• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈಶಾನ್ಯ ಅಮೇರಿಕದಲ್ಲಿ ಕನ್ನಡ ನಡೆದು ಬಂದ ದಾರಿ

By *ಡಾ।। ಎಚ್‌.ಕೆ.ಚಂದ್ರಶೇಖರ್‌ (ನ್ಯೂಯಾರ್ಕ್
|

ದೇಶದ ಈಶಾನ್ಯ ವಲಯದಲ್ಲಿ ವಿಮಾನದಿಂದ ಇಳಿದ ಮಂದಿ ನ್ಯೂಯಾರ್ಕ್‌ನ ಬಿರುಸು ಜೀವನವನ್ನು ಕಾಣದೆ ಇರುವಂತಿಲ್ಲ. ಇಲ್ಲಿಗೆ ವಲಸೆ ಬಂದು ನೆಲ ಮುಟ್ಟಿದವರಲ್ಲಿ ಅನೇಕರು ಸ್ಥಳೀಯ ವಿಮಾನಗಳನ್ನು ಹತ್ತಿ ಹಾರಿ ಹೋದರೂ ಅಲ್ಲಿಯೇ ನೆಲೆಸಲು ಉಳಿದವರು ಬಹಳಷ್ಟು ಮಂದಿ. ಸದ್ಯದ ನ್ಯೂಯಾರ್ಕ್‌ನಲ್ಲಿ ಭಾರತೀಯ ವಲಸೆಗಾರರ ಸಂಖ್ಯೆ ಸುಮಾರು ನೂರೈವತ್ತು ಸಾವಿರ (ಕ್ರಿ.ಶ. 2000 ದ ಜನಗಣತಿಯಂತೆ) ಕನ್ನಡಿಗರು ವಿಶಾಲ ನ್ಯೂಯಾರ್ಕ್‌ ನಗರ ಪ್ರದೇಶದಲ್ಲಿ ಹತ್ತು ಸಾವಿರಕ್ಕೂ ಮೀರಿ ಇದ್ದಾರು. ವಿಶಾಲ ನ್ಯೂಯಾರ್ಕ್‌ ಎಂದರೆ ನ್ಯೂಯಾರ್ಕ್‌ ನಗರವಲ್ಲದೆ ಸಮೀಪದ ನ್ಯೂಜೆರ್ಸಿ, ಕನೆಕ್ಟಿಕಟ್‌ ಪ್ರದೇಶಗಳೂ ಸೇರುತ್ತವೆ.

ಈ ಜನ ಬಹುಮಟ್ಟಿಗೆ ಮೂವತ್ತು ಮೂವತ್ತೆೈದು ವರ್ಷಗಳಿಂದ ಈಚೆಗೆ ಬಂದವರು. ಮೊದಲ ವರ್ಷದಲ್ಲಿ ಸಂಖ್ಯೆ ಏರುತ್ತಿದ್ದಂತೆ ಜನ ಗುಂಪು ಗೂಡಿ ಊರ ಬಗ್ಗೆ ಹಂಬಲಿಸಿ ತಮಗೆ ತಿಳಿದ ಸಾಂಸ್ಕೃತಿಕ ಪರಿಸರವನ್ನು ಹೂಡಿಕೊಳ್ಳಲು ಮೊದಲು ಮಾಡಿದ್ದು ಆಶ್ಚರ್ಯವೇನಲ್ಲ . ಕ್ವೀನ್ಸ್‌ ಬಡಾವಣೆಯಲ್ಲಿ 1970 ರಲ್ಲಿ ರಷ್ಯನ್‌ ಚರ್ಚ್‌ ಒಂದನ್ನು ಕೊಂಡು ದಕ್ಷಿಣ ಭಾರತದ ದೇವಾಲಯ ಆರಂಭ ಮಾಡಿದ್ದಾಯಿತು. ಸುಂದರವಾದ ಗೋಪುರ, ಕಲ್ಲಿನ ಗರ್ಭಗುಡಿಯಲ್ಲಿ ಗಣೇಶ- ಇದು ಈ ದೇಶದಲ್ಲಿ ಮೊದಲನೆಯ ಪ್ರಯೋಗ. ದೇವಾಲಯದ ಸಭಾಂಗಣದಲ್ಲಿ ಸಂಗೀತ, ನೃತ್ಯ ಪಾಠಗಳನ್ನು ಆರಂಭಿಸಲು ಉತ್ತಮ ಕಲಾವಿದರು ಮುಂದೆ ಬಂದರು. ಕನ್ನಡದ ಮಕ್ಕಳು ವಾರಾಂತ್ಯಗಳಲ್ಲಿ ನೃತ್ಯ, ಸಂಗೀತ ಕಲಿಯಲು ಆರಂಭಿಸಿದರು.

