• search

ಆಕ್ಲೆಂಡಲ್ಲಿ ರೋಚಕ ಅಂತ್ಯ ಕಂಡ ಅಂತಾಕ್ಷರಿ

By * ಪ್ರಕಾಶ್ ರಾಜರಾವ್
Subscribe to Oneindia Kannada
For Quick Alerts
ALLOW NOTIFICATIONS
For Daily Alerts
  Nail biting end to antakshari in Auckland
  "ಗೆಲ್ಲಲು ಒಂದೇ ರನ್ ಬೇಕು, ಆಡುತ್ತಿರುವುದು ಕಡೆಯ ವಿಕೆಟ್ ಮತ್ತು ಉಳಿದಿರುವುದು ಒಂದೇ ಬಾಲು, ಯಾವ ತಂಡವಾದರೂ ಗೆಲ್ಲಬಹುದು" ಇಂತಹ ಸನ್ನಿವೇಶ ಕ್ರಿಕೆಟ್ ಪ್ರೇಮಿಗಳಿಗೆ ಪರಿಚಿತ. ಆದರೆ, ಕನ್ನಡ ಚಲನ ಚಿತ್ರಗೀತೆಗಳ ಅಂತಾಕ್ಷರಿಯಲ್ಲಿ ಇಂತಹ ರೊಮಾಂಚಕ ಅಂತ್ಯ ಸಾಧ್ಯವಾಗಿದ್ದು ನಮ್ಮ ಆಕ್ಲೆಂಡಿನಲ್ಲಿ.

  ನ್ಯೂಜಿಲೆಂಡ್ ಕನ್ನಡ ಕೂಟ ನಾಲ್ಕು ವರ್ಷಗಳಿಂದ ಯುಗಾದಿ ಹಬ್ಬದ ಸಲುವಾಗಿ ನಡೆಸುತ್ತಿರುವ ಕನ್ನಡ ಚಲನಚಿತ್ರಗಳ ಅಂತಾಕ್ಷರಿ ಕಾರ್ಯಕ್ರಮ ಈ ವರ್ಷವೂ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಗಳನ್ನೂ ಪ್ರೇಕ್ಷಕರನ್ನೂ ಆಕರ್ಷಿಸಿತು. ಫೆಬ್ರವರಿ 28ರಂದು ಭಾನುವಾರ ನಡೆದ ಅಂತಾಕ್ಷರಿಯಲ್ಲಿ ನೊಂದಾಯಿಸಿದ ಪ್ರತಿಸ್ಪರ್ಧಿಗಳು ಜಾಸ್ತಿಯಿದ್ದ ಕಾರಣ ಅಂತಿಮ ಸ್ಪರ್ಧೆಯ ಆಯ್ಕೆಗಾಗಿ ಲಖಿತ ಪರೀಕ್ಷೆ ನಡೆಸಲಾಯಿತು. ಇದರಲ್ಲಿ ಕೇಳಿದ್ದ ಪ್ರಶ್ನೆಗಳು ಡಾ. ರಾಜ್, ಡಾ.ವಿಷ್ಣುವರ್ಧನ್, ಸಿ. ಅಶ್ವಥ್ ಸೇರಿದಂತೆ ಇಡೀ ಕನ್ನಡ ಚಲನಚಿತ್ರರಂಗದ ಇತಿಹಾಸವನ್ನೇ ಒಳಗೊಂಡಿತ್ತೆನ್ನಬಹುದು.

