ಅಮೆರಿಕದಲ್ಲಿ ಹಬ್ಬಿರುವ ಅಂಧಕಾರ ಕೊನೆಗೊಳ್ಳಲಿ: ಬಿಡೆನ್
ಅಮೆರಿಕದಲ್ಲಿ ಹಬ್ಬಿರುವ ಅಂಧಕಾರವನ್ನು ಕೊನೆಗೊಳಿಸಬೇಕಿದೆ ಎಂದು ಟ್ರಂಪ್ ಆಡಳಿತದ ವಿರುದ್ಧ ಬಿಡೆನ್ ಹರಿಹಾಯ್ದಿದ್ದಾರೆ. ಅಮೆರಿಕದ ಅಧ್ಯಕ್ಷೀಯ ಚುನಾವಣಾ ಕಾವು ಕ್ಷಣಕ್ಷಣಕ್ಕೂ ರಂಗೇರುತ್ತಿದ್ದು, ಟ್ರಂಪ್ ವಿರುದ್ಧ ಬಿಡೆನ್ ಪಡೆ ವಾಗ್ದಾಳಿ ಮುಂದುವರಿಸಿದೆ.
Recommended Video
ಇದೀಗ ಖುದ್ದು ಬಿಡೆನ್ ಅಖಾಡ ಪ್ರವೇಶಿಸಿದ್ದಾರೆ. ವೀಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಡೆಮಾಕ್ರಟಿಕ್ ಪಕ್ಷದ 4 ದಿನಗಳ ರಾಷ್ಟ್ರೀಯ ಸಮಾವೇಶದ ಕೊನೆಯ ದಿನ ಮಾತನಾಡಿದ ಜೋ ಬಿಡೆನ್, ಅಮೆರಿಕದ ಭವಿಷ್ಯದ ಕುರಿತು ತಮ್ಮ ವಿದೇಶಾಂಗ ನೀತಿಗಳನ್ನು ಮಂಡಿಸಿದರು.
ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದು ಬಂದರೆ ಮಿತ್ರ ರಾಷ್ಟ್ರಗಳೊಂದಿಗಿನ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತೇನೆ. ಯಾವುದೇ ಕಾರಣಕ್ಕೂ ಸರ್ವಾಧಿಕಾರಿಗಳೊಂದಿಗೆ ಸ್ನೇಹ ಮಾಡುವುದಿಲ್ಲ ಎಂದು ಬಿಡೆನ್ ಭರವಸೆ ನೀಡಿದ್ದಾರೆ.
ಅಮೆರಿಕನ್ ಯೋಧರ ತಲೆಗೆ ಬೆಲೆ ಕಟ್ಟುವ ರಷ್ಯಾದ ನಡೆಗೆ ಕಿಡಿಕಾರಿದರಲ್ಲದೆ, ಇದು ನಿರ್ಲಕ್ಷ್ಯ ಮಾಡುವ ವಿಚಾರವಲ್ಲ ಎಂದು ರಷ್ಯಾ ನಾಯಕರಿಗೆ ವಾರ್ನಿಂಗ್ ಕೊಟ್ಟಿದ್ದಾರೆ. ಹೀಗೆ ಪರೋಕ್ಷವಾಗಿ ಟ್ರಂಪ್ ತಟಸ್ಥವಾಗಿದ್ದನ್ನು ಜೋ ಬಿಡೆನ್ ಖಂಡಿಸಿದ್ದಾರೆ.
ಈಗಾಗಲೇ ಟ್ರಂಪ್ ಹಾಗೂ ರಷ್ಯಾ ಅಧ್ಯಕ್ಷ ಪುಟಿನ್ ನಡುವಿನ ರಹಸ್ಯ ಸ್ನೇಹದ ಕುರಿತು ಊಹಾಪೋಹಗಳು ಹಬ್ಬಿರುವಾಗಲೇ ಬಿಡೆನ್ ಹೇಳಿರುವ ಈ ಮಾತು ಮಹತ್ವ ಪಡೆದಿದೆ.