1972 ರ ಗಣೇಶನ ಹಬ್ಬದ ದಿನ ಕ್ವೀನ್ಸ್‌ನ ಫ್ಲಷಿಂಗ್‌ ಕೆರೆಯಲ್ಲಿ ಬಣ್ಣದ ಗಣಪತಿಯನ್ನು ನೀರಿಗೆ ಬಿಡಲು ಕೂಡಿದವರೆಲ್ಲ ಕನ್ನಡಿಗರೇ ಆಗಿದ್ದುದರಿಂದ ಅವರಲ್ಲಿ ಕೆಲವರಿಗೆ ಕನ್ನಡ ಸಂಘವೊಂದನ್ನು ಏಕೆ ಆರಂಭಿಸಬಾರದು ಎನಿಸಿದ್ದು ಹೆಚ್ಚಲ್ಲ . ನಾವು ಕೆಲವರು ಆನಂತರದಲ್ಲಿ ಪದೇ ಪದೇ ಸಭೆ ಸೇರಿ 1973 ರ ಜನವರಿ, ಸಂಕ್ರಾಂತಿಯ ದಿನ, ನ್ಯೂಯಾರ್ಕ್‌ ಕನ್ನಡ ಕೂಟಕ್ಕೆ ನಾಂದಿ ಹಾಕಿಯೇ ಬಿಟ್ಟೆವು. ಈ ದೇಶದಲ್ಲಿ ಇದೇ ಸತತವಾಗಿ ನಡೆದು ಬಂದಿರುವ ಮೊದಲನೆಯ ಕನ್ನಡ ಸಂಘ. ಒಂದು ರಚನಾಂಗ ಸಿದ್ಧವಾಯಿತು. ಕುವೆಂಪು ಬರೆದ ಎಲ್ಲಾದರೂ ಇರು- ನೀ ಕನ್ನಡವಾಗಿರು ಸಂಕೇತ ಗೀತೆಯಾಗಿ ಆರಿಸಿದ್ದಾಯಿತು. ವರ್ಷದಲ್ಲಿ ವಸಂತೋತ್ಸವ, ವನ ವಿಹಾರ, ಗಣೇಶನ ಹಬ್ಬ, ಗಾಯಕರ ದಿನ, ರಂಗಭೂಮಿಯ ದಿನ, ಯುವಜನ ಸಮಾರಂಭ, ಕನ್ನಡ ಪ್ರಸಿದ್ಧ ಸಾಹಿತಿಗಳ ಬಗ್ಗೆ ಸ್ಮರಣೋತ್ಸವಗಳು, ಇಲ್ಲಿಗೆ ಬಂದ ಸಾಹಿತಿಗಳಿಗೆ ಸಂಭಾವನಾ ಸಮಾರಂಭಗಳು, ಪ್ರಮುಖ ಕನ್ನಡ ಕಲಾವಿದರಿಂದ ಕಚೇರಿಗಳು, ಅನಿಯತಕಾಲಿಕ ಪತ್ರಿಕೆ ಸುದ್ದಿ ಸಾರಂಗಿ, ಕನ್ನಡ ಗ್ರಂಥಾಲಯ (ಈಗ್ಗೆ ನಾಲ್ಕು ಸಾವಿರ ಗ್ರಂಥಗಳಿವೆ) ಎಲ್ಲಾ ನಡೆದುಬಂದವು. ನಮ್ಮ ಉತ್ಸಾಹಕ್ಕಂತೂ ಮಿತಿಯೇ ಇಲ್ಲವಾಯಿತು. ಈಶಾನ್ಯದ ಇತರ ಭಾಗಗಳಲ್ಲಿ ಕನ್ನಡ ಸಂಸ್ಥೆಗಳನ್ನು ಕಟ್ಟುವ ಕೆಲಸ ಪ್ರಾರಂಭವಾಯಿತು. ಫಿಲಿಡೆಲ್ಫಿಯಾ ಪ್ರದೇಶದಲ್ಲಿ ‘ತ್ರಿವೇಣಿ’, ವಾಷಿಂಗ್ಟನ್‌ನಲ್ಲಿ ‘ಕಾವೇರಿ’, ಬ್ಯಾಸ್ಟನ್‌ನಲ್ಲಿ ‘ನ್ಯೂ ಇಂಗ್ಲೆಂಡ್‌ ಕನ್ನಡ ಕೂಟ’ ಮುಂತಾದವು. ಕೆಲವೇ ವರ್ಷಗಳಲ್ಲಿ ಸಮೀಪದ ಕೆನಡಾದ ಮಾಂಟ್ರಿಯಲ್‌ ಮತ್ತು ಟೊರಾಂಟೋ ನಗರಗಳಲ್ಲಿ ಕನ್ನಡ ಸಂಘಗಳು ಏರ್ಪಟ್ಟವು. 1975 ರಲ್ಲಿ ನ್ಯೂಯಾರ್ಕ್‌ ಕನ್ನಡ ಕೂಟದ ಆಶ್ರಯದಲ್ಲಿ ಕೈಲಾಸಂ ನಾಟಕವೊಂದನ್ನು ಸಿದ್ಧಪಡಿಸಿ (ಬಂಡ್ವಾಳ್ವಿಲ್ಲದ ಬಡಾಯಿ) ವಾಷಿಂಗ್ಟನ್‌, ಫಿಲಿಡೆಲ್ಫಿಯಾ, ಬಾಸ್ಟನ್‌ ನಗರಗಳಲ್ಲಿ ಪ್ರದರ್ಶಿಸಿ, ಎಲ್ಲಾ ಒಟ್ಟುಗೂಡಿ ಒಂದು ಸಮ್ಮೇಳನ ನಡೆಯಿಸುವ ಆಶಯ ವ್ಯಕ್ತಪಡಿಸಿದೆವು.