  ಈ ಪರೀಕ್ಷೆಯ ಎರಡನೆಯ ಭಾಗವಾಗಿ ಕೆಲವು ಹಾಡುಗಳು ಮತ್ತು ಚಿತ್ರಗಳ ಸನ್ನಿವೇಶಗಳನ್ನು ದೊಡ್ಡ ಪರದೆಯ ಮೇಲೆ ತೊರಿಸಿದಾಗ ಸ್ಪರ್ಧಿಗಳಿಗಿಂತ ಪ್ರೇಕ್ಷಕರೇ ತೀವ್ರವಾಗಿ ಸ್ಪಂದಿಸಿದರು. ಹೆಚ್ಚು ಅಂಕಗಳಿಸಿದ ತಲಾ ಇಬ್ಬರಿದ್ದ ಆರು ತಂಡಗಳು ವೇದಿಕೆಯ ಮೇಲೆ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿದವು. ಈ ಆರು ತಂಡಗಳಿಗೂ ಡಾ.ವಿಷ್ಣು ನಟಿಸಿದ ಚಲನಚಿತ್ರಗಳ ಹೆಸರನ್ನಿಟ್ಟಿದ್ದು ವಿಶೇಷವಾಗಿತ್ತು. ಮೊದಲ ಸುತ್ತಿನಲ್ಲಿ ಮಾಮೂಲಿನಂತೆಯೆ ಒಂದು ತಂಡ ಹಾಡಿದ ಗೀತೆಯ ಕೊನೆಯ ಆಕ್ಷರದಿಂದ ಆರಂಭವಾಗುವ ಹಾಡನ್ನು ಮುಂದಿನ ತಂಡದವರು ಹಾಡಬೇಕಾಗಿತ್ತು. ಇದರಲ್ಲಿ ಹುರುಪಿನಿಂದ ಎಲ್ಲರೂ ಗರಿಷ್ಠ ಅಂಕಗಳಿಸಿ ಬೀಗುತ್ತಿರುವಂತೆಯೆ ಕಾರ್ಯಕ್ರಮದ ನಿರೂಪಕ ಸತ್ಯಕುಮಾರ್ ಕಟ್ಟೆ ಅವರು ಮುಂದಿನ ಸುತ್ತುಗಳನ್ನು ಕಠಿಣವಾಗಿಸಿ ಸ್ಪರ್ಧಿಗಳಲ್ಲಿ ಆತಂಕ ಮೂಡಿಸಿದರು.

  ಪದಸಂಪದ ಸುತ್ತಿನಲ್ಲಿ ಒಂದು ಹಾಡಿನ ಯಾವುದೋ ಎರಡು ಪದ ನೀಡಿ ಆ ಹಾಡನ್ನು ಗುರುತಿಸುವುದು. ಉದಾ: "ಬದುಕಿನ" "ಒಲವಿನ" ಪದಗಳು ಇರುವ " ಬಣ್ಣಾ ನನ್ನ ಒಲವಿನ ಬಣ್ಣ" ಹಾಡು. ಹಳೆಯ ಚಿತ್ರಗಳ ದೃಶ್ಯಗಳನ್ನು ಎಲ್ಲರೂ ಗುರುತಿಸಿದರೂ ಕೆಲವು ಹೊಸ ಚಿತ್ರಗಳ ದೃಶ್ಯಗಳು ಸವಾಲು ಒಡ್ಡಿದವು. ಒಂದು ತಂಡ ವಿಫಲವಾದಾಗ ಆ ಪ್ರಶ್ನೆ ಮುಂದಿನ ತಂಡಕ್ಕೆ ಲಭಿಸಿ ಬೋನಸ್ ಅಂಕ ಗಳಿಸಲು ನೆರವಾದವು. ಇದರಿಂದ ಅನಿತಾ ದೇಶಪಾಂಡೆ ಮತ್ತು ಜಯಶ್ರೀ ಸದಾಶಿವ ಹಾಗೂ ಕೃಷ್ಣಾ ನಾಗರಾಜ್ ಮತ್ತು ಧರಣೇಂದ್ರ ಅವರ ತಂಡಗಳು ಇತರರಿಗಿಂತ ಮುನ್ನಡೆ ಸಾಧಿಸಲು ಸಾಧ್ಯವಾಯಿತು. ಕೆಲವೊಮ್ಮೆ ಯಾವ ತಂಡವೂ ಉತ್ತರಿಸಿದ ಪ್ರಶ್ನೆಯನ್ನು ಪ್ರೇಕ್ಷಕರೇ ಅತ್ಯುತ್ಸಾಹದಿಂದ ಉತ್ತರಿಸಿ ಬಹುಮಾನ ಗಿಟ್ಟಿಸಿದರು.

