ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೈಮುಗಿದು ಒಳಗೆ ಬಾ, ಇದು ಮರುಭೂಮಿಯ ಸಸ್ಯಕಾಶಿ

By * ಡಾ. ಉಮಾ ವೆಂಕಟೇಶ್, ಸೌತ್ ವೇಲ್ಸ್, ಯುಕೆ
|
Google Oneindia Kannada News

Huntington Botanical desert garden California
ದಕ್ಷಿಣ ಕ್ಯಾಲಿಫೋರ್ನಿಯಾದ ಆರ್ಕೇಡಿಯಾನಲ್ಲಿರುವ ಹಂಟಿಂಗ್ಟನ್ ಸಸ್ಯೋದ್ಯಾನವನ ಪ್ರಪಂಚದ ಉತ್ತಮ ಸಸ್ಯ ಶೇಖರಣಾ ಸ್ಥಾನಗಳಲ್ಲೊಂದು ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಆಗಸ್ಟ್ ತಿಂಗಳ ಧಗಧಗಿಸುವ ಕ್ಯಾಲಿಫೋರ್ನಿಯಾದ ಉರಿ ಬಿಸಿಲಲ್ಲಿ ಸುಮಾರು 207 ಎಕರೆಗಳ ವಿಶಾಲವಾದ ಹಂಟಿಂಗ್ಟನ್ ಉದ್ಯಾನವನ್ನು ಪ್ರವೇಶಿಸಿದಾಗ ಆದ ಆನಂದ ಅವರ್ಣನೀಯ. ಈ ಭೂಮಿಯ ಮೇಲಿನ ಮತ್ತೊಂದು ಲೋಕವನ್ನೇ ಹೊಕ್ಕಂತಾಯಿತು.

ಈ ಮನೋಹರ ಸಸ್ಯಲೋಕವನ್ನು ವಿವಿಧ ಗುಂಪುಗಳನ್ನಾಗಿ ವಿಂಗಡಿಸಿ ದರ್ಶಕರಿಗೆ ತಮ್ಮ ಮನಸ್ಸಿಗೆ ಬೇಕಾದ ಸಸ್ಯ ಗುಂಪನ್ನು ನೋಡುವ ವ್ಯವಸ್ಥೆ ಮಾಡಲಾಗಿದೆ. ಮೂಲತಃ ಸಸ್ಯಶಾಸ್ತ್ರ ವಿದ್ಯಾರ್ಥಿಯಾದ ನನ್ನಂತಹ ಪ್ರವಾಸಿಗಳಿಗೆ ಇದು ಸ್ವಲ್ಪ ಫಜೀತಿಯೇ ಸರಿ. ಎಲ್ಲಾ ಸಸ್ಯ ಪ್ರಭೇಧಗಳನ್ನೂ ನೋಡುವ ದುರಾಸೆ ನನಗೆ. ಆದರೆ ಸಮಯದ ಕೊರತೆ. ನನಗಿದ್ದ ಕೇವಲ ಒಂದು ದಿನದ ಅವಧಿಯಲ್ಲಿ ಹಾಗೂ ಹೀಗೂ ನನ್ನ ಮನಸ್ಸಿನೊಡನೆ ಸೆಣಸಾಡಿ ನೋಡಲು ಬಹಳ ಅಪರೂಪವಾದ ಮರಭೂಮಿ ಉದ್ಯಾನವನ್ನು ಆರಿಸಿಕೊಂಡೆ. ಪ್ರಪಂಚದ ಅತ್ಯಂತ ಉಷ್ಣ ಪ್ರದೇಶಗಳಲ್ಲಿ ಬರಡು ಭೂಮಿಯಲ್ಲಿ ಯಾವ ರೀತಿಯ ಮಳೆ ಮತ್ತು ನೀರಿನ ಸಂಪರ್ಕವೇ ಇಲ್ಲದೆ ಬೆಳೆಯುವ ಮತ್ತು ನಮ್ಮಂತಹ ಸಾಮಾನ್ಯ ಜನರ ಸಂಪರ್ಕದಿಂದ ಬಹುದೂರವಿರುವ ಈ ಸಸ್ಯಗಳನ್ನು ನೋಡುವುದು ಒಂದು ಅವರ್ಚನೀಯ ಅನುಭವವೇ ಸರಿ.

