ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಪುರದಲ್ಲಿ ಕನ್ನಡದ ತೇರು ಎಳೆಯಲು ಸಿದ್ಧರಿದ್ದೀರಾ?

By ಜಿ ಗೋಪಾಲ್, ಸಿಂಗಪುರ
|
Google Oneindia Kannada News

ಕನ್ನಡ ಸಂಘ (ಸಿಂಗಪುರ)ಕ್ಕೆ ಈಗ 20ರ ಹರಯ. ಈ ಸುಸಂದರ್ಭದಲ್ಲಿ ಎರಡು ದಿನಗಳ "ಸಿಂಗಾರ ಕನ್ನಡ ಸಂಸ್ಕೃತಿ ಸಮ್ಮೇಳನ"ವನ್ನು ಕನ್ನಡ ಸಂಘ (ಸಿಂಗಪುರ) ಹಮ್ಮಿಕೊಂಡಿರುವುದು ಎಲ್ಲರಿಗೆ ತಿಳಿದ ವಿಷಯ. ಇದೇ 2016 ಅಕ್ಟೋಬರ್ 29 ಹಾಗು 30 ರಂದು ಸಿಂಗಪುರ ಪಾಲಿಟೆಕ್ನಿಕ್ ಸಭಾಂಗಣದಲ್ಲಿ ನಡೆಯಲಿರುವ ಈ ಸಮ್ಮೇಳನಕ್ಕೆ ಅನೇಕ ಪ್ರಖ್ಯಾತ ಕಲಾವಿದರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಕನ್ನಡ ಸಂಘದ ಇತಿಹಾಸದಲ್ಲಿ ಉತ್ತಮ ಮೈಲಿಗಲ್ಲಾಗುವ ಕಾರ್ಯಕ್ರಮವಿದು. ಕಲೆ, ಸಾಹಿತ್ಯ, ಹಾಸ್ಯ, ಸಾಂಸ್ಕೃತಿಕ, ಕರ್ನಾಟಕ ಸಂಗೀತ, ನೃತ್ಯ, ಸಿನಿಮಾ ಹೀಗೆ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳನ್ನು ನೀವು ಈ ಎರಡು ದಿನಗಳ ಬೃಹತ್ ಸಮ್ಮೇಳನದಲ್ಲಿ ನೋಡಬಹುದು. ಈ ಕಾರ್ಯಕ್ರಮಗಳೇ ಎರಡು ದಿನ ಇದ್ದಮೇಲೆ ಇದಕ್ಕೆ ಪೂರ್ವಭಾವಿ ತಯಾರಿ ಎಷ್ಟು ದಿನ ಇರಬೇಕು ನೀವೇ ಆಲೋಚಿಸಿ. ಸುಮಾರು 6 ತಿಂಗಳುಗಳಿಂದ 150ಕ್ಕೂ ಹೆಚ್ಚು ಕಾರ್ಯಕರ್ತರು ಹಲವಾರು ಉಪಸಮಿತಿಗಳಡಿ ಈ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.

ಶ್ರಮಿಸುತ್ತಿರುವ ಉಪಸಮಿತಿಗಳು

ಇವುಗಳಲ್ಲಿ ಮುಖ್ಯವಾಗಿ ಸಾಂಸ್ಕೃತಿಕ ಉಪಸಮಿತಿ, ಈ ಉಪಸಮಿತಿಯು ಇಡೀ ಎರಡು ದಿನಗಳ ಸಮ್ಮೇಳನದ ಹರಿವನ್ನು ನೋಡಿಕೊಳ್ಳುತ್ತಿದ್ದು, ಯಾವ್ಯಾವ ಕಾರ್ಯಕ್ರಮ ಎಲ್ಲೆಲ್ಲಿ ಬರಬೇಕು, ಕಲಾವಿದರೊಂದಿಗಿನ ಒಡನಾಟ ಬೇಕು-ಬೇಡಗಳ ವಿಸ್ತರಣೆ ಹಾಗೂ ಜವಾಬ್ದಾರಿ, ಯಾವ್ಯಾವ ಕಾರ್ಯಕ್ರಮದ ಅವಧಿ ಎಷ್ಟೆಷ್ಟು ಎಂದು ನಿರ್ಧರಿಸುತ್ತದೆ.[ಸಿಂಗಾರ ಸಮ್ಮೇಳನಕ್ಕೆ ಅಧ್ಯಕ್ಷರ ಅತ್ಯಾದರದ ಸ್ವಾಗತ]

