ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾವಿಕ ಸಮ್ಮೇಳನಕ್ಕೆ ಲಾಸ್ ಏಂಜಲಿಸ್ ಸಜ್ಜು

By * ಎಸ್.ಕೆ. ಶಾಮ ಸುಂದರ
|
Google Oneindia Kannada News

Navika WKC - A curtain raiser
ನಾವಿಕ ಸಂಸ್ಥೆಯ ಆಶ್ರಯದಲ್ಲಿ ಉತ್ತರ ಅಮೆರಿಕಾದಲ್ಲಿ ಜರಗುವ ಮೊದಲ ವಿಶ್ವ ಕನ್ನಡ ಸಮ್ಮೇಳನ ಜುಲೈ 2ರಂದು ಶುಕ್ರವಾರ ಆರಂಭವಾಗಲಿದೆ. ಅಮೆರಿಕಾ ಸ್ವಾತಂತ್ರ್ಯೋತ್ಸವದ ದೀರ್ಘ ವಾರಾಂತ್ಯ ರಜಾಕಾಲ ವೇಳೆ ನಡೆಯುವ 3 ದಿನಗಳ ಸಮ್ಮೇಳನಕ್ಕೆ ಲಾಸ್ ಏಂಜಲಿಸ್ ನಗರದ ಭವ್ಯ ಸಮ್ಮೇಳನ ಸಭಾಂಗಣ ಪಸಡೋನ ಸಜ್ಜಾಗಿದೆ. ಅತ್ಯಾಧುನಿಕ ಸಭಾಂಗಣವನ್ನು ಮಾವಿನ ತೋರಣ ಮತ್ತು ಬಾಳೆ ಕಂಬಗಳಿಂದ ಶೃಂಗರಿಸಲಾಗಿದೆ. ಸಮ್ಮೇಳನದ ವರದಿಗಳನ್ನು ಪಸಡೋನ ಸಭಾಂಗಣದಿಂದ ದಟ್ಸ್ ಕನ್ನಡ ನೇರ ವರದಿ ಮಾಡುತ್ತಿದೆ, ನೋಡುತ್ತಿರಿ, ಓದುತ್ತಿರಿ.

ಉತ್ತರ ಅಮೆರಿಕಾದಲ್ಲಿ ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ಕೃಷಿ ಮತ್ತು ಕನ್ನಡಿಗರ ನಡುವೆ ಹೆಚ್ಚಿನ ಭಾವೈಕ್ಯತೆಯನ್ನು ಸಾಧಿಸುವ ಉದ್ದೇಶದಿಂದ ಜನ್ಮತಾಳಿದ ನಾವಿಕ ಸಂಸ್ಥೆ ಆಯೋಜಿಸುತ್ತಿರುವ ಮೊದಲ ವಿಶ್ವ ಕನ್ನಡ ಸಮ್ಮೇಳನ ಇದಾಗಿದೆ. ಅಂದಾಜು ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ವ್ಯವಸ್ಥೆಯಾಗಿರುವ ಕನ್ನಡ ಹಬ್ಬಕ್ಕೆ ಅಮೆರಿಕಾದ ವಿವಿಧ ಮೂಲೆಗಳಿಂದ ಮತ್ತು ಕರ್ನಾಟಕ ನೆಲದಿಂದ 1500ರಿಂದ 2000ವರೆಗೆ ಕನ್ನಡ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ.

ಸಮ್ಮೇಳನ ಉದ್ಘಾಟಿಸುವುದಕ್ಕೆ ರಾಜ್ಯದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಆಮಂತ್ರಣ ನೀಡಲಾಗಿತ್ತು. ಆದರೆ, ರಾಜ್ಯದ ರಾಜಕೀಯ ಮತ್ತು ಆಡಳಿತಾತ್ಮಕ ಮೊಗಸಾಲೆಗಳಲ್ಲಿ ಉಂಟಾಗಿರುವ ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಸಮ್ಮೇಳನದಲ್ಲಿ ಭಾಗವಹಿಸಲು ಅಮೆರಿಕಾ ಪ್ರವಾಸ ಕೈಗೊಳ್ಳುತ್ತಿಲ್ಲ. ಮೇಲಾಗಿ, ರಾಜ್ಯ ವಿಧಾನಸಭೆಯ ಮುಂಗಾರು ಅಧಿವೇಶನ ಪ್ರಾರಂಭವಾಗಿದ್ದು ಮುಖ್ಯಮಂತ್ರಿಗಳ ಉಪಸ್ಥಿತಿ ಸದನಕ್ಕೆ ಅಗತ್ಯ ಮತ್ತು ಅನಿವಾರ್ಯವಾಗಿದೆ.