ಆಗ್ಗೆ ನಾನು ನ್ಯೂಯಾರ್ಕ್‌ ಕೂಟದ ಅಧ್ಯಕ್ಷನಾಗಿದ್ದೆ . ಅಮೆರಿಕದ ದ್ವಿಶತಾಬ್ದಿಯ ವರ್ಷ 1976 ರಲ್ಲಿ ಪ್ರಥಮ ಈಶಾನ್ಯ ಅಮೆರಿಕ ಕನ್ನಡ ಸಮ್ಮೇಳನ ನ್ಯೂಯಾರ್ಕ್‌ನಲ್ಲಿ ಭವ್ಯವಾಗಿ ಜರುಗಿತು. ನಂತರದಲ್ಲಿ ಎರಡನೆಯ (ತ್ರಿವೇಣಿ), ಮೂರನೆಯ (ಕಾವೇರಿ) ಮತ್ತು ನಾಲ್ಕನೆಯ (ನ್ಯೂ ಇಂಗ್ಲೆಂಡ್‌) ಸಮ್ಮೇಳನಗಳೂ ವಿಜೃಂಭಣೆಯಿಂದ ನಡೆದವು. 1981 ರಲ್ಲಿ ಐದನೆಯ ಈಶಾನ್ಯ ಅಮೆರಿಕ ಸಮ್ಮೇಳನವನ್ನು ನ್ಯೂಯಾರ್ಕ್‌ನಲ್ಲಿ ನಡೆಸಿದಾಗ ಪ್ರಮುಖ ಅತಿಥಿಯಾಗಿ ಡಾ. ಎ.ಕೆ. ರಾಮಾನುಜನ್‌, ಡಾ. ಗಿರೀಶ್‌ ಕಾರ್ನಾಡ್‌ ಮತ್ತಿತರರು ದಯಮಾಡಿಸಿದ್ದರು. ಸಮ್ಮೇಳನದ ಅಧ್ಯಕ್ಷರಾಗಿರಬೇಕಿದ್ದ ಪ್ರೊ. ಎ.ಎನ್‌. ಮೂರ್ತಿರಾಯರು ಆಲಸ್ಯದ ಕಾರಣದಿಂದ ಬೆಂಗಳೂರಿನಿಂದ ಬರಲಿಲ್ಲ. ಅವರು ರಚಿಸಿದ ‘ ಪೂರ್ವ ಸೂರಿಗಳೊಡನೆ’ ಗ್ರಂಥವನ್ನು ಕೂಟ ಸಮ್ಮೇಳನದಲ್ಲಿ ಬಿಡುಗಡೆ ಮಾಡಿತು. (ಇದೇ ಈ ಅಮೆರಿಕಾ ದೇಶದಲ್ಲಿ ಪ್ರಕಟವಾದ ಮೊದಲನೆಯ ಕನ್ನಡ ಗ್ರಂಥ). ಅನೇಕ ವರ್ಷಗಳ ನಂತರದಲ್ಲಿ 1994ರಲ್ಲಿ ಕೂಟ ಎಂ.ವಿ. ಸೀತಾರಾಮಯ್ಯನವರು ಸಂಪಾದಿಸಿದ ‘ ನೃಪತುಂಗ ದೇವಾನುಮತಮಪ್ಪ ಶ್ರೀವಿಜಯಕೃತ ಕವಿರಾಜಮಾರ್ಗಂ’ ಗ್ರಂಥವನ್ನು (ಬಿ.ಎಂಶ್ರೀ ಸ್ಮಾರಕ ಪ್ರತಿಷ್ಠಾನದ ಸಹಯೋಗದೊಂದಿಗೆ)ಪ್ರಕಟಿಸಿತು.

