ಇಂಚರ

ಅಮೆರಿಕಗೆ ಕೆಲಸದ ಮೇಲೆ ಬಂದು ಎರಡು ವರ್ಷಗಳು ಉರುಳಿದ್ದೇ ಗೊತ್ತಾಗಿರಲಿಲ್ಲ. ಬಂದ ಮೊದಲ ವರ್ಷ ಇಲ್ಲಿಯ ಹೊಸ ವಾತಾವರಣಕ್ಕೆ, ಕೆಲಸಕ್ಕೆ ಹೊಂದಿಕೊಳ್ಳೋದರಲ್ಲಿ ಕಳೆದು ಹೋಗಿತ್ತು. ವೀಕೆಂಡ್ ಬಂತೆಂದರೆ ಸಾಕು ಗೆಳೆಯರ ಜೊತೆಯಲ್ಲಿ ಅಲ್ಲಿ ಇಲ್ಲಿ ಸುತ್ತಾಡಿದ್ದೆ ಆಗಿತ್ತು.
ಎಲ್ಲ ದೇಶಿಗಳಂತೆ ನಾನು ಕೂಡ ನಯಾಗರ ಫಾಲ್ಸ್, ನ್ಯೂಯಾರ್ಕ್, ವಾಷಿಂಗ್ಟನ್, ಮಿಯಾಮಿ ಬೀಚಸ್, ಕ್ಯಾಲಿಫೋರ್ನಿಯಾ ಹೀಗೆ ಹೊಸ ಹೊಸ ಪ್ರದೇಶಗಳನ್ನು ಸುತ್ತಾಡಿದ್ದೆ ಸುತ್ತಾಡಿದ್ದು. ಸ್ವಚ್ಛಂದತೆಗೆ, ಜೂಜಿಗೆ, ಮೋಜಿಗೆ ವಿಶ್ವ ಪ್ರಸಿದ್ದವಾದ ಲಾಸ್ ವೇಗಸ್ ನೋಡಿ ನಿಜವಾಗಲು ಕಳೆದೇ ಹೋಗಿದ್ದೆ ನಾನು. ಅಲ್ಲಿಯ ವೈಭವಯುತವಾದ ಕ್ಯಾಸಿನೋಗಳು, ಎಲ್ಲಿ ಹೋದರು ಕೇಳಿಸುವ ಝಣಝಣ ನಾಣ್ಯಗಳ ಶಬ್ದ, ನೈಟ್ ಕ್ಲಬ್ ಗಳು, ಝಗಮಗಿಸುವ ಬಣ್ಣ ಬಣ್ಣದ ಲೈಟ್ ಬೆಳಕಲ್ಲಿ ಆದಷ್ಟು ಕಡಿಮೆ ವಸ್ತ್ರ ಧರಿಸಿ ಕಣ್ಣು ಕುಕ್ಕಿಸುವ ರಂಭೆ ಮೇನಕೆಯರಂತೆ ಕಾಣುತ್ತಿದ್ದ ಆ ಬಿಳಿ ಹುಡುಗಿಯರು ಮಾದಕವಾಗಿ ನೃತ್ಯ ಮಾಡುತ್ತಾ ನಮ್ಮ ಪಡ್ಡೆ ಹುಡುಗರ ಗುಂಪಿನೆಡೆ ನೋಡಿ ಕೈ ಬೀಸಿ ಕರೆದಾಗ... ನಾ ಮುಂದೆ, ನೀ ಮುಂದೆ ಅಂತ ಹೋಗಿ ಕುಣಿದಿದ್ದೆ ಕುಣಿದಿದ್ದು. ಸ್ವರ್ಗ.. ಇಂದ್ರ ಲೋಕದಲ್ಲಿ ತೇಲಾಡಿದ ಅನುಭವ! ಶಾಪಿಂಗ್ ಮಾಲುಗಳು, ತುಂಡು ಜೀನ್ಸ್ ತೊಟ್ಟ ಸುಂದರ ಕನ್ಯೆಯರು, ಇಹ ಲೋಕವನ್ನೇ ಮರೆತು ಎಲ್ಲೆಂದರಲ್ಲಿ ತಬ್ಬಿಕೊಂಡು ಮುತ್ತಿಕ್ಕುತ ನಿಂತ ಜೋಡಿಗಳು... ಫ್ರೆಂಡ್ಸ್ ಜೊತೆಯಲ್ಲಿ, ಅದರಲ್ಲೂ ಬ್ಯಾಚಲರ್ ಆಗಿದ್ದಾಗ ಒಮ್ಮೆಯಾದರು ಭೇಟಿ ನೀಡಲೇಬೇಕಾದಂತಹ ಪುಣ್ಯ ಸ್ಥಳ :) ನಿಜವಾಗಲು ಅಮೆರಿಕಾನೆ ಮತ್ತೊಂದು ಸ್ವರ್ಗ ಎನ್ನಿಸಿದ್ದರಲ್ಲಿ ಸುಳ್ಳೇನಿಲ್ಲ! ಇದಕ್ಕೆ ಇರ್ಬೇಕು ನಮ್ಮ ಹಿರಿಯೋರು "ಕೋಶ ಓದಿ ನೋಡು, ದೇಶ ಸುತ್ತಿನೋಡು" ಅಂತ ಹೇಳುತ್ತಿದ್ರು ಅನ್ನಿಸಿತ್ತು.
