• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅನಿವಾಸಿ ಭಾರತೀಯರು ವಾಪಸ್ಸು ಬರುವುದಿಲ್ಲ,ಏಕೆ?

By * ಶಾಂತಾನಾಗರಾಜ್, ಬೆಂಗಳೂರು
|
Why is nri is reluctant to return to karnataka
ವಿದೇಶದಲ್ಲಿ ನೆಲೆಸಿರುವ ಮಗನ ಅಥವಾ ಮಗಳ ಮನೆಗೆ ಹೋದ ಹೆತ್ತವರಿಗೆ ಪರದೇಶ ಒಂದೇ ತಿಂಗಳಿಗೆ ಉಸಿರುಕಟ್ಟಿಸುತ್ತದೆ. ಏಕೆಂದರೆ ಮೊಮ್ಮಕ್ಕಳು ಶಾಲೆಕಾಲೇಜುಗಳಿಗೆ, ಮಗ ಸೊಸೆ ಅಥವಾ ಮಗಳು ಅಳಿಯ ತಮ್ಮತಮ್ಮ ಉದ್ಯೋಗಳಿಗೆ ಹೊರಟರೆಂದರೆ ಈ ಮುದಿಜೀವಗಳಿಗೆ ಹೊತ್ತುಹೋಗುವುದೇ ಕಷ್ಟ. ಮಾತಾಡಲು ಅಕ್ಕಪಕ್ಕದವರಿಲ್ಲ, ಹೋಗಲು ಗುರುತಿನ ಮನೆಗಳಿಲ್ಲ. ಬೇಡ ಬಿಡಿ!

"ಅಯ್ಯೋ ಅಲ್ಲಿ ಸೋಷಿಯಲ್ ಲೈಫೇ ಇಲ್ಲ" ಎನ್ನುವ ಗೊಣಗು ಎಲ್ಲರದ್ದೂ. ಪರದೇಶದಲ್ಲಿ ನೆಲೆಯೂರಿದ ಎಲ್ಲರನ್ನೂ ಕಾಡುವುದು ಈ ವಿಚಾರವೇ. ಅದಕ್ಕೆ ನಮ್ಮ ಭಾರತೀಯರು ಬಹು ವ್ಯವಸ್ಥಿತವಾಗಿ ಭಾಷಾವಾರು ಸಂಘಟನೆಗಳನ್ನು ಮಾಡಿಕೊಂಡು ಬಿಟ್ಟಿದ್ದಾರೆ. ದೇಶ ಯಾವುದೇ ಇರಲಿ ಅಲ್ಲಿ ಹಿಂದಿ, ಮರಾಠಿ, ಕನ್ನಡ, ತಮಿಳು, ತೆಲಗು, ಗುಜರಾತಿ ಇತ್ಯಾದಿ ಸಂಘಗಳು ಹಲವಾರು ವರ್ಷಗಳಿಂದ ಉಸಿರಾಡುತ್ತಿವೆ. ಇಲ್ಲಿಯ ನೆಲದ ಜನಗಳಿಗಿಂತಾ ಚೆನ್ನಾಗಿ ತಮ್ಮತಮ್ಮ ಮಾತೃಭಾಷೆಯ ರೂಢಿಗಳನ್ನು ಈ ಸಂಸ್ಥೆಗಳು ರೂಢಿಸಿಕೊಂಡಿವೆ.

