ಸುಗುಣ ಯಸ್ ಅಂದಾಗ ಸ್ವರ್ಗ ಮೂರೇ ಗೇಣು!

(ಕಥೆಯ ಮುಂದಿನ ಭಾಗ...) ರಾತ್ರಿ ಬೊಂಬಾಟ್ ಮಲ್ನಾಡ್ ಸ್ಪೆಷಲ್ ಊಟ ರೆಡಿಯಾಗಿತ್ತು. ಘಮ ಘಮ ಶಾವಿಗೆ ಪಾಯಸ, ಅಕ್ಕಿ ರೊಟ್ಟಿ, ಸೊಪ್ಪಿನ ಪಲ್ಯ, ಬಾಳೆಕಾಯಿ ಚಟ್ನಿ, ಹಲಸಿನಕಾಯಿ ಚಟ್ನಿ, ಮೆಣಸಿನ ಸಾಂಬಾರ್, ಹಲಸಿನ ಹಪ್ಪಳ, ಸೈಡಲ್ಲಿ ಅಮಟೆಕಾಯಿ, ಮಾವಿನಕಾಯಿ ಉಪ್ಪಿನ ಕಾಯಿ...hhmmm ನೋಡಿದರೆ ಬಾಯಲ್ಲಿ ನೀರು ಬರುವಂತಿತ್ತು. ಅಳಿಮಯ್ಯ ಬಂದಾಗ ಮಾಡುವ ಅಡುಗೆ ತರ ಇತ್ತು. ಎರಡು ವರ್ಷದಿಂದ ನಾನೇ ಮಾಡಿದ ರುಚಿಯಿಲ್ಲದ ಊಟ ಮಾಡಿ ನಾಲಿಗೆ ಜಡ್ಡು ಹಿಡಿದಿತ್ತು. ಹುಡುಗಿ ಸಹ ಅಡುಗೆ ಮನೆಯಲ್ಲೇ ಇದ್ದಿದ್ದರಿಂದ ಏಕಾಂತವಾಗಿ ಭೇಟಿ ಮಾಡಲಾಗಲಿಲ್ಲ! ಆದರೆ ಅವಳ ತಮ್ಮ ಗಿರೀಶ ಕ್ಲೋಸ್ ಆಗಿದ್ದ.

ಸರಿ.. ಒಳ್ಳೆ ಭೂರಿ ಭೋಜನ ಮಾಡಿ ಹಾಸಿಗೆ ಮೇಲೆ ಮೈ ಚಾಚಿದಾಗ ಹನ್ನೊಂದಾಗಿತ್ತು. ಮಲಗಿದ ತಕ್ಷಣ ನಿದ್ದೆ ಹತ್ತಿದ ನನಗೆ ಬೆಳೆಗ್ಗೆ 5ಕ್ಕೆ ಎಚ್ಚರವಾಗಿತ್ತು (ಜೆಟ್ ಲಾಗ್ ಪ್ರಭಾವ ಅನ್ನಿಸುತ್ತೆ). ನೋಡಿದರೆ ಪಕ್ಕದಲ್ಲಿ ಅಪ್ಪ-ಅಮ್ಮ, ಗಿರೀಶ ಎಲ್ಲ ಇನ್ನು ಗೊರಕೆ ಹೊಡಿತಾ ಇದ್ದರು. ಹೊರಗಡೆ ಇನ್ನು ಅಷ್ಟೊಂದು ಬೆಳಕಿರಲಿಲ್ಲ, ಎದ್ದು ಏನು ಮಾಡೋದು ಅಂದು ಹಾಗೆ ಕಣ್ಣು ಬಿಟ್ಟು ಮಲಗಿದ್ದೆ. ಸ್ವಲ್ಪ ಹೊತ್ತಿಗೆ ಸೂರ್ಯನ ಹೊಂಗಿರಣಗಳು ಮೂಡಣದಲ್ಲಿ ಮೂಡತೊಡಗಿದಾಗ ಮರಗಳಲ್ಲಿದ್ದ ಹಕ್ಕಿ ಪಕ್ಷಿಗಳ ಚಿಲಿಪಿಲಿ ಶಬ್ದ, ಮಾವಿನ ಮರದಿಂದ ಕುಹೂ ಕುಹೂ ಕೋಗಿಲೆಯ ಕೂಗು ಕೇಳಿಬರುವಾಗ ಯಾರೋ ಸುಶ್ರಾವ್ಯವಾಗಿ ದೇವರ ಸ್ತುತಿ ಹಾಡುತ್ತಿರುವ ಧ್ವನಿ ಕೇಳಿತು. ಎದ್ದು ಕಿಟಕಿಯ ಬಳಿ ಬಂದು ನೋಡಿದರೆ ಸುಗುಣ! ಹೊರಗಡೆ ಒಪ್ಪವಾಗಿ ಚಿತ್ತಾರದ ರಂಗೋಲಿ ಬಿಡಿಸುತ್ತಾ ಹಾಡುತ್ತಿರುವದ ಹಾಗೆ ಮರೆಯಲ್ಲಿ ನಿಂತು ಕೇಳುತ್ತಿದ್ದೆ. ಹಾ ಹಾ ..