Trisha Krishnan: ದಳಪತಿ ವಿಜಯ್ ಜೊತೆಗಿನ ಸಂಬಂಧ, ಡಿವೋರ್ಸ್ ಬಗ್ಗೆ ಮಾಧ್ಯಮಗಳ ಪ್ರಶ್ನೆ: ನಟಿ ತ್ರಿಶಾ ಕೊಟ್ಟ ಉತ್ತರವೇನು?
ಬಹುಭಾಷಾ ನಟಿ ತ್ರಿಶಾ ಕೃಷ್ಣನ್ ಮತ್ತು ದಳಪತಿ ವಿಜಯ್ ನಡುವಿನ ಸಂಬಂಧದ ಬಗ್ಗೆ ಹಬ್ಬಿರುವ ವದಂತಿಗಳು ಈಗ ಹೊಸ ತಿರುವು ಪಡೆದಿವೆ. ಇತ್ತೀಚೆಗೆ ವಿಜಯ್ ಪತ್ನಿ ಸಂಗೀತಾ ಅವರು ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೊರೆ ಹೋದ ಬೆನ್ನಲ್ಲೇ, ವಿಜಯ್ ಮತ್ತು ತ್ರಿಶಾ ಸಾರ್ವಜನಿಕ ಸಮಾರಂಭವೊಂದರಲ್ಲಿ ಜೊತೆಯಾಗಿ ಕಾಣಿಸಿಕೊಂಡಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ. ಈ ಘಟನೆಯ ನಂತರ ಮೊದಲ ಬಾರಿಗೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ತ್ರಿಶಾ ಅವರಿಗೆ ಮಾಧ್ಯಮಗಳ ಪ್ರಶ್ನೆಗಳ ಸುರಿಮಳೆ ಹರಿಸಿದವು.
ಇತ್ತೀಚೆಗೆ ಚೆನ್ನೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ ತ್ರಿಶಾ ಅವರಿಗೆ ಮಾಧ್ಯಮದವರು ದಳಪತಿ ವಿಜಯ್ ಜೊತೆಗಿನ ಸಂಬಂಧದ ಬಗ್ಗೆ ಹಬ್ಬಿರುವ ವದಂತಿಗಳ ಕುರಿತು ಪ್ರಶ್ನೆಗಳನ್ನು ಕೇಳಿದರು. ಆದರೆ, ತ್ರಿಶಾ ಯಾವುದೇ ಪ್ರಶ್ನೆಗೆ ಉತ್ತರಿಸದೆ, ಗಂಭೀರವಾಗಿಯೇ ನಡೆದು ಹೋಗುವ ಮೂಲಕ ಮೌನ ವಹಿಸಿದರು. ವರದಿಗಾರರು ವಿಜಯ್ ಪತ್ನಿ ಸಂಗೀತಾ ಸಲ್ಲಿಸಿರುವ ವಿಚ್ಛೇದನ ಅರ್ಜಿಯ ಬಗ್ಗೆಯೂ ಪ್ರಶ್ನೆ ಕೇಳಲು ಪ್ರಯತ್ನಿಸಿದರು. ಆದರೆ ತ್ರಿಶಾ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಮುಂದೆ ನಡೆದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಮ್ಯಾಚಿಂಗ್ ಉಡುಪಿನಲ್ಲಿ ಮಿಂಚಿದ್ದ ವಿಜಯ್-ತ್ರಿಶಾ
ಈ ವಿವಾದದ ಕಿಡಿ ಹೊತ್ತಿಕೊಂಡಿದ್ದು ಇತ್ತೀಚೆಗೆ ನಡೆದ ಕಲ್ಪತಿ ಸುರೇಶ್ ಅವರ ಮಗನ ವಿವಾಹ ಸಮಾರಂಭದಲ್ಲಿ. ಅಲ್ಲಿ ವಿಜಯ್ ಮತ್ತು ತ್ರಿಶಾ ಒಂದೇ ಬಣ್ಣದ ಉಡುಪಿನಲ್ಲಿ ಜೊತೆಯಾಗಿ ಆಗಮಿಸಿ ಎಲ್ಲರ ಗಮನ ಸೆಳೆದಿದ್ದರು. ಇದೇ ಸಮಯದಲ್ಲಿ ವಿಜಯ್ ಅವರ ಪತ್ನಿ ಸಂಗೀತಾ ಅವರು ವಿಜಯ್ ವಿರುದ್ಧ ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂಬ ಸುದ್ದಿ ಹೊರಬಂದಿತ್ತು. ತಮ್ಮ ಅರ್ಜಿಯಲ್ಲಿ ಸಂಗೀತಾ ಅವರು ವಿಜಯ್ ಅವರ ವೈಯಕ್ತಿಕ ನಡೆ ಮತ್ತು ಮತ್ತೊಬ್ಬ ನಟಿಯ ಜೊತೆಗಿನ ಸಂಬಂಧದ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ತ್ರಿಶಾ ಅವರ ಸಾರ್ವಜನಿಕ ಭೇಟಿಗಳು ಈಗ ಹೆಚ್ಚು ಚರ್ಚೆಯಾಗುತ್ತಿವೆ.
ನಟ ವಿಜಯ್ ತಮ್ಮ ರಾಜಕೀಯ ಪಕ್ಷವಾದ "ಟಿವಿಕೆ" ಕಾರ್ಯಕ್ರಮದಲ್ಲಿ ಈ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದರು. ತಮ್ಮ ವೈಯಕ್ತಿಕ ಜೀವನದ ಬಗ್ಗೆ ನಡೆಯುತ್ತಿರುವ ಚರ್ಚೆಗಳಿಂದ ಅಭಿಮಾನಿಗಳು ನೋವು ಮಾಡಿಕೊಳ್ಳಬಾರದು ಮತ್ತು ಅಂತಹ ವಿಷಯಗಳ ಬಗ್ಗೆ ಗಮನ ಹರಿಸುವ ಅಗತ್ಯವಿಲ್ಲ ಎಂದು ಅವರು ಮನವಿ ಮಾಡಿದ್ದರು. ಆದರೆ ವಿಜಯ್ ಅವರ ಈ ಹೇಳಿಕೆಯ ಹೊರತಾಗಿಯೂ, ತ್ರಿಶಾ ವಿಮಾನ ನಿಲ್ದಾಣದಲ್ಲಿ ತೋರಿದ ಮೌನ ಮತ್ತು ಮಾಧ್ಯಮಗಳಿಂದ ದೂರವುಳಿದ ರೀತಿ, ಅವರ ಮತ್ತು ವಿಜಯ್ ನಡುವಿನ ಆಪ್ತತೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ನಡೆಯುತ್ತಿರುವ ಚರ್ಚೆಯನ್ನು ಇನ್ನೂ ಜೀವಂತವಾಗಿರಿಸಿದೆ.












Click it and Unblock the Notifications