Meta Layoffs 2026: AI ಮೇಲೆ ಭಾರಿ ಹೂಡಿಕೆ, 15,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾದ ಮೆಟಾ
ಬೆಂಗಳೂರು: ಜಾಗತಿಕ ಟೆಕ್ ವಲಯದಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಮೇಲಿನ ಹೂಡಿಕೆ ಹೆಚ್ಚಾಗುತ್ತಿದ್ದಂತೆ, ಇದರ ನೇರ ಹೊಡೆತ ಐಟಿ ಉದ್ಯೋಗಿಗಳ ಮೇಲಾಗುತ್ತಿದೆ. ಅಮೆರಿಕದ ಪ್ರಖ್ಯಾತ ಟೆಕ್ ದೈತ್ಯ ಹಾಗೂ ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ನ ಮಾತೃಸಂಸ್ಥೆ 'ಮೆಟಾ' (Meta) ಇದೀಗ ತನ್ನ ಜಾಗತಿಕ ಕಾರ್ಯಪಡೆಯಲ್ಲಿ ಶೇ. 20ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಲು (Layoffs) ಮುಂದಾಗಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಇತ್ತೀಚಿನ ವರದಿಯ ಪ್ರಕಾರ, ಈ ಮಹಾ ಉದ್ಯೋಗ ಕಡಿತದಿಂದಾಗಿ ಜಗತ್ತಿನಾದ್ಯಂತ ಸುಮಾರು 15,000 ದಿಂದ 16,000 ಮೆಟಾ ಉದ್ಯೋಗಿಗಳು ತಮ್ಮ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಮಾರ್ಕ್ ಜುಕರ್‌ಬರ್ಗ್ ನೇತೃತ್ವದ 'ಮೆಟಾ' ಕಂಪನಿಯು ಈ ಹಠಾತ್ ನಿರ್ಧಾರಕ್ಕೆ ಬರಲು ಪ್ರಮುಖ ಕಾರಣ ಕೃತಕ ಬುದ್ಧಿಮತ್ತೆ (ಎಐ). ಪ್ರಸ್ತುತ ಎಐ ರೇಸ್‌ನಲ್ಲಿ ಮುಂಚೂಣಿಯಲ್ಲಿರಲು ಮೆಟಾ ಶತಕೋಟಿ ಡಾಲರ್ ಹಣವನ್ನು ನೀರಿನಂತೆ ಖರ್ಚು ಮಾಡುತ್ತಿದೆ. ಹೊಸ ಡೇಟಾ ಸೆಂಟರ್‌ಗಳ ನಿರ್ಮಾಣ ಹಾಗೂ ಎಐ ಮೂಲಸೌಕರ್ಯಕ್ಕಾಗಿ 2028ರ ವೇಳೆಗೆ ಬರೋಬ್ಬರಿ 600 ಬಿಲಿಯನ್ ಡಾಲರ್ ಹೂಡಿಕೆ ಮಾಡುವ ಗುರಿಯನ್ನು ಕಂಪನಿ ಹೊಂದಿದೆ. ಈ ಬೃಹತ್ ವೆಚ್ಚವನ್ನು ಸರಿದೂಗಿಸಲು ಉದ್ಯೋಗ ಕಡಿತ ಅನಿವಾರ್ಯವಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಇತ್ತೀಚೆಗಷ್ಟೇ ಮೆಟಾ ಕಂಪನಿಯು 'ಸ್ಕೇಲ್ ಎಐ' (Scale AI) ಎಂಬ ಸ್ಟಾರ್ಟ್‌ಅಪ್ ಅನ್ನು 14.5 ಬಿಲಿಯನ್ ಡಾಲರ್‌ಗೆ (ಸುಮಾರು 1 ಲಕ್ಷ ಕೋಟಿ ರೂ.) ಖರೀದಿಸಿದ್ದು, ಅದರ ಮುಖ್ಯಸ್ಥ ಅಲೆಕ್ಸಾಂಡರ್ ವಾಂಗ್ (Alexandr Wang) ಅವರನ್ನು ತನ್ನ ಹೊಸದಾಗಿ ರಚಿಸಲಾದ 'ಮೆಟಾ ಸೂಪರ್ ಇಂಟೆಲಿಜೆನ್ಸ್ ಲ್ಯಾಬ್ಸ್' ವಿಭಾಗದ ನಾಯಕರನ್ನಾಗಿ ನೇಮಿಸಿದೆ. ಇದಲ್ಲದೆ, ಮನುಷ್ಯರಿಗೆ ಪೋಸ್ಟ್ ಮಾಡಲು ಅವಕಾಶವಿಲ್ಲದ ಕೇವಲ ಎಐ ಬಾಟ್‌ಗಳೇ ಬಳಸುವ 'ಮೋಲ್ಟ್‌ಬುಕ್' ಎಂಬ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಹಾಗೂ ಚೀನಾದ 'ಮ್ಯಾನುಸ್' (Manus) ಎಂಬ ಎಐ ಸ್ಟಾರ್ಟ್‌ಅಪ್ ಅನ್ನು ಸಹ ಸುಮಾರು 2 ಬಿಲಿಯನ್ ಡಾಲರ್ ನೀಡಿ ತನ್ನ ತೆಕ್ಕೆಗೆ ಹಾಕಿಕೊಂಡಿದೆ.
