ಸರ್ಕಾರಿ ಜಮೀನು ಒತ್ತುವರಿ ತಡೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡುತ್ತಿರಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ
ಬೆಂಗಳೂರು: ಸರ್ಕಾರಿ ಜಮೀನುಗಳ ರಕ್ಷಣೆ ಕೇವಲ ಕಂದಾಯ ಇಲಾಖೆಯ ಜವಾಬ್ದಾರಿಯಲ್ಲ, ಇದು ಎಲ್ಲಾ ಇಲಾಖೆಗಳ ಸಾಮೂಹಿಕ ಹೊಣೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದರು. ಸರ್ಕಾರಿ ಆಸ್ತಿಗಳ ಒತ್ತುವರಿ ತಡೆಯಲು ಅಧಿಕಾರಿಗಳು ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು. ತಹಶೀಲ್ದಾರ್ ಹಾಗೂ ಸರ್ವೇ ಇಲಾಖೆ ಅಧಿಕಾರಿಗಳೊಂದಿಗೆ ನಡೆಸಿದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸರ್ಕಾರಿ ಜಮೀನು ರಕ್ಷಣೆ ಮತ್ತು ಕಂದಾಯ ಇಲಾಖೆಯ ವಿವಿಧ ಯೋಜನೆಗಳ ಕುರಿತು ಮಹತ್ವದ ಸೂಚನೆಗಳನ್ನು ನೀಡಿದರು.
ಯಾವ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಪೋಡಿ ದುರಸ್ತಿ ಮತ್ತು ಫೌತಿ ಖಾತೆ ಕೆಲಸಗಳು ಕಡಿಮೆ ಇವೆಯೋ, ಅಂತಹ ಕಡೆ ಅಧಿಕಾರಿಗಳು 'ಬೀಟ್ ಆ್ಯಪ್' (Beat App) ದತ್ತಾಂಶಗಳನ್ನು ಬಳಸಿಕೊಂಡು ಸರ್ಕಾರಿ ಜಮೀನು ಒತ್ತುವರಿಯನ್ನು ಆದ್ಯತೆಯ ಮೇಲೆ ತೆರವುಗೊಳಿಸಬೇಕು. ರಾಜ್ಯದ ಎಲ್ಲ ಇಲಾಖೆಗಳ ಆಸ್ತಿಗಳನ್ನು ಪಹಣಿಯಲ್ಲಿ ಮಾಡುವ ಪ್ರಕ್ರಿಯೆ ನಡೆಯುತ್ತಿದ್ದು, ಯಾವುದೇ ಆಸ್ತಿ ಬಿಟ್ಟುಹೋಗಿದ್ದರೆ ತಕ್ಷಣ ಗಮನಕ್ಕೆ ತರುವಂತೆ ತಿಳಿಸಿದರು.
ಅಧಿಕಾರಿಗಳ ವಿರುದ್ಧ ಗರಂ
ಕಂದಾಯ ಗ್ರಾಮಗಳನ್ನು ಗುರುತಿಸುವ ಪ್ರಕ್ರಿಯೆಯಲ್ಲಿ ಜಿಲ್ಲೆಗಳ ನಡುವಿನ ಅಂತರಕ್ಕೆ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 1,400 ಗ್ರಾಮಗಳನ್ನು ಗುರುತಿಸಲಾಗಿದ್ದರೂ, ಚಾಮರಾಜನಗರ ಜಿಲ್ಲೆಯಲ್ಲಿ ಈ ಸಂಖ್ಯೆ ಶೂನ್ಯ ಇರುವುದನ್ನು ಪ್ರಶ್ನಿಸಿದ ಸಚಿವರು, ಕೆಲಸ ಮಾಡದ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ಮಾರ್ಚ್ ತಿಂಗಳಾಂತ್ಯದೊಳಗೆ ಈ ಕೆಲಸ ಮುಗಿಯಲೇಬೇಕು ಎಂದು ಗಡುವು ನೀಡಿದರು.