ಪ್ರಚಾರ ಉಪಸಮಿತಿಯು ಕಾರ್ಯಕ್ರಮಕ್ಕೆ ಬೇಕಾದ ಆಡಿಯೋ, ವಿಡಿಯೋ ಹಾಗು ಕರಪತ್ರಗಳನ್ನು ತಯಾರಿಸಿ ಈ ಕಾರ್ಯಕ್ರಮ ಇಡೀ ವಿಶ್ವದ ಕನ್ನಡಿಗರಿಗೆ ತಲುಪಲು ಸಹಾಯಮಾಡುತ್ತಿದೆ. ಇನ್ನು ಸಾಹಿತ್ಯ ತಂಡದ ಉಪಸಮಿತಿಯು ಸಮ್ಮೇಳನಕ್ಕೆ ಸಂಬಂಧಪಟ್ಟಂತೆ ಹಲವಾರು ಬರಹಗಳನ್ನು ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟಸುತ್ತಿದೆ ಹಾಗು ಸಮ್ಮೇಳನದ ಅಂಗವಾಗಿ ಏರ್ಪಡಿಸಿರುವ ಸಾಹಿತ್ಯ ಸ್ಪರ್ಧೆಯ ನಿರ್ವಹಣೆಯನ್ನು ಈ ಉಪಸಮಿತಿ ನೋಡಿಕೊಳ್ಳುತ್ತಿದೆ.

Singara Sammelana in Singapore : Sub-Committee

ಇಂತಹ ಒಂದು ದೊಡ್ಡ ಕಾರ್ಯಕ್ರಮಕ್ಕೆ ಮುಖ್ಯವಾಗಿ ಬೇಕಾಗಿರುವುದು ಪ್ರಾಯೋಜಕತ್ವ. ಪ್ರಾಯೋಜಕರ ಆರ್ಥಿಕ ಸಹಾಯವಿಲ್ಲದೆ ಇಂತಹ ಸಮ್ಮೇಳನಗಳು ಉತ್ತಮವಾಗಿ ಮೂಡಿಬರುವುದು ಕಷ್ಟಕರ. ಈ ಜವಾಬ್ದಾರಿಯನ್ನು ಪ್ರಾಯೋಜಕ ಉಪಸಮಿತಿಯು ನೋಡಿಕೊಳ್ಳುತ್ತದೆ. ಅಲಂಕಾರ ಉಪಸಮಿತಿ ಇಡೀ ಎರಡು ದಿನಗಳ ಕಾರ್ಯಕ್ರಮದ ಹೊರಾಂಗಣ ಅಲಂಕಾರ ಹಾಗು ಕಾರ್ಯಕ್ರಮದ ವೇದಿಕೆಯನ್ನು ಸುಂದರವಾಗಿ ಅಲಂಕರಿಸುವ ಕಾರ್ಯವನ್ನು ನೋಡಿಕೊಳ್ಳುತ್ತದೆ.

