ವೈಭವ್ ಸೂರ್ಯವಂಶಿಗೆ ನಾಯಕತ್ವ ಜವಾಬ್ದಾರಿ, ಮತ್ತೊಂದು ಹೊಸ ಇತಿಹಾಸ ಸೃಷ್ಟಿಸಿದ 'ವಂಡರ್ ಕಿಡ್'
Vaibhav Sooryavanshi: ಟೀಮ್ ಇಂಡಿಯಾ ಕ್ರಿಕೆಟ್‌ನ ಯುವ ಪ್ರತಿಭೆ 15 ವರ್ಷದ ವೈಭವ್ ಸೂರ್ಯವಂಶಿ ಅವರು ಆಕ್ರಮಣಕಾರಿ ಬ್ಯಾಟಿಂಗ್‌ನಿಂದಲೇ ಹೆಸರಾಗಿದ್ದಾರೆ. ಇದೀಗ ಅವರಿಗೆ ನಾಯಕತ್ವದ ಜವಾಬ್ದಾರಿ ಹೊರಿಸಲಾಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನದಲ್ಲಿ ಸೆಂಟ್ರಲ್ ಝೋನ್ ವಿರುದ್ಧ ನಡೆಯುತ್ತಿರುವ ದುಲೀಪ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರು ಈಸ್ಟ್ ಝೋನ್ ತಂಡದ ಹಂಗಾಮಿ ನಾಯಕರಾಗಿದ್ದಾರೆ. ಈ ಜವಾಬ್ದಾರಿ ವಹಿಸಿಕೊಂಡ ಅವರು ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

ಮೈದಾನದಿಂದ ಹೊರನಡೆದ ನಾಯಕ ಇಶಾನ್ ಕಿಶನ್
ಪಂದ್ಯದ ಮೊದಲ ದಿನದಂದು ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದ ಈಸ್ಟ್ ಝೋನ್ ತಂಡಕ್ಕೆ 19ನೇ ಓವರ್‌ನಲ್ಲಿ ಆಘಾತ ಎದುರಾಯಿತು. ವಿಕೆಟ್ ಕೀಪಿಂಗ್ ಮಾಡುತ್ತಿದ್ದ ಖಾಯಂ ನಾಯಕ ಇಶಾನ್ ಕಿಶನ್ ಅವರ ಕೈ ಬೆರಳಿಗೆ ಚೆಂಡು ಬಿದ್ದು ಗಾಯಕ್ಕೆ ಒಳಗಾದರು. ತೀವ್ರ ನೋವಿನಿಂದ ಬಳಲುತ್ತಿದ್ದ ಕಿಶನ್ ಮೈದಾನದಿಂದ ಹೊರನಡೆದು ವೈದ್ಯಕೀಯ ಚಿಕಿತ್ಸೆ ಪಡೆಯಬೇಕಾಯಿತು.
ವೈಭವ್ ಸೂರ್ಯವಂಶಿಗೆ ನಾಯಕತ್ವದ ಜವಾಬ್ದಾರಿ
ಇಶಾನ್ ಕಿಶನ್ ಅನುಪಸ್ಥಿತಿಯಲ್ಲಿ ಕುಮಾರ್ ಕುಶಾಗ್ರ ವಿಕೆಟ್ ಕೀಪಿಂಗ್ ಜವಾಬ್ದಾರಿ ವಹಿಸಿಕೊಂಡರು. ಇನ್ನೂ ಈಸ್ಟ್ ಝೋನ್ ತಂಡದ ಉಪನಾಯಕನಾಗಿ ಆಯ್ಕೆಯಾಗಿದ್ದ 15 ವರ್ಷದ ವೈಭವ್ ಸೂರ್ಯವಂಶಿ ಅವರು ನಿಯಮಾನುಸಾರ ತಕ್ಷಣವೇ ತಂಡದ ತಾತ್ಕಾಲಿಕ ನಾಯಕನಾಗಿ ಜವಾಬ್ದಾರಿ ವಹಿಸಿಕೊಂಡರು.
ಹಿರಿಯರ ಪ್ರಥಮ ದರ್ಜೆ ಪಂದ್ಯದಲ್ಲೇ ಮೊದಲ ಬಾರಿಗೆ ನಾಯಕತ್ವ ವಹಿಸಿಕೊಂಡ ವೈಭವ್, ಮೈದಾನದಲ್ಲಿ ಅತ್ಯಂತ ಚಾಣಕ್ಷತೆಯಿಂದ ಕಾಣಿಸಿಕೊಂಡರು. ಪಂದ್ಯದ 40ನೇ ಓವರ್‌ನಲ್ಲಿ ಬೌಲರ್ ಮುಕೇಶ್ ಕುಮಾರ್ ಎಸೆತದಲ್ಲಿ ಸೆಂಟ್ರಲ್ ಝೋನ್ ಬ್ಯಾಟರ್ ಆರ್ಯನ್ ಜುಯಾಲ್ ಅವರ ವಿಕೆಟ್ ಬಿದ್ದಿತ್ತು. ಆದರೆ ಆನ್-ಫೀಲ್ಡ್ ಅಂಪೈರ್ ಔಟ್ ನೀಡಲಿಲ್ಲ.