  ಈ ವರ್ಷ ಹೊಸದಾಗಿ ಸೇರ್ಪಡೆಯಾದ "ಕೊಕ್" ಕೊಡುವ ಸುತ್ತು ಆಕರ್ಷಕವಾಗಿತ್ತು. ನಿರೂಪಕರು ಒಂದು ಹಾಡನ್ನು ಪ್ರಾರಂಭಿಸಿದಾಗ ಕೇವಲ ಹತ್ತು ಸೆಕೆಂಡಿನಲ್ಲಿ ಆ ಹಾಡಿನಲ್ಲಿರುವ ಯಾವುದೇ ಪದದಿಂದ ಆರಂಭವಾಗುವ ಇನ್ನೊಂದು ಹಾಡನ್ನು ಮೊದಲ ತಂಡದವರು ಹಾಡಬೇಕು. ಇದೇ ಹಾಡಿನಲ್ಲಿನ ಯಾವುದಾದರೂ ಪದದಿಂದ ಆರಂಭವಾಗುವ ಬೇರೊಂದು ಹಾಡನ್ನು ಅವರ ಮುಂದಿನ ತಂಡದವರು ಹಾಡಬೇಕು. ಹೀಗೆ ಹಾಡಿದರೆ ಎರಡು ಅಂಕಗಳಿಸಬಹುದಾಗಿತ್ತು, ಇಲ್ಲದಿದ್ದರೆ ಮುಂದಿನ ತಂಡಕ್ಕೆ ಅವಕಾಶ. ಸೋತ ತಂಡಕ್ಕೆ ಮರು ಅವಕಾಶವಿಲ್ಲ. ಕೆಲವು ಸುತ್ತುಗಳು ಮುಗಿದಾಗ ಉಳಿದೆಲ್ಲಾ ತಂಡಗಳೂ "ಔಟಾಗಿ" ಕೃಷ್ಣಾ ನಾಗರಾಜ್ ಧರಣೇಂದ್ರ ತಂಡ ಮಾತ್ರ ಉಳಿದು ಅವರಿಗೆ ಸಿಕ್ಕ ಪದ "ಕನ್ನಡ ". ಈ ಪದದಿಂದ ಆರಂಭವಾಗುವ ಬಹುತೇಕ ಎಲ್ಲಾ ಹಾಡುಗಳನ್ನೂ ಅವರು ನೆನಪಿನಾಳದಿಂದ ಹೆಕ್ಕಿ ತೆಗೆದು ಅಂಕಗಳ ಸುರಿಮಳೆಗರೆದರು. "ಮೂಕಾಭಿನಯದ "ಸುತ್ತಿನಲ್ಲಿ ನೀಡಲಾದ ಹಾಡುಗಳು ಸ್ಪರ್ಧಿಗಳ ನಟನಾ ಸಾಮರ್ಥ್ಯವನ್ನು ಒರೆಗೆ ಹಚ್ಚಿದವು.