ಇಷ್ಟೆಲ್ಲಾ ಖರ್ಚು ಮಾಡುತ್ತಿದ್ದರೂ, ಎಐ ರೇಸ್‌ನಲ್ಲಿ ಮೆಟಾ ಕೊಂಚ ಹಿಂದಿಳಿದಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಗೂಗಲ್‌ನ ಜೆಮಿನಿ (Gemini 3.0) ಮತ್ತು ಓಪನ್‌ಎಐ (OpenAI) ಮಾದರಿಗಳಿಗೆ ಪೈಪೋಟಿ ನೀಡಲು ಮೆಟಾ ಸಿದ್ಧಪಡಿಸುತ್ತಿದ್ದ 'ಅವಕಾಡೊ' (Avocado) ಎಂಬ ಹೊಸ ಟೆಕ್ಸ್ಟ್-ಆಧಾರಿತ ಎಐ ಮಾಡೆಲ್, ಆಂತರಿಕ ಪರೀಕ್ಷೆಗಳಲ್ಲಿ ನಿರೀಕ್ಷಿತ ಮಟ್ಟ ತಲುಪುವಲ್ಲಿ ವಿಫಲವಾಗಿದೆ. ಈ ಕಾರಣದಿಂದ ಮಾರ್ಚ್‌ನಲ್ಲಿ ಬಿಡುಗಡೆಯಾಗಬೇಕಿದ್ದ ಅವಕಾಡೊ ಮಾಡೆಲ್ ಅನ್ನು ಮೇ ತಿಂಗಳವರೆಗೆ ಮುಂದೂಡಲಾಗಿದೆ.
ಈ ಹಿಂದೆ ಜನವರಿಯಲ್ಲಿ ಮಾತನಾಡಿದ್ದ ಸಿಇಒ ಮಾರ್ಕ್ ಜುಕರ್‌ಬರ್ಗ್, "ಹಿಂದೆ ದೊಡ್ಡ ತಂಡಗಳು ಮಾಡುತ್ತಿದ್ದ ಕೆಲಸಗಳನ್ನು, ಇಂದು ಎಐ ನೆರವಿನಿಂದ ಒಬ್ಬನೇ ಅತ್ಯಂತ ಪ್ರತಿಭಾವಂತ ವ್ಯಕ್ತಿ ಸುಲಭವಾಗಿ ಮಾಡಬಹುದು" ಎಂದು ಹೇಳುವ ಮೂಲಕ ಉದ್ಯೋಗ ಕಡಿತದ ಮುನ್ಸೂಚನೆ ನೀಡಿದ್ದರು. ಒಂದು ವೇಳೆ ಈ ಶೇ. 20ರಷ್ಟು ವಜಾ ಪ್ರಕ್ರಿಯೆ ಜಾರಿಯಾದರೆ, ಇದು ಮೆಟಾ ಇತಿಹಾಸದಲ್ಲೇ ಅತಿದೊಡ್ಡ ಉದ್ಯೋಗ ಕಡಿತವಾಗಲಿದೆ. ಈ ಹಿಂದೆ ನವೆಂಬರ್ 2022 ರಲ್ಲಿ 11,000 ಹಾಗೂ ಕೇವಲ ನಾಲ್ಕು ತಿಂಗಳ ಬಳಿಕ 10,000 ಉದ್ಯೋಗಿಗಳನ್ನು ಮೆಟಾ ವಜಾಗೊಳಿಸಿತ್ತು.
ಆದರೆ, ಈ ವರದಿಗಳ ಕುರಿತು ಅಧಿಕೃತವಾಗಿ ಪ್ರತಿಕ್ರಿಯಿಸಿರುವ ಮೆಟಾ ವಕ್ತಾರ ಆಂಡಿ ಸ್ಟೋನ್, "ಇದು ಕೇವಲ ಊಹಾಪೋಹದ ವರದಿ" ಎಂದು ಹೇಳಿ ಉದ್ಯೋಗ ಕಡಿತದ ಸುದ್ದಿಯನ್ನು ತಳ್ಳಿಹಾಕಿದ್ದಾರೆ. ಕೇವಲ ಮೆಟಾ ಮಾತ್ರವಲ್ಲದೆ, ಅಮೆಜಾನ್ (16,000 ಉದ್ಯೋಗ ಕಡಿತ), ಅಟ್ಲಾಸಿಯನ್ (1,600 ವಜಾ), ಮೈಕ್ರೋಸಾಫ್ಟ್ ಸೇರಿದಂತೆ ಹಲವು ಟೆಕ್ ಕಂಪನಿಗಳು ಎಐ ತಂತ್ರಜ್ಞಾನಕ್ಕೆ ಒತ್ತು ನೀಡುವ ಭರದಲ್ಲಿ ಸಾವಿರಾರು ಉದ್ಯೋಗಿಗಳನ್ನು ಮನೆಗೆ ಕಳುಹಿಸುತ್ತಿರುವುದು ಐಟಿ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ.












Click it and Unblock the Notifications