Vaibhav Sooryavanshi: ಭಾರತ ಅಂಡರ್ 19 ತಂಡದಿಂದ ವೈಭವ್ ಸೂರ್ಯವಂಶಿ ಔಟ್..
Vaibhav Sooryavanshi: ಅಸ್ಟ್ರೇಲಿಯಾ ವಿರುದ್ಧದ ಅಂಡರ್ 19 ಸರಣಿಗೆ ಬಿಸಿಸಿಐ ಈಗಾಗಲೇ ಭಾರತ ತಂಡವನ್ನ ಪ್ರಕಟಿಸಿದೆ. ಆದರೆ ಈ ಪಟ್ಟಿಯಲ್ಲಿ ಟೀಮ್ ಇಂಡಿಯಾ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರ ಹೆಸರು ಇಲ್ಲ. ಹಾಗಾದ್ರೆ ಇದಕ್ಕೆ ಕಾರಣ ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಭಾರತದ ಅಂಡರ್-19 ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಅದರಲ್ಲಿ ಯುವ ಸ್ಪೋಟಕ ಬ್ಯಾಟರ್ ವೈಭವ್ ಸೂರ್ಯವಂಶಿ ಅವರ ಹೆಸರು ಇಲ್ಲದಿರುವುದು ಕ್ರೀಡಾಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಇದಕ್ಕೆ ಸ್ಪಷ್ಟ ಕಾರಣ ಇಲ್ಲಿದೆ ನೋಡಿ.

ಬಿಸಿಸಿಐ 2016ರಲ್ಲಿ ಜಾರಿಗೆ ತಂದ ನಿಯಮದ ಪ್ರಕಾರ, ಒಬ್ಬ ಆಟಗಾರ ವಯಸ್ಸಿನ ಅರ್ಹತೆ ಹೊಂದಿದ್ದರೂ ಸಹ ಒಂದಕ್ಕಿಂತ ಹೆಚ್ಚು ಅಂಡರ್-19 ವಿಶ್ವಕಪ್‌ನಲ್ಲಿ ಭಾಗವಹಿಸುವಂತಿಲ್ಲ. ವೈಭವ್ ಸೂರ್ಯವಂಶಿ ಅವರು ಈಗಾಗಲೇ 2026ರ ಅಂಡರ್-19 ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿರುವುದರಿಂದ, ಮುಂದಿನ ಆವೃತ್ತಿಯಿಂದ ಅವರನ್ನು ಮತ್ತೆ ಸೇರಿಸಿಕೊಳ್ಳಲಾಗುವುದಿಲ್ಲ.
ಭಾರತ ಅಂಡರ್-19 ತಂಡದಿಂದ ವೈಭವ್ ಔಟ್
ವೈಭವ್ ಸೂರ್ಯವಂಶಿ ಅವರಿಗೆ ಕೇವಲ 15 ವರ್ಷ ವಯಸ್ಸಾಗಿದ್ದರೂ, ಈಗಾಗಲೇ ಸೀನಿಯರ್ ಮಟ್ಟದ ಕ್ರಿಕೆಟ್‌ನಲ್ಲಿ ಆಡುತ್ತಿದ್ದಾರೆ. ಭಾರತದ ಹಿರಿಯರ ಕ್ರಿಕೆಟ್ ಯೋಜನೆಗಳತ್ತ ಗಮನ ಹರಿಸಲು ಮತ್ತು ಅವರ ಪಂದ್ಯಗಳ ಒತ್ತಡವನ್ನು ಸರಿಯಾಗಿ ನಿರ್ವಹಿಸಲು ಅಂಡರ್-19 ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ.
ಆಸ್ಟ್ರೇಲಿಯಾ ವಿರುದ್ಧದ ಅಂಡರ್-19 ಟೆಸ್ಟ್ ಮತ್ತು ವೈಟ್-ಬಾಲ್ ಸರಣಿಗಾಗಿ ಭಾರತ ತಂಡವನ್ನು ಪ್ರಕಟಿಸಿದ್ದು, ಲಕ್ಷ್ಯ ರೈಚಂದಾನಿ, ಯಶ್‌ವರ್ಧನ್ ಚೌಹಾಣ್ ಮತ್ತು ಅನ್ವಯ್ ದ್ರಾವಿಡ್ ಸೇರಿದಂತೆ ಹಲವು ಉದಯೋನ್ಮುಖ ಯುವ ಆಟಗಾರರು ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಆದರೆ ಈ ಸರಣಿಯಿಂದ ಹೊರಗುಳಿದಿರುವ ಪ್ರಮುಖ ಹೆಸರು ಎಂದರೆ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ.