ಸಂಕ್ರಾಂತಿ, ಗೌರಿ, ಗಣಪತಿ, ದೀಪಾವಳಿ ಮುಂತಾದ ಹಬ್ಬಗಳನ್ನು ಬರೀ ಗದ್ದಲ ಹಾಗೂ ಅರ್ಥಹೀನ ಆಡಂಬರಗಳಿಲ್ಲದೇ( ಏಕೆಂದರೆ ಅಲ್ಲಿ ರಸ್ತೆಯಲ್ಲಿ ಗಣಪತಿಯನ್ನು ಕೂರಿಸುವ ಹಾಗಿಲ್ಲ ಮತ್ತು ರಸ್ತೆಯಲ್ಲಿ ಅಥವಾ ಮನೆಯ ಮುಂದೂ ಪಟಾಕಿಯನ್ನು ಹೊಡೆಯುವ ಹಾಗಿಲ್ಲ) ಸಂಭ್ರಮ ಸಡಗರಗಳಿಂದ ಅರ್ಥಪೂರ್ಣವಾಗಿ ಸ್ನೇಹಿತರೇ ಸೇರಿಕೊಂಡು ಪ್ರೀತಿಯಿಂದ ಆಚರಿಸುವುದನ್ನು ನಾನೇ ಕಂಡಿದ್ದೇನೆ. ನನಗೆಷ್ಟೋ ಬಾರಿ ಅನ್ನಿಸುವುದಿದೆ. ಏರುತ್ತಿರುವ ಬೆಲೆಗಳು, ಪ್ರವಾಹ ಇತ್ಯಾದಿ ಪ್ರಕೃತಿ ವಿಕೋಪಗಳು, ಯಾವಯಾವುದೋ ಕ್ಷುಲಕ ಕಾರಣಗಳಿಗೆ ಏಳುವ ರಾಜಕೀಯ ದಂಗೆಗಳು, ಅದರಿಂದ ಸಾಮಾನ್ಯ ಮನುಷ್ಯನಿಗೆ ಉಂಟಾಗುವ ಕಿರಿಕಿರಿಗಳು, ಇವೆಲ್ಲದರ ನಡುವೆ ಹಬ್ಬ ಬಂದಾಗ ಭಾರತದಲ್ಲೇ ನಾವೆಷ್ಟು ಅದನ್ನು ಮನಃಪೂರ್ವಕವಾಗಿ ಸ್ವಾಗತಿಸುತ್ತೇವೆ?

"ಏನೋ ಪ್ರತಿವರ್ಷ ಇದು ಇದ್ದದ್ದೇ ಮಾಡಿ ಮುಗಿಸಿದರಾಯಿತು" ಎನ್ನುವ ಮನಃಸ್ಥಿತಿಯನ್ನು ತಳೆಯುತ್ತೇವೆ ಅಲ್ಲವೇ? ನಾನು ಹೀಗೆ ಹೇಳಿದೆ ಅಂತ ಅನ್ಯಥಾ ಬಾವಿಸುವ ಅಗತ್ಯ ನಿಮಗೆ ಬರಬಾರದು. ಭಾರತದ ಹಬ್ಬಗಳ ನಿಜವಾದ ಸಡಗರವನ್ನು ಕಾಣಲು ನೀವು ಪರದೇಶಕ್ಕೇ ಹೋಗಬೇಕು. ಕಳೆದ ವರ್ಷ ಅಮೆರಿಕದ ಕನ್ನಡ ಬರಹಗಾರ ಶ್ರೀವತ್ಸಜೋಷಿಯವರು ಗಣಪತಿಯಹಬ್ಬದ ದಿನ ಅಮೆರಿಕೆಯ ದೇವಾಲಯದಲ್ಲಿ ಆಚರಿಸಿದ ಗಣಹೋಮದಲ್ಲಿ ತಾವು ಋತ್ವಿಕರಾಗಿ ಕುಳಿತಿದ್ದ ಭಾವಚಿತ್ರವನ್ನು ಇ-ಮೇಲ್‌ನಲ್ಲಿ ಕಳಿಸಿದ್ದರು. ನೋಡಿ ನಿಜಕ್ಕೂ ತುಂಬ ಖುಷಿಯಾಯಿತು. ಏಕೆ ಗೊತ್ತೇ ? ಅಲ್ಲಿದ್ದ ಗಣಪನ ಮೇಲೆ ಏರಿಸಿದ್ದ ಹೂವುಗಳು ಎಷ್ಟೊಂದು ಆರೋಗ್ಯಪೂರ್ಣವಾಗಿ ನಳನಳಿಸುತ್ತಿತ್ತು! ಬಣ್ಣಬಣ್ಣದ ಆ ಹೂವುಗಳು ಆಕಾರದಲ್ಲಿ, ಜೋಡಣೆಯಲ್ಲಿ ಊಹೆಗೆ ನಿಲುಕದಷ್ಟು ಸುಂದರವಾಗಿದ್ದವು. ಗಣಪನ ಮುಂದೆ ನೈವೇದ್ಯಕ್ಕೆ ಇಟ್ಟಿದ್ದ ಹಣ್ಣುಗಳೋ ಸೇಬು ದಾಳಿಂಬೆಗಳೆಲ್ಲ ನಮ್ಮೂರ ತೆಂಗಿನ ಗಾತ್ರ!

