Just in: ಜಿಎಸ್‌ಟಿ ವಿಚಾರದಲ್ಲಿ ಮಹತ್ವದ ತೀರ್ಮಾನ ಕೈಗೊಂಡ ಕೇರಳ
ತಿರುವನಂತಪುರಂ, ಜುಲೈ 20: ದೇಶದಲ್ಲಿ ಅಗತ್ಯ ವಸ್ತುಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಹೇರಿಕೆ ವಿರುದ್ಧ ಹೆಚ್ಚುತ್ತಿರುವ ಪ್ರತಿಭಟನೆಯ ನಡುವೆ, ಸಣ್ಣ ಅಂಗಡಿಗಳಲ್ಲಿ ಮಾರಾಟ ಮಾಡಲಾಗುವ ಸರಕು ಸಾಮಾಗ್ರಿಗಳಿಗೆ ಜಿಎಸ್‌ಟಿ ವಿಧಿಸುವುದಿಲ್ಲ ಎಂದು ಕೇರಳ ಸರ್ಕಾರ ಘೋಷಿಸಿದೆ.
ರಾಜ್ಯದಲ್ಲಿ 1 ಅಥವಾ 2 ಕೆಜಿ ಪ್ಯಾಕೆಟ್‌ಗಳಲ್ಲಿ ಸಣ್ಣ ಅಂಗಡಿಗಳು ಮಾರಾಟ ಮಾಡುವ ವಸ್ತುಗಳಿಗೆ ತೆರಿಗೆ ವಿಧಿಸುವ ಉದ್ದೇಶವಿಲ್ಲ ಎಂದು ಕೇರಳ ಸರ್ಕಾರ ತಿಳಿಸಿದೆ. ಈ ನಿರ್ಧಾರವು ಕೇಂದ್ರ ಸರ್ಕಾರದೊಂದಿಗೆ ಸಮಸ್ಯೆಗಳಿಗೆ ಕಾರಣವಾಗಬಹುದು. ಆದರೆ ರಾಜ್ಯವು ರಾಜಿ ಮಾಡಿಕೊಳ್ಳಲು ಸಿದ್ಧವಾಗಿಲ್ಲ ಎಂದು ರಾಜ್ಯದ ಹಣಕಾಸು ಸಚಿವ ಕೆ. ಎನ್. ಬಾಲಗೋಪಾಲ್ ಕೇರಳ ವಿಧಾನಸಭೆಗೆ ತಿಳಿಸಿದ್ದಾರೆ.
"ಕೇರಳದಲ್ಲಿ ಕುಟುಂಬಶ್ರೀಯಂತಹ ಸಂಸ್ಥೆಗಳು, ಸಣ್ಣ ಅಂಗಡಿಗಳಲ್ಲಿ 1 ಅಥವಾ 2 ಕೆಜಿ ಪ್ಯಾಕೆಟ್‌ಗಳಲ್ಲಿ ಅಥವಾ ಸಡಿಲವಾದ ಪ್ರಮಾಣದಲ್ಲಿ ಮಾರಾಟ ಮಾಡುವ ವಸ್ತುಗಳಿಗೆ ತೆರಿಗೆ ವಿಧಿಸುವುದಿಲ್ಲ. ಇದು ಕೇಂದ್ರದೊಂದಿಗೆ ಸಮಸ್ಯೆಗಳಿಗೆ ಕಾರಣವಾಗಬಹುದು. ಆದರೂ, ನಾವು ಈ ವಿಷಯದಲ್ಲಿ ರಾಜಿ ಮಾಡಿಕೊಳ್ಳಲು ಸಿದ್ಧರಿಲ್ಲ, ನಾವು ಇದನ್ನು ಈಗಾಗಲೇ ಅವರಿಗೂ ಪತ್ರ ಬರೆದು ತಿಳಿಸಿದ್ದೇವೆ" ಎಂದು ರಾಜ್ಯ ಹಣಕಾಸು ಸಚಿವ ಹೇಳಿದ್ದಾರೆ.

ಕೇರಳ ಸರ್ಕಾರದ ಮಹಿಳಾ ಸ್ವ-ಸಹಾಯ ಗುಂಪಾಗಿರುವ ಕುಟುಂಬಶ್ರೀ, ದೇಶದ ಅತಿದೊಡ್ಡ ಮಹಿಳಾ ಸಬಲೀಕರಣ ಯೋಜನೆಗಳಲ್ಲಿ ಒಂದಾಗಿದೆ. ಇದು ಸಣ್ಣ-ಪ್ರಮಾಣದ ಆಹಾರ ಸಂಸ್ಕರಣಾ ಘಟಕಗಳ ಉದ್ಯಮಗಳಲ್ಲಿ ತೊಡಗಿಸಿಕೊಂಡಿದೆ.
ಬ್ರಾಂಡೆಡ್ ಕಂಪನಿಗಳು ಪ್ಯಾಕೇಜ್ ಮಾಡಿದ ಉತ್ಪನ್ನಗಳ ಮೇಲೆ ಶೇಕಡಾ 5ರಷ್ಟು ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಆದರೆ ಅವರು "ಬ್ರಾಂಡ್ ಅನ್ನು ಕ್ಲೈಮ್ ಮಾಡುತ್ತಿಲ್ಲ" ಎಂದು ಪ್ಯಾಕೇಜಿಂಗ್‌ನಲ್ಲಿ ನಮೂದಿಸಿದರೆ ಅದಕ್ಕೆ ತೆರಿಗೆ ವಿಧಿಸಲಾಗುವುದಿಲ್ಲ ಎಂದು ಬಾಲಗೋಪಾಲ್ ಹೇಳಿದರು.
ಅಗತ್ಯ ವಸ್ತುಗಳ ಮೇಲೆ ಜಿಎಸ್‌ಟಿ ಹೇರುವ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತುರ್ತು ಮಧ್ಯಸ್ಥಿಕೆ ವಹಿಸಬೇಕೆಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೋರಿದ್ದು, ಈ ಕ್ರಮವು ಸಾಮಾನ್ಯ ಜನರ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದಿದ್ದಾರೆ.












Click it and Unblock the Notifications