ತೈವಾನ್ ಕರಾವಳಿಗೆ ನುಗ್ಗಿದ ಚೀನಾ ಹಡಗುಗಳು, ವಿಚಿತ್ರ ವರ್ತನೆ ಕಂಡು ಬೆಚ್ಚಿಬಿದ್ದ ಜಗತ್ತು | China Boats
ಇರಾನ್ ಮತ್ತು ಅಮೆರಿಕ ನಡುವೆ ಯುದ್ಧ ಶುರುವಾಗಿ, ಇನ್ನೊಂದು ಕಡೆ ಇಸ್ರೇಲ್ ಕೂಡ ಈ ಯುದ್ಧಕ್ಕೆ ಕೈಜೋಡಿಸಿ ದೊಡ್ಡ ಮಟ್ಟದಲ್ಲಿ ದಾಳಿ ಹಾಗೂ ಪ್ರತಿದಾಳಿ ನಡೆಯುವಾಗಲೇ ಏಷ್ಯಾ ಭಾಗದಲ್ಲಿ ಕೂಡ ಯುದ್ಧದ ಕಾರ್ಮೋಡ ಆವರಿಸಿದೆ. ಇರಾನ್ ಯುದ್ಧದ ಪರಿಣಾಮ ಈಗಾಗಲೇ ಮಧ್ಯಪ್ರಾಚ್ಯ ಧಗಧಗ ಅಂತಾ ಹೊತ್ತಿ ಉರಿಯುತ್ತಿದೆ, ಇದೇ ಕಾರಣಕ್ಕೆ ಇಡೀ ಜಗತ್ತಿನ ಆರ್ಥಿಕತೆ ಬುಡ ಅಲ್ಲಾಡಿ ಹೋಗಿದೆ ಎನ್ನಬಹುದು. ಇದು ಹೀಗೆ ಮುಂದುವರಿದರೆ ಭವಿಷ್ಯದಲ್ಲಿ ಇನ್ನಷ್ಟು ಸಮಸ್ಯೆಗಳ ಸರಮಾಲೆ ಶುರು ಆಗುವ ಆತಂಕ ಕೂಡ ಮೂಡಿದೆ. ಹೀಗಿದ್ದಾಗಲೇ ತೈವಾನ್ ಕರಾವಳಿಗೆ ನುಗ್ಗಿದ ಚೀನಾ ಹಡಗುಗಳು ಹೊಸ ಯುದ್ಧದ ಆತಂಕ ಮೂಡಿಸಿವೆ ಪ್ರಪಂಚಕ್ಕೆ.
ಜಾಗತಿಕವಾಗಿ ವಾತಾವರಣ ತೀವ್ರ ಸೂಕ್ಷ್ಮವಾಗಿರುವ ಸಮಯದಲ್ಲೇ, ಮಧ್ಯಪ್ರಾಚ್ಯ ಯುದ್ಧ ಸಾಕಾಗಿಲ್ಲ ಎನ್ನುವಂತೆ ಈಗ ಪೂರ್ವ ಚೀನಾ ಸಮುದ್ರದಲ್ಲಿ ಕಿರಿಕ್ ಶುರುವಾಗಿದೆ. ಚೀನಾಗೆ ಸೇರಿರುವ ಸಾವಿರಾರು ಮೀನುಗಾರಿಕಾ ದೋಣಿಗಳು ಸೇನಾ ವಿನ್ಯಾಸದಂತೆ ಗುಂಪುಗೂಡಿ ತೈವಾನ್ ಸಮೀಪಕ್ಕೆ ನುಗ್ಗಿರುವ ದೃಶ್ಯ ಇದೀಗ ಮತ್ತೊಂದು ಯುದ್ಧದ ಭೀತಿ ಸೃಷ್ಟಿಸಿದೆ. ಅಂದಹಾಗೆ ಸ್ಯಾಟಲೈಟ್ ಅಂದರೆ ಉಪಗ್ರಹಗಳನ್ನ ಆಧಾರವಾಗಿ ನೋಡಿದರೂ ಕಾಣುವ ರೀತಿ, ಭಾರಿ ದೊಡ್ಡ ಪ್ರಮಾಣದಲ್ಲಿ ಈಗ ಚೀನಾ ದೋಣಿಗಳ ಗುಂಪು ತೈವಾನ್ ಸಮೀಪಕ್ಕೆ ಎಂಟ್ರಿ ಕೊಟ್ಟಿದೆ. ತೈವಾನ್‌ನ ಉತ್ತರ-ಪೂರ್ವ ಭಾಗದಿಂದ ಸುಮಾರು 300 ಕಿಲೋ ಮೀಟರ್ ದೂರದಲ್ಲಿ ಸುಮಾರು 2,000 ದೋಣಿಗಳು ವಿಚಿತ್ರವಾಗಿ ಒಟ್ಟುಗೂಡಿವೆ. ಹೀಗಾಗಿ ದಿಢೀರ್ ಯುದ್ಧ ಭೀತಿ ಆವರಿಸಿ, ತೈವಾನ್ ಪ್ರಜೆಗಳು ಹಾಗೂ ನಾಯಕರಿಗೆ ಒದ್ದಾಟ ಶುರುವಾಗಿದೆ.