ಬದುಕನ್ನು ಹುಡುಕಿಕೊಂಡು ಒಂದು ಕಡೆಯಿಂದ ಮತ್ತೊಂದು ಕಡೆಗೆ ವಲಸೆ ಹೋಗುವುದು ಇಂದು ನೆನ್ನೆಯ ನಡವಳಿಕೆಯಲ್ಲ. ಆದರೂ ಇಂದು ಭಾರತದಿಂದ ವಲಸೆ ಹೋದ ಹಕ್ಕಿಗಳು ಮರಳಿ ತಮ್ಮ ಗೂಡಿಗೆ ವಾಪಸ್ಸು ಏಕೆ ಬರುವುದಿಲ್ಲ?ಎನ್ನುವ ಪ್ರಶ್ನೆಗೆ ಆಗಾಗ್ಗ್ಯೆ ಪರದೇಶ ಸಂದರ್ಶಿಸುವ ನನ್ನಲ್ಲಿ ಒಂದು ಉತ್ತರವಿದೆ. ಅಲ್ಲಿ ಮಕ್ಕಳ ಶಾಲೆಯ ಸೀಟಿಗಾಗಿ ರಾತ್ರಿಯಿಡೀ ಶಾಲೆಯ ಮುಂದೆ ಕ್ಯೂ ನಿಲ್ಲಬೇಕಾಗಿಲ್ಲ. ಸೈಟು ಮನೆ ಕೊಳ್ಳಲು ಪರವಾನಗಿಗಾಗಿ ಯಾರ ಕೈಯನ್ನೂ ಬೆಚ್ಚಗೆ ಮಾಡಬೇಕಾಗಿಲ್ಲ. "ನಾನು ಎಷ್ಟೆಲ್ಲಾ ಅಂಕಗಳಿಸಿದೆ, ನನಗಿಂತಾ ಕಡಿಮೆ ಅಂಕಗಳಿಸಿದ ಮತ್ತ್ಯಾರೋ ತಮ್ಮ ಜಾತಿಯ ಕಾರಣದಿಂದ ನನ್ನ ಬಾಸ್ ಆಗಿ ಕುಳಿತಿದ್ದಾನೆ" ಎಂದು ಕೊರಗಬೇಕಾಗಿಲ್ಲ.

ಶಾಲೆಗೆ ಹೋದ ಮಕ್ಕಳು ಸರಿಯಾಗಿ ಹೊತ್ತಿಗೆ ಮನೆಗೆ ಬರುತ್ತಾರೋ ಇಲ್ಲವೋ ಎಂದು ಆತಂಕ ಪಡಬೇಕಾಗಿಲ್ಲ. ಒಂಟಿ ಮಹಿಳೆ ಮನೆಯಲ್ಲೇ ಹೇಗಿರುವುದು? ಎನ್ನುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಮತಾಂತರ ಎನ್ನುವ ಪಿಡುಗಿಲ್ಲ. ಹೆಣ್ಣುಮಕ್ಕಳನ್ನು ಚುಡಾಯಿಸುತ್ತಾರೆ ಎನ್ನುವ ಭಯವಿಲ್ಲ. ಬದುಕು ತೀರಾ ಸರಳ! ಮೂಲಭೂತ ಸಮಸ್ಯೆಗಳಿಲ್ಲದೇ 24 ಗಂಟೆಯೂ ನೀರು ವಿದ್ಯುತ್ ಸಾರಿಗೆ ಪೆಟ್ರೋಲು ಎಲ್ಲದರ ವಿತರಣೆ ಸಮರ್ಪಕವಾಗಿರುವ ನೆಲಬಿಟ್ಟು ಎಲ್ಲಕ್ಕೂ ತತ್ವಾರವಾಗಿರುವ ದೇಶಕ್ಕೆ ಯಾರಾದರೂ ಯಾಕೆ ಬರುತ್ತಾರೆ ಹೇಳಿ? ಅಡಿಗರ ಕವಿತೆಯೊಂದು ಹೇಳುವ ಹಾಗೆ 'ಇಲ್ಲಿ ಮಿಡಿದಿತ್ತು ಕೋದಂಡ, ಮೊಳಗಿತ್ತು ಪಾಂಚಜನ್ಯ, ಇತ್ತುಗಳ ಧ್ವಜವ ಎತ್ತಿ ಹಿಡಿಯೋ ಮಗು; ಇದೆಯ ಹೃದಯದ್ರಾವ ಬೇಡ ನಿನಗೆ'. ನಾವು ರಾಮರಾಜ್ಯದ ಮಾತಾಡುತ್ತೇವೆ ಅಷ್ಟೆ.