‘ಈಶಾನ್ಯ ಅಮೆರಿಕಾ ಕನ್ನಡ ಸಮ್ಮೇಳನ’ ಎಂದು ಕರೆದು ಪ್ರತಿವರ್ಷವೂ ಬೇರೆ ಬೇರೆ ಕೇಂದ್ರಗಳಲ್ಲಿ ಆಚರಿಸುವ ಪದ್ಧತಿ 1994ರ ನಂತರ ನಿಂತು ಹೋಯಿತು. ‘ಅಖಿಲ ಅಮೆರಿಕಾ ಕನ್ನಡ ಸಮ್ಮೇಳನ’ಎಂಬ ಹೆಸರಿನಿಂದ ಎರಡು ಮೂರು ವರ್ಷಕ್ಕೊಮ್ಮೆ ಅಲ್ಲಲ್ಲಿ ನರೆಯುವ ಪದ್ಧತಿ ಆರಂಭವಾಯಿತು. 1997ರಲ್ಲಿ ನ್ಯೂಯಾರ್ಕ್‌ ಕನ್ನಡ ಕೂಟ ರಜತಮಹೋತ್ಸವ ನಡೆಸಿದಂತೆ ಇತರ ಕನ್ನಡ ಕೂಟಗಳೂ ಇಪ್ಪತ್ತೆೈದು ವರ್ಷಗಳ ಹಬ್ಬವನ್ನು ಆಚರಿಸಿವೆ. ಈ ಸಂದರ್ಭದಲ್ಲಿ ಈಚೆಗೆ ನಡೆದ ಎರಡು ಬೃಹತ್‌ ಸಮ್ಮೇಳನಗಳನ್ನು ನೆನೆಯಬೇಕು. ಫೆಬ್ರವರಿ 1998ರಲ್ಲಿ ಅರಿರೆkೂೕನಾದ ಕನ್ನಡಿಗರು ಫೀನಿಕ್ಸ್‌ನಲ್ಲಿ ಅಖಿಲ ಅಮೆರಿಕಾ ಬೃಹತ್‌ ಸಮ್ಮೇಳನವೊಂದನ್ನು ನಡೆಸಿದರು. ಸೆಪ್ಟೆಂಬರ್‌ 2000ದಲ್ಲಿ ಹ್ಯೂಸ್ಟನ್‌ ಕನ್ನಡಿಗರು ‘ಎರಡನೆಯ ಸಹಸ್ರಮಾನದ ವಿಶ್ವಕನ್ನಡ ಸಮ್ಮೇಳನ’ಎಂಬ ಹೆಸರಿನಲ್ಲಿ ಬಹು ವಿಜೃಂಭಣೆಯಿಂದ ಅದನ್ನು ಆಚರಿಸಿದರು. ಸುಮಾರು ಎರಡೂವರೆ ಸಾವಿರ ಮಂದಿ ಸೇರಿದ್ದ ಈ ಒಕ್ಕೂಟದಷ್ಟು ಬೃಹತ್‌ ಸಮ್ಮೇಳನ ಹಿಂದೆಂದೂ ನಡೆದಿರಲಿಲ್ಲ. ಇತ್ತೀಚೆಗೆ ನಿರ್ಮಾಣವಾದ ‘ಅಕ್ಕ’(ಅಮೆರಿಕಾ ಕನ್ನಡ ಕೂಟಗಳ ಆಗರ) ಸಂಸ್ಥೆಯ ಮತ್ತು ಮಿಷಿಗನ್‌ ರಾಜ್ಯದ ಕನ್ನಡ ಸಂಘ ‘ಪಂಪ’ ಕನ್ನಡ ಕೂಟದ ಆಶ್ರಯದಲ್ಲಿ ಮಿಷಿಗನ್‌ನ ಡೆಟ್ರಾಯಿಟ್‌ ನಗರದಲ್ಲಿ ಇದೇ 2002 ವರ್ಷದ ಆಗಸ್ಟ್‌ 31 ಮತ್ತು ಸೆಪ್ಟೆಂಬರ್‌ 1, 2 ರಂದು ಈ ಶತಮಾನದ ಎರಡನೆಯ ವಿಶ್ವ ಸಮ್ಮೇಳನವನ್ನು ಅದ್ಧೂರಿಯಿಂದ ನಡೆಸಲು ಸಿದ್ಧತೆಗಳು ನಡೆಯುತ್ತಿವೆ.

English summary
Dr. H.K.Chandrashekhar takes a journey in North East Americas Kannada way
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more