RCB: ಮೈದಾನದಲ್ಲೇ ಅಂಪೈರ್ ಮೇಲೆ ದಾಳಿ: ಆರ್‌ಸಿಬಿಯ ಸ್ಟಾರ್ ಆಟಗಾರ ಐಪಿಎಲ್‌ನಿಂದ ಬ್ಯಾನ್
IPL RCB: ಅಹಮದಾಬಾದ್‌ನಲ್ಲಿ ಮೇ 31ರಂದು ನಡೆದ ಐಪಿಎಲ್ 2026ರ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗುಜರಾತ್ ಟೈಟನ್ಸ್ ವಿರುದ್ಧ ಭರ್ಜಡಿ ಗೆಲುವು ಸಾಧಿಸಿ ಸತತ ಎರಡನೇ ಬಾರಿ ಟ್ರೋಫಿಗೆ ಮುತ್ತಿಟ್ಟಿತು. ಆದರೆ ಈ ಐತಿಹಾಸಿಕ ಗೆಲುವಿನ ಬೆನ್ನಲ್ಲೇ ಆರ್‌ಸಿಬಿ ಸ್ಟಾರ್ ಆಟಗಾರನನ್ನು ಐಪಿಎಲ್‌ನಿಂದ ಬ್ಯಾನ್ ಮಾಡಲಾಗಿದೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಆರ್‌ಸಿಬಿ ಟ್ರೋಫಿ ಗೆದ್ದ ಬೆನ್ನಲ್ಲೇ ಆರ್‌ಸಿಬಿಯ ಸ್ಟಾರ್ ಬ್ಯಾಟರ್ ಟಿಮ್ ಡೇವಿಡ್ ಅವರಿಗೆ ಬಿಸಿಸಿಐ ಭಾರಿ ಆಘಾತ ನೀಡಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದ ವೇಳೆ ಮೈದಾನದಲ್ಲಿ ಅಸಭ್ಯವಾಗಿ ವರ್ತಿಸಿದ ಕಾರಣದಿಂದ ಟಿಮ್ ಡೇವಿಡ್ ಅವರನ್ನು ಐಪಿಎಲ್ 2027ರ ಅಂದರೆ ಮುಂದಿನ ಸೀಸನ್‌ನ ಮೊದಲ ಪಂದ್ಯದಿಂದ ಅಮಾನತುಗೊಳಿಸಲಾಗಿದೆ.

ಅಂಪೈರ್ ಮೇಲೆ ಐಸ್ ಬ್ಯಾಗ್ ಎಸೆದ ಡೇವಿಡ್
ಗುಜರಾತ್ ಟೈಟಾನ್ಸ್ ವಿರುದ್ಧದ ಫೈನಲ್ ಪಂದ್ಯದ ಮೊದಲ ಇನ್ನಿಂಗ್ಸ್‌ನ 10ನೇ ಓವರ್‌ನಲ್ಲಿ ಈ ಘಟನೆ ನಡೆದಿದೆ. ಆರ್‌ಸಿಬಿ ತಂಡದ ಪ್ರಮುಖ ವಿಕೆಟ್ ಒಂದು ಪತನಗೊಂಡಾಗ ಡಗೌಟ್‌ನಲ್ಲಿದ್ದ ಆಸ್ಟ್ರೇಲಿಯಾದ ಆಟಗಾರ ಟಿಮ್ ಡೇವಿಡ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಅಸಮಾಧಾನವನ್ನು ಮೈದಾನದಲ್ಲಿದ್ದ ಅಂಪೈರ್ ನಿತಿನ್ ಮೆನನ್ ಅವರ ಮೇಲೆ ಐಸ್ ಬ್ಯಾಗ್ ಅನ್ನು ಎಸೆದಿದ್ದಾರೆ. ಇದು ಮೈದಾನದಲ್ಲಿದ್ದ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಇದು ಕ್ರೀಡಾ ಸ್ಫೂರ್ತಿಗೆ ಧಕ್ಕೆ ತಂದಿದೆ ಎಂದು ಪರಿಗಣಿಸಲಾಗಿದೆ.
ಐಪಿಎಲ್ ನಿಯಮಾವಳಿ ಉಲ್ಲಂಘನೆ
ಐಪಿಎಲ್ ಶಿಸ್ತು ಸಮಿತಿಯು ಸೋಮವಾರ ಟಿಮ್ ಡೇವಿಡ್ ಅವರ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮ ಕೈಗೊಂಡಿದೆ. ಡೇವಿಡ್ ಅವರು ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.9 ಅನ್ನು ಉಲ್ಲಂಘಿಸಿದ್ದಾರೆ ಎಂದು ಪರಿಗಣಿಸಲಾಗಿದೆ. ಈ ನಿಯಮದ ಪ್ರಕಾರ ಮೈದಾನದಲ್ಲಿ ಯಾವುದೇ ಆಟಗಾರ, ಅಂಪೈರ್ ಅಥವಾ ಪಂದ್ಯದ ಅಧಿಕಾರಿಯತ್ತ ಚೆಂಡು ಅಥವಾ ಯಾವುದೇ ಕ್ರಿಕೆಟ್ ಉಪಕರಣಗಳನ್ನು ಅಪಾಯಕಾರಿ ರೀತಿಯಲ್ಲಿ ಎಸೆಯುವುದು ಶಿಕ್ಷಾರ್ಹ ಅಪರಾಧವಾಗಿದೆ.
