹುಳಿ, ಮಜ್ಜಿಗೆ ಹುಳಿ, ಆಂಬೋಡೆ...ಇಂಥವಕ್ಕೆಲ್ಲ ಅದರದೇ ಬೇರೆಯಾದ ರುಚಿ ಇರುತ್ತದೆ. ಹೀಗೆ ಗೌಡರು, ಲಿಂಗಾಯತರ ಬಗ್ಗೆ ಕೂಡ ಜನರ ಮಧ್ಯೆ ಸಾಮಾನ್ಯ ಎನಿಸುವ ನಂಬಿಕೆಗಳಿವೆ. ಅದರಿಂದ ಯಾರಿಗಾದರೂ ನೋವಾಯಿತಾ? ನಾವೇನಾದರೂ ಬ್ರಾಹ್ಮಣರ ಹೊರತುಪಡಿಸಿ ಇನ್ಯಾರಿಗೂ ಸರ್ವೀಸ್ ನೀಡಲ್ಲ ಎಂದು ಬೋರ್ಡ್ ಹಾಕಿಕೊಂಡಿದ್ದೆವಾ? ಅಥವಾ ಆ ಹೆಸರಿನ ಮೂಲಕ ಬೇರೆ ಯಾರದಾದರೂ ವ್ಯವಹಾರಕ್ಕೆ ಅಡ್ಡ ಪಡಿಸಿದ್ದೆವಾ? ಸುಮ್ಮನೆ ಬ್ರಾಹ್ಮಣರನ್ನೇ ಗುರಿ ಮಾಡಿಕೊಂಡು ಬೈಯ್ಯಬೇಕು ಅನ್ನೋವಂಥ ಪ್ರಯತ್ನಗಳನ್ನು ಯಾಕೆ ಮಾಡ್ತಾರೆ?

ಸ್ಪಷ್ಟನೆ ಕೂಡ ಕೇಳದೆ ಲೇಖನ ಬರೆದವರಿಗೆ ಧಿಕ್ಕಾರ

ಸ್ಪಷ್ಟನೆ ಕೂಡ ಕೇಳದೆ ಲೇಖನ ಬರೆದವರಿಗೆ ಧಿಕ್ಕಾರ

ಆಗಸ್ಟ್ 10ನೇ ತಾರೀಕು ಇಂಗ್ಲಿಷ್ ನಲ್ಲಿ ನಮ್ಮ ಬಗ್ಗೆ ಲೇಖನ ಬಂದಿದೆ. ಆ ನಂತರ ಹಲವಾರು ಕರೆಗಳು ಬರುತ್ತಿವೆ. ಆ ಪೈಕಿ ಕೆಲವರು, ನಮ್ಮ ಹತ್ತಿರ ಸರ್ವೀಸ್ ನಿಲ್ಲಿಸುವುದಾಗಿ ಹೇಳಿ ಈಗಲೂ ನಡೆಸುತ್ತಿದ್ದೀರಿ. ಯಾಕೆ ಸುಳ್ಳು ಹೇಳಿದಿರಿ ಅಂತ ಕೇಳುತ್ತಿದ್ದಾರೆ. ಇಲ್ಲ, ನಾವೀಗ ನಡೆಸುತ್ತಿಲ್ಲ. ಆ ಲೇಖನ ಬರೆದವರು ನಮ್ಮನ್ನು ಸಂಪರ್ಕ ಮಾಡಿಲ್ಲ, ಒಂದು ಮಾತು ಕೂಡ ಕೇಳಿಲ್ಲ ಅಂದರೆ, ನಮ್ಮ ಸಮಜಾಯಿಷಿ ಕೇಳುವ ಸ್ಥಿತಿಯಲ್ಲಿ ಕೂಡ ಅವರಿಲ್ಲ. ನನಗೆ ಬೇಕೋ ಅಥವಾ ಬೇಡವೋ ಈ ಸಮಾಜವು ನನ್ನನ್ನು ಗುರುತಿಸುವುದು ಬ್ರಾಹ್ಮಣ ಅಂತಲೇ. ನಾನು ಅಡುಗೆ ಮಾಡುತ್ತೇನೆ ಅಂದಾಗ, ಅದರ ರುಚಿ ಹೀಗಿರುತ್ತದೆ ಎಂದು ಈ ಸಮಾಜಕ್ಕೆ ಹೇಳುವ ಅನಿವಾರ್ಯ ನಮಗಿತ್ತು. ಅದರ ಪ್ರಯತ್ನವೇ ಈ ಹೆಸರಿಡಲು ಕಾರಣ. ಈಗ ಲಂಚೂ ಇಲ್ಲ, ಬಾಕ್ಸೂ ಇಲ್ಲ, ಬ್ರಾಹ್ಮಣರ ಮೇಲೇಕೆ ಕೋಪ?

English summary
Brahmins Lunch box catering service controversy and clarification. Some people are propagating wrong information on social media by writing useless stories on catering service, which is already closed. In a chitchat with Oneindia Kannada, Srinidhi, the owner of erstwhile catering service, has clarified about non existing service.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X