ಪರದೇಶದ ಸುಭದ್ರ ಬದುಕಿನ ಬಗ್ಗೆ ಒಂದು ಪುಟ್ಟ ಉದಾಹರಣೆ ಇಲ್ಲಿದೆ. ನನ್ನಗೆಳತಿ ಹಾಗೂ ಅವಳ ಗಂಡ ಕೆನಡಾದ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿ ತನ್ನ ಜೀವನದ ಬಹುಪಾಲು ಸಮಯವನ್ನು ಅಲ್ಲೇ ಕಳೆದರು. ಗಂಡನಿಗೆ ನಿವೃತ್ತಿಯಾಗುತ್ತಲೇ ತಾನೂ ಸ್ವಯಂ ನಿವೃತ್ತಿ ಪಡೆದು ಬೆಂಗಳೂರಿನ ಪ್ರಸಿದ್ಧ ಬಡಾವಣೆಯಲ್ಲಿದ್ದ ತಮ್ಮ ಸ್ವಗೃಹಕ್ಕೆ ಬಂದು ನಿವೃತ್ತಜೀವನವನ್ನು ಸುಖವಾಗಿ ತನ್ನ ನೆಲದಲ್ಲಿ ಕಳೆಯಬೇಕೆಂಬುದು ನನ್ನ ಗೆಳತಿಯ ಆಸೆ. ಇಲ್ಲಿಯ ಅವಳ ಮನೆಯಲ್ಲಿ ಬಾಡಿಗೆಗೆ ಇದ್ದಾತ ಮನೆ ಖಾಲಿಮಾಡದೇ ಕೋರ್ಟ್ ಮೆಟ್ಟಿಲೇರಿದ. ಅದಕ್ಕಾಗಿ ಒಂದೆರಡು ವರ್ಷ ಕೆನಡಾಕ್ಕೂ ಬೆಂಗಳೂರಿಗೂ ತಡಕಾಡಿದರು. ಮನೆ ಕೈಗೆ ಬಂತು ಎನ್ನುವ ಹೊತ್ತಿಗೆ ನನ್ನ ಗೆಳತಿಯ ಆಯುಷ್ಯವೇ ತೀರಿಹೋಗ ಬೇಕೇ? ವಿಧಿವಿಲಾಸ!

ಮಕ್ಕಳಿಲ್ಲದ, ಹೆಂಡತಿಯನ್ನೂ ಕಳೆದುಕೊಂಡ ಗೆಳತಿಯ ಗಂಡ ನೆಮ್ಮದಿಯ ಬದುಕಿನ ಆಸೆಯಿಂದ ಬೆಂಗಳೂರಿಗೆ ಕಾಲಿರಿಸಿದರು. ಅವರಿಂದ ಆರು ತಿಂಗಳೂ ಇಲ್ಲಿರಲಾಗಲಿಲ್ಲ. ಮತ್ತೆ ವಾಪಸ್ ಕೆನಡಾಗೇ ಗಂಟು ಮೂಟೆ ಕಟ್ಟಿ, ಹೊರಡುವ ಮುನ್ನ ನಮ್ಮ ಮನೆಗೆ ಬಂದು ಅವರು ಹೇಳಿದ ಮಾತು ಹಲವು ವರ್ಷಗಳಾದರೂ ಇನ್ನೂ ನನ್ನ ಕಿವಿಯಲ್ಲಿ ರಿಂಗಣಿಸುತ್ತಿದೆ. " ನೋಡಿ ಕೆನಡಾ ಸರ್ಕಾರ ನಿವೃತ್ತರಿಗೆ ಕೆಲವು ಅನುಕೂಲಗಳನ್ನು ಕಲ್ಪಿಸಿದೆ. ನನ್ನ ಮನೆಯ ಹತ್ತಿರವಿರುವ ಆಸ್ಪತ್ರೆಯಲ್ಲಿ ನನ್ನ ಹೆಸರನ್ನು ನೊಂದಾಯಿಸುತ್ತಾರೆ. ಅಲ್ಲಿಂದ ಪ್ರತಿದಿನ ಒಬ್ಬ ನರ್ಸ್ ಬಂದು ನನ್ನ ಬಿ.ಪಿ ಶುಗರ್ ಇತ್ಯಾದಿಗಳನ್ನು ಚೆಕ್ ಮಾಡಿ ನನ್ನ ಯೋಗಕ್ಷೇಮವನ್ನು ವಿಚಾರಿಸುತ್ತಾಳೆ. ವಾರಕೊಮ್ಮೆ ಒಬ್ಬ ಡಾಕ್ಟರ್ ಬಂದು ಎಲ್ಲವನ್ನೂ ಪರೀಕ್ಷಿಸುತ್ತಾನೆ. ಇದಲ್ಲದೇ ಅರವತ್ತು ವರ್ಷ ದಾಟಿದ ಎಲ್ಲ ವೃದ್ಧರಿಗೂ (ಅವರು ಸರಕಾರಿ, ಅರೆಸರಕಾರಿ ಉದ್ಯೋಗವನ್ನು ಮಾಡಿರಲಿ ಅಥವಾ ಮನೆಯಲ್ಲೇ ಇರಲಿ)ಹಲವಾರು ಅನುಕೂಲಗಳನ್ನು ಸರ್ಕಾರ ಕಲ್ಪಿಸಿದೆ.