ಇದಲ್ಲದೇ ಜಪಾನೀಯರ ಹೂದೋಟ, ಗುಲಾಬಿ ಉದ್ಯಾನವನ, ಚೀನಾದೇಶದ ಸಸ್ಯ ಸಂಪತ್ತು, ನಿತ್ಯ ಹರಿದ್ವರ್ಣ ಕಾಡುತೋಟ, ಆಸ್ಟ್ರೇಲಿಯಾ ಖಂಡದ ವೃಕ್ಷವೃಂದ, ತಾಳೆಗಳ ತೋಟ ಹೀಗೆ ಒಂದೇ ಎರಡೇ. ನೋಡುವವರ ಕಣ್ಣುಗಳಿಗೆ ಹಬ್ಬ. ಇದರ ಜೊತೆಗೆ ಗ್ರಂಥಾಲಯ, ಕಲಾಪ್ರದರ್ಶನದ ಗ್ಯಾಲರಿ ಮತ್ತು ಗಾಜಿನ ಮನೆಯೂ ಸೇರಿದೆ. ನಾನು ಇದುವರೆಗೆ ಅನೇಕ ಸಸ್ಯೋದ್ಯಾನಗಳಿಗೆ ಭೇಟಿ ಇತ್ತಿದ್ದೇನಾದರೂ, ಹಂಟಿಂಗ್ಟನ್ ಉದ್ಯಾನವನದ ಮರುಭೂಮಿಯ ತೋಟದ ಸಸ್ಯ ವೈವಿಧ್ಯತೆಗೆ ನಾನು ಪೂರ್ಣವಾಗಿ ಮಾರುಹೋದೆ. ಮೆಕ್ಸಿಕೊ, ದಕ್ಷಿಣ ಆಫ್ರಿಕಾ, ನಮೀಬಿಯ, ಸಹಾರಾ, ಇಥಿಯೋಪಿಯಾ, ಸೊಮಾಲಿಯಾ, ಸೌದಿಅರೇಬಿಯಾ, ಯೆಮೆನ್, ಗೋಬಿ ಮರುಭೂಮಿ, ದಕ್ಷಿಣ ಅಮೆರಿಕ ಹೀಗೆ ನಾನಾ ಮೂಲೆಗಳಿಂದ ತರಿಸಿ ಬೆಳೆಸಿದ ಈ ಸಸ್ಯ ವೈವಿಧ್ಯಮಯತೆಗೆ ಮನಸೋಲದಿರಲು ಸಾಧ್ಯವೇ ಇಲ್ಲ.

ವರ್ಷಾನುಗಟ್ಟಲೆ ನೀರಿನ ಮುಖವನ್ನೇ ಕಾಣದಿರುವ, ಬಹಳ ಕಡಿಮೆ ನೀರಿನ ಸಹಾಯದಿಂದ ಬೆಳೆಯುವ ನಾನಾ ವಿಧದ ಭೂತಾಳೆ, ಕತ್ತಾಳೆ, ಮರತಾಳೆ, ಅನೇಕ ರೀತಿಯ ಕಳ್ಳಿಗಳು- ತಿರುಕಳ್ಳಿ, ಎಲೆಕಳ್ಳಿ, ಮರಕಳ್ಳಿ, ಗಿಡಕಳ್ಳಿ ಒಂದೇ ಎರಡೇ? ನೀರಿನ ಅಭಾವದಿಂದಾಗಿ ಕೇವಲ ವಾತಾವರಣದಲ್ಲಿರುವ ನೀರಿನಾಂಶವನ್ನು ತನ್ನ ಶರೀರದ ವಿವಿಧ ಭಾಗಗಳಲ್ಲಿ ಶೇಖರಿಸಿ ತನ್ನ ಜೀವನದ ಎಲ್ಲಾ ಚಟುವಟಿಕೆಗಳನ್ನು ಅತ್ಯಂತ ಸಮರ್ಪಕವಾಗಿ ನಡೆಸಿಕೊಂಡು ಹೋಗುವ ಈ ಸಸ್ಯ ಪ್ರಪಂಚದ ವೈಖರಿ ಜೀವ ಜಾಲದ ಅದ್ಭುತವೇ ಎಂದು ಮತ್ತೊಮ್ಮೆ ಹೇಳಬೇಕಾಗಿಲ್ಲ. ಇಂತಹ ವೈಪರೀತ್ಯಗಳಲ್ಲಿ ವಾಸಿಸಿದರೂ ಈ ಗಿಡಗಳ ಹೂವುಗಳೋ ಅದೆಷ್ಟು ಸುಂದರ. ಬಿಳಿ, ಅಚ್ಚ ಹಳದಿ, ಕೆಂಪು, ನೀಲಿ, ಬದನೆ ವರ್ಣ, ಹೀಗೆ ಹಲವಾರು ವರ್ಣಗಳಿಂದ ನಳನಳಿಸುವ ಈ ಸಸ್ಯ ಸೊಬಗಿಗೆ ಮನ ಮಾರುಹೋಯಿತು. ಸ್ವಯಂ ಸಸ್ಯಶಾಸ್ತ್ರ ಅಧ್ಯಾಪಕಿಯಾಗಿ ಹಲವು ವರ್ಷ ಈ ವಿಷಯವನ್ನು ಬೋಧಿಸಿದ್ದ ನನಗೆ ಕೇವಲ ಪಠ್ಯಪುಸ್ತಕಗಳಲ್ಲಿ ಕಂಡ ಚಿತ್ರಗಳನ್ನು ಪ್ರತ್ಯಕ್ಷವಾಗಿ ಕಂಡಾಗ ಭಕ್ತನಿಗೆ ದೇವರನ್ನು ಕಂಡಷ್ಟೇ ಸಂತೋಷ.