100 ವರ್ಷದಲ್ಲಿ ಕಾಣದ ಸಂಕಷ್ಟ ಎದುರಾಗಿದೆ
1930ರಲ್ಲಿ ಸಂಭವಿಸಿದ್ದ ಆರ್ಥಿಕ ಮಹಾಕುಸಿತದ ನಂತರ ಅಮೆರಿಕ ಮತ್ತೆ ಭಾರಿ ಸಂಕಷ್ಟಕ್ಕೆ ತುತ್ತಾಗಿದೆ. ಕೋಟ್ಯಂತರ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಮಹಾಮಾರಿ ಕೊರೊನಾ ಲಕ್ಷಾಂತರ ಅಮೆರಿಕನ್ನರನ್ನು ಬಲಿ ಪಡೆದಿದೆ. ಇಂತಹ ಹೊತ್ತಲ್ಲಿ ಸಮರ್ಥವಾಗಿ ಪರಿಸ್ಥಿತಿ ನಿಭಾಯಿಸಬೇಕಿದೆ ಎಂದು ಬಿಡೆನ್ ಹೇಳಿದ್ದಾರೆ. ಅಲ್ಲದೆ ಕೋಟ್ಯಂತರ ಜನರು ಉದ್ಯೋಗ ಕಳೆದುಕೊಂಡಿದ್ದು, ಉದ್ಯೋಗ ಸೃಷ್ಟಿಸುವತ್ತ ಹಾಗೂ ಆರ್ಥಿಕತೆ ಸುಧಾರಣೆಗೆ ಮಹತ್ವದ ಹೆಜ್ಜೆ ಇಡಬೇಕಿದೆ ಎಂಬ ಅಭಿಪ್ರಾಯವನ್ನೂ ಬಿಡೆನ್ ಮಂಡಿಸಿದ್ದಾರೆ.

ಬಿಡೆನ್‌ದು ಬರೀ ಮಾತು ಅಷ್ಟೇ..!
ಬಿಡೆನ್ ಒಬ್ಬ ಮಾತುಗಾರ ಅಷ್ಟೇ, ಬಿಡೆನ್ ಮಾತನಾಡಿದ್ದನ್ನು ಕಾರ್ಯರೂಪಕ್ಕೆ ತರುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಅತ್ತ ಬಿಡೆನ್ ಪರ ಇಡೀ ಡೆಮಾಕ್ರಟಿಕ್ ಸೇನೆ ಅಖಾಡಕ್ಕೆ ಇಳಿದಿದೆ. ಆದರೆ ಇತ್ತ ಟ್ರಂಪ್ ಏಕಾಂಗಿಯಾಗಿ ತಮ್ಮನ್ನು ತಾವು ಸಮರ್ಥಿಸಿಕೊಳ್ಳುತ್ತಿದ್ದಾರೆ. ಬಿಡೆನ್ ಹಾಗೂ ಕಮಲಾ ವಿರುದ್ಧವಾಗಿ ಟ್ರಂಪ್ ವಾಗ್ದಾಳಿ ಮುಂದುವರಿಸಿದ್ದಾರೆ. ಸರಣಿ ಟ್ವೀಟ್‌ಗಳನ್ನ ಮಾಡಿರುವ ಟ್ರಂಪ್, ಬಿಡೆನ್ ಮಾತ್ರವಲ್ಲ ಒಬಾಮಾ ಹಾಗೂ ಕಮಲಾ ಹ್ಯಾರಿಸ್ ವಿರುದ್ಧ ಕೂಡ ಹರಿಹಾಯ್ದಿದ್ದಾರೆ.