ಪ್ರತಿದಿನ ನ್ಯೂಸ್ ಪೇಪರ್ ಉಚಿತ. ಹಾಲು, ಟೆಲಿಫೋನು, ಸಿನಿಮಾ, ಸಿಟಿಬಸ್ಸು, ಟ್ಯಾಕ್ಸಿ ಇತ್ಯಾದಿಗಳಿಗೆ ಅರ್ಧಬೆಲೆ! ಏಕಾಂಗಿಯಾಗಿರುವ ವೃದ್ಧರು ಸ್ವಲ್ಪ ನಿತ್ರಾಣರಾದರೆ ಸಾಕು ಅವರನ್ನು ಆಸ್ಪತ್ರೆಗೆ ಸೇರಿಸಿ ಒಳ್ಳೆಯ ರೀತಿಯಲ್ಲಿ ನೋಡಿಕೊಳ್ಳುತ್ತಾರೆ. ನಮ್ಮ ಆದಾಯಕ್ಕೆ ತಕ್ಕಂತೆ ಛಾರ್ಜ್ ಮಾಡುತ್ತಾರೆ. ಸತ್ತಮೇಲೂ ಯಾರೂ ದಿಕ್ಕಿಲ್ಲವೆಂದರೆ ಮೊದಲೇ ನಮ್ಮಿಂದ ಬರೆಸಿಕೊಂಡು ಗೌರವರೀತಿಯಲ್ಲಿ ಅಂತ್ಯಸಂಸ್ಕಾರವನ್ನೂ ಮಾಡುತ್ತಾರೆ. ಸರ್ಕಾರದ ಒಂದು ಘೋಷಣೆಯೇ ಹೀಗಿದೆ:

'ನೀವು ನಮ್ಮ ದೇಶಕ್ಕಾಗಿ ದುಡಿದಿದ್ದೀರಿ; ನಿಮ್ಮ ವೃದ್ಧಾಪ್ಯದ ಯೋಗಕ್ಷೇಮ ನಮ್ಮ ಜವಾಬ್ದಾರಿ', ಬೆಂಗಳೂರಿನ ಆರು ತಿಂಗಳಿನ ನನ್ನ ಜೀವನ ನನಗೆ ಭಯಪ್ರದವಾಗಿತ್ತು. ಸುತ್ತಲೂ ನೀನೇ ಎಂದು ಕೇಳುವವರಿಲ್ಲ. ಬೆಂಗಳೂರಿನ ರಸ್ತೆಗಳಲ್ಲಿ ಕಾರುಚಲಾಯಿಸಲು ಭಯ! ನಾವು ಕರೆದೆಡೆಗೆ ಆಟೋ ಬರುವುದಿಲ್ಲ. ವೃದ್ಧರಿಗೆ ಈ ದೇಶ ಸುಭದ್ರವಲ್ಲ ಎನಿಸಿತು" ಎಂದು ವಿಷಾದದಿಂದ ನಗುತ್ತಾ ಮತ್ತೂ ಒಂದು ಮಾತು ಸೇರಿಸಿದರು "ದಾಸರು ಹೇಳಿದ ಮಾತು ನಮ್ಮಂಥಾ ಎನ್.ಆರ್.ಐ ಗಳಿಗೇ ಇರಬೇಕು,ಶಾಂತಾ. ಅಲ್ಲಿದೆ ನಮ್ಮನೆ ; ಇಲ್ಲಿ ಬಂದೆ ಸುಮ್ಮನೆ ಅಂತಾ"

ಹೌದಲ್ಲವೇ? "ಬದುಕು ಸುಭದ್ರ" ಎನ್ನುವುದು ಬರೀ ಜೀವವಿಮಾಕಂಪನಿಯ ಘೋಷಣೆ ಮಾತ್ರ ಆಗಬಾರದಲ್ಲವೇ?

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more