ಯಾವುದೇ ಕಾರ್ಯಕ್ರಮವಾದರೂ ಊಟ-ಉಪಚಾರ ತುಂಬಾ ಮುಖ್ಯವಾದುದು. ಅತಿಥಿಗಳಿಗೆ ಮತ್ತು ಕಾರ್ಯಕ್ರಮ ವೀಕ್ಷಕರಿಗೆ ಎರಡು ದಿನ ಕಾಲಕಾಲಕ್ಕೆ ತಿಂಡಿ, ಊಟದ ವ್ಯವಸ್ಥೆಯನ್ನು ಮಾಡುವ ಜವಾಬ್ದಾರಿ ಊಟ-ಉಪಚಾರದ ಉಪಸಮಿತಿಯ ಪ್ರಮುಖ ಕೆಲಸ. ಇನ್ನು ಕಾರ್ಯಕ್ರಮಕ್ಕೆ ವಿದೇಶಗಳಿಂದ ಬರುವ ಅತಿಥಿಗಳಿಗೆ ವಿಮಾನ ಟಿಕೆಟ್, ವೀಸಾ ಹಾಗು ಇಲ್ಲಿ ತಂಗಲು ವ್ಯವಸ್ಥೆ ಮಾಡುವುದು ಹಾಗೂ ಸಾರಿಗೆ ವ್ಯವಸ್ಥೆಯನ್ನು ಆತಿಥ್ಯ ಉಪಸಮಿತಿಯು ನಿರ್ವಹಿಸುತ್ತಿದೆ. ಇಡೀ ಕಾರ್ಯಕ್ರಮದ ಟಿಕೆಟ್ ವ್ಯವಸ್ಥೆ ಹಾಗೂ ಕಾರ್ಯಕ್ರಮ ದಿನದ ನಿರ್ವಹಣೆಯನ್ನು ಟಿಕೆಟ್ ಉಪಸಮಿತಿ ನೋಡಿಕೊಳ್ಳುತ್ತಿದೆ.[ತವರ ತೊರೆದು ಬಂದ ವಿರಾಗಿ ಹಕ್ಕಿಗಳ ಕನ್ನಡ ಕಲರವ]

ಈ ಬಾರಿ ಪ್ರಪ್ರಥಮವಾಗಿ ಕನ್ನಡಸಂಘ ಆನ್ಲೈನ್ ಟಿಕೆಟ್ಗಳನ್ನು ವ್ಯವಸ್ಥೆ ಮಾಡಿದೆ. ಹಲವಾರು ಸಿಂಗನ್ನಡಿಗರು ಈಗಾಗಲೆ ಆನ್ಲೈನ್ ಟಿಕೆಟ್ಗಳನ್ನು ಕೊಂಡು ಸಮ್ಮೇಳನದ ದಿನಕ್ಕಾಗಿ ಕಾಯುತ್ತಿದ್ದಾರೆ. ಇಂತಹ ದೊಡ್ಡ ಕಾರ್ಯಕ್ರಮದ ಖರ್ಚುವೆಚ್ಚವನ್ನು ನೋಡಿಕೊಳ್ಳುವುದು ಬಲು ಮುಖ್ಯ. ಈ ಕೆಲಸವನ್ನು ಲೆಕ್ಕಪತ್ರ ಉಪಸಮಿತಿ ನೋಡಿಕೊಳ್ಳುತ್ತಿದೆ.

ಈ ಕಾರ್ಯಕ್ರಮಕ್ಕೆ ಬರುವ ಅತಿಥಿಗಳು ತುಂಬಾ ಆಪಾರ. ಸಭಾಂಗಣದ ಸರ್ವ ವ್ಯವಸ್ಥೆ, ಪ್ರಾಯೋಜಕರ ಮಳಿಗೆಗಳು, ಸೌಂಡ್, ಲೈಟಿಂಗ್‌ನ ವ್ಯವಸ್ಥೆ, ಡೇರೆಗಳನ್ನು ಹಾಕಿಸುವುದು, ಸರಕು ಸಾಗಾಣೆ ಇನ್ನೂ ಅನೇಕ ಕಾರ್ಯಗಳನ್ನು ಲಾಜಿಸ್ಟಿಕ್ಸ್ ಉಪಸಮಿತಿ ನಿರ್ವಹಿಸುತ್ತಿದೆ.