ಮೊದಲೇ ಮಳೆ ಬಂದು ನಿಂತು ಹೋದಮೇಲೆ ಶುಭ್ರವಾಗಿದ್ದ ಆಕಾಶ, ಮರಗಳ ಮಧ್ಯೆ ತೂರಿ ಬರುತ್ತಿರುವ ಚಿನ್ನದ ಕಿರಣಗಳು, ಹಕ್ಕಿ-ಪಕ್ಷಿಗಳ ಇಂಪಾದ ಚಿಲಿ ಪಿಲಿ ಶಬ್ದ, ಕೊಟ್ಟಿಗೆಯಲ್ಲಿದ್ದ ಹಸುಕರುಗಳ ಅಂಬಾ ಎನ್ನುವ ಕರೆ. ಇವೆಲ್ಲದರ ಜೊತೆ ಇಂಪಾಗಿ ಕೇಳಿ ಬರುತ್ತಿತ್ತು ಸುಗುಣಳ ಆ ಇಂಚರ (ಸ್ವೀಟ್ ವಾಯ್ಸ್).

7ರ ಸುಮಾರಿಗೆ ಎಲ್ಲರಿಗಿಂತ ಮುಂಚೆನೇ ಸ್ನಾನ ಮಾಡಿ ರೆಡಿಯಾಗಿ ಹೊರಗಡೆ ಬಂದು ಪ್ರಕೃತಿಯ ಸೊಬಗ ಸವಿಯುತ್ತಿರುವಾಗ, ಗಿರೀಶ ಅಲ್ಲೇ ಹತ್ತಿರವಿದ್ದ ಅವರ ತೋಟದ ಕಡೆಗೆ ಹೊರಟಿದ್ದ. ಇನ್ನು ಅಪ್ಪ-ಅಮ್ಮ ರೆಡಿ ಆಗಲು ಸ್ವಲ್ಪ ಸಮಯವಿದ್ದುದರಿಂದ ನಾನು ಬರಲೇ ಎಂದು ಅವನ ಜೊತೆ ಹೊರಟಿದ್ದೆ. ಆಗ ಏನೋ ತಟ್ಟನೆ ಮನದಲ್ಲಿ ಫ್ಲಾಶ್ ಆಯಿತು. ಸುಗುಣಳನ್ನೂ ಜೊತೆಯಲ್ಲಿ ಕರೆದೊಯ್ದರೆ ಹೇಗೆ? ಏಕಾಂತದಲ್ಲಿ ಮಾತನಾಡಿದ ಹಾಗು ಆಗುತ್ತೆ ಅಂದುಕೊಂಡು, ಅಲ್ಲೇ ಇದ್ದ ಅವರಪ್ಪನ ಬಳಿ ಅನುಮತಿ ಪಡೆದು ನಾವು ಮೂರು ಜನ ಹೊರಟಿದ್ದೆವು! ಹಾಗೆ ಸ್ವಲ್ಪ ದೂರ ನಿಧಾನವಾಗಿ ನಡೆದ ಮೇಲೆ, ನೀವು ನಿಧಾನವಾಗಿ ಬರ್ತಾ ಇರಿ, ನಾನು ಬೇಗ ತೋಟದ ಬಳಿ ಹೋಗಿ ಕೂಲಿಗಾರರೊಂದಿಗೆ ಮಾತಾಡ್ತಾ ಇರುವೆ ಅಂತ ಗಿರೀಶ ಹೇಳಿ ಬರ ಬರ ಹೆಜ್ಜೆ ಹಾಕಿದಾಗ ಏನೋ ಒಂತರಾ ಸಂತೋಷ. ಇಬ್ಬರೇ ಆ ಹಸಿರಾದ ಬತ್ತದ ಗದ್ದೆಗಳ ಬದಿಯ ಮೇಲೆ ನಡೆಯುತ್ತಾ.. ನಾನೇ ಮೊದಲಿಗೆ ಮಾತಾಡಿಸತೊಡಗಿದೆ.