ಪ್ರತಿ ವರ್ಷ ಸುಮಾರು 5 ಲಕ್ಷ ಪ್ರವಾಸಿಗಳನ್ನು ಆಕರ್ಷಿಸುವ ಈ ಸಸ್ಯೋದ್ಯಾನ 1919ರಲ್ಲಿ ಹೆನ್ರಿ ಎಡ್ವರ್ಡ್ ಹಂಟಿಂಗ್ಟನ್ ಎಂಬ ಪ್ರಸಿದ್ಧ ವ್ಯಾಪಾರ ಮತ್ತು ಉದ್ಯಮಪತಿಯಿಂದ ಪ್ರಾರಂಭಿಸಲ್ಪಟ್ಟಿತು. ನನ್ನ ಕ್ಯಾಮೆರಾ ಸದ್ದಿಲ್ಲದೇ ನಿರಂತರವಾಗಿ ಎಲ್ಲಾ ವೈವಿಧ್ಯಮಯ ಸಸ್ಯ ಸಂಪತ್ತನ್ನು ತನ್ನಲ್ಲಿ ಸೆರೆಹಿಡಿಯುತ್ತಲೇ ಇತ್ತು. ಸಮಯದ ಪರಿವೆಯೇ ಇಲ್ಲದ ನಮಗೆ ಮುಳುಗುವ ಸೂರ್ಯನೇ ಕಡೆಗೆ ಎಚ್ಚರಿಸಿದ. ಕೇವಲ ಎರಡೇ ವರ್ಗದ ಉದ್ಯಾನವನಗಳನ್ನು ನೋಡಲು ಸಾಧ್ಯವಾಯಿತು. ಅದೊಂದೇ ನನಗಾದ ವ್ಯಥೆ. ಆದರೆ ಮತ್ತೊಮ್ಮೆ ಈ ಸಸ್ಯ ಪ್ರಪಂಚಕ್ಕೆ ಭೇಟಿ ಕೊಡಲೇಬೇಕು ಎಂಬ ಸ್ವಯಂ ಆಶ್ವಾಸನೆಯೊಂದಿಗೆ ಮತ್ತು ಸುಂದರ ಸವಿನೆನಪುಗಳೊಂದಿಗೆ ಹೊರಬಿದ್ದೆ. ದಕ್ಷಿಣ ಕ್ಯಾಲಿಫೋರ್ನಿಯಾಕ್ಕೆ ಭೇಟಿನೀಡುವ ನನ್ನ ಮಿತ್ರರೆಲ್ಲರಿಗೂ ಈ ಸಸ್ಯ ಕಾಶಿಗೊಮ್ಮೆ ಖಂಡಿತಾ ಭೇಟಿನೀಡಿ ಎನ್ನುವ ಸಲಹೆಯೊಂದಿಗೆ ನನ್ನ ಈ ಲೇಖನವನ್ನು ಮುಗಿಸುತ್ತೇನೆ.

English summary
The Huntington Desert Garden is one of the largest and oldest assemblages of cacti and other succulents in the world. Dr. Uma Venkatesh, residing in Cardiff, South Wales, United Kingdom, mesmerized by the beauty of the garden writes about the botanical garden.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X