Karnataka: ರಾಜ್ಯದಲ್ಲಿ ಹೆಚ್ಚಾಯ್ತು ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣ: 3 ವರ್ಷದಲ್ಲಿ 27 ಸಾವು
ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳು ಮತ್ತು ವಸತಿ ನಿಲಯಗಳಲ್ಲಿ (ಹಾಸ್ಟೆಲ್‌ಗಳು) ಓದುತ್ತಿರುವ ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆ ಪ್ರಕರಣಗಳು ಇದೀಗ ತೀವ್ರ ಆತಂಕಕ್ಕೆ ಕಾರಣವಾಗಿವೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಬರೋಬ್ಬರಿ 27 ವಿದ್ಯಾರ್ಥಿಗಳು ತಮ್ಮ ಪ್ರಾಣ ಕಳೆದುಕೊಂಡಿರುವ ಆಘಾತಕಾರಿ ಅಂಕಿ-ಅಂಶಗಳು ವಿಧಾನಪರಿಷತ್ ಕಲಾಪದಲ್ಲಿ ಬಹಿರಂಗವಾಗಿವೆ. ಎಳೆಯ ವಯಸ್ಸಿನ ಮಕ್ಕಳು ಈ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಿರುವುದು ಇಡೀ ಸಮಾಜ ತಲೆತಗ್ಗಿಸುವಂತಹ ವಿಚಾರವಾಗಿದೆ.
ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ (MLC) ತಿಪ್ಪಣ್ಣ ಕಾಮಕ್ನೂರ್ ಅವರು ಸದನದಲ್ಲಿ ಎತ್ತಿದ ಪ್ರಶ್ನೆಗೆ, ಸರ್ಕಾರ ಅಧಿಕೃತವಾಗಿ ಈ ಕಳವಳಕಾರಿ ಮಾಹಿತಿಯನ್ನು ಒದಗಿಸಿದೆ. ವಿಶೇಷವಾಗಿ 7ನೇ ಮತ್ತು 8ನೇ ತರಗತಿಯಂತಹ ಚಿಕ್ಕ ವಯಸ್ಸಿನ ಮಕ್ಕಳು ಆತ್ಮಹತ್ಯೆಗೆ ಶರಣಾಗುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ ಎಂದು ಎಂಎಲ್‌ಸಿ ತಿಪ್ಪಣ್ಣ ಕಳವಳ ವ್ಯಕ್ತಪಡಿಸಿದರು.

ಸದನದಲ್ಲಿ ಗಂಭೀರ ಚರ್ಚೆ ಹುಟ್ಟುಹಾಕಿದ ಅವರು, "ಒಬ್ಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಾಗ ಅದು ಕೇವಲ ಆತನ ಒಂದು ಜೀವದ ಅಂತ್ಯವಲ್ಲ; ಆತನನ್ನೇ ನಂಬಿದ್ದ ಇಡೀ ಕುಟುಂಬದ ಬಹುದೊಡ್ಡ ಕನಸಿನ ಅಂತ್ಯವೂ ಆಗುತ್ತದೆ. ಹೀಗಿರುವಾಗ, ವಸತಿ ಶಾಲೆಗಳಲ್ಲಿ ಎಳೆಯ ವಯಸ್ಸಿನ ಮಕ್ಕಳ ಆತ್ಮಹತ್ಯೆ ತಡೆಯಲು ಸರ್ಕಾರ ಯಾವ ರೀತಿಯ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ?" ಎಂದು ಖಾರವಾಗಿ ಪ್ರಶ್ನಿಸಿದರು. ವಸತಿ ನಿಲಯಗಳಲ್ಲಿನ ಶೈಕ್ಷಣಿಕ ಒತ್ತಡ, ಆಪ್ತ ಸಮಾಲೋಚನೆಯ ಕೊರತೆ ಹಾಗೂ ಮಕ್ಕಳ ಮಾನಸಿಕ ಆರೋಗ್ಯದ ಕಡೆಗೆ ಸೂಕ್ತ ಗಮನ ಹರಿಸದಿರುವುದೇ ಇಂತಹ ದುರಂತಗಳಿಗೆ ಪ್ರಮುಖ ಕಾರಣ ಎಂಬ ಮಾತುಗಳು ಕೇಳಿಬಂದವು.
ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ. ಮಹದೇವಪ್ಪ, ಸರ್ಕಾರ ಈ ವಿಚಾರವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ ಎಂದು ಸ್ಪಷ್ಟಪಡಿಸಿದರು. "ರಾಜ್ಯದಲ್ಲಿ ಹೆಚ್ಚಾಗುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳನ್ನು ಸಂಪೂರ್ಣವಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರವು ದಿಟ್ಟ ಹೆಜ್ಜೆ ಇಟ್ಟಿದೆ. ಇದಕ್ಕಾಗಿ ಪ್ರತ್ಯೇಕವಾದ 'ಕರ್ನಾಟಕ ಆತ್ಮಹತ್ಯೆ ತಡೆಗಟ್ಟುವ ನೀತಿ-2025' (Karnataka Suicide Prevention Policy-2025) ಅನ್ನು ರೂಪಿಸಲಾಗುತ್ತಿದೆ," ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದರು.
ಈ ಹೊಸ ನೀತಿಯು ಈಗಾಗಲೇ ಅಂತಿಮ ಹಂತದಲ್ಲಿದ್ದು, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲಾಗಿದೆ. ಈ ಸಮಿತಿಯು ವಸತಿ ಶಾಲೆಗಳು, ಹಾಸ್ಟೆಲ್‌ಗಳು ಹಾಗೂ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಮಕ್ಕಳ ಮಾನಸಿಕ ಸ್ಥೈರ್ಯ ಹೆಚ್ಚಿಸಲು, ಒತ್ತಡ ರಹಿತ ಶಿಕ್ಷಣ ನೀಡಲು ಹಾಗೂ ಸಕಾಲದಲ್ಲಿ ಕೌನ್ಸೆಲಿಂಗ್ (ಆಪ್ತ ಸಮಾಲೋಚನೆ) ಒದಗಿಸಲು ಅಗತ್ಯವಿರುವ ಮಾರ್ಗಸೂಚಿಗಳನ್ನು ಸಿದ್ಧಪಡಿಸುತ್ತಿದೆ. ಶೀಘ್ರದಲ್ಲೇ ಈ ನೀತಿಗೆ ಅಂತಿಮ ರೂಪ ನೀಡಿ, ರಾಜ್ಯಾದ್ಯಂತ ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು ಎಂದು ಸಚಿವ ಮಹದೇವಪ್ಪ ಭರವಸೆ ನೀಡಿದರು.
ಶಿಕ್ಷಣ ತಜ್ಞರ ಪ್ರಕಾರ, ಕೇವಲ ನೀತಿಗಳ ರಚನೆಯಷ್ಟೇ ಸಾಲದು; ಪ್ರತಿಯೊಂದು ಶಾಲೆಯಲ್ಲಿಯೂ ನುರಿತ ಮಾನಸಿಕ ಆರೋಗ್ಯ ತಜ್ಞರ ನೇಮಕವಾಗಬೇಕು. ಹಾಸ್ಟೆಲ್ ವಾರ್ಡನ್‌ಗಳಿಗೆ ಮಕ್ಕಳ ವರ್ತನೆಯನ್ನು ಅರ್ಥಮಾಡಿಕೊಳ್ಳುವ ತರಬೇತಿ ನೀಡಬೇಕು. ಆಗ ಮಾತ್ರವೇ ಇಂತಹ ದುರಂತಗಳನ್ನು ತಪ್ಪಿಸಲು ಸಾಧ್ಯ.












Click it and Unblock the Notifications