ನನ್ನ ಬಗ್ಗೆ ಸ್ವಲ್ಪ ಹೇಳಿ, ನಂತರ ಅವಳ ಹವ್ಯಾಸಗಳು, ಇಷ್ಟಗಳು.. ಅದು ಇದು ಅಂತ ಕೇಳಿದಾಗ ಎಲ್ಲದಕ್ಕೂ ಶಾರ್ಟ್ ಅಂಡ್ ಸ್ವೀಟ್ ಆಗಿ ಉತ್ತರ ಕೊಟ್ಟಿದ್ದಳು. ನೀನು ಏನರ ಕೇಳುವುದಿದೆಯೇ ಅಂತ ಅಂದಾಗ ನನ್ನ ಒಂದೆರಡು ಹವ್ಯಾಸದ ಬಗ್ಗೆ ಅಷ್ಟೇ ಕೇಳಿದ್ದಳು. ನಿಮ್ಮ ವಾಯ್ಸ್ ಬಹಳ ಸ್ವೀಟ್ ವಾಯ್ಸ್(ಇಂಚರ) ಅಂತ ನಾ ಹೇಳಿದಾಗ ಅವಳು ನಾಚಿದ್ದಳು. ಧೈರ್ಯ ಮಾಡಿ ಕೇಳೆ ಬಿಟ್ಟಿದ್ದೆ "ನನಗೆ ನಿಮ್ಮ ಮೇಲೆ ಸಂಪೂರ್ಣ ಒಪ್ಪಿಗೆ ಇದೆ. ನಿಮಗೆ ಇದೆಯೇ? ಎಲ್ಲ ಹಿರಿಯರು ಒಪ್ಪಿ, ಜಾತಕ ಸಹ ಕೂಡಿಬಂದರೆ ಮದುವೆ ಆಗಿ ಎಲ್ಲರನ್ನು ಬಿಟ್ಟು ದೂರದ ಅಮೆರಿಕಕ್ಕೆ ಬರಲು ಇಷ್ಟವಿದೆಯೇ ಅಂತಾ?" ಅದಕ್ಕೆ ಮತ್ತಷ್ಟು ನಾಚಿ ಕೆಂಪಾದ ಅವಳು, ಹೇಳಿದಳು ಅಮ್ಮ-ಅಪ್ಪ ಒಪ್ಪಿದರೆ ನನ್ನದೇನು ಅಭ್ಯಂತರವಿಲ್ಲ ಎಂದು. ಆಗ ನನಗೆ ಆದ ಸಂತೋಷ ಅಷ್ಟಿಷ್ಟಲ್ಲ! ಭಾವನಾತ್ಮಕವಾಗಿ ಆಗಲೇ ಅವಳನ್ನು ನಾ ವರಿಸಿದ್ದೆ! ಅದೇ ಖುಷಿಯಲ್ಲಿ ಅವಳಿಗೊಂದು (ಇಲ್ಲಿಂದ ತೆಗೆದುಕೊಂಡು ಹೋಗಿದ್ದ) ಒಳ್ಳೆ perfume ಬಾಟಲ್ ಪ್ರೆಸೆಂಟ್ ಮಾಡಿದ್ದೆ ಗಿರೀಶ ಬರುವುದರೊಳಗಾಗಿ. ಗಿರೀಶ ಬಂದಮೇಲೆ ಮತ್ತೆ ವಾಪಸು ಮನೆಯೆಡೆ ಬರುವಾಗ ಅವನಿಗೂ ಒಂದು ಗಿಫ್ಟ್ ಕೊಟ್ಟು ಅವನ ಫೋಟೋ ಕ್ಲಿಕ್ ಮಾಡುವ ನೆಪದಲ್ಲಿ ಸುಗುಣಳ ಫೋಟೋ ತೆಗೆದಿದ್ದೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+