ವೈಭವ್ ತೆಗೆದುಕೊಂಡ ಮೊದಲ ಡಿಆರ್‌ಎಸ್ ಸಕ್ಸಸ್
ಬಳಿಕ ಸ್ಲಿಪ್‌ನಲ್ಲಿ ನಿಂತಿದ್ದ ವೈಭವ್ ಸೂರ್ಯವಂಶಿ ತಕ್ಷಣವೇ ಚಾಣಾಕ್ಷತನದಿಂದ ಡಿಆರ್‌ಎಸ್ ತೆಗೆದುಕೊಂಡರು. ಮರುಪರಿಶೀಲನೆಯಲ್ಲಿ ಚೆಂಡು ಬ್ಯಾಟ್‌ಗೆ ತಗುಲಿರುವುದು ಸ್ಪಷ್ಟವಾಗಿ ಕಂಡುಬಂದಿದ್ದು, ಅಂಪೈರ್ ತಮ್ಮ ತೀರ್ಪನ್ನು ಬದಲಿಸಿ ಔಟ್ ನೀಡಿದರು. ನಾಯಕನಾಗಿ ವೈಭವ್ ತೆಗೆದುಕೊಂಡ ಮೊದಲ ಡಿಆರ್‌ಎಸ್ ನಿರ್ಧಾರವೇ ಯಶಸ್ವಿಯಾಗಿದ್ದು ಎಲ್ಲರ ಗಮನ ಸೆಳೆಯಿತು.
ಆಯ್ಕೆ ಮಂಡಳಿ ಹೇಳಿದ್ದೇನು?
ದುಲೀಪ್ ಟ್ರೋಫಿ ಸರಣಿಗೂ ಮುನ್ನವೇ 15 ವರ್ಷದ ವೈಭವ್ ಸೂರ್ಯವಂಶಿ ಅವರನ್ನು ಈಸ್ಟ್ ಝೋನ್ ತಂಡಕ್ಕೆ ಉಪನಾಯಕನಾಗಿ ನೇಮಿಸಿದ್ದು ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ಕುರಿತು ಸ್ಪಷ್ಟನೆ ನೀಡಿದ್ದ ಈಸ್ಟ್ ಝೋನ್ ಆಯ್ಕೆಗಾರರು, 'ನಾವು ಕೇವಲ ಪ್ರಸ್ತುತ ಪರಿಸ್ಥಿತಿಯನ್ನು ನೋಡುತ್ತಿಲ್ಲ, ವೈಭವ್ ಅವರ ಸುದೀರ್ಘ ಭವಿಷ್ಯ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವ ಉದ್ದೇಶದಿಂದ ಈ ಜವಾಬ್ದಾರಿ ನೀಡಿದ್ದೇವೆ,' ಎಂದು ಸಮರ್ಥಿಸಿಕೊಂಡಿದ್ದರು. ಆಯ್ಕೆಗಾರರ ಈ ದೂರದೃಷ್ಟಿಯ ನಿರ್ಧಾರದಿಂದಾಗಿ ಇಶಾನ್ ಗಾಯಗೊಂಡ ತಕ್ಷಣವೇ ವೈಭವ್ ನಾಯಕತ್ವ ವಹಿಸಿಕೊಳ್ಳಲು ಸಾಧ್ಯವಾಯಿತು.
ಐಪಿಎಲ್ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈಗಾಗಲೇ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್‌ನಿಂದ ಸದ್ದು ಮಾಡಿರುವ ಬಿಹಾರದ ಈ ಯುವ ಪ್ರತಿಭೆ, ಈಗ ಅತ್ಯಂತ ಕಿರಿಯ ವಯಸ್ಸಿನಲ್ಲಿ ಹಿರಿಯರ ಪ್ರಥಮ ದರ್ಜೆ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ವೈಭವ್ ಬ್ಯಾಟಿಂಗ್ ಜೊತೆ ಬೌಲಿಂಗ್ ಹಾಗೂ ನಾಯಕತ್ವದ ಜವಾಬ್ದಾರಿ ಹೊತ್ತುಕೊಳ್ಳಲು ಸಮರ್ಥರಿದ್ದಾರೆ ಎಂಬುದನ್ನ ಸಾಬೀತುಪಡಿಸಿದ್ದಾರೆ.. ಈ ಮೂಲಕ ಇಷ್ಟು ದಿನ ಅವರ ಬಗ್ಗೆ ಟೀಕೆ ಮಾಡುತ್ತಿದ್ದ ಟೀಕಾಕಾರರ ಬಾಯಿ ಮುಚ್ಚಿಸಿದಂತಾಗಿದೆ.


Click it and Unblock the Notifications