ಸಂಘದ ಮುಖಾಂತರ ಕಳುಹಿಸುವ ಮಿಂಚಂಚೆಗಳನ್ನು ಕಾಲ ಕಾಲಕ್ಕೆ ಯಾವುದೇ ತೊಂದರೆಗಳಿಲ್ಲದೆ ಪ್ರಚಾರದ ಕೆಲಸವನ್ನು ಸಂಘದ ಪ್ರಸಾರ ತಂಡವು ನಿರ್ವಹಿಸುತ್ತಿದೆ. ಕಾರ್ಯಕ್ರಮದ ಎರಡು ದಿನಗಳಲ್ಲಿ ಮಕ್ಕಳನ್ನು ಮನರಂಜಿಸಲೆಂದೇ ಒಂದು ಮಕ್ಕಳ ಉಪಸಮಿತಿ ನಿರ್ಮಿತಗೊಂಡಿರುವುದು ಸಂತೋಷದ ವಿಷಯ. ಮಕ್ಕಳನ್ನು ತೊಡಗಿಸಿ ಕೊಳ್ಳುವುದರ ಬಗ್ಗೆ ಅನೇಕ ಯೋಜನೆಗಳೊಂದಿಗೆ ಸಜ್ಜಾಗುತ್ತಿದೆ. ಈ ಎಲ್ಲಾ ಸಮಿತಿಗಳಿಗೆ ಸಹಾಯ ಹಸ್ತ ನೀಡಲೆಂದು ನಿರ್ಮಿತವಾಗಿರುವೆ ಸ್ವಯಂ-ಸೇವಕರ ಉಪ ಸಮಿತಿಯ ಕಲ್ಪನೆಯೇ ಅದ್ಭುತವಲ್ಲವೇ?[ಸಿಂಗಪುರದಲ್ಲಿ ಕರ್ನಾಟಕದ ಶಾಸ್ತ್ರೀಯ ಸಂಗೀತ ಶಿಬಿರ]

ಎಲ್ಲಾ ಉಪಸಮಿತಿಯ ಸದಸ್ಯರು ತಮ್ಮ ಕೆಲಸಗಳನ್ನು ಕಾಲ ಕಾಲಕ್ಕೆ ಸರಿಯಾಗಿ ನಿರ್ವಹಿಸಿ ಸಮ್ಮೇಳನದ ಒಟ್ಟಾರೆ ಯಶಸ್ಸಿಗೆ ದುಡಿಯುತ್ತಿದ್ದಾರೆ. ಉಪಸಮಿತಿಯ ನಾಯಕರು ವಾರಕೊಮ್ಮೆ ಒಟ್ಟುಗೂಡಿ ತಂತಮ್ಮ ತಂಡಗಳ ಚಟುವಟಿಕೆಯನ್ನು ಇನ್ನುಳಿದ ತಂಡಗಳ ಜೊತೆ ಹಂಚಿಕೊಂಡು, ತಮ್ಮ ಕಾರ್ಯನಿರ್ವಹಣೆಯಲ್ಲಿ ಏನಾದರೂ ಬದಲಾವಣೆ ಬೇಕೆದ್ದರೆ ಅದನ್ನು ಅಳವಡಿಸಿಕೊಂಡು ಇಡೀ ಸಮ್ಮೇಳನವನ್ನು ಚಂದಗಾಣಿಸಲು ಶ್ರಮಿಸುತಿದ್ದಾರೆ. ಉಪಸಮಿತಿಗಳ ಮೇಲ್ವಿಚಾರಣೆಯನ್ನು ಕಾರ್ಯಕ್ರಮದ ಮೇಲ್ವಿಚಾರಕ ಸಮಿತಿಯು ನೋಡಿಕೊಳ್ಳುತ್ತಿದೆ.