ಕಮಲಾ ಉಪಾಧ್ಯಕ್ಷೆ ಆಗೋದು ಪಕ್ಕಾ..!
ಜನರಿಗಾಗಿ ನ್ಯಾಯದ ಪರ ಪ್ರತಿನಿತ್ಯ ಹೋರಾಟ ನಡೆಸುತ್ತಿರುವ ಸೆನೆಟರ್ ಕಮಲಾ ಅದೇ ಜನರಿಂದ ಅಮೆರಿಕದ ಉಪಾಧ್ಯಕ್ಷೆ ಆಗುತ್ತಾರೆಂದು ಕಮಲಾ ಪತಿ ಭರವಸೆ ವ್ಯಕ್ತಪಡಿಸಿದ್ದಾರೆ. ಕಮಲಾ ಪತಿ ಡೌಗ್ಲಾಸ್ ಎಮ್ಹಾಫ್ ಕೂಡ ಟ್ರಂಪ್‌ಗೆ ಟಾಂಗ್ ಕೊಟ್ಟಿದ್ದು, ನಾವು ಚುನಾವಣಾ ಗೆಲುವಿಗಿಂತಲೂ ಹೆಚ್ಚಿನದನ್ನು ದೇಶಕ್ಕಾಗಿ ಮಾಡಬೇಕಿದೆ ಎಂದಿದ್ದಾರೆ. ಅಲ್ಲದೆ ನಮ್ಮ ಕಾರ್ಯಕ್ಕಾಗಿ ಜನಾದೇಶ ಬೇಕಿದ್ದು, ಈ ಮೂಲಕ ನಮ್ಮ ದೇಶದಲ್ಲಿ ನಾವು ಯಾರು ಎಂಬುದನ್ನು ಹಾಲಿ ಅಧ್ಯಕ್ಷರಿಗೆ ತಿಳಿಸಬೇಕಿದೆ ಎಂದು ಟ್ರಂಪ್‌ಗೆ ತಿರುಗೇಟು ನೀಡಿದ್ದಾರೆ. ಇತ್ತೀಚೆಗೆ ಟ್ರಂಪ್ ಕಮಲಾ ಹ್ಯಾರಿಸ್ ಹುಟ್ಟಿನ ಮೂಲವನ್ನೇ ಗುರಿಯಾಗಿಸಿ ಮಾತನಾಡಿದ್ದರು. ಟ್ರಂಪ್ ಮಾತಿನ ಬಗ್ಗೆ ಅಮೆರಿಕದಾದ್ಯಂತ ಆಕ್ರೋಶ ವ್ಯಕ್ತವಾಗುವಾಗಲೇ ಕಮಲಾ ಪತಿ ಹಾಲಿ ಅಧ್ಯಕ್ಷರಿಗೆ ಮಾತಿನ ಮೂಲಕವೇ ಚುಚ್ಚಿದ್ದಾರೆ.

ಡಿಜಿಟಲ್ ಪ್ರಚಾರಕ್ಕೆ ಟ್ರಂಪ್ ಮಾಸ್ಟರ್ ಪ್ಲಾನ್
ಟ್ರಂಪ್ ಕಳೆದ ಚುನಾವಣೆಯಂತೆ ಈ ಬಾರಿಯೂ ಡಿಜಿಟಲ್ ಪ್ರಚಾರದ ಮೂಲಕವಾಗಿ ಜನರ ಮನಸ್ಸು ಗೆಲ್ಲಲು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಮತದಾರರ ಓಲೈಕೆಗೆ ಡಿಜಿಟಲ್ ಕ್ಯಾಂಪೇನ್ ಬಹುಮುಖ್ಯವಾಗಿದ್ದು, ಕೊರೊನಾ ಸಂಕಷ್ಟ ಕಾಲದಲ್ಲಿ ಇದು ಇನ್ನಷ್ಟು ಪ್ರಾಮುಖ್ಯತೆ ಪಡೆದಿದೆ. ಹೀಗಾಗಿ ಟ್ರಂಪ್ ಪ್ರಚಾರ ಪಡೆ ಚುನಾವಣಾ ಗೆಲುವಿಗಾಗಿ ರಣತಂತ್ರ ರೂಪಿಸುತ್ತಿದೆ. ಆದರೆ ಅಮೆರಿಕದ ಮತದಾರ ಯಾರ ಪರ ವಾಲುತ್ತಾನೆ ಎಂಬುದನ್ನು ತಿಳಿಯಲು ಫಲಿತಾಂಶದವರೆಗೂ ಕಾಯಬೇಕಿದೆ.












Click it and Unblock the Notifications