ಕಚಗುಳಿ ಇಡುವ ಆರತಿ ಘಟಿಕಾರ್ ಹನಿಗವನಗಳು (ಭಾಗ 2)
ದುಬೈನಲ್ಲಿ ನೆಲೆಸಿರುವ ಕನ್ನಡತಿ ಆರತಿ ಘಟಿಕಾರ್ ಅವರು ರಚಿಸಿರುವ ಕಚಗುಳಿ ಇಡುವಂಥ, ನವಿರು ಹಾಸ್ಯದಿಂದ ತುಂಬಿರುವಂಥ ಹನಿಗವನಗಳ ಗುಚ್ಛ ಇಲ್ಲಿದೆ. ಕೆಲ ದಿನಗಳ ಹಿಂದೆ ಒಂದಿಷ್ಟು ಹನಿಗವನಗಳು ಕವಿಪ್ರಿಯರಿಗೆ ಮುದ ನೀಡಿವೆ. ಹನಿಗವನಗಳು ಇಷ್ಟವಾದರೆ ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್ ಹಾಕಿರಿ.

ಅವನ ಅವಸ್ಥೆ
ಬಸ್ಸಿನ ನೂಕುನುಗ್ಗಲಿನಲ್ಲೂ
ಆ ಬೆಡಗಿಯನ್ನೆ
ನೋಡುತ್ತಾ ಆದನವ
ಪರವಶ
ಆಗವನ ಪಾಕೀಟು
ಪರರ ವಶ!
***
ಎಲ್ಲ ಕಾಲಕ್ಕೂ
ನೋಡುತ್ತಾರೆ ಪಂಚಾಂಗದಲ್ಲಿ
ರಾಹು ಕಾಲ, ಗುಳಿಕ ಕಾಲ
ಈಗೀಗ ಎಲ್ಲರೂ ತಪ್ಪದೆ
ನೋಡಲೇಬೇಕು
(ತಮ್ಮ) ಅಂಗಾಂಗಗಳಿಗೆ
"ಗುಳಿಗೆ" ಕಾಲ!
***
ಅರಬ್ ದೇಶದಲ್ಲಿ
ಹುಟ್ಟು ಹಬ್ಬದ
ಆಚರಣೆಗಳನ್ನು ಸಲೀಸಾಗಿ
ಮುಂದೂಡಿಬಿಡುತ್ತೇವೆ ಇಲ್ಲಿ
ಪಾರ್ಟಿಗಾಗಿಯೆ
ಮತ್ತೊಮ್ಮೆ ಹುಟ್ಟುತ್ತೇವೆ
ವೀಕೆಂಡ್ ರಜದಲ್ಲಿ!
***

ಈಗೀಗ ಎಲ್ಲರಿಗೂ
ಕಾಡುತಿದೆ
ಆರೋಗ್ಯದ ಅಭಾವ
ಹಾಗಾಗಿಯೇ
ಭಕ್ತಿಯಿಂದ ಕೈಮುಗಿದು
ಹೇಳಬೇಕು
'ಮಾತ್ರೆ ' ದೇವೋಭವ!
***
ಪ್ರೀತಿಯ ಕ್ಲಿಕ್ಕು
ಪ್ರಿಯೆ! ನಿನ್ನ ಹಾಲ್ಬಿಳುಪಿನ ಮುದ್ದು
ಮುಖ ಇದ್ದಂತೆ ಥೇಟ್ kulfi
ನಾ ನಿನ್ನ ಸನಿಹಕೆ
ಬಂದಾಗಲ್ಲೆಲ್ಲಾ ಕ್ಲಿಕ್ಕಿಸಿಬಿಡು
ನಿನ್ನ ಮಿಂಚಿನ ಕಣ್ಣುಗಳಲ್ಲಿ
ಒಂದು selfie!
***
ದುಬೈ ರಣಬಿಸಿಲು
ಮನೆಯೊಳು ತಣ್ಣನೆಯ ಎಸೀ
ಗಾಳಿಯದೆ ಜೋರು
ಹೊರಗಡಿಯಿಟ್ಟೊಡನೆ
ಸುರಿಸಬೇಕು ರಾಶಿ ಬೆವರು
ಕಾರಣ ಈ ಊರಿನಲಿ
ನಾವೂ
sunತ್ರಸ್ತರು! :)
***
ಉದರಿ ಹೋಗುವಾಗ
ಉದುರುತ್ತಿರುವ ತನ್ನೆಲೆಗಳಿಗೆ
ಚಿಂತಿಸದೆ
ಪ್ರಕೃತಿ ಧರ್ಮವೆಂದು
ಮರ ಸುಮ್ಮನಾಗಿದೆ ನಕ್ಕು
ಉದುರುತ್ತಿರುವ ಕೂದಲಿನದೆ
ಚಿಂತೆಯಲಿ ಅನಿಸುತ್ತಿದೆ
ನನಗೂ ಇದ್ದರೆ ಚೆನ್ನಿತ್ತು
"ವಸಂತ" ನೆಂಬ ಹೇರ್ ಟಾನಿಕ್ಕು!
***

ಉಪಹಾರಕೆ ಒಂದೆ ಸ್ಪೂನು
ಎಣ್ಣೆಯಲಿ ಮಾಡಿದ
Brown rice ಅವಲಕ್ಕಿ
ತಿನ್ನಲು ಕುಳಿತೆ
ಸಮಾಧಾನದ ನಿಟ್ಟುಸಿರಿಟ್ಟು
ಜೊತೆಗಿದ್ದರೆ ತಿನ್ನಲು
ಬಲು ರುಚಿಯೆಂದು
ಪಕ್ಕದಲ್ಲಿ ಇಟ್ಟೆ
ಚೌಚೌ ಚಕ್ಕಲಿ ನಿಪ್ಪಟ್ಟು!
ಸಂಜೆ ಊಟಕೆ
ಸೂಪು, ಮೊಳಕೆಕಾಳು,
ಹಸಿ ತರಕಾರಿ ಸಲಾಡ್ಡೇ
ಅಂದುಕೊಂಡೆ ಸಾಕು...
ರಾತ್ರಿ ಹೊಟ್ಟೆ
ಚುರುಗುಟ್ಟಿದಾಗ
ಗೊತ್ತೆ ಆಗಲಿಲ್ಲ
ಹೇಗಿಳಿಯಿತೊ
ನಾಲ್ಕು ಮೈಸೂರುಪಾಕು!
***
ತುಂಟಿ(ಟ)
ಪ್ರೀತಿಯಿಂದ ಉಲಿದಳಾಕೆ
ಅಬ್ಬ! ತಾಳೆನು ಈ ಛಳಿ
ಪ್ಲೀಸ್ comeಬಳಿ
ಅವ ನಗುತಲೆ
ಬಳಿ ಸರಿದು
ಕೊಟ್ಟು ಬಿಟ್ಟ ಅವಳಿಗೆ
ಮತ್ತೊಂದು ಕಂಬಳಿ!












Click it and Unblock the Notifications