ಸೀನಿಯರ್ ತಂಡ ಪ್ರವೇಶಿಸಿರುವ 'ವಂಡರ್ ಕಿಡ್'
ಸೂರ್ಯವಂಶಿ ಅವರು ಫೆಬ್ರವರಿಯಲ್ಲಿ ನಡೆದ U-19 ವಿಶ್ವಕಪ್ ಫೈನಲ್ ನಂತರ ಇಂಡಿಯಾ U-19 ತಂಡದ ಪರ ಕಾಣಿಸಿಕೊಂಡಿಲ್ಲ. ಅಲ್ಲದೆ ಜೂನ್‌ನಲ್ಲಿ ನಡೆದ ಶ್ರೀಲಂಕಾ ಪ್ರವಾಸದಿಂದಲೂ ಅವರು ಹೊರಗುಳಿದಿದ್ದರು. ಇತ್ತೀಚೆಗಷ್ಟೇ ಹಿರಿಯರ ಅಂತಾರಾಷ್ಟ್ರೀಯ ಮಟ್ಟಕ್ಕೆ ಪಾದಾರ್ಪಣೆ ಮಾಡಿದ್ದು, ಇಂಗ್ಲೆಂಡ್ ಮತ್ತು ಜಿಂಬಾಬ್ವೆ ವಿರುದ್ಧ ಭಾರತದ ಪರ 6 ಟಿ-20 ಪಂದ್ಯಗಳನ್ನು ಆಡಿದ್ದಾರೆ. ಸದ್ಯ ದುಲೀಪ್ ಟ್ರೋಫಿ ಪಂದ್ಯದಲ್ಲಿ ಆಡುತ್ತಿದ್ದಾರೆ.
ಇನ್ನೂ ಆಸ್ಟ್ರೇಲಿಯಾ ವಿರುದ್ಧದ ಸರಣಿಯು ಸೆಪ್ಟೆಂಬರ್ 18ರಿಂದ ಅಕ್ಟೋಬರ್ 8ರ ವರೆಗೆ ನಿಗದಿಯಾಗಿದ್ದು, ಇದೇ ವೇಳೆ ಐಚಿ-ನಗೋಯಾದಲ್ಲಿ ಏಷ್ಯನ್ ಗೇಮ್ಸ್ ನಡೆಯಲಿವೆ. ಏಷ್ಯನ್ ಗೇಮ್ಸ್‌ಗಾಗಿ ಭಾರತ ತಂಡದಲ್ಲಿ ಸೂರ್ಯವಂಶಿ ಆಯ್ಕೆಯಾಗಿದ್ದು, ಅಲ್ಲಿ ಪಂದ್ಯಗಳು ಸೆಪ್ಟೆಂಬರ್ 28ರಿಂದ ಪ್ರಾರಂಭವಾಗಲಿದ್ದು, ಅಕ್ಟೋಬರ್ 3ರಂದು ಫೈನಲ್ ನಡೆಯುವ ನಿರೀಕ್ಷೆಯಿದೆ. ಆದ್ದರಿಂದ ವೈಭವ್ ಅವರು U-19 ಸರಣಿಯಿಂದ ದೂರ ಉಳಿದಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ ಇತ್ತೀಚೆಗೆ ಅವರು ಸೀನಿಯರ್ ತಂಡಕ್ಕೆ ಆಯ್ಕೆಯಾಗಿರುವುದು ಒಂದು ಪ್ರಮುಖ ಕಾರಣವಾಗಿದೆ.
ಭಾರತ U-19 vs ಆಸ್ಟ್ರೇಲಿಯಾ U-19 ಸರಣಿ ವೇಳಾಪಟ್ಟಿ
* ಮೊದಲ ಏಕದಿನ ಪಂದ್ಯ - ಸೆಪ್ಟೆಂಬರ್ 18ರಂದು ರಾಜ್‌ಕೋಟ್‌ನಲ್ಲಿ ನಡೆಯಲಿದೆ.
* ಎರಡನೇ ಏಕದಿನ ಪಂದ್ಯ - ಸೆಪ್ಟೆಂಬರ್ 21ರಂದು ರಾಜ್‌ಕೋಟ್‌ನಲ್ಲಿ ನಡೆಯಲಿದೆ.
* ಮೂರನೇ ಏಕದಿನ ಪಂದ್ಯ - ಸೆಪ್ಟೆಂಬರ್ 23ರಂದು ರಾಜ್‌ಕೋಟ್‌ನಲ್ಲಿ ನಡೆಯಲಿದೆ.
* ಮೊದಲ ಬಹು ದಿನ ಪಂದ್ಯ: ಸೆಪ್ಟೆಂಬರ್ 27 ರಿಂದ 30ರ ವರೆಗೆ ರಾಜ್‌ಕೋಟ್‌ನಲ್ಲಿ ನಡೆಯಲಿದೆ.
* ಎರಡನೇ ಬಹು ದಿನ ಪಂದ್ಯ: ಅಕ್ಟೋಬರ್ 5ರಿಂದ 8ರ ವರೆಗೆ ಅಹಮದಾಬಾದ್‌ನಲ್ಲಿ ನಡೆಯಲಿದೆ.


Click it and Unblock the Notifications