ಏಷ್ಯಾ ಭಾಗದಲ್ಲೂ ಯುದ್ಧ ಶುರು?
ಚೀನಾ ಮೀನುಗಾರಿಕಾ ದೋಣಿಗಳು ಹೀಗೆ ಒಟ್ಟುಗೂಡಿರುವ ದೃಶ್ಯ ಕೆಲವು ದಿನಗಳಿಂದ ಹೆಚ್ಚಾಗುತ್ತಾ ಇದ್ದು, 2025 ಡಿಸೆಂಬರ್ 25 ರಂದು ಈ ದೋಣಿಗಳ ವಿಚಿತ್ರ ವಿನ್ಯಾಸ ಮೊದಲಿಗೆ ಗಮನಕ್ಕೆ ಬಂದಿದೆ. ಆ ನಂತರ ಎಲ್ಲಾ ತಣ್ಣಗಾಯ್ತು ಅಂತಾ ಅಂದುಕೊಳ್ಳುವ ಸಮಯದಲ್ಲೇ 2026 ಜನವರಿ 11ಕ್ಕೆ ಮತ್ತೆ ಇದೇ ರೀತಿಯಾಗಿ, ಚೀನಾ ದೋಣಿಗಳು ಒಟ್ಟಾಗಿ ಕಾಣಿಸಿಕೊಂಡಿವೆ. ಸ್ವಯಂಚಾಲಿತ ಗುರುತು ವ್ಯವಸ್ಥೆ ಎಂದರೆ AIS ಮೂಲಕ ಗುರುತಿಸಲ್ಪಟ್ಟ ಈ ದೋಣಿಗಳು, ಭಾರಿ ವೇಗದ ಗಾಳಿಯ ನಡುವೆ ಒಟ್ಟು ಮೂರು ದಿನ ಒಂದೇ ಸ್ಥಳದಲ್ಲಿ ನಿಂತಿದ್ದವು ಎಂದು ವರದಿಯಾಗಿದೆ. ಹೀಗಾಗಿ ಅನುಮಾನ ಮತ್ತಷ್ಟು ಹೆಚ್ಚಾಗಿ, ಆತಂಕ ಕೂಡ ಮೂಡಿದೆ ತೈವಾನ್ ದೇಶಕ್ಕೆ.
ಜಪಾನ್ ದೇಶಕ್ಕೂ ಇದೇ ರೀತಿ ಆಗಿತ್ತು
ತೈವಾನ್ ಮಾತ್ರವಲ್ಲ ಈ ಹಿಂದೆ ಜಪಾನ್ ಆಡಳಿತದ ಸೆಂಕಾಕು ದ್ವೀಪದ ಸುತ್ತಮುತ್ತ ಕೂಡ ಇದೇ ರೀತಿ ಘಟನೆ ವರದಿಯಾಗಿತ್ತು. ಆಗ ಸುಮಾರು 200 ರಿಂದ 300 ಚೀನಾ ಮೀನುಗಾರಿಕಾ ಬೋಟ್‌ಗಳು ದಿಢೀರ್ ಬಂದು ದ್ವೀಪ ಸುತ್ತುವರೆದಿದ್ದವು. ಈಗ ಮತ್ತೊಂದು ಸುತ್ತಿನ ವಿಚಿತ್ರ ಘಟನೆ ವರದಿಯಾಗಿದ್ದು, ಈಗ ತೈವಾನ್ ದ್ವೀಪರಾಷ್ಟ್ರ ಇಂತಹ ಪರಿಸ್ಥಿತಿ ಎದುರಿಸಿದೆ. ಸೋಷಿಯಲ್ ಮೀಡಿಯಾ ಸೇರಿದಂತೆ ಇಡೀ ಜಗತ್ತಿನಲ್ಲಿ ಈ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗುತ್ತಿದ್ದು ಮತ್ತೊಂದು ಯುದ್ಧ ಶುರು ಆಗುತ್ತಾ? ಎಂಬ ಚರ್ಚೆ ಜೋರಾಗಿದೆ. ಚೀನಾ ಮೊದಲಿನಿಂದ ಕೂಡ ತೈವಾನ್ ತಮ್ಮದೇ ಭಾಗ ಎಂದು ಹೇಳಿಕೊಂಡು ಬಂದಿದೆ. ಆದರೆ ತೈವಾನ್ ಮಾತ್ರ ಅಮೆರಿಕ ಬೆಂಬಲ ಪಡೆದು ಹೋರಾಡುತ್ತಿದೆ.












Click it and Unblock the Notifications