  ಎಲ್ಲಾ ಸುತ್ತುಗಳೂ ಮುಗಿದಾಗ 82 ಅಂಕಗಳಿಸಿದ್ದ ಅನಿತಾ ದೇಶಪಾಂಡೆ ಮತ್ತು ಜಯಶ್ರೀ ಸದಾಶಿವ ಅವರ ತಂಡ ಮೊದಲ ಸ್ಥಾನವನ್ನೂ, 80 ಅಂಕಗಳಿಸಿದ ಕೃಷ್ಣಾ ನಾಗರಾಜ್ ಮತ್ತು ಧರಣೇಂದ್ರ ಅವರು ಎರಡನೇಯ ಸ್ಥಾನವನ್ನೂ ಗಳಿಸಿದರು. ತಲಾ 47 ಅಂಕಗಳಿಸಿ ಸಮವಾಗಿದ್ದ ಸ್ಮಿತಾ ಗೌರಿ ಕುಮಾರ್ ಮತ್ತು ಲಲಿತಾ ವಿಜಯನಾರಸಿಂಹ ಹಾಗೂ ಅಮೃತಾ ವಿಶ್ವಕರ್ಮ ಮತ್ತು ಸ್ನೇಹಾ ಸಾಲಿಮಠ್ ಅವರ ತಂಡಗಳಿಗೆ "ಟೈ ಬ್ರೇಕರ್ "ಗಾಗಿ ಎರಡು ಚಿತ್ರಗಳ ದೃಶ್ಯಗಳನ್ನು ತೋರಿಸಿ ಹಾಡುಗಳನ್ನು ಗುರುತಿಸಲು ಹೇಳಲಾಯಿತು. ಹದಿ ಹರೆಯದ ಕಿರಿಯ ಭಲೇ ಜೋಡಿಯೆನಿಸಿದ ಅಮೃತಾ ಮತ್ತು ಸ್ನೇಹಾ ಸರಿಯುತ್ತರ ನೀಡಿ ಮೂರನೇಯ ಸ್ಥಾನ ಗಳಿಸಲು ಯಶಸ್ವಿಯಾದರು. ನಿರ್ಣಾಯಕರಾಗಿದ್ದ ರತ್ನಾ ವಾಮನಮೂರ್ತಿ ಮತ್ತು ವಸಂತಾ ಕಲ್ಬಾಗಲ್ ಹಾಗೂ ನಿರೂಪಣೆಯಲ್ಲಿ ನೆರವಾದ ಪುಷ್ಪಾ ರಾಘವೇಂದ್ರ ಅವರುಗಳು ಕಾರ್ಯಕ್ರಮದ ಯಶಸ್ಸಿಗೆ ಉತ್ತಮ ಕೊಡುಗೆ ನೀಡಿದರು.

  ನ್ಯೂಜಿಲೆಂಡ್ ಕನ್ನಡಿಗರಲ್ಲಿ ಕನ್ನಡಾಭಿಮಾನ ಆಸಕ್ತಿಗಳನ್ನು ಜಾಗೃತವಾಗಿಡುವಲ್ಲಿ ಈ ಕಾರ್ಯಕ್ರಮ ಸಹಾಯಕವಾಗಿದೆ ಎಂದರೆ ಅತಿಶಯೋಕ್ತಿಯಲ್ಲ. ಇದಕ್ಕಾಗಿ ಶ್ರಮಿಸಿದ ಎಲ್ಲರೂ ಅಭಿನಂದನಾರ್ಹರು. ಹಳೆಯ ಕನ್ನಡ ಚಿತ್ರಗಳ ಹಾಡುಗಳನ್ನೂ, ಸನ್ನಿವೇಶಗಳನ್ನೂ ನೋಡಿದಾಗ ಆಗುವ ಸಂತಸ ಅನುಭವಿಸಿಯೇ ಅರಿಯಬೇಕು. ಪ್ರಧಾನ ನಿರೂಪಕ ಸತ್ಯಕುಮಾರ್ ಕಟ್ಟೆ ಈ ಪರಿಯ ಶ್ರಧ್ಧಾಸಕ್ತಿ ವಹಿಸಲು ಕಾರಣ ಅವರು ಹಾಡಿದ ಈ ಹಾಡಿನಲ್ಲಿ ಮೂಡಿಬಂದಿತು, "ಯುಗ ಯುಗಗಳೇ ಸಾಗಲೀ ನಮ್ಮ[ಕನ್ನಡ] ಪ್ರೇಮ ಶಾಶ್ವತಾ". ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರನ್ನು ಕೂಟದ ಕಾರ್ಯದರ್ಶಿ ಪ್ರಕಾಶ್ ಬಿರಾದರ್ ವಂದಿಸಿದರು.

  ಈ ಬಾರಿಯ ಯುಗಾದಿಯ ಸಲುವಾಗಿ ಆಯೋಜಿಸಿರುವ ಕಾರ್ಯಕ್ರಮ ದಿನಾಂಕ 27ನೇ ಮಾರ್ಚ್ 2010 ಶನಿವಾರದಂದು ನಡೆಯಲಿದೆ. ಎಂದಿನಂತೆ ಕೂಟದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಅಧ್ಯಕ್ಷ ರವಿಶಂಕರ್ ರಾವ್ ಮತ್ತು ಕಾರ್ಯದರ್ಶಿ ಪ್ರಕಾಶ್ ಬಿರಾದರ್ ಕೋರಿದ್ದಾರೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more