ಕನ್ನಡಿಗರ ಹಬ್ಬಕ್ಕೆ ಮನರಂಜನೆಯ ತೋರಣ, ಸಾಹಿತ್ಯದ ಸ್ಪರ್ಷ, ಸಂಗೀತದ ಗುಂಗು ಮೀಟುವ ಅನೇಕ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಚಿತ್ರ ತಾರೆಯರು, ಸಂಗೀತ ವಿದುಷಿಗಳು, ನಾಟಕಕಾರ, ಕವಿ ಕಲಾವಿದ ಕೋವಿದರಲ್ಲದೆ ಕನ್ನಡ ಭಾಷೆ ಹಾಗೂ ಗಡಿ ಸಮಸ್ಯೆಗಳ ಬಗೆಗೆ ಆಳ ಅಧ್ಯಯನ ಮಾಡಿರುವ ಮುಖ್ಯಮಂತ್ರಿ ಚಂದ್ರು ನಾವಿಕ ಸಮ್ಮೇಳನಕ್ಕಾಗಿ ಕನ್ನಡ ನಾಡಿನಿಂದ ಈಗಾಗಲೇ ಸೀಮೋಲ್ಲಂಘನ ಮಾಡಿದ್ದಾರೆ.

ಕ್ಯಾಲಿಫೋರ್ನಿಯಾ ಕನ್ನಡಿಗ, ಐಟಿ ತಜ್ಞ ಬಿವಿ ಜಗದೀಶ್ ಅವರು ಸಮ್ಮೇಳನದ ಆಶಯ ಭಾಷಣ ಮಾಡುವರು. ಸ್ಥಳೀಯ ಕನ್ನಡ ಸಂಘಗಳ ಕಲಾವಿದರಿಂದ ನಾನಾ ನಮೂನೆಯ ಸಾಂಸ್ಕೃತಿ ಕಾರ್ಯಕ್ರಮಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಯುವಜನತೆಗೆ, ಮಹಿಳೆಯರಿಗೆ, ವಾಣಿಜ್ಯೋದ್ಯಮಿಗಳಿಗೆ ಪ್ರತ್ಯೇಕವಾದ ವೇದಿಕೆಗಳನ್ನು ಹೊಂದಿಸಲಾಗಿದೆ. ಕರ್ನಾಟಕ ಶೈಲಿಯ ಬಗೆಬಗೆಯ ಆಹಾರಗಳನ್ನು ಪ್ರತಿನಿಧಿಗಳಿಗೆ ಉಣಬಡಿಸಲಾಗುತ್ತದೆ.

ನಾವಿಕ ಸಮ್ಮೇಳನದ ನಿಧಿ ಸಂಗ್ರಹಣೆ ಸಮಿತಿಯ ಅಧ್ಯಕ್ಷ ಡಾ. ರಾಮಪ್ಪ, ಸಮ್ಮೇಳನದ ಸಹ-ಸಂಚಾಲಕಿ ರೇಣುಕಾ ರಾಮಪ್ಪ ಮತ್ತು ನಾವಿಕದ ಡ್ರೈವಿಂಗ್ ಫೋರ್ಸ್ ಡಾ. ಕೇಶವ ಬಾಬು ಮತ್ತಿತರ ಹಿರಿಯ ಅಮೆರಿಕನ್ನಡಿಗರ ಮುಂದಾಳತ್ವದಲ್ಲಿ ಸಮ್ಮೇಳನ ರೂಪುಗೊಂಡಿದೆ. ಪ್ರಸಕ್ತ ಸಮ್ಮೇಳನದ ಅಧ್ಯಕ್ಷರಾಗಿ ಕ್ಯಾಲಿಫೋರ್ನಿಯಾದ ಹೆಸರಾಂತ ಹೃದಯತಜ್ಞ ಡಾ. ಶ್ರೀ ಅಯ್ಯಂಗಾರ್ ಕಾರ್ಯೋನ್ಮುಖರಾಗಿದ್ದಾರೆ. ಇವರುಗಳಲ್ಲದೆ, ಸಮ್ಮೇಳನಕ್ಕಾಗಿ ನಾನಾ ಸಮಿತಿಗಳನ್ನು ರಚಿಸಲಾಗಿದ್ದು ಸ್ವಯಂಸೇವಕರು ಸಮ್ಮೇಳನದ ಯಶಸ್ಸಿಗೆ ಅರ್ಹನಿಶಿ ದುಡಿಯುತ್ತಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X