ಎರಡನೇ ವರ್ಷ ಬ್ಯಾಂಕ್ ಅಕೌಂಟ್ ನಲ್ಲಿ ಸ್ವಲ್ಪ ಹಣ ಶೇಖರಣೆ ಅದ ತಕ್ಷಣ ಬಂದಿತ್ತು ನನ್ನ ಮೊದಲ ಕಾರು. ಆ ವೇಳೆಗೆ ನನ್ನ ರೂಂ ಮೇಟ್ ಗಳು ಒಬ್ಬೊಬ್ಬರಾಗಿ ಇಂಡಿಯಾ ಟ್ರಿಪ್ಗೆ ಅಂತ ಹೋಗಿ ವಧು ಅನ್ವೇಷಣೆಯಲ್ಲಿ ತೊಡಗಿದ್ದರು. ಕೈಯಾರೆ ಮಾಡಿದ ಅಡುಗೆ ತಿಂದು ತಿಂದು ನಂಗೂ ಯಾಕೋ ಒಬ್ಬಂಟಿ ಜೀವನ ಬೋರಾಗಿ ಸಂಗಾತಿ ಬೇಕೆನಿಸಿತ್ತು ಅಷ್ಟೊತ್ತಿಗೆ! ಜಂಕ್ ಫುಡ್ ತಿಂದು ತಿಂದು ಹೊಟ್ಟೆ ಬೆಳೆಸಿದ್ದ ರೂಂ ಮೇಟ್ಸ್ ಮದುವೆಗೂ ಮುಂಚೆ ಸ್ವಲ್ಪನಾರ ಬಾಡಿ ಬಿಲ್ಡ್ ಮಾಡಿ ಟ್ರಿಮ್ ಆಗೋಣ ಅಂತ ಸಂಜೆಯಾಗುತ್ತಿದ್ದಂತೆ ಜಿಮ್ ಕಡೆ ಓಡುತ್ತಿದ್ದುದ ಕಂಡು ನಾನು ಅವರೊಂದಿಗೆ ಸೇರಿದ್ದೆ.
ಅದೇ ಸಮಯಕ್ಕೆ ಊರಿಂದ ಅಪ್ಪ ಫೋನ್ ಮಾಡಿ ಹೇಳಿದ್ದರು. ಒಂದೆರಡು ಒಳ್ಳೆ ಸಂಬಂಧಗಳು ಬಂದಿವೆ ನಿಂಗೆ. ನೋಡಲಿಕ್ಕೆ ಸ್ಟಾರ್ಟ್ ಮಾಡ್ಲ? ಅಂತ ಕೇಳಿದ್ದರು. "ರೋಗಿ ಬಯಸಿದ್ದು ಹಾಲು ಅನ್ನ ವೈದ್ಯ ಹೇಳಿದ್ದೂ ಹಾಲು ಅನ್ನ" ಹಾಗೆ ಹಾಗಿತ್ತು ನನ್ನ ಪರಿಸ್ಥಿತಿ.
ಮದುವೆಯಾಗಲು ಎಲ್ಲರಂತೆ
ಜಿಮ್ ಮಾಡಿ.. ಅದೇ ನಾ ತಯಾರಿ...
ಮ್ಯಾನೇಜರ್ ರಜಾ ಕೊಟ್ಟಾಕ್ಷಣ
ಹೊರಟಿತು.. ಇಂಡಿಯಾ ಕಡೆ ನನ್ನ ಸವಾರಿ!












Click it and Unblock the Notifications