ಕನ್ನಡ ನಾಡು ನುಡಿಗಾಗಿ ನಿಸ್ವಾರ್ಥ ಸೇವೆ

ಇದರಲ್ಲಿ ಮನಸ್ಸೆಳೆಯುವ ವಿಷಯವೆಂದರೆ, ಎಲ್ಲಾ ಕಾರ್ಯಕರ್ತರು ತಮ್ಮ ವೃತ್ತಿಗಳಲ್ಲಿ ಬಿಡುವಿಲ್ಲದೆ ನಿರತರಾಗಿದ್ದರೂ ತಮಗೆ ದೊರೆಯುವ ಸಮಯದಲ್ಲಿ ಸ್ವಯಂ ಪ್ರೇರಿತರಾಗಿ ಕನ್ನಡ ನಾಡು ನುಡಿಯ ಸಂಸ್ಕೃತಿಯನ್ನು ಹರಡುವ, ಪರಸ್ಪರ ಹಂಚಿಕೊಳ್ಳುವ ಮನೋಭಾವದಲ್ಲಿ ನಿಸ್ವಾರ್ಥವಾಗಿ ಸೇರಿ ಸಂಘದ ಬೆಳವಣಿಗೆಯ ಕೈಂಕರ್ಯದಲ್ಲಿ ಒಂದುಗೂಡುತ್ತಿರುವುದು ನಿಜಕ್ಕೂ ಧನ್ಯತಾಭಾವದ ಅನುಭಾವವೆಂದರೆ ಅತಿಶಯೋಕ್ತಿಯಾಗಲಾರದು. ಕೆಲವೊಮ್ಮೆ ಅನೇಕ ಉಪ ಸಮಿತಿಗಳು ರಾತ್ರೋರಾತ್ರಿ ಸಭೆಗಳನ್ನು ನಡೆಸಿ ಚರ್ಚಿಸುವುದು, ವಿಭಿನ್ನತೆಯ ಅಭಿಪ್ರಾಯಗಳಲ್ಲಿ ಸಕಾರಾತ್ಮಕ ವಾದಗಳೊಡನೆ ಸಂಘದ ಅಭಿವೃದ್ದಿಗೆ ಏಕಮುಖವಾಗಿ ಒಂದಾಗುವುದು, ಒಟ್ಟಾರೆ ಸಂಘ ಸಂಸ್ಥೆಗಳಲ್ಲಿ ಶ್ರಮಿಸಿ ಸಮಾಜಮುಖಿಯಾಗಿ ತಮ್ಮ ಸ್ವ-ವ್ಯಕ್ತಿತ್ವವನ್ನು ಸೃಷ್ಟಿಸಿಕೊಳ್ಳಲು ಒದಗುವ ಸದವಕಾಶದ ಅನುಭವ ಅನೀರ್ವಚನೀಯ.

ಇಂತಹ ಬೃಹತ್ ಕಾರ್ಯಕ್ರಮದ ಹಿಂದಿನ ಶ್ರಮ ಅನಾವರಣಗೊಳ್ಳುವ ದಿನಗಳು, ಹತ್ತಿರ ಬರುತ್ತಿವೆ. ಬನ್ನಿ ಎಲ್ಲರೂ ಭಾಗವಹಿಸಿ, ಕನ್ನಡದ ತೇರನ್ನು ಎಳೆಯೋಣ, ಸಂಭ್ರಮಿಸೋಣ! ತಪ್ಪದೇ ಇಂದೇ ನಿಮ್ಮ ಟಿಕೆಟ್ ಗಳನ್ನು ಕಾಯ್ದಿರಿಸಿ ಸಮ್ಮೇಳನದ ಯಶಸ್ಸಿನಲ್ಲಿ ನೀವೂ ಕೂಡ ಪಾಲುದಾರರಾಗಿ. ಇಂದೇ ಕನ್ನಡ ಸಂಘ (ಸಿಂಗಪುರ) ಅಂತರ್ಜಾಲ ತಾಣಕ್ಕೆ ಬೇಟಿ ಕೊಡಿ.

English summary
The count down has started for Singara Sammelana in Singapore. Many sub-committee are working round the clock to make the Kannada festival grand success.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X