'ಅಕ್ಕ' ಅಟ್ಲಾಂಟಾ ಸಮ್ಮೇಳನಕ್ಕೆ ಚಿತ್ರ ತಾರೆಯರ ದಂಡು

Posted By:
Subscribe to Oneindia Kannada

ಬೆಂಗಳೂರು, ಮೇ. 10 : ಅಮೆರಿಕದ ಅಟ್ಲಾಂಟಾದಲ್ಲಿರುವ ನೃಪತುಂಗ ಕನ್ನಡ ಕೂಟದ ಆಶ್ರಯದಲ್ಲಿ ಆಗಸ್ಟ್ 31ರಿಂದ ಸೆಪ್ಟೆಂಬರ್ 2ರವರೆಗೆ ನಡೆಯಲಿರುವ ಮೂರು ದಿನಗಳ 7ನೇ 'ಅಕ್ಕ' ವಿಶ್ವ ಕನ್ನಡ ಸಮ್ಮೇಳನಕ್ಕೆ ತಯಾರಿ ಭರದಿಂದ ಸಾಗಿದ್ದು, ಈ ಬಾರಿ ಕನ್ನಡ ಚಿತ್ರರಂಗದ ಯುವ ತಾರೆಗಳೆಲ್ಲ ಝಗಮಗಿಸಲಿವೆ.

ಎರಡು ವರ್ಷಗಳಿಗೊಮ್ಮೆ ಅಮೆರಿಕದಲ್ಲಿ ನಡೆಯುವ ಈ ಅಂತಾರಾಷ್ಟ್ರೀಯ ಕನ್ನಡ ನುಡಿಹಬ್ಬದಲ್ಲಿ ಸೂಜಿಗಲ್ಲಿನಂತೆ ಸೆಳೆಯುವ ಮತ್ತು ಕನ್ನಡಿಗರೆಲ್ಲರು ಕಾತುರದಿಂದ ಕಾಯುವ ಕಾರ್ಯಕ್ರಮವೆಂದರೆ ಚಲನಚಿತ್ರ ತಾರೆಗಳ ಸಂಗೀತ ಸಂಜೆ. ಈ ಬಾರಿ ಕೂಡ ನಟನಟಿಯರ ಬೃಹತ್ ದಂಡು ಜಾರ್ಜಿಯಾ ಇಂಟರ್‌ನ್ಯಾಷನಲ್ ಕನ್ವೆಷನ್ ಸೆಂಟರ್‌ನಲ್ಲಿ ಕನ್ನಡಿಗರನ್ನು ರಂಜಿಸಲಿದ್ದಾರೆ.

ಯಾರ್ಯಾರು ಬರುತ್ತಿದ್ದಾರೆ? : ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಮನಸಾರೆಯ ರೋಮ್ಯಾಂಟಿಕ್ ಜೋಡಿಯಾದ ದೂಧ್ ಪೇಡ ದಿಗಂತ್, ಐಂದ್ರಿತಾ ರೇ, ಲೂಸ್ ಮಾದ ಯೋಗೇಶ್, ಯುವ ನಟ ಯಶ್, ಪ್ರತಿಭಾವಂತ ನಟಿಯರಾದ ರಾಧಿಕಾ ಪಂಡಿತ್, ನಿಧಿ ಸುಬ್ಬಯ್ಯ, ಪ್ರಿಯಾಮಣಿ, ಹಾಸ್ಯ ನಟರಾದ ರಂಗಾಯಣ ರಘು, ಸಾಧು ಕೋಕಿಲಾ, ಸಂಗೀತ ನಿರ್ದೇಶಕರಾದ ಗುರು ಕಿರಣ್, ವಿ ಹರಿಕೃಷ್ಣ, ನೃತ್ಯ ಸಂಯೋಜಕ ಇಮ್ರಾನ್ ಮುಂತಾದವರು ಅಮೆರಿಕಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು ಅಕ್ಕ ಸಮ್ಮೇಳನವನ್ನು ವಿಧ್ಯುಕ್ತವಾಗಿ ಉದ್ಘಾಟಿಸಲು ಸಮ್ಮತಿ ನೀಡಿದ್ದಾರೆ. ಗೌಡರ ಜೊತೆಗೆ ಗಣ್ಯ ರಾಜಕಾರಣಿಗಳ ತಂಡ ಕೂಡ ಈ ಸಮ್ಮೇಳನದಲ್ಲಿ ಭಾಗವಹಿಸಲಿದೆ. ಗೃಹ ಸಚಿವ ಆರ್ ಅಶೋಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಕಾರಜೋಳ, ಲೋಕೋಪಯೋಗಿ ಸಚಿವ ಸಿಎಂ ಉದಾಸಿ ಪಯಣ ಬೆಳೆಸಲಿದ್ದಾರೆ. ಜ್ಞಾನಪೀಠ ಪ್ರಶಸ್ತಿ ವಿಜೇತ ಕವಿ, ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರು ಕೂಡ ವಿಶೇಷ ಅತಿಥಿಯಾಗಿ ಅಟ್ಲಾಂಟಾ ಸಮ್ಮೇಳನದಲ್ಲಿ ಭಾಗವಹಿಸಲು ಒಪ್ಪಿಕೊಂಡಿದ್ದಾರೆ.

ವಿಶೇಷ ರಿಯಾಯಿತಿ : ಅಟ್ಲಾಂಟಾ ಸಮ್ಮೇಳನಕ್ಕೆ ನೊಂದಾವಣಿ ಕೂಡ ಭರದಿಂದ ಸಾಗಿದ್ದು, ವಿಶ್ವ ಕನ್ನಡಿಗರು ಭಾಗವಹಿಸಲು ನೊಂದಾಯಿಸಿಕೊಳ್ಳುತ್ತಿದ್ದಾರೆ. ಮೇ 15ರೊಳಗೆ ನೊಂದಾಯಿಸಿಕೊಂಡರೆ ಶೇ.30ರಷ್ಟು ರಿಯಾಯಿತಿ ದೊರೆಯಲಿದೆ. ಆದ್ದರಿಂದ ತ್ವರೆ ಮಾಡಿ ಇಂದೇ ನೊಂದಾಯಿಸಿಕೊಳ್ಳಿ ಎಂದು ಸಮ್ಮೇಳನದ ಸಂಘಟಕರು ಕರೆ ನೀಡಿದ್ದಾರೆ.

ದರ ಹೀಗಿವೆ : ವಯಸ್ಕರಿಗೆ 175 ಡಾಲರ್, 7ರಿಂದ 18ರೊಳಗಿನ ವಯಸ್ಸಿನ ಮಕ್ಕಳಿಗೆ 125 ಡಾಲರ್, 6 ವರ್ಷದೊಳಗಿನ ಮಕ್ಕಳಿಗೆ ಪ್ರವೇಶ ಉಚಿತ. [ನೊಂದಾಯಿಸಬೇಕಿದ್ದರೆ ಇಲ್ಲಿ ಕ್ಲಿಕ್ಕಿಸಿ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
7th AKKA World Kannada Conference, Atlanta, USA. Nrupatunga Kannada Koota is hosting WKC-7 from August 31 to September 2, 2012. Kannada movie actors Puneeth, Raghavendra Rajkumar, Diganth, Aindrita Ray, Priya Mani, Radhika Pandit are participating in the mega Kannada event.
Please Wait while comments are loading...