ಭೂ ಸುರಕ್ಷಾ ಮತ್ತು ದಾಖಲೆಗಳ ಸ್ಕ್ಯಾನಿಂಗ್
'ಭೂ ಸುರಕ್ಷಾ' ಯೋಜನೆಯಡಿ 136 ತಾಲೂಕುಗಳಲ್ಲಿ ಕೆಲಸ ಪೂರ್ಣಗೊಂಡಿದೆ. ಆದರೆ, ಉಳಿದ 58 ತಾಲೂಕುಗಳಲ್ಲಿ ದಾಖಲೆಗಳ ಸ್ಕ್ಯಾನಿಂಗ್ ಪ್ರಕ್ರಿಯೆ ಮಂದಗತಿಯಲ್ಲಿ ಸಾಗುತ್ತಿದೆ. ಹೊಸದುರ್ಗ ತಾಲೂಕಿನಲ್ಲಿ ಎಂಟು ಡಾಟಾ ಆಪರೇಟರ್‌ಗಳಿದ್ದರೂ ಕೆಲಸ ಬಾಕಿ ಇರುವುದಕ್ಕೆ ತಹಶೀಲ್ದಾರ್ ಅವರನ್ನು ಸಚಿವರು ತರಾಟೆಗೆ ತೆಗೆದುಕೊಂಡರು. ಕಿತ್ತೂರು, ಹೊಸಕೋಟೆ, ಬೈಂದೂರು ಸೇರಿದಂತೆ ಎಲ್ಲಿ ದಿನಕ್ಕೆ 12,000ಕ್ಕಿಂತ ಕಡಿಮೆ ಸ್ಕ್ಯಾನ್ ಆಗುತ್ತಿದೆಯೋ ಅಲ್ಲಿ ವೇಗ ಹೆಚ್ಚಿಸಬೇಕು. ಸ್ಕ್ಯಾನ್ ಆದ ದಾಖಲೆಗಳು ಶೀಘ್ರದಲ್ಲೇ ಆನ್‌ಲೈನ್‌ನಲ್ಲಿ ಸಾರ್ವಜನಿಕರಿಗೆ ಲಭ್ಯವಾಗಬೇಕು ಎಂದು ಸೂಚಿಸಿದರು.
ಬೆಂಗಳೂರು ಮತ್ತು ಮಂಗಳೂರು ಹೊರತುಪಡಿಸಿ ಉಳಿದೆಲ್ಲಾ ಜಿಲ್ಲೆಗಳಲ್ಲಿ ಮಾರ್ಚ್ ಅಂತ್ಯಕ್ಕೆ 1ರಿಂದ 5ರವರೆಗಿನ ಡಾಟಾ ಎಂಟ್ರಿ ಮುಗಿಸಬೇಕು. 50ಕ್ಕಿಂತ ಕಡಿಮೆ ಗ್ರ್ಯಾಂಟ್ ಇರುವ ಸರ್ವೇ ನಂಬರ್‌ಗಳ ಕೆಲಸವನ್ನು ಬಾಕಿ ಉಳಿಸಿದರೆ ಅಧಿಕಾರಿಗಳಿಗೆ ನೋಟಿಸ್ ನೀಡುವ ಎಚ್ಚರಿಕೆ ನೀಡಿದರು. ಗ್ರಾಮ ಆಡಳಿತಾಧಿಕಾರಿಗಳು (VA) ಮನೆ ಮನೆಗೆ ಹೋಗಿ ಫೌತಿ ಖಾತೆ ಮಾಡಿಕೊಡುತ್ತಿರುವ ಹಾವೇರಿ ಮಾದರಿಯನ್ನು ಶ್ಲಾಘಿಸಿದರು. ಇ-ಫೌತಿ ವ್ಯವಸ್ಥೆಯನ್ನು ಮತ್ತಷ್ಟು ಸರಳೀಕರಣಗೊಳಿಸಲಾಗಿದ್ದು, ಈ ಆಂದೋಲನ ಮತ್ತಷ್ಟು ವೇಗ ಪಡೆಯಬೇಕು ಎಂದರು. ಕುಣಿಗಲ್, ಹೊಸಕೋಟೆ ಹಾಗೂ ಶಿಕಾರಿಪುರ ತಾಲೂಕುಗಳ ತಹಶೀಲ್ದಾರ್ ನ್ಯಾಯಾಲಯಗಳಲ್ಲಿ ಹೆಚ್ಚಿನ ತಕರಾರು ಪ್ರಕರಣಗಳು ಬಾಕಿ ಇವೆ. ಅವಧಿ ಮೀರಿದ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಲು ಆದೇಶಿಸಿದರು.












Click it and Unblock the Notifications