ಈ ತಪ್ಪಿಗಾಗಿ ಅವರಿಗೆ ಫೈನಲ್ ಪಂದ್ಯದ ಸಂಭಾವನೆಯಲ್ಲಿ ಶೇಕಡಾ 50ರಷ್ಟು ದಂಡ ವಿಧಿಸಲಾಗಿದೆ. ಅಷ್ಟೇ ಅಲ್ಲದೆ 2 ಡಿಮೆರಿಟ್ ಪಾಯಿಂಟ್‌ಗಳನ್ನು ಸೇರಿಸಲಾಗಿದೆ. ಪಂದ್ಯದ ರೆಫ್ರಿ ಜಾವಗಲ್ ಶ್ರೀನಾಥ್ ವಿಧಿಸಿದ ಈ ಶಿಕ್ಷೆಯನ್ನು ಟಿಮ್ ಡೇವಿಡ್ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಅಮಾನತು ಆಗಲು ಮುಖ್ಯ ಕಾರಣವೇನು?
ಸಾಮಾನ್ಯವಾಗಿ ಸಣ್ಣಪುಟ್ಟ ನಿಯಮ ಉಲ್ಲಂಘಟನೆಗೆ ಕೇವಲ ದಂಡ ಮಾತ್ರ ವಿಧಿಸಲಾಗುತ್ತದೆ. ಆದರೆ ಟಿಮ್ ಡೇವಿಡ್ ಅವರಿಗೆ ಈ ಸೀಸನ್‌ನಲ್ಲಿ ಇದು ಮೂರನೇ ಅಪರಾಧವಾಗಿದೆ. ಈ ಮುಂಚೆ ಅವರು 20ನೇ ಪಂದ್ಯದಲ್ಲಿ 1 ಡಿಮೆರಿಟ್ ಪಾಯಿಂಟ್ ಮತ್ತು 54ನೇ ಪಂದ್ಯದಲ್ಲಿ 2 ಡಿಮೆರಿಟ್ ಪಾಯಿಂಟ್‌ಗಳನ್ನು ಪಡೆದಿದ್ದರು. ಈಗ ಫೈನಲ್ ಪಂದ್ಯದಲ್ಲಿ ಲಭಿಸಿದ 2 ಪಾಯಿಂಟ್‌ಗಳೂ ಸೇರಿ ಈ ಸೀಸನ್‌ನಲ್ಲಿ ಅವರ ಒಟ್ಟು ಡಿಮೆರಿಟ್ ಪಾಯಿಂಟ್‌ಗಳ ಸಂಖ್ಯೆ 5ಕ್ಕೆ ತಲುಪಿದೆ. ಐಪಿಎಲ್ ನಿಯಮಗಳ ಪ್ರಕಾರ 5 ಅಥವಾ ಅದಕ್ಕಿಂತ ಹೆಚ್ಚು ಡಿಮೆರಿಟ್ ಪಾಯಿಂಟ್‌ಗಳು ಆದರೆ ಆಟಗಾರ ಸ್ವಯಂಚಾಲಿತವಾಗಿ ಒಂದು ಪಂದ್ಯದಿಂದ ನಿಷೇಧಕ್ಕೆ ಒಳಗಾಗಬೇಕಾಗುತ್ತದೆ.
ಈ ನಿಷೇಧದ ಹಿನ್ನೆಲೆಯಲ್ಲಿ ಟಿಮ್ ಡೇವಿಡ್ ಐಪಿಎಲ್ 2027ರ ಆವೃತ್ತಿಯ ಮೊದಲ ಪಂದ್ಯವನ್ನು ಆಡುವಂತಿಲ್ಲ. ಒಂದು ವೇಳೆ ಮುಂದಿನ ಸೀಸನ್‌ನಲ್ಲಿ ಅವರು ಆರ್‌ಸಿಬಿ ಪರ ಆಡಿದರೆ, ಆರ್‌ಸಿಬಿಯ ಮೊದಲ ಪಂದ್ಯದಿಂದ ಹೊರಗುಳಿಯಬೇಕಾಗುತ್ತದೆ. ಇಲ್ಲವೇ ಮೆಗಾ ಹರಾಜಿನಲ್ಲಿ ಅವರು ಬೇರೆ ಯಾವುದಾದರೂ ಫ್ರಾಂಚೈಸಿಗೆ ಆಯ್ಕೆಯಾದರೆ, ಆ ಹೊಸ ತಂಡದ ಮೊದಲ ಪಂದ್ಯದಿಂದ ಅವರು ಹೊರಗುಳಿಯಬೇಕಾಗುತ್ತದೆ. ಆರ್‌ಸಿಬಿಯು ಟ್ರೋಫಿ ಗೆದ್ದು ಸಂಭ್ರಮಿಸುತ್ತಿರುವ ಈ ವೇಳೆಯೇ ತಂಡದ ಪ್ರಮುಖ ಫಿನಿಶರ್ ಈ ಕಠಿಣ ಕ್ರಮ ಎದುರಿಸಿರುವುದು ಅಭಿಮಾನಿಗಳಲ್ಲಿ ಕೊಂಚ ಬೇಸರ ಮೂಡಿಸಿರುವುದಂತೂ ನಿಜ. ಆದರೆ ಐಪಿಎಲ್ ನಿಯಮಾವಳಿಗಳನ್ನ ಪಾಲಿಸಲೇಬೇಕಾಗುತ್ತದೆ.












Click it and Unblock the Notifications